ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ತಾಲೂಕಿನಲ್ಲಿ ಚಿನ್ನ, ಬೆಳ್ಳಿ, ತಾಮ್ರ ನಿಕ್ಷೇಪ ಪತ್ತೆ

By Staff
|
Google Oneindia Kannada News

ಚಿತ್ರದುರ್ಗ : ಚಿತ್ರದುರ್ಗ ತಾಲೂಕು ಗುಡ್ಡದ ರಂಗವ್ವನ ಹಳ್ಳಿಯಲ್ಲಿ ಅಗಾಧವಾದ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಿಕ್ಷೇಪ ಪತ್ತೆಯಾಗಿದೆ. ಈ ವಿಷಯವನ್ನು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿ. ಮುನಿಯಪ್ಪ ತಿಳಿಸಿದ್ದಾರೆ.

ರಾಜ್ಯದ ಇತರೆಡೆಗಳಿಗೆ ಹೋಲಿಸಿದಲ್ಲಿ ಇಲ್ಲಿನ ಚಿನ್ನದ ಅದಿರಿನಲ್ಲಿ ತಲಾ 1 ಮೆಟ್ರಿಕ್‌ ಟನ್‌ಗೆ 3ರಿಂದ 4 ಗ್ರಾಂ ಚಿನ್ನ ದೊರೆಯುವುದೆಂದು ತಜ್ಞರು ಲೆಕ್ಕ ಹಾಕಿದ್ದಾರೆ, ಆದರೆ, ಈ ನಿಕ್ಷೇಪದಿಂದ ಕೇವಲ ಚಿನ್ನ ಒಂದನ್ನೇ ತೆಗೆದರೆ, ಅದು ಲಾಭದಾಯಕವಲ್ಲ. ಬದಲಾಗಿ ಮೂರೂ ಲೋಹಗಳನ್ನು ಬೇರ್ಪಡಿಸಿ ಹೊರ ತೆಗೆಯಬೇಕು. ಇದಕ್ಕಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾಗಳಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಬೇಕು. ಇದಕ್ಕೆ ಭಾರಿ ಬಂಡವಾಳ ಬೇಕು ಎಂದು ಸಚಿವರು ಹೇಳಿದರು.

ಹಟ್ಟಿ ಚಿನ್ನದ ಗಣಿಯಲ್ಲಿ ಇತ್ತೀಚೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಲಾಯಿತು. ಇದಕ್ಕಾಗಿ 25ರಿಂದ 30 ಲಕ್ಷ ರುಪಾಯಿ ಖರ್ಚು ಮಾಡಲಾಗಿದೆ. ಇದರಿಂದಾಗಿ ಅಲ್ಲಿ ಪ್ರಗತಿ ಕಂಡು ಬಂದಿದೆ ಎಂದೂ ಅವರು ಹೇಳಿದರು.

ಇಂಗಳದಾಳು ಚಿನ್ನದ ಘಟಕ ಖಾಸಗೀಕರಣ : ರಾಜ್ಯ ಸರಕಾರಿ ಸ್ವಾಮ್ಯದ ಎರಡು ಚಿನ್ನದ ಘಟಕಗಳ ಪೈಕಿ ಭಾರಿ ನಷ್ಟದಲ್ಲಿರುವ ಇಂಗಳದಾಳು ಚಿನ್ನದ ಘಟಕವನ್ನು ಖಾಸಗಿಯವರಿಗೆ ವಹಿಸಿಕೊಡಲು ಸರಕಾರ ಸಿದ್ಧವಿದೆ ಎಂದರು. ಇಲ್ಲಿ ಚಿನ್ನದ ಉತ್ಪಾದನೆ ತಿಂಗಳಿಗೆ 10ರಿಂದ 11 ಕಿಲೋಗೆ ಇಳಿದಿದೆ. ಪ್ರತಿ ತಿಂಗಳೂ 50-60 ಲಕ್ಷ ರುಪಾಯಿ ನಷ್ಟ ಸಂಭವಿಸುತ್ತಿದೆ. ಮಿಗಿಲಾಗಿ ಕಾರ್ಮಿಕ ವರ್ಗ ಮತ್ತು ಆಡಳಿತ ವರ್ಗದಲ್ಲಿನ ಲೋಪದಿಂದಾಗಿ ಇದು ಸುಧಾರಿಸಲು ಸಾಧ್ಯವೇ ಇಲ್ಲ ಎನ್ನುವ ಹಂತವನ್ನು ತಲುಪಿದೆ ಎಂದು ವಿ. ಮುನಿಯಪ್ಪ ಹೇಳಿದರು.

ಅಜ್ಜನಹಳ್ಳಿ ಚಿನ್ನದ ಅದಿರಿನಲ್ಲೂ ಇಳುವರಿ ಕಡಿಮೆಯಾಗಿದೆ. ಜಿ.ಆರ್‌ ಹಳ್ಳಿ ಗಣಿಗಳಲ್ಲಿ ಮಾತ್ರ ಉತ್ತಮ ಅದಿರು ಸಿಗುತ್ತಿದೆ ಎಂದರು. ಘಟಕಗಳಲ್ಲಿ ಅಧಿಕಾರಿಗಳಿಂದ ನಡೆದಿದೆ ಎನ್ನಲಾಗಿರುವ ಭಾರಿ ಅವ್ಯವಹಾರದ ಬಗ್ಗೆ ತಾಂತ್ರಿಕ ತಜ್ಞರಿಂದ ವಿಚಾರಣೆ ನಡೆಸುವುದಾಗಿಯೂ ಅವರು ಹೇಳಿದರು. ದುರ್ಗದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ದಾವಣಗೆರೆಗೆ ಸ್ಥಳಾಂತರಿಸುವ ಪ್ರಸ್ತಾವವನ್ನು ಕೈಬಿಡಲಾಗಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X