ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಳುವ ಬಿಜಾಪುರ

By Staff
|
Google Oneindia Kannada News

*ವಿಶ್ವಪ್ರಿಯ

ಹುಬ್ಬಳ್ಳಿ : ಸರ್ವೋನ್ನತ ನ್ಯಾಯಾಲಯ ಆಲಮಟ್ಟಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರ ತೀರ್ಪು ನೀಡಿದ ತರುವಾಯ ಆಲಮಟ್ಟಿ ಅಣೆಯ ಎತ್ತರದ ಕಾಮಗಾರಿ ಸಮರೋಪಾದಿಯಲ್ಲಿ ಸಾಗಿತು. ಈ ಬಾರಿ ದಾಖಲೆಯ ನೀರನ್ನೂ ಜಲಾಶಯದಲ್ಲಿ ಸಂಗ್ರಹಿಸಲಾಯಿತು. ಈಗ ಈ ಬಹು ಉಪಯೋಗಿ ಅಣೆಕಟ್ಟೆಯ ನೆರವಿನಿಂದ ವಿದ್ಯುತ್‌ ಉತ್ಪಾದನೆಯ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ.

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆ ಆಲಮಟ್ಟಿ ಅಣೆಯಲ್ಲಿ ವಿದ್ಯುತ್‌ ಉತ್ಪಾದಿಸುವ ಯೋಜನೆಯನ್ನು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ನೀಡಲು ನಿರ್ಧರಿಸಿದೆ. ಚಾಮುಂಡಿ ಪವರ್‌ ಕಾರ್ಪೋರೇಷನ್‌ ಇಲ್ಲಿ ವಿದ್ಯುತ್‌ ಉತ್ಪಾದಿಸುವ ಯೋಜನೆ ಈ ಹಿಂದೆ ಇತ್ತು.

ಈಗ ಕರ್ನಾಟಕ ವಿದ್ಯುತ್‌ ನಿಗಮ ನೀಡಿರುವ ಪ್ರಸ್ತಾವನೆ ರೀತ್ಯ 297 ಮೆಗಾ ವ್ಯಾಟ್‌ ಉತ್ಪಾದನೆಯ ಈ ಯೋಜನೆಯನ್ನು 715 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿದೆ. ಆದರೆ, ಈ ಯೋಜನೆಗೆ ಚಾಮುಂಡಿ ಪವರ್‌ ಕಾರ್ಪೋರೇಷನ್‌ 1469.80 ಕೋಟಿ ರು. ವೆಚ್ಚದ ಪ್ರಸ್ತಾವನೆ ಇಟ್ಟಿತ್ತು. ಹೀಗಾಗಿ ಸಚಿವ ಸಂಪುಟ ಯೋಜನೆಯನ್ನು ಕೆಪಿಸಿಗೆ ವಹಿಸಿಕೊಡಲು ಒಪ್ಪಿಗೆ ನೀಡಿದೆ.

ಸರಕಾರ ಯೋಜನೆಗಳಿಗೆ ಒಪ್ಪಿಗೆ ನೀಡಿದರೂ ಅದು ಕಾರ್ಯಗತವಾಗುವುದು ಯಾವಾಗ ಎನ್ನುವುದೇ ಈ ಪ್ರದೇಶದ ಜನರ ಪ್ರಶ್ನೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಕಾರಣ ಕೃಷ್ಣ ಮೇಲ್ದಂಡೆ ಯೋಜನೆ ಆರಂಭವಾಗಿ 35 ವರ್ಷ ಕಳೆದರೂ ಇನ್ನೂ ಪೂರ್ತಿಯಾಗಿಲ್ಲ.

ಐದು ನದಿ ಇದ್ದಮಾತ್ರಕ್ಕೆ ಬಿಜಾಪುರವನ್ನು ಪಂಜಾಬಿಗೆ ಹೋಲಿಸುವುದು ತಪ್ಪು

ಅವಿಭಜಿತ ಬಿಜಾಪು-ರ ಜಿಲ್ಲೆಗೆ ಕರ್ನಾಟಕದ ಪಂಜಾಬ್‌ ಎಂದು ಕರೆಯುವುದು ವಾಡಿಕೆ. ಆದರೆ, ಪಂಜಾಬಿನ ಹಸಿರು ಕ್ರಾಂತಿ ನೋಡಿದವರು ಆ ವಾಡಿಕೆಯ ಮಾತುಗಳನ್ನು ಕೇಳಿ ಗಹಗಹಿಸಿದರೆ ಅಚ್ಚರಿಯಿಲ್ಲ. ಪಂಚನದಿಗಳು ಇಲ್ಲಿ ಹರಿದರೂ ಶತಮಾನಗಳಿಂದ ಬರಗಾಲವನ್ನು ಬಗಲಲ್ಲೇ ಇಟ್ಟುಕೊಂಡಿರುವ ಜಿಲ್ಲೆಯಿದು. ಇಂತಹ ಅವಿಭಜಿತ ಬಿಜಾಪುರ ಹಾಗೂ ಪಕ್ಕದ ಜಿಲ್ಲೆಗಳ ಭೂಮಿಗೆ ನೀರುಣಿಸಲು ರೂಪುಗೊಂಡ ಕೃಷ್ಣಾ ಮೇಲ್ದಂಡೆ ಯೋಜನೆ ಇಂದಿಗೆ ಸುಮಾರು 35 ವರ್ಷಗಳೇ ಕಳೆದರೂ ಇನ್ನೂ ರೈತರ ಪಾಲಿಗೆ ಗಗನ ಕುಸುಮವಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕರ್ನಾಟಕ ಸರಕಾರ ದೃಢ ನಿಶ್ಚಯ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರಿ ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌ ಈಗಾಗಲೇ ಮೂರ್ನಾಲ್ಕು ಬಾರಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯ ನಿರ್ಮಾಣ ಕಾರ್ಯ ಇದೀಗ ಪೂರ್ಣಗೊಂಡಿದೆ. ಬಚಾವತ್‌ ಆಯೋಗದ ತೀರ್ಪಿನಂತೆ ಕರ್ನಾಟಕದ ಹಕ್ಕಿನ ನೀರಿನ ಬಳಕೆಗೆ ಸುಪ್ರೀಂ ಕೋರ್ಟಿನ ತೀರ್ಪಿನಂತೆ 519 ಮೀಟರ್‌ವರೆಗೆ ನೀರನ್ನು ಸಂಗ್ರಹಿಸಲು ಈಗ ಸಾಧ್ಯವಾಗಿದೆ.

ಈಗ ಆಲಮಟ್ಟಿಯಲ್ಲಿ ನೀರು ಸಂಗ್ರಹವಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಅನೇಕ ಹಳ್ಳಿಗಳು ಜಲಾವೃತವಾಗಿದೆ. ಬಾಗಲಕೋಟೆ ಪಟ್ಟಣದ ಕೆಲವು ಪ್ರದೇಶಗಳಿಗೆ ನೀರು ನುಗ್ಗಿದೆ. ಮುಳುಗಡೆಯಾಗುವ ಗ್ರಾಮ ಹಾಗೂ ಬಾಗಲಕೋಟೆಯ ಜಮೀನು ಮ-ತ್ತು ಮನೆಗಳಿಗೆ ಪರಿಹಾರ ಹಾಗೂ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಲೇ ಇದೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಈಗ ಬಾಗಲಕೋಟೆ ನಗರದ ಹಳೇಪೇಟೆ, ಡೋರಗಲ್ಲಿ, ಜೈನಪೇಟೆ, ಯಮಸೂರಪ್ಪ ದರ್ಗಾ, ಭಜಂತ್ರಿ ಓಣಿ ಜಲಾವೃತವಾಗಿದೆ. ಇಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ಥರನ್ನು ಬಾಗಲಕೋಟೆ ನವನಗರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ನವನಗರದಲ್ಲಿ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಕೆಲವು ಸಂತ್ರಸ್ತರನ್ನು ಈ ಮೊದಲೇ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಈ ನಡುವೆ ರಾಜ್ಯ ಸರಕಾರ ಆಲಮಟ್ಟಿ ಹಾಗೂ ನಾರಾಯಣಪುರ ಆಣೆಕಟ್ಟೆಗಳಲ್ಲಿ ಸಂಗ್ರಹಿಸುವ ನೀರಿನಿಂದ ಆಗುವ ಪರಿಣಾಮವನ್ನು ಅಧ್ಯಯನ ಮಾಡಲು ಎ.ಎ. ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿಯಾಂದನ್ನು ರಚಿಸಿದೆ. ದೇಶದಲ್ಲಿ ನೀರಾವರಿ ಯೋಜನೆಗಾಗಿ ಇಂತಹ ಸಮಿತಿ ರಚಿಸುವುದು ಇದೇ ಮೊದಲು.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಸುಮಾರು ಮೂರು ಲಕ್ಷ ಜನರು ನಿರಾಶ್ರಿತರಾಗಲಿದ್ದಾರೆ ಎಂಬುದು ಒಂದು ಅಂದಾಜು. ಈ ವರೆಗೂ 2.87ಲಕ್ಷ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಕ್ಕಾಗಿ 1800 ಕೋಟಿ ರೂಪಾಯಿ ಮತ್ತು ಪುನರ್ವಸತಿಗೆ 700 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.

ಆಲಮಟ್ಟಿ ಅಣೆಕಟ್ಟೆಯಿಂದ ನಿರ್ವಸಿತರಾಗುವವರಲ್ಲಿ 52,221 ಕುಟುಂಬಗಳು ಮನೆ ನಿರ್ಮಾಣದ ಸಹಾಯ ಪಡೆಯಲು ಅರ್ಹವಾಗಿವೆ. ನಾರಾಯಣಪುರ ಅಣೆಕಟ್ಟೆಯಿಂದ ನಿರ್ವಸಿತರಾಗುವವರಲ್ಲಿ 10. 979 ಕುಟುಂಬಗಳು ಸಹಾಯಕ್ಕೆ ಅರ್ಹವಾಗಿವೆ. ಒಟ್ಟು ಯೋಜನೆಯಡಿ ಸಹಾಯಕ್ಕೆ ಅರ್ಹವಾಗಿರುವ ಕುಟುಂಬಗಳು 63, 200 ಎಂದು ಸರಕಾರದ ಮೂಲಗಳು ತಿಳಿಸಿವೆ.

ಆಲಮಟ್ಟಿ ಅಣೆಕಟ್ಟಿನಲ್ಲಿ ಈಗ ಸುಮಾರು 63 ಟಿ ಎಂ ಸಿ ನೀರು ನಿಂತಿದೆ. ಅಣೆಕಟ್ಟೆಯ 26 ಕ್ರೆಸ್ಟ್‌ ಗೇಟುಗಳಿಗೆ ಸ್ಕಿೃೕನ್‌ ಪ್ಲೇಟುಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಇದಕ್ಕೆ ಒಟ್ಟು 46.44 ಕೋಟಿ ರೂಪಾಯಿ ಖರ್ಚಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X