Get Updates
Get notified of breaking news, exclusive insights, and must-see stories!

ಅಲ್ಪಸಂಖ್ಯಾಕರ ಸಮಿತಿಯ ತಮ್ಮ ಪ್ರತಿನಿಧಿಗೆರಾಜ್ಯ ಕ್ರಿಶ್ಚಿಯನ್ನರ ವಿರೋಧ

ಬೆಂಗಳೂರು : ದೇಶಾದ್ಯಂತ ಕ್ರಿಶ್ಚಿಯನ್ನರು ತಮ್ಮ ಸಮುದಾಯದ ಮೇಲಿನ ದೌರ್ಜನ್ಯದ ಬಗ್ಗೆ ಎತ್ತಿರುವ ಸೊಲ್ಲು ಇನ್ನೂ ತಣ್ಣಗಾಗೇ ಇಲ್ಲ. ಈ ನಡುವೆ ಅಲ್ಪ ಸಂಖ್ಯಾಕರ ರಾಷ್ಟ್ರೀಯ ಸಮಿತಿ (ಎನ್‌ಸಿಎಂ) ಯಲ್ಲಿರುವ ಏಕೈಕ ಕ್ರಿಶ್ಚಿಯನ್ನರ ಪ್ರತಿನಿಧಿ ಆಯ್ಕೆ ಬಗ್ಗೆ ಕರ್ನಾಟಕದ ಕ್ರಿಶ್ಚಿಯನ್ನರು ಆಕ್ಷೇಪಣೆ ಎತ್ತಿದ್ದಾರೆ.

ಜೋಸೆಫ್‌ಗೇ ಪದ ಯಾಕೆ? : ಜಾನ್‌ ಜೋಸೆಫ್‌ ಎಂಬ ವ್ಯಕ್ತಿ ಸಮಿತಿಯಲ್ಲಿರುವ ಭಾರತದ ಏಕೈಕ ಕ್ರಿಶ್ಚಿಯನ್‌ ಪ್ರತಿನಿಧಿ. ಆದರೆ ಈತನನ್ನು ತಮ್ಮ ಪ್ರತಿನಿಧಿ ಎಂದು ಒಪ್ಪಿಕೊಳ್ಳಲು ರಾಜ್ಯದ ಕ್ರಿಶ್ಚಿಯನ್‌ ಸಮುದಾಯ ಸಿದ್ಧವಿಲ್ಲ. ‘ಸರ್ಕಾರ ಯಾವ ಮಾನದಂಡದ ಆಧಾರದ ಮೇಲೆ ಈ ವ್ಯಕ್ತಿಯನ್ನು ಎನ್‌ಸಿಎಂಗೆ ಆಯ್ದಿದೆ ಎಂಬುದೇ ತಿಳಿಯುತ್ತಿಲ್ಲ. ಸಮುದಾಯದಲ್ಲಿ ಎಂತೆಂಥ ಅತಿರಥ ಮಹಾರಥರಿದ್ದಾರೆ, ಜಗಜ್ಜಾಣರಿದ್ದಾರೆ, ಸಮಸ್ಯೆಗೆ ತುಡಿಯುವ ಮನಸ್ಸಿನವರಿದ್ದಾರೆ. ಅಂಥವರನ್ನೆಲ್ಲಾ ಬಿಟ್ಟು ಜಾನ್‌ ಜೋಸೆಫ್‌ ಅವರನ್ನೇ ಕುರ್ಚಿ ಮೇಲೆ ಕೂರಿಸಿರುವುದಾದರೂ ಯಾಕೆ’ ಎನ್ನುತ್ತಾರೆ ಅಖಿಲ ಭಾರತ ಕ್ರಿಶ್ಚಿಯನ್‌ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯೆ ಫಿಲೋಮಿನಾ ಪೆರೆಸ್‌.

ಕರ್ನಾಟಕ ಕ್ರಿಶ್ಚಿಯನ್‌ ಸಂಘ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಪೆರೆಸ್‌, ‘ಜಾನ್‌ ಜೋಸೆಫ್‌ ಅವರನ್ನು ಪದದಲ್ಲಿ ಮುಂದುವರೆಸಿದಲ್ಲಿ ಅದು ಇಡೀ ಕ್ರಿಶ್ಚಿಯನ್‌ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಶೀಘ್ರವೇ ಅವರನ್ನು ಪದಚ್ಯುತಿಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಂವಿಧಾನಾತ್ಮಕ ಅಂಗವಾದ ಎನ್‌ಸಿಎಂ 1992ರಿಂದ ಅಸ್ತಿತ್ವದಲ್ಲಿದೆ. ಪ್ರಸ್ತುತ ನ್ಯಾಯಮೂರ್ತಿ ಮೊಹಮ್ಮದ್‌ ಶಾಮೀಮ್‌ ಇದರ ಅಧ್ಯಕ್ಷರು. ಕಳೆದ ಜನವರಿಯಲ್ಲಿ ಎನ್‌ಸಿಎಂ ಪುನರ್‌ ರಚಿತವಾಯಿತು. 1993-96ರ ಅವಧಿಯಲ್ಲೂ ಜಾನ್‌ ಜೋಸೆಫ್‌ ಸಮಿತಿಯ ಸದಸ್ಯರಾಗಿದ್ದರು. ಆಶ್ಚರ್ಯವೆಂದರೆ, ಆಗ ಕ್ರಿಶ್ಚಿಯನ್‌ ಸಮುದಾಯ ಅವರ ವಿರುದ್ಧ ಈ ರೀತಿ ಸೊಲ್ಲೆತ್ತಿರಲಿಲ್ಲ. ಆದರೆ ಇತ್ತೀಚೆಗೆ ಕ್ರಿಸ್ತ ಜಯಂತಿ ದಿನದಂದು ನಡೆದ ಸಾರ್ವಜನಿಕ ಸಭೆಯಲ್ಲಿ ಜೋಸೆಫ್‌ ವಿರುದ್ಧ ಕೂಗುಗಳೆದ್ದವು. ಅವರ ಪ್ರಾತಿನಿಧ್ಯದ ಬಗೆಗೂ ಚರ್ಚೆ ನಡೆದವು.

‘ಇಂಥವ ನಮ್ಮ (ಕ್ರಿಶ್ಚಿಯನ್ನರ ) ಪ್ರತಿನಿಧಿಯೇ?’

‘ದೇಶದಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯಗಳಾದಾಗ ತನ್ನ ಸಮುದಾಯದವರ ಅಳಲಿಗೆ ಸ್ಪಂದಿಸದೆ, ಸರ್ಕಾರದ ತಲೆ ಸವರುವ ಪ್ರತಿನಿಧಿಯಂತೆ ವರ್ತಿಸಿದವರು ಜಾನ್‌ ಜೋಸೆಫ್‌. ಹಿಂದೊಮ್ಮೆ ಕ್ರಿಶ್ಚಿಯನ್‌ ಪಾದ್ರಿಯಾಬ್ಬರ ಮೇಲೆ ನಡೆದ ದಾಳಿಯನ್ನು ಅಪಘಾತ ಎಂದು ಸಾಬೀತು ಮಾಡಲು ಹೊರಟಿದ್ದವರು ಅವರು. ಅಂಥ ವ್ಯಕ್ತಿಯನ್ನು ಸಮಿತಿಯಲ್ಲಿನ ನಮ್ಮವ ಎಂದು ಹೇಗೆ ಕರೆಯೋಣ?’ ಎನ್ನುತ್ತಾರೆ ಅಖಿಲ ಭಾರತ ಕ್ರಿಶ್ಚಿಯನ್‌ ಸಮಿತಿಯ ವಿಭಾಗೀಯ ಸಂಚಾಲಕ ಆಲಿವರ್‌ ಡಿಸೋಜ.

ಕರ್ನಾಟಕ ಕ್ರಿಶ್ಚಿಯನ್‌ ದಲಿತರ ಒಕ್ಕೂಟವೂ ಜಾನ್‌ ಪ್ರಾತಿನಿಧ್ಯವನ್ನು ವಿರೋಧಿಸಿದೆ. ‘ಜಾನ್‌ ಜೋಸೆಫ್‌ ಅವರಿಂದ ಸಮುದಾಯ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸಮುದಾಯದ ಬಗೆಗೆ ಚಿಂತಿಸುವ ಅನೇಕರಿರುವಾಗ ಅವರನ್ನು ಈ ಕುರ್ಚಿಯ ಮೇಲೆ ಹೇಗೆ ಕೂರಿಸಲಾಯಿತೆಂಬುದೇ ತಿಳಿಯುತ್ತಿಲ್ಲ’ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ವೈ. ಮರಿಸ್ವಾಮಿ.

ಪ್ರತಿಭಟನೆಗೆ ತುದಿಗಾಲಲ್ಲಿ : ಜಾನ್‌ ಜೋಸೆಫ್‌ ಭಾಗವಹಿಸುವ ಸಮಾರಂಭಗಳಲ್ಲಿ ಅವರನ್ನು ವಿರೋಧಿಸಲು ರಾಜ್ಯದ ಕ್ರಿಶ್ಚಿಯನ್‌ ಸಂಘ- ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನ ಅವರ ವಿರುದ್ಧ ಸೊಲ್ಲೆತ್ತಿದರೂ ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಪ್ರತಿಭಟನೆ ಯಶಸ್ವಿಯಾಗಲಿಲ್ಲ.

‘ಯಾವುದೇ ಕ್ರಿಶ್ಚಿಯನ್‌ ಸಂಘಟನೆಗಳ ಕಳಕಳಿಗೆ ಸ್ಪಂದಿಸದ ವ್ಯಕ್ತಿ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿನಿಧಿಯಾಗಲು ಅರ್ಹನಲ್ಲ. ಆತನನ್ನು ಕ್ರಿಶ್ಚಿಯನ್‌ ಸಮುದಾಯದ ವಕ್ತಾರ ಎಂದು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬುದು ಡಿಸೋಜ ಪಟ್ಟು.

(ಐಎಎನ್‌ಎಸ್‌)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+