ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂತಹ ಪರಿಸ್ಥಿತಿಯನ್ನು ಸರಕಾರದ ಸೋಲು ಎನ್ನೋಣವೇ ? ಅಥವಾ..

By Staff
|
Google Oneindia Kannada News

ಬೆಂಗಳೂರು: ಇಂತಹ ಪರಿಸ್ಥಿಯನ್ನು ಸರಕಾರದ ಸೋಲು ಎನ್ನೋಣವೇ ? ಅಥವಾ ಅರುವತ್ತು ದಿವಸಗಳಿಂದ ಅದುಮಿಟ್ಟಿದ್ದ ಅಸಹನೆ ಬಂದ್‌ ಮುಖವಾಡದಲ್ಲಿ ಭುಗಿಲೇಳುತ್ತಿದೆ ಎನ್ನೋಣವೇ ? ನಿಮ್ಮ ಉತ್ತರ ಏನೇ ಇರಲಿ. ಇಷ್ಟು ದಿವಸ ಜನತೆಯನ್ನು ನಿರೀಕ್ಷೆಯ ಕಟಕಟೆಯಲ್ಲೇ ನಿಲ್ಲಿಸಿ ಇದುವರೆವಿಗೆ ಶಾಂತಿ ಸಮಾಧಾನದ ವಾತಾವರಣವನ್ನು ಪೋಷಿಸಿಕೊಂಡು ಬಂದ ಸರಕಾರಕ್ಕೆ ಧನ್ಯವಾದಗಳನ್ನು ಮೊದಲು ಅರ್ಪಿಸೋಣ. ಅಂತೆಯೇ ಒಡಲಲ್ಲಿ ಉರಿ ಕಟ್ಟಿಕೊಂಡೂ ಏನೂ ಆಗದವರಂತೆ ವರ್ತಿಸಿದ ನಮ್ಮ ಕರ್ನಾಟಕದ ಶಾಂತಿದೂತರನ್ನೂ ಸಹ. ಈ ಹೊತ್ತು ನಮ್ಮ ಮುಂದಿರುವ ಪ್ರಶ್ನೆ ಎಂದರೆ ಬಂದ್‌ ಒಂದು ಪ್ರತಿಭಟನೆಯ ಅಸ್ತ್ರವಾಗಿ ಹೊರಹೊಮ್ಮುವುದೋ ಅಥವಾ ...

ಯಾರು ಏನೇ ಹೇಳಲಿ. ಹಳೆ ಮೈಸೂರು ಪ್ರಾಂತ್ಯದ ಏಳು ಜಿಲ್ಲೆಗಳು ಬಂದ್‌ಗೆ ಈಗಾಗಲೇ ಸಜ್ಜಾಗಿ ಕುಳಿತಿವೆ. ಉಳಿದ 21 ಜಿಲ್ಲೆಗಳಲ್ಲಿ ಏನಾಗುತ್ತಿದೆ ಎನ್ನುವುದು ನಮಗೆ ಇವತ್ತು ಮುಖ್ಯವಾಗಬೇಕು.

ಬಂದ್‌ಗೆ ತಿರಸ್ಕಾರ : ಬಂದ್‌ಗೆ ಕರೆ ನೀಡಿರುವ ಕೆಲ ಸಂಘಟನೆಗಳು, ಹುಬ್ಬಳ್ಳಿಯಲ್ಲಿ ರೈಲ್ವೇ ವಲಯ ಸ್ಥಾಪನೆ ಸಂಬಂಧ ವಿರೋಧ ವ್ಯಕ್ತಪಡಿಸಿದ್ದವು ಎಂಬ ಆರೋಪದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳು ಬಂದ್‌ ಅನ್ನು ತಿರಸ್ಕರಿಸಿರುವ ವರದಿಗಳು ಬಂದಿವೆ. ಆದ್ದರಿಂದ ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಗುಲ್ಬರ್ಗಾ, ವಿಜಾಪುರ, ಬೆಳಗಾಂ, ಧಾರವಾಡ ಮತ್ತು ಬಳ್ಳಾರಿಗಳಲ್ಲಿ ಬಂದ್‌ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಭಾಗದ ಕೆಲವು ಬುದ್ದಿಜೀವಿಗಳು ಪಾಟೀಲ್‌ ಪುಟ್ಟಪ್ಪ ನೇತೃತ್ವದಲ್ಲಿ ಬಂದ್‌ ಕೈಬಿಡುವಂತೆಯೂ ಮನವಿ ಮಾಡಿದ್ದಾರೆ.

ಬಂದ್‌ನಿಂದ ಕರಾವಳಿ ದೂರ: ಬಂದ್‌ ತಿರಸ್ಕರಿಸಿರುವ ಜಿಲ್ಲೆಗಳಲ್ಲಿ ಕರಾವಳಿಯ ಉಡುಪಿ, ಮಂಗಳೂರು ಮತ್ತು ಉತ್ತರಕನ್ನಡ ಜಿಲ್ಲೆಗಳು ಸೇರಿವೆ ಇದರಿಂದ ಬಂದ್‌ ವಿಷಯದಲ್ಲಿ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳು ದೂರ ಸರಿದಂತಾಗಿದೆ.

ತಮಿಳರ ಬೆಂಬಲ : ಇನ್ನು ರಾಜಧಾನಿಯಲ್ಲಿ ಅದರಲ್ಲೂ ತಮಿಳರು ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಬೆಂಗಳೂರಿನ ತಮಿಳು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಂದ್‌ ಶಾಂತಿಯುತವಾಗಿ ನಡೆಯುವಂತೆ ನೊಡಿಕೊಳ್ಳುತ್ತೇವೆ ಆದರೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕರೆ ನೀಡಿರುವ ಸಂಘಟನೆಗಳು ಸ್ಪಷ್ಟಪಡಿಸಿವೆ. ಶಾಂತಿಯುತವಾಗಿ ಬಂದ್‌ ಆಚರಿಸುವಂತೆ ರಾಜ್‌ ಮನವಿ ಮಾಡಿದ್ದಾರೆ ಎನ್ನಲಾಗಿರುವ ಕ್ಯಾಸೆಟ್‌ ಪ್ರಕಾರ ತಮ್ಮ ಸುರಕ್ಷಿತ ಬಿಡುಗಡೆಯ ಬಗ್ಗೆ ಮಾತನಾಡಿರುವ ರಾಜ್‌, ಅಕ್ಟೋಬರ್‌ 9ರೊಳಗೆ ತಾವು ಬರುವುದಾಗಿ ಹೇಳಿದ್ದಾರೆಂದು ಪೊಲೀಸ್‌ ಮಹಾ ನಿರ್ದೇಶಕ ಸಿ. ದಿನಕರ್‌ ತಿಳಿಸಿದ್ದಾರೆ.

ಬಿಗಿಭದ್ರತೆ: ಬಲಪ್ರದರ್ಶನ ಮೂಲಕ ಬಂದ್‌ಗೆ ಯತ್ನಿಸಬಾರದೆಂದು ರಾಜ್ಯ ಹೈಕೋರ್ಟ್‌ ನಿರ್ದೇಶನ ನೀಡಿರುವ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಪೊಲೀಸರು ವ್ಯಾಪಕ ಭದ್ರತಾ ಏರ್ಪಾಡು ಮಾಡಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರತ್ಯೇಕ ಪತ್ರಿಕಾಗೋಷ್ಠಿಗಳಲ್ಲಿ ತಿಳಿಸಿದ್ದಾರೆ.

ಶಂಕಿತ ಸಮಾಜವಿರೋಧಿ ಶಕ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ದಿನಕರ್‌ ತಿಳಿಸಿದ್ದಾರೆ.

ಅಗತ್ಯ ಸೇವೆಗಳಿಗೆ ಅಡ್ಡಿಯಿಲ್ಲ : ದಸರೆಯ ಹಿನ್ನಲೆಯಲ್ಲಿ ಈಗಾಗಲೇ ಘೋಷಿಸಿರುವಂತೆ ಮೈಸೂರನ್ನು ಹೊರತುಪಡಿಸಿ ಅಗತ್ಯ ಸೇವೆಗಳಾದ ಆಸ್ಪತ್ರೆ, ಆಂಬುಲೆನ್ಸ್‌, ಮಾಧ್ಯಮಗಳು ಮತ್ತು ಹಾಲು ಪೂರೈಕೆಗೆ ಅಡ್ಡಿಯಿಲ್ಲ. ಈ ಮುಂಚೆ ಹಾಲು ಪೂರೈಕೆಯನ್ನು ನಿರ್ಬಂಧಿಸುವುದಾಗಿ ಹೇಳಿದ್ದ ಶಿವರಾಜ್‌ಕುಮಾರ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಈ ಮುಂಚೆ ವರದಿಯಾಗಿರುವಂತೆ, ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಸೇರಿದಂತೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ತುಮಕೂರುಗಳಲ್ಲಿ ಬಂದ್‌ ಪರಿಣಾಮಕಾರಿಯಾಗಿರುತ್ತದೆ ಎನ್ನುತ್ತಿವೆ ವರದಿಗಳು. ಹಾಗಾಗಿ ಈ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮುಂಜಾಗೃತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಕುಣಿಗಲ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X