ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾರಿ ಯಾವುದಯ್ಯ ಶಿರಸಿಗೆ ?

By Staff
|
Google Oneindia Kannada News

ನಮ್ಮ ಪ್ರತಿನಿಧಿಯಿಂದ

ರಾಷ್ಟ್ರದ ಬಹುತೇಕ ಎಲ್ಲ ರಸ್ತೆಗಳೂ ಹದಗೆಟ್ಟಿವೆ. ಇದಕ್ಕೆ ಶಿರಸಿಯೂ ಹೊರತೇನಲ್ಲ , ವಾರಣಾಸಿಯೂ ಹೊರತಲ್ಲ.

ಶಿರಸಿ : ರಸ್ತೆಗಳ ದುಸ್ತಿತಿ ಬಗ್ಗೆ ಹೇಳಲು ಈ ಊರು, ಈ ಊರು ಎಂಬುದಿಲ್ಲ . ರಾಜ್ಯದ, ಕ್ಷಮಿಸಿ ರಾಷ್ಟ್ರದ ಬಹುತೇಕ ಎಲ್ಲ ರಸ್ತೆಗಳೂ ಹದಗೆಟ್ಟಿವೆ. ಇದಕ್ಕೆ ಶಿರಸಿಯೂ ಹೊರತೇನಲ್ಲ , ವಾರಣಾಸಿಯೂ ಹೊರತಲ್ಲ.

ಶಿರಸಿ ತಾಲೂಕು ಕೇಂದ್ರವಷ್ಟೇ ಅಲ್ಲ. ಸೋಂದಾ ಸ್ವರ್ಣವಲ್ಲಿ ಮಠ, ಸಹಸ್ರಲಿಂಗ ಹಾಗೂ ಮಾರಿಕಾಂಬಾ ದೇವಿ ದೇವಸ್ಥಾನ ಹಾಗೂ ಅನೇಕ ರಮಣೀಯ ಜಲಪಾತಗಳಿಂದ ಖ್ಯಾತವಾದ ಪ್ರಮುಖ ಕೇಂದ್ರ. ಉತ್ತರ ಕನ್ನಡ ಜಿಲ್ಲೆಯ ವಾಣಿಜ್ಯದ ನೆಲೆವೀಡು. ಆದರೆ, ಇಲ್ಲಿನ ಹದಗೆಟ್ಟ ರಸ್ತೆಗಳು ಮಾರಿಕಾಂಬ ದೇವಿಯನ್ನು ಉತ್ಸಾಹದಿಂದ ನೋಡ ಬರುವವರನ್ನು ‘ ಇಲ್ಲಿಗೆ ಯಾಕೆ ಬಂದಿರಿ, ಹಿಂದಕ್ಕೆ ಹೋಗಿ ’ ಎಂದು ಹೇಳುತ್ತವೆ.

ಊರಿನ ಎಲ್ಲ ರಸ್ತೆಗಳೂ ದೊಡ್ಡ ದೊಡ್ಡ ಹೊಂಡಗಳಿಂದ ತುಂಬಿವೆ. ಊರಿನ ಬಗ್ಗೆ ತಿಳಿದು ಬರಲು ಒಂದು ಸುತ್ತು ಹಾಕಿ ಬರೋಣ ಎನ್ನಲೂ ಹೆದರಿಕೆ ಆಗುತ್ತದೆ. ನೀವು ಅಂದು ನೋಡಿದ ಸ್ಥಿತಿಯಲ್ಲಿ ಇಂದು ಈ ಊರಿಲ್ಲ. ಮಾರಿಕಾಂಬಾ ದೇಗುಲಕ್ಕೆ ಬರುವ ಭಕ್ತರು ಈ ರಸ್ತೆಗಳನ್ನು ನೋಡಿ ಹೆದರಿ ಹಿಮ್ಮೆಟ್ಟಿರುವುದೂ ಉಂಟು. ರಸ್ತೆಯ ಬದಿಯಲ್ಲಿರುವ ಅಂಗಡಿಗಳು ನೀಡುತ್ತಿರುವ ಉಪಟಳವೂ ಅಷ್ಟಿಷ್ಟಲ್ಲ.

ನಿಮ್ಮ ಮನೆ ಹಾಗೂ ನಿಮ್ಮ ನೆರೆಹೊರೆಯನ್ನು ಶುಚಿಯಾಗಿಡಿ ಎಂಬ ಸಂದೇಶಗಳು ಇಲ್ಲಿನ ನಾಗರಿಕರಿಗೆ ತಿಳಿದಿದ್ದರೂ ಹೇಗೆ ತಮ್ಮೂರನ್ನು ಶುಚಿಯಾಗಿಟ್ಟುಕೊಳ್ಳಬೇಕೆಂಬುದೇ ಇವರಿಗೆ ತೋರುತ್ತಿಲ್ಲ. ಗುಟುಕಾ ಹಾವಳಿ ಹೆಚ್ಚಿದ ಮೇಲಂತೂ ರಸ್ತೆಯ ಮೇಲೆ ಉಗುಳುವವರ ಸಂಖ್ಯೆಗೂ ಇಲ್ಲಿ ಕಮ್ಮಿ ಏನಿಲ್ಲ. ಗುಟುಕಾ ಪ್ರಿಯರ ಉಗಿಯುವ ಚಟಕ್ಕೆ ಕೇವಲ ರಸ್ತೆಗಳಷ್ಟೇ ಅಲ್ಲ, ರಸ್ತೆ ಬದಿಯಲ್ಲಿರುವ ಅಂಗಡಿಗಳು, ಮನೆಯ ಗೋಡೆಗಳೂ ತುತ್ತಾಗಿವೆ.

ಇಲ್ಲೇ ಒಂದು ಶುಚಿ ರಾಜ್ಯ : ಊರೆ ಹೊಲಬುಗೆಟ್ಟಿರುವಾಗ ಊರಿನಂತೆ ನಾವು ಎಂದು ಕೂರುವವರೆ ಹೆಚ್ಚಿರುವಾಗ, ಈ ಊರಿನ ವಿನಾಯಕ ಬಡಾವಣೆ ಈ ಅಪವಾದದಿಂದ ಹೊರತಾಗಿದೆ. ತಮ್ಮ ಕಾಲನಿಯನ್ನು ಅತ್ಯಂತ ಶುಚಿಯಾಗಿಟ್ಟಿರುವ ಕೀರ್ತಿ ಈ ಬಡಾವಣೆಗೆ ಸಲ್ಲುತ್ತದೆ. ಇಲ್ಲಿನ ನಾಗರಿಕರ ಸತತದ ಶ್ರಮದ ಫಲವಾಗಿ ಈ ಪ್ರದೇಶ ಊರಿಗೇ ಮಾದರಿಯಾಗಿದೆ. ವಿನಾಯಕ ಕಾಲನಿಯ ಯಾವ ರಸ್ತೆಯ ಮಗ್ಗುಲಲ್ಲೂ ಕಸದ ರಾಶಿ ಇಲ್ಲ. ಕಾಲನಿಯ ಯಾವುದೇ ಮನೆಯ ಮುಂದೆ ಅಥವಾ ಗೋಡೆಯ ಮೇಲೆ ಉಗುಳಿನ ಕಲೆಯಿಲ್ಲ. ಇಲ್ಲಿನ ಜನರು ಸ್ವಯಂ ಪ್ರೇರಿತರಾಗಿ ತ್ಯಾಜ್ಯವನ್ನು ಕಸದ ತೊಟ್ಟಿಗೇ ಹಾಕುವ ಮೂಲಕ ಊರಿಗೇ ಆದರ್ಶವಾಗಿದ್ದಾರೆ.

ಅಶುಚಿತ್ವದ ತಾಂಡವ: ಈ ಬಡಾವಣೆಯಾಂದನ್ನು ಹೊರತು ಪಡಿಸಿದರೆ, ಮಿಕ್ಕೆಲ್ಲೆಡೆ ಇರುವುದೆಲ್ಲಾ ಗಲೀಜೇ. ನಗರದ ಮೀನು ಕೋಟೆಯ ರಸ್ತೆಯಂತೂ ಹೇಳತೀರದ ಸ್ಥಿತಿ ತಲುಪಿದೆ. ಮೀನುಕೋಟೆ ಪ್ರದೇಶದ ರಸ್ತೆಗಳ ಹೊಂಡಗಳಲ್ಲಿ ಆಯತಪ್ಪಿ ಬೀಳುವವರ ಸಂಖ್ಯೆಯನ್ನು ಲೆಕ್ಕ ಇಟ್ಟವರಿಲ್ಲ. ಮೀನುಗಳ ದುರ್ನಾತವಂತೂ ಇಲ್ಲಿ ಸಹಿಸಲಸಾಧ್ಯ. ಬಸ್‌ ನಿಲ್ದಾಣದ ಹೊರಗೆ ಹಾಗೂ ಒಳಗೆ ಮಳೆಗಾಲದಲ್ಲಿ ಕೆರೆಗಳು - ಕುಂಟೆಗಳು ನಿರ್ಮಾಣವಾಗುತ್ತವೆ. ದುರದೃಷ್ಟವೆಂದರೆ ಈ ಕೆರೆಗಳಲ್ಲಿ ಮೀನುಗಳು ಸಿಗುವುದಿಲ್ಲ !!

ಕೋಟೆಕೆರೆ ರಸ್ತೆ, ಹುಬ್ಬಳ್ಳಿ ರಸ್ತೆ, ಮಾರುಗುಡು ರಸ್ತೆ, ದೇವಿಕೆರೆ ರಸ್ತೆ, ನೀಲೇಕಣಿ ರಸ್ತೆ, ಶಿವಾಜಿ ಚೌಕ, ಕುಂಬಾರರ ಓಣಿ, ಚರ್ಚ್‌ರಸ್ತೆ, ಗಾಂಧೀನಗರ ರಸ್ತೆ, ವೀರಭದ್ರ ಗಲ್ಲಿ ರಸ್ತೆಗಳೆಲ್ಲವೂ ಹದಗೆಟ್ಟು ಹಾಳಾಗಿ ಹೋಗಿವೆ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಇದನ್ನೆಲ್ಲಾ ನೋಡಿಯೂ ಕಣ್ಮುಚ್ಚಿ ಕುಳಿತಿದೆ ಎಂಬುದು ನಾಗರಿಕರ ಆರೋಪ.

ರಸ್ತೆಗಳು ಹಾಳಾಗಲು ನೀರು, ವಿದ್ಯುತ್‌ ಸಂಪರ್ಕ ಪಡೆಯುವವರು ಹಾಗೂ ದೂರವಾಣಿ ಇಲಾಖೆ ಕಾರಣ ಎಂಬುದು ಅಧಿಕಾರಿಗಳ ಆಕ್ಷೇಪ. ಈ ಆಕ್ಷೇಪ ಏನೇ ಇರಲಿ, ರಸ್ತೆ ಅಗೆಯದ ಕಡೆಗಳಲ್ಲೂ ಬಿದ್ದಿರುವ ಗುಳಿಗಳು, ನಿರ್ಮಾಣವಾಗಿರುವ ಹೊಂಡಗಳು ರಸ್ತೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿನಿತ್ಯ ಶಿರಸಿ ಮಾರಿಕಾಂಬಾ ದೇವಿಯ ದರ್ಶನಕ್ಕೆ ಬರುವ ಸಾವಿರಾರು ಭಕ್ತರನ್ನು ಈಗ ದೇವಿಯೇ ಕಾಪಾಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X