ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಅಂದುಕೊಂಡಷ್ಟು ಚೆಂದವಲ್ಲ

By Staff
|
Google Oneindia Kannada News

ಬೆಂಗಳೂರು : ಅಂದ ಚಂದ ಅಂತ ಮಳೆಯ ಕಾರು ಬಾರನ್ನು ವರ್ಣಿಸಿ ಬರೆದಷ್ಟು ಈ ಮಳೆ ಚೆನ್ನಾಗಿಲ್ಲ. ಅದೂ ಬೆಂಗಳೂರಿನ ಗಲ್ಲಿಯಲ್ಲಿ ಯಾವುದೋ ಕಾಲದ ಕಟ್ಟಡದ ಛಾವಣಿಯಡಿಯಲ್ಲಿ ತಲೆ ತೂರಿಸಿಕೊಂಡು ಹರಕು ಕಂಬಳಿ ಹೊದ್ದು ನಡುಕುತ್ತಲೇ ಮುದುರಿ ನಿದ್ದೆ ಹೋದವನು, ಕನವರಿಸುತ್ತಾ ಹಾಕುವ ಶಾಪದಲ್ಲಿ ಮಳೆಯ ವಿಕಾರತೆಯ ವಿವರಣೆಯಿರುತ್ತದೆ.

ಶನಿವಾರ ಧೋಗುಟ್ಟಿದ ಮಳೆಯಲ್ಲಿ ಬೆಂಗಳೂರಿನ ಇಬ್ಬರು ಕರಗಿದ್ದಾರೆ. ಕುಸಿದ ಕಟ್ಟಡದಡಿಯಿಂದ ಅವರು ಎದ್ದು ಬರುವುದಕ್ಕಾಗಲೇ ಇಲ್ಲ. ಶನಿವಾರ ರಾತ್ರಿಯ ಮಳೆ ಅದೇನು ವಿಪರೀತಕ್ಕೆ ಹೋಗಿತ್ತೆಂದರೆ ಜನ, ಚರಂಡಿ ಮತ್ತು ರಸ್ತೆಯನ್ನು ಬೇರ್ಪಡಿಸಲಿಕ್ಕಾಗದೇ, ಇಲ್ಲದ ಬೀದಿ ದೀಪಗಳಿಗೆ ಹಿಡಿ ಶಾಪ ಹಾಕುತ್ತಾ , ನಿಲ್ಲಿಸದ ಆಟೋಗಳಿಗೆ ರೇಗುತ್ತಾ, ವಾಹನಗಳನ್ನು ಪಚಕ್ಕನೇ ರಟ್ಟಿಸುವ ಕಪ್ಪು ನೀರಿನಲ್ಲಿ ಒದ್ದೆಯಾಗಿ ನಡುಗುತ್ತ ಅದು ಹೇಗೋ ಮನೆ ಸೇರಿಕೊಂಡರು. ಬೆಳಗಾದರೂ ಒದ್ದೆ ರಸ್ತೆಗಳು ರಾತ್ರಿ ನಡೆದ ಮಳೆಯ ಕಾರುಬಾರನ್ನು ಹೇಳುತ್ತಿದ್ದವು.

ಮೈಸೂರು ದಸರಾ ಯಾಂತ್ರಿಕವಾಗಿ ನಡೆಯುತ್ತಿದೆ. ಹಾಗೆಂದು ಮನೆ ಮನೆಯಲ್ಲಿ ಮಂದಿಯೇನೂ ನವರಾತ್ರಿ ಆಚರಣೆಯಲ್ಲಿ ಹಿಂದುಳಿದಿಲ್ಲ. ತರಕಾರಿ, ಹಣ್ಣು, ಹೂವುಗಳ ಬೆಲೆ ನೆಲದಿಂದ ಮೇಲೇರುತ್ತಲೇ ಇದೆ. ಈ ಬಾರಿ ಬಸ್ಸಿನ ರೇಟುಗಳೂ ಇವುಗಳ ಜೊತೆಗಿವೆ. ಕರೆಂಟು ರೇಟು ಜಾಸ್ತಿಯಾದರೂ ಚಿಕುಬುಕು ಬೆಳಗುವ ಲೈಟುಗಳೇನೂ ಕಡಿಮೆಯಾಗಿಲ್ಲ. ಎಲ್ಲ ಕೊಚ್ಚೆ- ಖುಷಿಗಳೊಂದಿಗೆ ಮಂದಿ ಏನೂ ಆಗದವರಂತೆ ನಡೆಯುತ್ತಿದ್ದಾರೆ.

ಭಾನುವಾರದಂದು ಮಳೆ ಕರಾವಳಿಯ ಬಸ್ಸೇರಿಲ್ಲ. ಉತ್ತರ ಒಳನಾಡಿನಲ್ಲಿಯೇ ವ್ಯಸ್ತವಾಗಿತ್ತು . ಚನ್ನ ಪ-ಟ್ಟ-ಣದಲ್ಲಿ 11 ಸೆಂಟಿ ಮೀಟರ್‌, ಬೆಂಗಳೂರು, ಹೊಸಕೋಟೆಯಲ್ಲಿ 7 ಸೆಂಟಿ ಮೀಟರ್‌, ಮಂಡ್ಯ, ರಾಣಿಬೆನ್ನೂರಿನಲ್ಲಿ -ಕ್ರ-ಮ-ವಾ-ಗಿ 5ರಿಂದ 6 ಸೆಂಟಿಮೀಟರ್‌ ಮಳೆ ಸುರಿದಿದೆ. ಮೈಸೂರಿನ ದಸರಾ ಟೆಂಟುಗಳ ಮೇಲೆ ಮೂರು ಸೆಂಟಿ ಮೀಟರ್‌ ಮಳೆಯ ಕೆಲಸವಾಗಿದೆ.

ಮಂಗಳವಾರದೊಳಗೆ ಬೆಂಗಳೂರು, ಚಿತ್ರದುರ್ಗ, ಮಂಡ್ಯದಲ್ಲಿ , ಗುಡುಗು, ಮಿಂಚಿನ ಹಿಮ್ಮೇಳದಲ್ಲಿ ಮಳೆ ಸುರಿಯಬಹುದು. ಕರಾವಳಿಗೂ ಮಳೆಯ ಪ್ರಸಾದ ಭಾಗ್ಯವಿದೆ. ಬೆಂಗಳೂರಿಗೆ ಹಗಲಿನಲ್ಲಿ ಸೂರ್ಯನನ್ನಾಗಲೀ, ರಾತ್ರಿ ಚಂದ್ರನನ್ನಾಗಲೀ ನೋಡುವ ಭಾಗ್ಯವಿಲ್ಲ. ಮಂಗಳವಾರದೊಳಗೆ ಗುಡುಗು ಮಳೆ ಬರಲಿದೆ ಹುಶಾರ್‌ ಎಂದು ಹವಾಮಾನ ಇಲಾಖೆ ಹೇಳಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X