ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಾಗಿದೆಯೇ ಮೈಸೂರು?

By Staff
|
Google Oneindia Kannada News

ಮೈಸೂರು: ಅರಮನೆಗಳ ನಗರ ಮೈಸೂರು ವಿಶ್ವವಿಖ್ಯಾತ ಪ್ರವಾಸೀ ತಾಣ. ದಸರೆಯ ಸಮಯದಲ್ಲಂತೂ ಮೈಸೂರಿನ ಸೊಬಗು ಕಾಣಲು ದೇಶ - ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಬಾರಿ ದಸರೆ ಹತ್ತಿರವಾಗುತ್ತಿದ್ದರೂ ಪ್ರವಾಸಿಗರೇ ಕಾಣ ಬರುತ್ತಿಲ್ಲ. ರಾಜ್‌ ಅಪಹರಣದ ಹಿನ್ನಲೆಯಲ್ಲಿ ಮೈಸೂರು ನಗರ ಬಣಗುಡುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮೃದ್ಧವಾಗಿ ಮಳೆಯಾಗಿ ನಾಡಿನ ಹೆಮ್ಮೆಯ ಕೃಷ್ಣರಾಜ ಸಾಗರ ತುಂಬಿ ತುಳುಕುತ್ತಿದ್ದರೂ, ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಸಾಮಾನ್ಯವಾಗಿ ಮೈಸೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ಪ್ರವಾಸಿ ಬಸ್‌ಗಳ ದರ್ಶನವೂ ದುರ್ಲಭವಾಗುತ್ತಿದೆ. ರಾಜ್‌ ಅಪಹರಣದಿಂದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೂ ದಸೆಯ ನಿಮಿತ್ತ ಮೈಸೂರನ್ನು ಸಿಂಗರಿಸುವ ಕಾರ್ಯ ಭರದಿಂದ ಸಾಗಿದೆ.

ಈ ಮಧ್ಯೆ ಬಣ್ಣದ ನಗರಿಯ ಹೊಟೆಲ್‌ ಉದ್ಯಮಿಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅನೇಕ ಪ್ರವಾಸಿಗರು ತಾವು ಮಾಡಿಸಿದ್ದ ಅಡ್ವಾನ್ಸ್‌ ಬುಕ್ಕಿಂಗ್‌ ಅನ್ನು ಕ್ಯಾನ್ಸಲ್‌ ಮಾಡಿಸಿದ್ದಾರೆ, ಮಾಡಿಸುತ್ತಲೂ ಇದ್ದಾರೆ. ಇದಕ್ಕೆ ಯಾವ ಪ್ರಮುಖ ಹೋಟೆಲ್‌ಗಳೂ ಹೊರತಲ್ಲ ಎಂದು ಹೋಟೆಲ್‌ ಮೂಲಗಳು ತಿಳಿಸಿವೆ. ಸಾರಿಗೆ ಮತ್ತು ವಸತಿ ಉದ್ಯಮದ ಮೇಲೂ ರಾಜ್‌ ಅಪಹರಣ ಪರೋಕ್ಷ ಪರಿಣಾಮ ಬೀರಿದೆ.

ಪ್ರಮುಖ ಹೋಟೆಲ್‌ಗಳಲ್ಲಿ ಹೆಚ್ಚುಕಡಿಮೆ ಸ್ಮಶಾನ ಮೌನ ಆವರಿಸಿದೆ. ಆಗಸ್ಟ್‌ನಿಂದ ವಹಿವಾಟು ಕುಸಿದಿದೆ. ಮುಂಚೆಯೇ ಬುಕ್‌ ಮಾಡಲಾಗಿದ್ದ ಶೇಕಡಾ 60ರಷ್ಟು ಆರ್ಡರ್‌ಗಳ ಸಂಖ್ಯೆ ಈಗ ಅರ್ಧಕ್ಕಿಳಿದಿದೆ ಎಂದು ರಮಣಶ್ರೀ ಕಂಫರ್ಟ್‌ನ ವ್ಯವಸ್ಥಾಪಕ ಡೆರಿಯಲ್‌ ಎಡ್ವರ್ಡ್ಸ್‌ ಹೇಳುತ್ತಾರೆ. ಉತ್ತರ ಭಾರತದ ಐದು ಪ್ರಮುಖ ಪ್ರವಾಸಿ ಸಂಸ್ಥೆಗಳು, ಅಪಹರಣ ಪ್ರಕರಣ ಬೆಳಕಿಗೆ ಬಂದ ತಕ್ಷಣದಿಂದ ಆರ್ಡರ್‌ ರದ್ದುಪಡಿಸಿವೆ. ಅದರಲ್ಲೂ ತಮಿಳುನಾಡಿನ ಪ್ರವಾಸಿಗರ ಸಂಖ್ಯೆ ಇಲ್ಲವೇ ಇಲ್ಲ ಎನ್ನುತ್ತಾರೆ ಎಡ್ವರ್ಡ್ಸ್‌ .

ಆಟೋಗಳಿಗೆ ಬಿಸಿ : ಹೊರಗಿನ ಪ್ರವಾಸಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವ ರಿಕ್ಷಾ ಚಾಲಕರಂತೂ ಕಂಗಾಲಾಗಿದ್ದಾರೆ. ಆಟೋ ಮಾಲೀಕರಿಗೆ ಪ್ರತಿದಿನ ಕೊಡಬೇಕಾದ 70 ರುಪಾಯಿ ದಿನಬಾಡಿಗೆಗೂ ಒದ್ದಾಡಬೇಕಿದೆ ಎಂದು ಚಾಲಕ ರಾಜೇಂದ್ರ ಹೇಳುತ್ತಾನೆ.

ಕೇವಲ ವ್ಯವಹಾರಸ್ಥರು ಮಾತ್ರ ಈಗ ಹೋಟೆಲ್‌ಗಳ ಗಿರಾಕಿಗಳು. ಇದರಿಂದ ಸ್ವಲ್ಪ ಮಟ್ಟಿಗೆ ನೆರವಾಗಿದೆ ಎಂದು ಸದರನ್‌ ಸ್ಟಾರ್‌ ಹೋಟೆಲ್‌ನ ವ್ಯವಸ್ಥಾಪಕ ಸುಂದರೇಶನ್‌ ಹೇಳುತ್ತಾರೆ. ಇನ್ನು ಪಂಚಾತಾರಾ ಹೋಟೆಲ್‌ ಲಲಿತಮಹಲ್‌ ಶೇಕಡಾ 80ರಷ್ಟು ವಿದೇಶಿ ಪ್ರವಾಸಿಗರನ್ನೇ ಅವಲಂಬಿಸಿದೆ. ವಾಣಿಜ್ಯಕ್ಕೆ ಸಂಬಂಧಿಸಿದಂತೆ ನಡಯಬೇಕಿದ್ದ ಎರಡು ಪ್ರಮುಖ ಸಮಾವೇಶಗಳು ರದ್ದಾಗಿವೆ. ಇದರಿಂದ ಅಪಾರ ನಷ್ಟವಾಗಿದೆ. ಬಿಕ್ಕಟ್ಟು ಅಕ್ಟೋಬರ್‌ವರೆಗೆ ಮುಂದುವರಿದರೆ ಪರಿಸ್ಥಿತಿ ತುಂಬಾ ಬಿಗಡಾಯಿಸುತ್ತದೆ ಎಂದು ಹೋಟೆಲ್‌ನ ಜನರಲ್‌ ಮ್ಯಾನೇಜರ್‌ ಹೇಳಿದ್ದಾರೆ.

ಸಾಮಾನ್ಯವಾಗಿ ದಸರೆಯ ಆರಂಭಕ್ಕೆ ತಿಂಗಳ ಮೊದಲೇ ಮೈಸೂರಿನ ಹೊಟೆಲ್‌ಗಳಲ್ಲಿ ಬುಕ್ಕಿಂಗ್‌ ಆರಂಭವಾಗುತ್ತದೆ. ದಸರೆಯ ಕಾಲದಲ್ಲಿ ರೂಂ ದೊರಕುವುದೇ ಕಷ್ಟ. ಆದರೆ, ಈ ಬಾರಿ ದಸರೆಗೆ ಕೇವಲ 20 ದಿನವಷ್ಟೇ ಉಳಿದ್ದಿದ್ದರೂ, ಎಲ್ಲ ಹೋಟೆಲ್‌ಗಳಲ್ಲೂ ರೂಂಗಳು ಖಾಲಿ ಉಳಿದಿವೆ. ಸೆಪ್ಟೆಂಬರ್‌ 28ರೊಳಗೆ ರಾಜ್‌ಕುಮಾರ್‌ ಬಿಡುಗಡೆಯಾಗದಿದ್ದರೆ, ದಸರೆ ಹೇಗೆ ನಡೆಯುತ್ತದೆ ಎಂದು ಊಹಿಸುವುದೂ ಕಷ್ಟ. ರಾಜ್‌ ಬಿಡುಗಡೆ ಆಗದಿದ್ದರೆ, ದಸರಾ ಮಹೋತ್ಸವ ನಡೆಯುತ್ತದೋ ಇಲ್ಲವೋ ಗೊತ್ತಿಲ್ಲ ಎನ್ನುವವರೂ ಇದ್ದಾರೆ.

ನಾಡಹಬ್ಬದ ಸಂಭ್ರಮ ಕಾಣಲು ಮೈಸೂರಿಗೆ ಬರುವ ಪ್ರವಾಸಿಗರಿಂದ ಒಂದಿಷ್ಟು ಹಣ ಸಂಪಾದಿಸುತ್ತಿದ್ದ ವ್ಯಾಪಾರಸ್ಥರಂತೂ ಬೇರೆ ದಾರಿ ಕಾಣದೆ ಡಾ. ರಾಜ್‌ಕುಮಾರ್‌ ಬಿಡುಗಡೆಗಾಗಿ ಶ್ರೀಚಾಮುಂಡಾಂಬಿಕೆಗೆ ಹರಕೆ ಹೊತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X