ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕಂಠನ ಸನ್ನಿಧಿಯ ಉದ್ಭವ ಗಣಪ ವಿಜ್ಞಾನದ ಕಣ್ಣಿಗೆ ಎಟುಕದ ಸೃಷ್ಟಿ ರಹಸ್ಯಗಳು ಎಷ್ಟೋ ಇವೆ. ಅವುಗಳಲ್ಲಿ ನಂಜನಗೂಡಿನ ಗಣಪನೂ ಒಬ್ಬ.

By Staff
|
Google Oneindia Kannada News

*ವಾಗ್ಮಿತ್ರ

ಉದ್ಭವ ಎಂಬ ಹೆಸರು ಕೇಳುತ್ತಿದ್ದಂತೆ, ಬಿ.ವಿ. ವೈಕುಂಠರಾಜು ಅವರ ಉದ್ಭವ ಕೃತಿ ನೆನಪಿಗೆ ಬರುತ್ತದೆ. ಸರಕಾರ ರಸ್ತೆಯನ್ನು ಅಗಲ ಮಾಡಿದರೆ, ಮನೆ, ಮಳಿಗೆಗಳನ್ನೆಲ್ಲಾ ಒಡೆಯುತ್ತಾರಲ್ಲ ಎಂದು ರಾತ್ರೋರಾತ್ರಿ ಗಣೇಶನ ವಿಗ್ರಹ ತಂದು, ಗಣಪ ಉದ್ಭವನಾದ ಎಂದು ಗುಲ್ಲೆಬ್ಬಿಸುವ - ಜನರ ಧಾರ್ಮಿಕ ಭಾವನೆಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಕತೆ ಅದು.

ಇಂತಹ ಸ್ವಾರ್ಥಗಳು ನಿಜವನ್ನೂ ಕೆಲವೊಮ್ಮೆ ಮರೆ ಮಾಚಿಸುವುದುಂಟು. ವಿಜ್ಞಾನಕ್ಕೆ ನಿಲುಕದ ಎಷ್ಟೋ ಸತ್ಯಗಳು ಈ ಸೃಷ್ಟಿಯಲ್ಲಿ ಅಡಗಿವೆ. ಇದಕ್ಕೊಂದು ಜ್ವಲಂತ ಉದಾಹರಣೆ ನಂಜನಗೂಡಿನ ಶ್ರೀಕಂಠನ ಸನ್ನಿಧಿಯ ನವಗ್ರಹಗಳಿರುವ ಸ್ಥಳದ ಈಶಾನ್ಯ ಕಂಬದಲ್ಲಿ ಕೊಂಚ ಕೊಂಚವೇ ಉದ್ಭವಿಸುತ್ತಿರುವ ಗಣಪ. ದುಷ್ಟ ಹಿರಣ್ಯ ಕಶಿಪುವನ್ನು ಕೊಲ್ಲಲು ನಾರಾಯಣ ಕಂಬ ಒಡೆದು ನರಸಿಂಹನಾಗಿ ಅವತರಿಸಿದರೆ, ಶ್ರೀಕಂಠನ ಸನ್ನಿಧಿಯ ಕಂಬದಲ್ಲಿ ಗಣಪ ಲೋಕಕಲ್ಯಾಣಾರ್ಥವಾಗಿ ಉದ್ಭವಿಸಿಹನಂತೆ.

ತಂದೆಯ ಸನ್ನಿಧಿಯಲ್ಲಿ ಕಂಬದಲ್ಲಿ ಉದ್ಭವಿಸುತ್ತಿರುವ ಗಣಪ : ನಮ್ಮ ಮನೆದೇವರೇ ನಂಜನಗೂಡಿನ ಶ್ರೀಕಂಠೇಶ್ವರ. ಹಿರಿಯರ ಜತೆ ಈ ದೇಗುಲಕ್ಕೆ ನಾನು ಹೋದಾಗಲೆಲ್ಲಾ ಕಂಬದಲ್ಲಿ ಉದ್ಭವಿಸುತ್ತಿರುವ ಗಣಪನನ್ನು ನಮಗೆ ತೋರಿಸುತ್ತಿದ್ದರು. ಆಗ ಅಲ್ಲಿ ಗಣಪ ಪೂರ್ಣವಾಗಿ ಗೋಚರಿಸುತ್ತಲೂ ಇರಲಿಲ್ಲ ಅನ್ನಿಸುತ್ತದೆ. ಅದು ಬಾಲ್ಯದ ನೆನಪು. ಒಮ್ಮೆ ಹಿರಿಯ ಪತ್ರಕರ್ತರು ಹಾಗೂ ನಂಜನಗೂಡಿನವರೇ ಆದ ಸಿ. ಸೀತಾರಾಂ ಅವರೊಂದಿಗೆ ನಂಜನಗೂಡಿನ ಬಗ್ಗೆ ಮಾತನಾಡುತ್ತಿದ್ದಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು.

ಈಗ್ಗೆ 50 ವರ್ಷಗಳ ಹಿಂದೆ ಅವರು ಬಾಲ್ಯದಲ್ಲಿ ಈ ಕಂಬದಲ್ಲಿ ಗಣಪನನ್ನು ಮೊದಲು ನೋಡಿದಾಗ ಅಲ್ಲಿ ಸ್ಪಷ್ಟವಾಗಿ ಗಣಪ ಕಾಣುತ್ತಿರಲಿಲ್ಲವಂತೆ. ಈ ಬಗ್ಗೆ ಬಹುಹಿಂದಿನಿಂದಲೂ ಅವರ ಮನದಲ್ಲಿದ್ದ ಜಿಜ್ಞಾಸೆಯನ್ನು ನಂಜನಗೂಡಿನ ಬಗ್ಗೆ ಬರೆದ ಪುಸ್ತಕವೊಂದರಲ್ಲಿ ದಾಖಲಿಸಿದ್ದರು. ಈ ಪುಸ್ತಕ ಓದಿದ ಊರಿನ ಹಿರಿಯರೊಬ್ಬರು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ತಾವು ಕಣ್ಣಾರೆ ಕಂಡ ವಿವರ ನೀಡಿದರು. ಕುತೂಹಲ ತಾಳಲಾರದೆ ಸೀತಾರಾಂ ಅವರು ನಂಜನಗೂಡಿಗೆ ಹೋದಾಗ ಮತ್ತೊಮ್ಮೆ ಆ ಗಣಪನನ್ನು ಅಧ್ಯಯನಾರ್ಥವಾಗಿ ಗಮನಿಸಿದರು, ತಾವು ಬಾಲ್ಯದಲ್ಲಿ ನೋಡಿದ್ದ ಗಣಪನಿಗೂ ಅಂದು ನೋಡಿದ ಗಣಪನಿಗೂ ಅಜಗಜಾಂತರ, ಬಾಲ್ಯದಲ್ಲಿ ಕೇವಲ ಕುಂಕುಮ - ಅರಿಶಿನ ಲೇಪಿತ ಉಬ್ಬುಗಳು ಕಾಣುತ್ತಿದ್ದ ಸ್ಥಳದಲ್ಲಿ, ಶಿಲ್ಪಿಯಾಬ್ಬ ಗಣಪನ ಮೂರ್ತಿಯನ್ನು ಕೆತ್ತಿದಂತೆ ತೋರಿತು.

ವೈಜ್ಞಾನಿಕ ವಿವರಣೆ: ಈ ಬಗ್ಗೆ ಸ್ಥಳೀಯ ವಿಜ್ಞಾನಿಯಾಬ್ಬರಲ್ಲಿ ಅವರು ಚರ್ಚಿಸಿದರಂತೆ. ಅವರೂ ಕೂಡ ತಾವೂ ಬಾಲ್ಯದಿಂದಲೂ ಇದನ್ನು ಗಮನಿಸುತ್ತಿರುವುದಾಗಿ, ಹಿಂದೆ ಇದ್ದ ಕೇವಲ ಕುಂಭಾಕೃತಿ ಇಂದು ಗಣಪನಾಗಿ ಮೂಡುತ್ತಿರುವ ಬಗ್ಗೆ ಅನುಮಾನವೇ ಇಲ್ಲ ಎಂದೂ, ಈ ವಿಶ್ವದಲ್ಲಿ ವಿಜ್ಞಾನಕ್ಕೆ ಮಿಗಿಲಾದ ಎಷ್ಟೋ ವಿಷಯಗಳು ಇವೆ ಎಂದೂ ಹೇಳಿದರಂತೆ. ಕೆಲವು ಕಲ್ಲುಗಳು ಅದರಲ್ಲೂ ಸುಣ್ಣದ ಅಂಶ ಇರುವ ಕಲ್ಲುಗಳು ಕಾಲಾನುಕ್ರಮದಲ್ಲಿ ಬೆಳೆಯುವ ಹಾಗೂ ತಮ್ಮ ಗಾತ್ರ ಹೆಚ್ಚಿಸಿಕೊಳ್ಳುವ ಬಗ್ಗೆ ವೈಜ್ಞಾನಿಕ ವಿವರಣೆ ನೀಡಬಹುದಾದರೂ, ಇಲ್ಲಿ ಗಣಪನ ಮೂರ್ತಿ ಹೇಗೆ ಸಾಕಾರಗೊಳ್ಳುತ್ತಿದೆ ಎಂಬುದಕ್ಕೆ ವಿವರಣೆ ನೀಡುವುದು ಸಾಧ್ಯವಿಲ್ಲ.

ನನಗೂ ಕೂಡ ಈ ಗಣಪನ ವಿಷಯದಲ್ಲಿ ಅದೇ ಕುತೂಹಲ ಇದೆ. ದೇವರು ಉದ್ಭವವಾಗುವ ಅಥವಾ ಬೆಳೆಯುವ ಬಗ್ಗೆ ನಾವೂ ನೂರಾರು ಕತೆಗಳನ್ನು ಕೇಳಿದ್ದೇವೆ. ಬೆಂಗಳೂರಿನ ಬುಲ್‌ ಟೆಂಪಲ್‌ ರಸ್ತೆಯಲ್ಲಿರುವ ದೊಡ್ಡ ಬಸವಣ್ಣ ದಿನೇ ದಿನೇ ಬೆಳೆಯುತ್ತಿದ್ದ ಕಾರಣ ಆತನ ತಲೆಯ ಮೇಲೆ ದೊಡ್ಡ ಮಳೆ ಹೊಡೆಯುವ ಮೂಲಕ ಬಸವನ ಬೆಳವಣಿಗೆ ನಿಲ್ಲುವಂತೆ ಮಾಡಲಾಗಿದೆ ಎಂಬ ಕತೆಯೂ ಇದೆ. ಇದೇ ಪ್ರಕಾರವಾದ ಹತ್ತಾರು ಕತೆಗಳು ದೇಶದ ಮೂಲೆ ಮೂಲೆಗಳಲ್ಲಿರುವ ಲಕ್ಷಾಂತರ ದೇವಾಲಯಗಳಲ್ಲೂ ಪ್ರಚಲಿತವಿದೆ. ಇದರಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ತರ್ಕಕ್ಕೆ ಬಿಟ್ಟ ವಿಷಯ. ಒಂದಂತೂ ಸತ್ಯ. ನಂಜನಗೂಡಿನ ಶ್ರೀಕಂಠನ ಸನ್ನಿಧಿಯ ಈಶಾನ್ಯ ಕಂಬದಲ್ಲಂತೂ ಇಂದು ನಾವು ಗಣಪನ ಮೂರ್ತಿಯನ್ನು ಕಾಣಬಹುದು. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಹಿಂದೆ ನೀವು ನೋಡಿದ ಗಣಪನಿಗೂ, ಇಂದು ನೋಡುವ ಗಣಪನಿಗೂ ವ್ಯತ್ಯಾಸವಂತೂ ಕಂಡು ಬರುತ್ತದೆ. ದೇವರಿದ್ದಾನೆ ಎಂಬ ವಾದಕ್ಕೆ ಬಹುಶಃ ಈ ಉದಾಹರಣೆ ಸಾಕ್ಷಿಯಾಗಿ ನಿಂತೀತು.

ನೀವು ನಂಜನಗೂಡಿಗೆ ಬಂದಾಗ ತಪ್ಪದೆ ಈ ಉದ್ಭವ ಗಣಪನ ದರ್ಶನ ಮಾಡಿ. ನಿಮ್ಮ ಮನದಂತರಾಳದಲ್ಲಿ ಸುಳಿಯುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿ. ಉತ್ತರ ಸಿಕ್ಕರೆ ನಮಗೂ ತಿಳಿಸಿ. ನಾವು ನಮ್ಮ ಓದುಗರಿಗೆ ತಲುಪಿಸುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X