ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ರಾತ್ರಿಯೇ ಕಾಡಿಗೆ ಗೋಪಾಲ್‌ ಸಂಧಾನ ಯಾತ್ರೆ

By Staff
|
Google Oneindia Kannada News

ಚೆನ್ನೈ : ಟಾಡಾ ಹಾಗೂ ತಮಿಳು ಉಗ್ರರ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳು ಇಲ್ಲದೆ ಕಾಡಿಗೆ ಹೋಗಲು ನಕ್ಕೀರನ್‌ ಗೋಪಾಲ್‌ ಸಿದ್ಧರಿರಲಿಲ್ಲ. ಆದರೂ, ಕರುಣಾನಿಧಿ ಅವರ ಒತ್ತಡಕ್ಕೆ ಮಣಿದು ಗೋಪಾಲ್‌ ಬುಧವಾರ ರಾತ್ರಿ ಮತ್ತೆ ಕಾಡಿಗೆ ಹೋಗಲು ಸಮ್ಮತಿಸಿದ್ದಾರೆ.

ಸರ್ವೋನ್ನತ ನ್ಯಾಯಾಲಯ ಟಾಡಾ ಬಂದಿಗಳ ಬಿಡುಗಡೆ ಕುರಿತ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 11ಕ್ಕೆ ಮುಂದೂಡುತ್ತಿದ್ದಂತೆಯೇ, ನಕ್ಕೀರನ್‌ ಗೋಪಾಲ್‌ ಅವರನ್ನು ಕರೆಸಿ ಮಾತುಕತೆ ನಡೆಸಿದ ಕರುಣಾನಿಧಿ ಅವರು, ಬುಧವಾರವೇ ಕಾಡಿಗೆ ಹೋಗುವಂತೆ ಗೋಪಾಲ್‌ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬದಲಾದ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದ ಜನತೆ ಶಾಂತಿಯಿಂದ ಇರುವಂತೆ ಮಾಡಲು ಗೋಪಾಲ್‌ ಅವರನ್ನು ಕಾಡಿಗೆ ಕಳುಹಿಸುವುದೊಂದೇ ಮಾರ್ಗ ಎಂಬುದನ್ನು ತಮಿಳುನಾಡು ಸರಕಾರ ಅರಿತಂತಿದೆ. ಮಂಗಳವಾರ ನಡೆದ ಭೇಟಿಯ ಸಂದರ್ಭದಲ್ಲಿ ಗೋಪಾಲ್‌ ಅವರು ಬರಿಗೈಯಲ್ಲಿ ಕಾಡಿಗೆ ತೆರಳಲು ಸಿದ್ಧರಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದರಾದರೂ, ನಾಡಿನ ಎಲ್ಲ ವಿದ್ಯಮಾನಗಳನ್ನೂ ವೀರಪ್ಪನ್‌ಗೆ ಮನವರಿಕೆ ಮಾಡಿ ಕೊಡಲು ಕಾಡಿಗೆ ಹೋಗುವಂತೆ ಕರುಣಾನಿಧಿ ಒತ್ತಾಯಿಸಿದ್ದಾರೆ.

ಗೋಪಾಲ್‌ ಬುಧವಾರ ರಾತ್ರಿ ಕಾಡಿಗೆ ಹೋಗುತ್ತಿರುವ ವಿಷಯವನ್ನು ಸ್ವತಃ ಕರುಣಾನಿಧಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಉನ್ನತ ಮಟ್ಟದ ಸಭೆ : ಸರ್ವೋನ್ನತ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಕೃಷ್ಣ ಅವರು, ಮುಂದಿನ ವಿದ್ಯಮಾನಗಳ ಹಾಗೂ ತಂತ್ರಗಳ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ರಾಜ್‌ ಬಿಡುಗಡೆಗೆ ಈಗ ಅನುಸರಿಸುತ್ತಿರುವ ಕಾರ್ಯತಂತ್ರವನ್ನೇ ಮುಂದುವರಿಸಲು ಸಭೆ ಸಮ್ಮತಿಸಿತು. ಸಭೆಯ ನಂತರ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮದಂತೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದರು.

ಸರ್ವಪಕ್ಷ ಸಭೆ : ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಖರ್ಗೆ ಅವರು ಬುಧವಾರ ರಾತ್ರಿಯೇ ಗೋಪಾಲ್‌ ಕಾಡಿಗೆ ಹೋಗಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದರು. ಒಂದೆರಡು ದಿನದಲ್ಲೇ ಮುಖ್ಯಮಂತ್ರಿ ಕೃಷ್ಣ ಅವರು, ಸರ್ವಪಕ್ಷ ಸಭೆ ಕರೆದು ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷ ನಾಯಕರೊಂದಿಗೆ ಸಮಾಲೋಚನೆ ನಡೆಸುವರು ಎಂದರು. ಗೋಪಾಲ್‌ ಅವರು ವೀರಪ್ಪನ್‌ ಮನವೊಲಿಸಿ ರಾಜ್‌ಕುಮಾರ್‌ ಅವರನ್ನು ಈ ಬಾರಿ ಕರೆದುಕೊಂಡು ಬರುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ಮೈಸೂರಲ್ಲಿ ಮೆರವಣಿಗೆ : ರಾಜ್‌ಕುಮಾರ್‌ ಅವರ ಶೀಘ್ರ ಹಾಗೂ ಸುರಕ್ಷಿತ ಬಿಡುಗಡೆಗೆ ಆಗ್ರಹಿಸಿ ರಾಜ್‌ ಅಭಿಮಾನಿಗಳ ಜಿಲ್ಲಾ ಘಟಕ ಹಾಗೂ ಜಿಲ್ಲಾ ತೋಟಗಾರಿಕಾ ತರಬೇತಿ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅರಮನೆಯ ಹನುಮಂತನ ಗುಡಿಯಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ರಾಜ್‌ ಅಭಿಮಾನಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X