ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನ ಭಯೋತ್ಪಾದನೆ ಸೊಲ್ಲಡಗಿಸಲು ಅಮೆರಿಕಾಗೆ ವಾಜಪೇಯಿ ಮನವಿ

By Staff
|
Google Oneindia Kannada News

ವಾಷಿಂಗ್ಟನ್‌: ಭಾರತದ ನೆರೆಯಲ್ಲಿ ಭಯೋತ್ಪಾದನೆ ಸೃಷ್ಟಿಸುವ ಮೂಲಗಳಿದ್ದು, ಆ ಮೂಲಗಳ ಬೆಂಬಲಿತ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತದೊಂದಿಗೆ ಕೈಜೋಡಿಸಬೇಕೆಂದು ಪ್ರಧಾನಿ ವಾಜಪೇಯಿ ಅಮೆರಿಕಾಗೆ ಮನವಿ ಮಾಡಿದ್ದಾರೆ.

ಅಮೆರಿಕದ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಗುರುವಾರ ಮಾತನಾಡುತ್ತಿದ್ದ ವಾಜಪೇಯಿ, ಭಾರತದ ಭದ್ರತೆಗೆ ಸಂಬಂಧಿಸಿದಂತೆ ಅಣ್ವಸ್ತ್ರದ ವಿಷಯದಲ್ಲಿರುವ ಭಿನ್ನಾಭಿಪ್ರಾಯ ಅನಗತ್ಯ. ಅಮೆರಿಕ ನಡೆಸುತ್ತಿರುವ ನಿಶಸ್ತ್ರೀಕರಣ ಪ್ರಯತ್ನಗಳಿಂದ ಹಿಂದೆ ಸರಿಯುವ ಉದ್ದೇಶ ಭಾರತಕ್ಕಿಲ್ಲ . ಬದಲಾಗಿ ಭಾರತದ ಭದ್ರತೆ ಕುರಿತು ಅಮೆರಿಕ ಚಿಂತಿಸಬೇಕೆಂದು ಭಾರತ ಬಯಸುತ್ತದೆ ಎಂದು ಹೇಳಿದ್ದಾರೆ.

20 ನಿಮಿಷಗಳ ಸುದೀರ್ಘ ಭಾಷಣದಲ್ಲಿ , ಭಯೋತ್ಪಾದನೆ ವಿಷಯದಲ್ಲಿ ನೆರೆಯ ರಾಷ್ಟ್ರದಿಂದ ಭಾರತ ಎದುರಿಸುತ್ತಿರುವ ಭಯೋತ್ಪಾದನೆ ಬೆದರಿಕೆಯನ್ನು ಬೇರೆ ಯಾವ ದೇಶವೂ ಎದುರಿಸುತ್ತಿಲ್ಲ ಎಂದು ಪರಿಸ್ಥಿತಿಯ ಬಗ್ಗೆ ಸಭೆಯ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಭಾರತದ ಪ್ರಾದೇಶಿಕ ಐಕ್ಯತೆಗೆ ಭಯೋತ್ಪಾದನೆಯಿಂದ ದಕ್ಕೆ ಮಾಡಬಹುದು ಎಂದು ಯಾರಾದರೂ ತಿಳಿದಿದ್ದರೆ ಅದು ಸುಳ್ಳಾಗುತ್ತದೆ ಎಂದು ಪಾಕಿಸ್ತಾನದ ಹೆಸರೆತ್ತದೆ ಪ್ರಧಾನಿ ನುಡಿದಿದ್ದಾರೆ.

ಧರ್ಮಯುದ್ಧದ ಲೇಪನ : ಕಳೆದ ದಶಕದಲ್ಲಿ ಪಂಜಾಬ್‌ನಲ್ಲಿ 21 ಸಾವಿರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 16 ಸಾವಿರ ಜನ ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಭಯೋತ್ಪಾದಕ ನೀತಿಯನ್ನು ಅಳವಡಿಸಿಕೊಳ್ಳಲು ಅದಕ್ಕೆ ಧರ್ಮ ಯುದ್ಧವೆಂಬ ಲೇಪನ ಬಳಿಯಲಾಗುತ್ತಿದೆ. ಅದರ ಹೆಸರಿನಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಸಮರ್ಥಿಸುವ ಕೆಲಸವನ್ನು ಪಾಕಿಸ್ತಾನದ ಮಿಲಿಟರಿ ಆಡಳಿತದ ಮುಖ್ಯಸ್ಥ ಮುಶ್ರಫ್‌ ಮಾಡುತ್ತಿರುವುದನ್ನು ಪ್ರಧಾನಿ ವಿವರಿಸಿದ್ದಾರೆ.

ಈ ನಿಟ್ಟಿನಲ್ಲಿ ಉಗ್ರಗಾಮಿತ್ವವನ್ನು ಬುಡಸಮೇತ ಕಿತ್ತುಹಾಕಲು ಭಾರತಕ್ಕೆ, ಅಮೆರಿಕದ ನೆರವು ಅಗತ್ಯವಿದೆ. ಎರಡೂ ದೇಶಗಳ ನಡುವೆ ಯಾವುದೇ ಪ್ರಮುಖ ವಿವಾದಿತ ವಿಷಯಗಳಿಲ್ಲ ಹಾಗಾಗಿ ಅನೇಕ ವಿಷಯಗಳಲ್ಲಿ ಭಾರತ ಮತ್ತು ಅಮೆರಿಕ ಸಮಾನ ಮನಸ್ಕ ರಾಷ್ಟ್ರಗಳಾಗಿವೆ. ಭದ್ರತೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಗಳ ಕರಿನೆರಳು ಇರಬಹುದು, ಆದರೆ ಅದು ನಗಣ್ಯ ಎಂದಿದ್ದಾರೆ.

ತಂತ್ರಜ್ಞಾನದ ವಿಷಯದಲ್ಲಿ ಎರಡೂ ದೇಶಗಳು ನೆರೆಯ ದೇಶಗಳಂತಿವೆ ಹಾಗೆಯೇ ಸಂಬಂಧಗಳು ಐತಿಹಾಸಿಕ ಘಟ್ಟ ತಲುಪಿವೆ ಎಂದಿರುವ ವಾಜಪೇಯಿ, ಕ್ಲಿಂಟನ್‌ ಮಾರ್ಚ್‌ನಲ್ಲಿ ಭಾರತದ ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದನ್ನು ಸ್ಮರಿಸಿದ್ದಾರೆ. ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಅವಕಾಶ ಮಾಡಿಕೊಟ್ಟದ್ದಾಗಿ ಕ್ಲಿಂಟನ್‌ ಮತ್ತು ಕಾಂಗ್ರೆಸ್‌ಗೆ ಅಭಿನಂದನೆ ಹೇಳಿದ್ದಾರೆ.

ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಭಾರತ ಪ್ರಯೋಗಶಾಲೆಯಿದ್ದಂತೆ. ಎಂಥ ಸವಾಲುಗಳನ್ನೂ ಹತ್ತಿಕ್ಕಲು ಭಾರತದ ಪ್ರಜಾಸತ್ತೆ ಬೆಳೆಯುತ್ತಲೇ ಇದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಭಾರತದ ಏಕತೆ, ವೈವಿಧ್ಯತೆ, ಬಹುಪಕ್ಷೀಯ ಪದ್ಧತಿ, ಆರ್ಥಿಕ ಬೆಳವಣಿಗೆ ಮತ್ತು ಬಡತನ, ನಿರುದ್ಯೋಗ ಜನಸಂಖ್ಯಾ ನಿಯಂತ್ರಣಗಳ ಬಗ್ಗೆ ದೇಶ ಹೋರಾಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ.

ಜಾಗತಿಕ ಮಟ್ಟದ ಚರ್ಚೆ ಅಗತ್ಯ : ಉತ್ತರ, ದಕ್ಷಿಣ ಎಂಬ ತಾರತಮ್ಯಗಳನ್ನು ಹೋಗಲಾಡಿಸಲು ಯತ್ನಿಸಬೇಕು ಎಂದಿದ್ದಾರೆ. ಜಗತ್ತಿನ ಬಡತನವನ್ನು ಹೊಡೆದೋಡಿಸಲು ಜಾಗತಿಕ ಮಟ್ಟದ ಚರ್ಚೆಗೆ ಕರೆಕೊಟ್ಟಿರುವ ಪ್ರಧಾನಿ, ಅದು ನವದೆಹಲಿಯಲ್ಲಿ ನಡೆಯುವಂತಾದರೆ ಸೂಕ್ತ ಎಂದೂ ಹೇಳಿದ್ದಾರೆ. ನಿರ್ಗತಿಕರ ಪರವಾಗಿನ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ.

ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಎರಡೂ ದೇಶಗಳ ನಡುವಿನ ಸಂಬಂಧಗಳು ಇನ್ನೂ ಆಳಕ್ಕೆ ಬೆಳೆಯಬೇಕು. ಭಯೋತ್ಪಾದನೆ ಹತ್ತಿಕ್ಕಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕು. ಅದಕ್ಕಾಗಿ ತಾಂತ್ರಿಕ, ವೈಜ್ಞಾನಿಕ, ಪರಿಸರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಮೆರಿಕದೊಂದಿಗೆ ಹೆಜ್ಜೆಯಿಡಲು ಭಾರತ ಸಿದ್ಧ ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X