ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಮಳೆ, ಸತ್ಯಮಂಗಲದಲ್ಲಿ?

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನಲ್ಲಿ ಮಂಗಳವಾರ ಮುಂಜಾನೆಯಿಂದಲೇ ಮೋಡ ಕವಿದಿತ್ತು. ಹತ್ತು ಗಂಟೆಯ ಹೊತ್ತಿಗೆ ಒಂದೆರಡು ಹನಿ ತುಂತುರು ಮಳೆ ಬಿತ್ತು. ತಂಪಾಗಿ ಗಾಳಿ ಬೀಸುತ್ತಿತ್ತು. ಚಳಿಯ ಅನುಭವ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಕಾರ್ಮೋಡಗಳೆಲ್ಲ ಒಂದೆಡೆ ಸೇರಿ ಸಂಘರ್ಷಕ್ಕೆ ಇಳಿದವು. ಗುಡುಗು, ಮಿಂಚು, ಸಿಡಿಲಿನ ಆರ್ಭಟದ ನಡುವೆ ಕುಂಭದ್ರೋಣ.

ಸಂಜೆಯಾದರೂ ಮಳೆ ನಿಲ್ಲುವ ಸೂಚನೆ ಇರಲಿಲ್ಲ. ನಿರಂತರವಾಗಿ ಮಳೆ ಸುರಿಯುತ್ತಲೇ ಇತ್ತು. ಸೋಮವಾರ ರಾತ್ರಿಯೂ ಭಾರಿ ಮಳೆಯೇ ಸುರಿಯಿತು. ಈಗಲೂ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಇನ್ನು ಸತ್ಯಮಂಗಲದ ಪರಿಸ್ಥಿತಿ ಹೇಗೋ ಗೊತ್ತಿಲ್ಲ. ನಿನ್ನೆಯಂತೂ ಮಲೆ ಮಹದೇಶ್ವರ ಬೆಟ್ಟ, ಚಾಮರಾಜನಗರ, ಕೊಳ್ಳೇಗಾಲ ಪ್ರದೇಶದಲ್ಲಿ 3 ಸೆಂಟಿ ಮೀಟರ್‌ ಮಳೆ ಆಗಿದೆ.

ಧಾರವಾಡ ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಸುರಿದ ಮಳೆ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದೆ. ಮಳೆಯಾಗುತ್ತಿರುವ ಪ್ರದೇಶಗಳಲ್ಲಿನ ತಗ್ಗುಪ್ರದೇಶವೆಲ್ಲ ಜಲಾವೃತಗೊಂಡಿವೆ. ಮನೆಗಳು ಬಿರುಕು ಬಿಟ್ಟಿವೆ. ಗೋಡೆ ಕುಸಿದಿದೆ.

ಈ ಮಧ್ಯೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆ ಹಾಗೂ ಕರಾವಳಿ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಚದುರಿದಂತೆ ಮಳೆ ಆಗಿದೆ. ಸುಬ್ರಹ್ಮಣ್ಯ, ಕುಡಚಿ, ಕನಕಪುರಗಳಲ್ಲಿ ತಲಾ 4 ಸೆಂಟಿ ಮೀಟರ್‌, ಮಲೆ ಮಹದೇಶ್ವರ ಬೆಟ್ಟ, ಕೊಳ್ಳೇಗಾಲ, ಮಳವಳ್ಳಿ, ಮಂಡ್ಯಗಳಲ್ಲಿ ತಲಾ 3, ಹಾವೇರಿ, ಚಾಮರಾಜನಗರ, ಸಕಲೇಶಪುರ, ಪಾಳ್ಯ, ಭಾಗಮಂಡಲಗಳಲ್ಲಿ ತಲಾ 2 ಸೆಂಟಿ ಮೀಟರ್‌ ಮಳೆ ಆಗಿದೆ.

ಗುರುವಾರದವರೆಗಿನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಹಾಗೂ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ ನಿರೀಕ್ಷಿತ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದಿದ್ದು, ನಾಲ್ಕಾರು ಬಾರಿ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಂಭವ ಇದೆ ಎನ್ನುತ್ತದೆ ಹವಾಮಾನ ಇಲಾಖೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X