ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿವಿಗೆ ಅರ್ಥ ಹಚ್ಚುವುದು, ಅಣೆಕಟ್ಟೆ ಕಟ್ಟುವುದು...

By Staff
|
Google Oneindia Kannada News

ನೀವು ಮಳೆಯಲ್ಲಿ ತೋಯ್ದು ಯಾವ ಕಾಲವಾಯಿತು ?

ನೀವು ನಗರದಲ್ಲೇ ಹುಟ್ಟಿ ಕಾಣದೆಮ್ಮೆಯ ಹಾಲು- ಗ್ರೆೃಪ್‌ ಸಿರಪ್‌ ಕುಡಿದು ಬೆಳೆದವರಾದರೆ, ಈ ಪ್ರಶ್ನೆ ನಿಮಗಲ್ಲ . ಕ್ಷಮಿಸಿ. ಅಂದಹಾಗೆ, ಮಳೆಯಲ್ಲಿ ತೋಯುವ ಪ್ರಶ್ನೆಯೇ ನಿಮಗೆ ಚೋದ್ಯವಾಗಿ ಕಂಡೀತು. ಮಳೆ ಬಂದಾಗ ಹೊಳೆಯಾಗುವ ಬೀದಿಗಳಲ್ಲಿ ಕಾಜಗದ ದೋಣಿಗಳ ತೇಲಿ ಬಿಡುತ್ತಾ , ಅವು ಪಲ್ಟಿ ಹಾಕುತ್ತಾ ತೇಕುತ್ತಾ , ಕಡೆಗೊಮ್ಮೆ ನೀರ್ಕುಡಿದು ಮಟಮಾಯವಾಗುವ ಬೆರಗು ನಿಮ್ಮಲ್ಲಿದ್ದರೆ- ನೆಂದ ಮಣ್ಣಿನಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ, ಆದಕ್ಕೆರಡು ಕದಗಳ ಕೊರೆದ ಕಸುಬುಗಾರಿಕೆ ನಿಮ್ಮದಾಗಿದ್ದರೆ- ಮಳೆ ಸುರಿವಿಗೆ ಮಯ್ಯಾಡ್ಡಿ ಅಪ್ಪಾಲೆ ತಿಪ್ಪಾಲೆ ಆಡಿ ಅಮ್ಮನ ಗದ್ದರಿಕೆಗೆ, ಹಿಂದೆಯೇ ಎದೆಯಾಲವಿನ ಬಿಸಿಗೆ ಒಳಗಾದ ರೋಮಾಂಚನ ನಿಮ್ಮ ಬಾಲ್ಯದ ಪುಟಗಳಲ್ಲಿದ್ದರೆ, ಪ್ರಶ್ನೆಯ ಮೌಲ್ಯ ತಟ್ಟನೆ ಎದೆ ಮುಟ್ಟಲು ಸಾಧ್ಯ.

ಬೆಳ್ಳಿಗೆರೆ ಅರಸುತ್ತಾ ನಗರಕ್ಕೆ ಬಂದ ಅನೇಕರಿಗೆ ಈ ಗುಬ್ಬಚ್ಚಿ ಗೂಡುಗಳು ಆಗಾಗ ನೆನಪಾಗುವುದುಂಟು. ಆಕಾಶ ಕವುಚಿ ಎದೆ ಮೇಲೆ ಬಿದ್ದಂತೆ ಸುರಿವ ಜೋರು ಮಳೆ- ಸೂರಿನ ತಗಡಿನ ಷೀಟುಗಳನ್ನು ಲಟ್ಟಿಸುತ್ತಿದ್ದರೆ, ಕಾಲು ಚಾಚಲು ಜಾಗೆಯಿಲ್ಲದ ಕೋಣೆಯಲ್ಲಿ ದೇಹ ಹಿಡಿ ಮಾಡಿಕೊಂಡು ಮುದುಡುತ್ತೇವೆಲ್ಲ - ಆಗ, ನೆನಪಾಗುತ್ತದೆ ಮಣ್ಣಲ್ಲಿ ಕಟ್ಟಿದ ಗುಬ್ಬಚ್ಚಿ ಗೂಡುಗಳು. ಬದುಕಿನ ವೈಚಿತ್ರ್ಯವೇ ಅದು. ಯಾವುದೋ ಬಗೆಯಲ್ಲಿ , ಯಾವಾಗಲೋ ಅಂದುಕೊಂಡದ್ದು ಎದುರಾಗುವುದು. ತಮಾಷೆಗೆ ಅಂದುಕೊಂಡದ್ದೂ.

ಇರುವುದು ಗುಬ್ಬಚ್ಚಿ ಗೂಡಲ್ಲಾದರೂ, ಆಕಾಶದಂಥ ಊರಲ್ಲಿ ಇಸ್ತ್ರಿ ಮಾಡಿಕೊಂಡ ಚಿಕ್ಕಿಗಳಾಗಿ ಬದುಕುತ್ತೇವಲ್ಲ , ಅದಕ್ಕಾಗಿ ಮಳೆಯಲ್ಲಿ ತೋಯುವುದನ್ನು ಮನಸ್ಸು ಒಪ್ಪುವುದೇ ಇಲ್ಲ . ಮೊನ್ನೆ ಮೊನ್ನೆ ತಾನೇ ನಿಯತಕಾಲಿಕದಲ್ಲಿ ಪ್ರಕಟವಾದ ಕತೆಯ ಹುಡುಗಿ ಹೀಗೇನೇ. ಬಾವಿಯಿಂದ ಸಾಗರಕ್ಕೆ ಸೇರುವಾಗ ಬದುಕಿಗಾಗುವಷ್ಟು ಕಟ್ಟಿಕೊಂಡ ನೆನಪುಗಳ ನಿತ್ಯ ನೆಂಚಿಕೊಂಡು ಬದುಕುತ್ತಿರುವಾಗ- ಸುರಿಯುತ್ತದಲ್ಲ ಮಳೆ, ಆಕಾಶ ಭೂಮಿಯನ್ನು ಒಂದಾಗಿಸಿ. ಹುಡುಗಿ ಕೊಡೆ ಬಿಡಿಸುತ್ತಾಳೆ, ಅರಳಿಕೊಳ್ಳುತ್ತವೆ ನೆನಪುಗಳು. ಗುಂಗಲ್ಲಿ ಬಸ್ಸೇರಿ, ಅದೇ ಗುಂಗಲ್ಲಿ ತಾವು ಸೇರಿದ ಎಷ್ಟೋ ಹೊತ್ತಿಗೆ ನೆನಪಾಗುತ್ತದೆ- ಬಸ್ಸಲೇ ಮರೆತು ಬಂದ ಕೊಡೆ. ಹುಚ್ಚು ಲೆಕ್ಕಗಳಲ್ಲಿ ಹುಡುಗಿ ಬಸ್ಸ ಹಾದಿಗುಂಟ ನಡೆಯುತ್ತಾಳೆ. ಕಂಡ ಬಸ್ಸುಗಳಲ್ಲೆಲ್ಲಾ ಕೊಡೆ ಹುಡುಕುತ್ತಾಳೆ. ಪಾಪ ! ಒಂದೇ ದಿನಕ್ಕೆ ಎರಡು ಕೇಜಿ ತೂಕ ಕಳೆದು ಕೊಳ್ಳುತ್ತಾಳೆ.

ಕೊಡೆಯ ನೆನಪಿರುತ್ತದಲ್ಲಾ , ಬಿಟ್ಟೂ ಬಿಟ್ಟೂ ಕಾಡುತ್ತದೆ. ಜೊತೆಯವರೆಲ್ಲ ಮಳೆಯೆಂದು ಮರದಡಿಯೋ, ಅಂಗಡಿ ಮುಂಗಟ್ಟುಗಳ ಮುಂದೆಯೋ ನಡುಗುತ್ತಿದ್ದರೆ- ಜಂಭದಿಂದ ಕೊಡೆ ಬಿಡಿಸಿಕೊಂಡು ನಡೆದದ್ದು, ಮಳೆ- ಬಿಸಿಲು ಏನೊಂದೂ ಇಲ್ಲದಾಗಲೂ ಕೊಡೆ ಬಿಡಿಸಿ ಕನಸು ಕಂಡದ್ದು, ಕೊಡೆಯನ್ನೇ ಜೀವವೆಂದು ಕೊಂಡು ಮಾತುಕತೆ ನಡೆಸಿದ್ದು .. ಎಲ್ಲಾ . ಮತ್ತೆ ಅಂಥದ್ದೇ ಕೊಡೆ ಕೊಂಡುಕೊಳ್ಳುವ ನಿರ್ಣಯದೊಂದಿಗೆ ಆಕೆಯ ವಿಷಾದ ಕಥನಕ್ಕೆ ತೆರೆ ಬೀಳುತ್ತದೆ. ಅದಾದ ನಂತರದ ಎಷ್ಟೋ ದಿನಗಳ ನಂತರದ ಒಂದು ಸಂಜೆ, ಅಂಥಾದ್ದೇ ಒಂದು ಜೋರು ಮಳೆ. ಹುಡುಗಿ ಕಚೇರಿಯಿಂದ ಹೊರಗೆ ಬರುತ್ತಾಳೆ. ಬಿಡಿಸ ಹೋದರೆ ಕೊಡೆಯಿಲ್ಲ . ಮತ್ತೆ ಕೊಡೆ ಕೊಳ್ಳುವ ಸಂದರ್ಭವೇ ಒದಗಿ ಬಂದಿಲ್ಲ . ಹೊದ್ದ ದುಪ್ಪಟವನ್ನೇ ತಲೆಗೆ ಸುತ್ತಿ ತಣ್ಣನೆ ಹೆಜ್ಜೆ ಹಾಕುತ್ತಾಳೆ, ಮನದಲ್ಲಿ ಕೊಡೆ ಹಿಡಿದು. ಕತೆ ಅಲ್ಲಿಗೆ ಮುಗಿಯುತ್ತದೆ.

ನೆನಪುಗಳೇ ಹೀಗೆ, ಹುಚ್ಚು ಹೊಳೆಯಂತೆ. ಹರಿವಿಗೆ ಅರ್ಥ ಹಚ್ಚುವುದು, ಅಣೆಕಟ್ಟು ಕಟ್ಟುವುದು ಕಷ್ಟ . ಹರಿದು ಹೋದಂತೇ ಬಿಡಬೇಕು. ಹೊಸದರ ಸ್ವಾಗತಕ್ಕೆ ಹಳೆಯದು ತೆರವಾಗಲೇಬೇಕಲ್ಲವೇ. ಕೊನೆಯದಾಗಿ, ದಿನದ ಲೆಕ್ಕಿಗನ ಕೆಲಸ ಮುಗಿಸೋಣವೆಂದರೆ ಮತ್ತದೇ ಅಂಕಿ ಅಂಶಗಳ ಪಾಠ. ರಾಜ್ಯದಲ್ಲಿ ಮಳೆ ಚೆನ್ನಾಗಿದೆ ಎಂದರೆ ಈವತ್ತಿಗೆ ಅಷ್ಟು ಸಾಲದೇ?

ಈಗ ಹೇಳಿ, ನೀವು ಕಡೆಯ ಸಲ ಮಳೆಯಲ್ಲಿ ತೊಪ್ಪೆಯಾದದ್ದು ಯಾವಾಗ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X