ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಡಾ: 18ರಂದು ಸುಪ್ರೀಂಕೋರ್ಟ್‌ ವಿಚಾರಣೆ ಸಾಧ್ಯತೆ

By Staff
|
Google Oneindia Kannada News

ಬೆಂಗಳೂರು : ಟಾಡಾ ಬಂದಿಗಳ ಬಿಡುಗಡೆಗೆ ಸರ್ವೋನ್ನತ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವಿಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರತಿ ಪ್ರಮಾಣ ಪತ್ರದ ಮೇಲಿನ ವಿಚಾರಣೆ 18ರಂದು ನಡೆಯುವ ಸಾಧ್ಯತೆ ಇದೆ ಎಂದು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ತಿಳಿಸಿದ್ದಾರೆ.

ರಾಜ್‌ ಬಿಡುಗಡೆ ಪ್ರಕ್ರಿಯೆಯಲ್ಲಿ ವೀರಪ್ಪನ್‌ ಷರತ್ತುಗಳನ್ನು ಒಪ್ಪಿಕೊಂಡ ರಾಜ್ಯದ ನಿಲುವನ್ನು ಸಮರ್ಥಿಸಿಕೊಂಡ ಸಚಿವರು ರಾಜ್‌ ಅಪಹರಣ ಬಿಕ್ಕಟ್ಟು ಮುಂದುವರಿದರೆ ಕರ್ನಾಟಕ - ತಮಿಳುನಾಡು ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕೈಮೀರುವ ಸಾಧ್ಯತೆ ಇರುವುದನ್ನು ಹಾಗೂ ಎರಡೂ ರಾಜ್ಯಗಳ ಆಸ್ತಿ -ಪಾಸ್ತಿಗೆ ಉಂಟಾಗ ಬಹುದಾದ ಹಾನಿಯ ಬಗ್ಗೆ ಪ್ರತಿ ಪ್ರಮಾಣಪತ್ರದಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

1984ರಿಂದಲೂ ವೀರಪ್ಪನ್‌ನನ್ನು ಬಂಧಿಸಲು ಸರಕಾರ ಕೈಗೊಂಡಿರುವ ಎಲ್ಲ ಕ್ರಮ ಹಾಗೂ ಅದರಿಂದ ಉಂಟಾದ ಅನಾಹುತಗಳೆಲ್ಲದರ ವಿವರಣೆಯನ್ನೂ ಮನವಿ ಒಳಗೊಂಡಿದೆ ಎಂದು ಅವರು ತಿಳಿಸಿದರು.

ನಂಜನಗೂಡಿಗೆ ರಾಜ್‌ ಕುಟುಂಬ : ರಾಜ್‌ ಅಪಹರಣವಾದ ದಿನದಿಂದಲೂ ಹಲವು ದೇವರುಗಳಿಗೆ ಹರಕೆ ಹೊತ್ತಿರುವ ರಾಜ್‌ಕುಮಾರ್‌ ಕುಟುಂಬದವರು ಗುರುವಾರ ನಂಜನಗೂಡಿನ ಶ್ರೀಕಂಠನ ಸನ್ನಿಧಿಗೆ ತೆರಳಿದ್ದಾರೆ. ರಾಜ್‌ ಬಿಡುಗಡೆಗೆ ಅನುಗ್ರಹಿಸುವಂತೆ ನಂಜುಂಡೇಶ್ವರನನ್ನು ಪ್ರಾರ್ಥಿಸಲು ನಂಜನಗೂಡಿಗೆ ಹೊರಟ ಅವರು, ಶ್ರೀ ಚಾಮುಂಡಮ್ಮನವರಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸೋಮವಾರ ಗೋಪಾಲ್‌ ಮತ್ತೆ ಕಾಡಿಗೆ : ಈ ಮಧ್ಯೆ ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ನಿಂದ ಬಿಡಿಸಿಕೊಂಡು ಬರಲು ಸೋಮವಾರ ಗೋಪಾಲ್‌ ಅವರು ನಾಲ್ಕನೆ ಬಾರಿಗೆ ಸಂಧಾನಕ್ಕಾಗಿ ಕಾಡಿಗೆ ತೆರಳಲಿದ್ದಾರೆ ಎಂದು ಚೆನ್ನೈ ಮೂಲಗಳು ತಿಳಿಸಿವೆ. ಟಾಡಾ ಬಂದಿಗಳ ಬಿಡುಗಡೆ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿರುವ ಅರ್ಜಿಯ ವಿಚಾರಣೆ ಬಹುತೇಕ ಸೋಮವಾರ ನಡೆಯುವ ಸಾಧ್ಯತೆ ಇದ್ದು, ಫಲಶ್ರುತಿ ತಿಳಿದ ನಂತರ ಗೋಪಾಲ್‌ ಕಾಡಿಗೆ ಹೋಗುವ ಸಂಭವ ಇದೆ.

ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರೊಂದಿಗೆ ಕೃಷ್ಣ ಚರ್ಚೆ: ಬುಧವಾರ ಸಂಜೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಕೃಷ್ಣ ಅವರು ಗುರುವಾರ ಬೆಳಗ್ಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳೊಂದಿಗೆ ರಾಜ್‌ ಬಿಡುಗಡೆಯ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸಚಿವರುಗಳಾದ ಧನಂಜಯ ಕುಮಾರ್‌, ಶ್ರೀನಿವಾಸ ಪ್ರಸಾದ್‌ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಅನಂತಕುಮಾರ್‌ ಅವರು ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಗೊತ್ತಾಗಿದೆ. ವೀರಪ್ಪನ್‌ ಅಟ್ಟಹಾಸವನ್ನು ಮಟ್ಟಹಾಕಲು ಎನ್‌.ಎಸ್‌.ಜಿ. ಕಮಾಂಡೋ ಪಡೆಯ ನೆರವು ಬಳಸಿಕೊಳ್ಳುವಂತೆ ಕೇಂದ್ರ ಸರಕಾರ ಮಾಡಿದ ಸಲಹೆಯನ್ನು ರಾಜ್ಯ ಸರಕಾರ ಬಹಳ ನಮ್ರವಾಗಿ ತಿರಸ್ಕರಿಸಿದೆ. ಬಲಪ್ರಯೋಗಕ್ಕೆ ಕೈಹಾಕಿದರೆ, ರಾಜ್‌ ಹಾಗೂ ಮತ್ತಿತರ ಪ್ರಾಣಕ್ಕೆ ಸಂಚಕಾರ ಒದಗಬಹುದು ಎಂಬ ಭೀತಿಯಿಂದ ಕೇಂದ್ರದ ಈ ಸಲಹೆಯನ್ನು ಪುರಸ್ಕರಿಸದಿರಲು ರಾಜ್ಯ ತೀರ್ಮಾನಿಸಿತೆಂದು ತಿಳಿದುಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X