• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಮನ ಜತೆ ಕುಣಿಯೋಣ ಬರುತ್ತೀರಾ ?

By Staff
|
Somana Kunita ಕರ್ನಾಟಕ ಜನಪದವೆಂದರೆ ನಂಬಿಕೆ, ಅನುಭವ ಮತ್ತು ಕೂಡಿಬಾಳುವ ಸಂಭ್ರಮದ ಪ್ರತೀಕ. ದೇವಿಯನ್ನು ಆರಾಧಿಸುವ ಸೋಮನ ಕುಣಿತ ಪ್ರಸಂಗವಂತೂ ನಮ್ಮ ಅನಕ್ಷರಸ್ಥ ಗ್ರಾಮೀಣ ಜನತೆಯ ಅಂತರಂಗ.

ಜಾನಪದ ಹಾಡು ಕುಣಿತ ನಮ್ಮ ಅನಕ್ಷರಸ್ಥ ಹಳ್ಳಿಗರ ಅಂತರಂಗ. ಅನುಭವವೆಂಬ ಗುರುವಿನಿಂದ ತಮ್ಮ ಸುತ್ತಲ ಪರಿಸರದಲ್ಲಿ ಪಾಠ ಕಲಿವ ಗ್ರಾಮೀಣರು ದೇವೀ ಆರಾಧನೆಗಾಗಿ ಹಲವು ಬಗೆಯ ಜಾನಪದ ನೃತ್ಯಗಳನ್ನು ಮಾಡುವುದುಂಟು. ಅವುಗಳಲ್ಲಿ ಒಂದಾದ ಸೋಮನ ಕುಣಿತ ಅತಿ ಸುಂದರ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ತುಮಕೂರು, ಚಿತ್ರದುರ್ಗ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಬಹು ಜನಪ್ರಿಯವಾಗಿರುವ ಸೋಮನ ಕುಣಿತ ಈಗ ದೇಶ - ವಿದೇಶಗಳಲ್ಲೂ ಪ್ರದರ್ಶಿತವಾಗಿ ವಿಶ್ವದ ಜನರ ಗಮನ ಸೆಳೆದಿದೆ. ಬಣ್ಣ ಬಣ್ಣದ ವಸ್ತ್ರಗಳ ಅಲಂಕಾರದೊಂದಿಗೆ ರಾಕ್ಷಸನ ಮುಖವಾಡವನ್ನುಳ್ಳ ಸೋಮನ ಕುಣಿತ ದೇವೀ ಆರಾಧನೆಯ ಒಂದು ಅಂಗ. ದೇವಿಯನ್ನು ರಂಜಿಸಲು, ದೇವಿಯ ಮನಸ್ಸನ್ನು ಸಂತೋಷ ಪಡಿಸಲು ಸೋಮ ಕುಣಿಯುತ್ತಾನೆ ಎಂಬುದು ಗ್ರಾಮೀಣರ ನಂಬಿಕೆ.

ಪ್ರತೀತಿ : ಸೋಮ ದೇವಿಯ ಅಂಗರಕ್ಷಕ, ದೇವಿಯ ಕಾವಲಿಗೆ ಕಾಲಭೈರವ (ರುದ್ರ ರೂಪಿ ಶಿವ) ನೇಮಿಸಿರುವ ಶಿವ ಗಣ. ರಾಕ್ಷಸ ರೂಪಿಯಾದ ಅಂಗರಕ್ಷಕ ಎಂದೂ ಗ್ರಾಮೀಣರು ಹೇಳುತ್ತಾರೆ. ಸೋಮನ ಹುಟ್ಟಿನ ಬಗ್ಗೆ ಹಲವಾರು ಕತೆಗಳಿವೆ. ಒಂದು ಕತೆಯ ರೀತ್ಯ ವಿವಾಹಿತ ಹೆಣ್ಣೊಬ್ಬಳು, ತನ್ನ ತವರಿನಿಂದ ಮಾವನ ಜತೆಯಲ್ಲಿ ಗಂಡನ ಮನೆಗೆ ಹೊರಟಿದ್ದಳಂತೆ. ಸುದೀರ್ಘ ಪ್ರಯಾಣದಲ್ಲಿ ಮಾರ್ಗಮಧ್ಯೆ ಆಕೆಗೆ ಜಲಬಾಧೆ ಕಾಣಿಸಿಕೊಂಡಿತಂತೆ. ಎತ್ತಿನ ಗಾಡಿಯನ್ನು ನಿಲ್ಲಿಸಿ ಆಕೆ ತಾನು ಮೂತ್ರ ವಿಸರ್ಜಿಸಿ ಬರುವುದಾಗಿ ಅಲ್ಲಿಯ ವರೆಗೆ ಹಿಂತಿರುಗಿ ನೋಡದೇ ನಿಂತಿರುವಂತೆ ತಂದೆಯ ಸಮಾನನಾದ ಮಾವನಿಗೆ ತಿಳಿಸಿ ಹುತ್ತವೊಂದರ ಹಿಂದೆ ಹೋದಳಂತೆ. ಅತ್ತ ಮುಖ ಮಾಡಿ ನಿಂ-ತಿದ್ದ ಮಾವ ತನ್ನ ಸ್ಥಾನವೇನೆಂಬುದನ್ನೂ ಮರೆತು ಹಿಂತಿರುಗಿ ನೋಡಿದನಂತೆ. ಇದರಿಂದ ಲಜ್ಜಿತಳೂ, ಅವಮಾನಿತಳೂ ಆದ ಆ ಹೆಣ್ಣು, ಹುತ್ತದ ಕೋವಿಯನ್ನು ಪ್ರವೇಶಿಸಿದಳಂತೆ. ಮಾವ ನೋಡು ನೋಡುತ್ತಿದ್ದಂತೆಯೇ ಆಕೆ ಹುತ್ತದಿಂದ ದೇವತೆಯಾಗಿ ಹೊರ ಬಂದಳು. ದೇವತೆಯಾಗಿ ಹೊರ ಬಂದ ಸೊಸೆಯ ಸಂಗಡ ಇಬ್ಬರು ದೈತ್ಯರೂ ಇದ್ದರು. ಅವರೇ ದೇವಿಯ ಅಂಗರಕ್ಷಕರಾದ ಸೋಮರು. ಈ ಅಂಗರಕ್ಷಕರು, ಪುತ್ರಿ ಸಮಾನಳಾದ ಸೊಸೆಯನ್ನು ಕಾ-ಮು-ಕ ದೃಷ್ಟಿಯಿಂದ ನೋಡಿದ ಮಾವನನ್ನು ವಧಿಸಿದರು ಎಂಬ ಕತೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಪ್ರಚಲಿತ.

ತುರುವೇಕೆರೆಯ ಗ್ರಾಮದೇವತೆ ಉಡುಸುಲಮ್ಮನ ದೇವಾಲಯದಲ್ಲಿ ಕೂಡ ಸೋಮರು ಇದ್ದಾರೆ. ಊರ ದೇವಿಯ ಜಾತ್ರೆಯಲ್ಲಿ ಸೋಮನ ಕುಣಿತ ಹಾಗೂ ಸಿಡಿ ಕರ್ನಾಟಕದ ಜನರನ್ನು ತನ್ನತ್ತ ಆಕರ್ಷಿ-ಸಿದೆ. ಸಾಮಾನ್ಯವಾಗಿ ಗ್ರಾಮದೇವತೆಯ ಬಳಿ ಇಬ್ಬರು ಸೋಮರು ಇರುತ್ತಾರೆ. ಒಂದು ಕೆಂಪು ಬಣ್ಣದ ಸೋಮ. ಮತ್ತೊಂದು ಹಳದಿ ಸೋಮ. ಕೆಂಪು ಸೋಮನನ್ನು ಕೆಂಪರಾಯನೆಂದೂ, ಹಳದಿ ಸೋಮನನ್ನು ಕೆಂಚರಾಯನೆಂದೂ ಕರೆಯುತ್ತಾರೆ.

ಹೆಣ್ಣಿಗ ಕೆಂಚರಾಯ : ನಮ್ಮ ಗ್ರಾಮೀಣ ಮಹಿಳೆಯರಿಗೆ ಒಡವೆ ವಸ್ತುವಿಗಿಂತ, ಹರಿಶಿನ ಕುಂಕುಮವೇ ಮಿಗಿಲು. ಸುಮಂಗಲೆಯರು ಹರಿಶಿನವನ್ನು ನಿತ್ಯವೂ ತಮ್ಮ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಹೀಗಾಗಿ ಹಳದಿ ಬಣ್ಣದ ಸೋಮ ಹೆಣ್ಣು ಎಂಬುದು ಗ್ರಾಮೀಣರ ನಂಬಿಕೆ. ಕೆಂಪು ಬಣ್ಣದ ಸೋಮ ಗಂಡಸು. ಕೆಲವೆಡೆ ಸೋಮರನ್ನು ಈರಣ್ಣ, ಪಾಪಣ್ಣ, ಕಪ್ಪಣ್ಣ, ಗುಳ್ಳಣ್ಣ ಎಂದೆಲ್ಲಾ ಕರೆಯುತ್ತಾರೆ. ಕಪ್ಪು ಬಣ್ಣದ ಸೋಮನನ್ನು ಕಪ್ಪಣ್ಣ ಅಥವಾ ಕಾಲ ಎಂದೂ ಹೇಳುವವರುಂಟು.

ಗ್ರಾಮೀಣರು ದೇವವೃಕ್ಷ ಎಂದು ತಿಳಿದಿರುವ ಭೂತಾಳೆ ಮರವನ್ನು ಕತ್ತರಿಸಿ ತಂದು ಅದರಿಂದ ಸೋಮರನ್ನು ತಯಾರಿಸುತ್ತಾರೆ. ರಾಕ್ಷಸನಂತೆ ಮುಖವಾಡವನ್ನು ಮಾಡಿ, ಮಧ್ಯೆ ಮನುಷ್ಯನ ತಲೆ ಹಿಡಿಯುವಷ್ಟು ರಂದ್ರ ಕೊರೆದು, ಕಣ್ಣುಗಳ ಭಾಗಕ್ಕೆ ತೂತು ಮಾಡಿ, ಅದಕ್ಕೆ ಬಣ್ಣ ಬಳಿದು, ಪ್ರಭಾವಳಿ ನಿರ್ಮಿಸಿ, ಬಣ್ಣಬಣ್ಣದ ಸೀರೆಗಳಿಂದ ಅಲಂಕರಿಸಿ, ಹೂವಿನ ಹಾರ ಹಾಕಿ ಸೋಮರನ್ನು ಸಿದ್ಧಗೊಳಿಸುತ್ತಾರೆ. ಸೋಮನನ್ನು ಹೊತ್ತವರಿಗೆ ಉಸಿರಾಡಲು ಅನುವಾಗುವಂತೆ ಮೂಗಿನ ಹೊಳ್ಳೆಗಳಿಗೆ ರಂಧ್ರವನ್ನೂ ಕೊರೆಯಲಾಗುತ್ತದೆ.

ಸಾಮಾನ್ಯವಾಗಿ ದೇವೀಗುಡಿಯ ಅರ್ಚಕರು ಅಥವಾ ಅವರ ವಂಶಸ್ಥರೇ ಸೋಮವನ್ನು ಹೊರುವುದು ವಾಡಿಕೆ. ಸೋಮನ ಸುತ್ತಾ, ಪದಗಾರರು, ತಾಳ ಮದ್ದಳೆಯವರು ಹಾಡುವ ಹಾಡಿಗೆ, ತಾಳಕ್ಕೆ ತಕ್ಕಂತೆ ಸೋಮ ಹೆಜ್ಜೆ ಹಾಕುತ್ತಾ ಕುಣಿಯುತ್ತಾನೆ. ಸೋಮನ ಈ ನರ್ತನ ನೋಡಿದವರಿಗೆ ಅದರ ಮಹತ್ವ, ಮನರಂಜನೆ ಏನೆಂದು ತಿಳಿದಿದ್ದೀತು.

ಎಲ್ಲ ಊರುಗಳಲ್ಲೂ ಕೂಡ ಸೋಮ ಮೊದಲು ದೇವಸ್ಥಾನದ ಎದುರು ಕುಣಿದು, ದೇವಿಯನ್ನು ಸ ಂತೋಷಗೊಳಿಸಿ, ನಂತರ ನಗರ ಪ್ರದಕ್ಷಿಣೆಗೆ ಹೊರಡುತ್ತಾನೆ. ಊರಿನ ಜನರಿಗೆ ತಾನು ದೇವಿಯ ರಕ್ಷಣೆಗೆ ಇರುವುದಾಗಿ ಸಾರುವುದು ಹಾಗೂ ಜನರು ಪಾಪಕಾರ್ಯ ಮಾಡದಂತೆ ಎಚ್ಚರ ಮೂಡಿಸುವುದೇ ಈ ಪ್ರದಕ್ಷಿಣೆಯ ಹಿಂದಿನ ಉದ್ದೇಶ. ಮನಸ್ಸಿಗೆ ಮುದಕೊಡುವ ಹಾಗೂ ದೇವೀ ಆರಾಧನೆಯ ಈ ಸುಂದರ ಕುಣಿತ, ಗ್ರಾಮೀಣರ ನಾಟ್ಯಕಲೆ.

ಇತರ ಊರುಗಳಲ್ಲಿ ಕೂಡ ಬೇರೆ ಊರಿನ ಸೋಮರನ್ನು ಕರೆಸಿ ನೃತ್ಯ ಮಾಡಿಸುವುದುಂಟು. ಇಂತಹ ಸಂದರ್ಭಗಳಲ್ಲಿ ಸೋಮ ತನ್ನ ಮೂಲ ದೇವಿಯ ಅಪ್ಪಣೆ ಪಡೆದೇ ಆ ಊರಿಗೆ ಹೋಗುತ್ತಾನಂತೆ. ಸಾಮಾನ್ಯವಾಗಿ ದೀಕ್ಷೆ ಪಡೆದ ಮಂದಿ ಮಾತ್ರ ಕಾಲಿಗೆ ಗೆಜ್ಜೆ ಕಟ್ಟಿ ಸೋಮನನ್ನು ಹೊರುವುದು. ಸೋಮನ ಹೊರುವ ಮಂದಿ ಮೊದಲು ಶುಚಿರ್ಭೂತರಾಗಿ, ಉದ್ದನೆಯ ಲಂಗ ತೊಟ್ಟು, ತಿಲಕವಿಟ್ಟು ಸೋಮರನ್ನು ಹೊರುತ್ತಾರೆ.

ದೆಹಲಿಯಲ್ಲಿ ನಡೆದ ಫೂಲ್‌ವಾಲೊಂಕಿ ಸೈರ್‌ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಸೋಮನ ಕುಣಿತ ಜನಮನ್ನಣೆ ಹಾಗೂ ಪ್ರಶಸ್ತಿಗಳನ್ನು ಗಳಿಸಿದೆ. ನೀವೂ ಒಮ್ಮೆ ತಪ್ಪದೆ ಸೋಮನ ಕುಣಿತವ ನೋಡಿ. ನಮ್ಮ ಗ್ರಾಮೀಣರ ಈ ನೃತ್ಯದ ಸೊಬಗನ್ನು ಸವಿಯಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more