ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸರ್ಗದ ಮಡಿಲ ಮುರ್ಡೇಶ್ವರ

By Staff
|
Google Oneindia Kannada News

Murudeshwara temple in the heart of natureನಿತ್ಯದ ಜಂಜಾಟಗಳಿಂದ ಬೇಸತ್ತು ಮನಃಶಾಂತಿಗಾಗಿ ಎಲ್ಲಿಗಾದರೂ ಹೋಗಿ ಬರಬೇಕೆಂದು ನಿಮಗನಿಸಿದರೆ, ನೀವು ನೋಡಲೇಬೇಕಾದ ಸ್ಥಳಗಳಲ್ಲಿ ಮುರ್ಡೇಶ್ವರ ಕೂಡಾ ಒಂದು.

ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ 15 ಕಿಲೋಮೀಟರ್‌ ದೂರದಲ್ಲಿ ಅರಬ್ಬೀಸಮುದ್ರಕ್ಕೆ ಅಂಟಿಕೊಂಡಂತಿರುವ ಕನ್ಯಾಕುಮಾರಿ - ಮುಂಬಯಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿರುವ ಸ್ವಾಗತ ಕಮಾನು ಮುರ್ಡೇಶ್ವರಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಆಳೆತ್ತರದ ಅಲೆಗಳು ಬೆಳ್ಳಿ ನೊರೆಯುಗುಳುತ್ತಾ ನಲಿಯುತ್ತಾ ಬರುವ ಸೊಬಗನ್ನು ತೀರದಲ್ಲಿನ ಅತಿಥಿಗೃಹದ ಎತ್ತರದ ಸ್ಥಳದಲ್ಲಿ ನಿಂತು ನೋಡುವುದೇ ಒಂದು ಸೊಗಸು.

ಪಶ್ಚಿಮಕ್ಕೆ ಕಡಲು, ಪೂರ್ವಕ್ಕೆ ಬೆಟ್ಟ-ಗುಡ್ಡಗಳ ಸಾಲು ಅಲ್ಲಿಯೇ ಹರಡಿಕೊಂಡಿರುವ ತೆಂಗು-ಕಂಗಿನ ತೋಟಗಳ ಸಾಲು ಅಲ್ಲಿಂದ ಸಮುದ್ರದ ಮೇಲಿಂದ ಹಾದು ಬರುವ ಗಾಳಿ, ಕಡಲ ಅಲೆಗಳ ಭೋರ್ಗರೆತ, ದೇವಸ್ಥಾನದ ಗಂಟೆಗಳ ನಿನಾದ ಮುರ್ಡೇಶ್ವರದ ವಿಶಿಷ್ಟತೆಗೆ ಮೆರುಗು ನೀಡುತ್ತವೆ.

ಮೈಮನ ಸೆಳೆಯುವ ನೋಟ, ಸೂರ್ಯಾಸ್ತದ ಕೆಂಗುಲಾಬಿಯ ನೀರು ಮುಂತಾದ ನಯನ ಮನೋಹರ ಪ್ರಕೃತಿಯ ಸುಂದರ ದೃಶ್ಯಗಳ ತಾಣವಾದ ಮುರ್ಡೇಶ್ವರದಲ್ಲಿ ಹವಾನಿಯಂತ್ರತ ಅತಿಥಿಗೃಹಗಳೂ ಇವೆ. ಸಾಕಷ್ಟು ಬಸ್‌ ಸೌಲಭ್ಯವೂ ಉಂಟು. ಭಟ್ಕಳದಲ್ಲಿ ವಾಸ್ತವ್ಯ ಹೂಡಿ ನಂತರ ಮುರುಡೇಶ್ವರಕ್ಕೆ ಹೋಗ ಬಹುದು. ಕೊಂಕಣ ರೈಲಿನ ಸೌಕರ್ಯವೂ ಉಂಟು.

ಐತಿಹಾಸಿಕ ಕುರುಹುಗಳು - ಮುರ್ಡೇಶ್ವರ ಹಿಂದೆ ಬಂದರು ಪ್ರದೇಶವಾಗಿತ್ತೆಂದೂ, ಅಲ್ಲಿ ಯುದ್ಧಗಳು ನಡೆದಿವೆ ಎಂದೂ ಸಾರುತ್ತವೆ. ಕ್ರಿ. ಶ. 1415-1458ರ ಕಾಲದ ಶಿಲಾಶಾಸನಗಳು ಇಲ್ಲಿ ಸಿಕ್ಕಿವೆ. ಈಗ ಪುರಾತನ ಮುರ್ಡೇಶ್ವರ ದೇಗುಲವನ್ನು ಸಂಪೂರ್ಣವಾಗಿ ನವೀಕರಿಸಿ ಜೀರ್ಣೋದ್ಧಾರ ಮಾಡಿ ಹೊಸ ರೂಪ ನೀಡಲಾಗಿದೆ.

ಕ್ಷೇತ್ರದಲ್ಲಿ ಭೀಮತೀರ್ಥ, ಕಾಕತೀರ್ಥ, ಜಟಾಯುತೀರ್ಥ ಹಾಗೂ ಕುಂಭತೀರ್ಥಗಳೆಂಬ ಜಲಕುಂಡಿಗೆ ಮತ್ತು ಮುರ್ಡೇಶ್ವರ ಪಟ್ಟದಲ್ಲಿ ವಿಶಾಲ ಪುಷ್ಕರಣಿ ಇದೆ.

ಕಾಲಾ ನೈಪುಣ್ಯತೆಯೇ ಸಾಕಾರಗೊಂಡಿರುವ ಶ್ರೀಕ್ಷೇತ್ರದ ಪೌರಾಣಿಕ ಹಿನ್ನಲೆಯನ್ನು ಗೋಪುರದ ಕೆತ್ತನೆಗಳಲ್ಲಿ ಮೂಡಿಸಲಾಗಿದೆ. ಅಪರೂಪದ ಶಿಲ್ಪಕಲಾಕೃತಿಯಿರುವ ಇಂಥ ದೇವಾಲಯ ಕರಾವಳಿ ತೀರದಲ್ಲಿ ಇನ್ನೊಂದಿಲ್ಲ. ಫೆಬ್ರವರಿ ತಿಂಗಳಲ್ಲಿ ವಿಶೇಷ ಪೂಜೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇಲ್ಲಿ ಉಂಟು. ಮಕ್ಕಳಾಟಕೆ ಮರಳು, ಸುಂದರ ನಿಸರ್ಗ, ದೋಣಿ, ಕಡಲು ,ಅಲೆಗಳು ನಿಮ್ಮನ್ನು ಮತ್ತೆ ಮತ್ತೆ ಮುರ್ಡೇಶ್ವರಕ್ಕೆ ಯಾತ್ರೆ ಹೊರಡುವಂತೆ ಪ್ರೇರೇಪಿಸುತ್ತವೆ.

ಮುರುಡೇಶ್ವರ: ಮುರುಡೇಶ್ವರ ಹೆಸರೇ ಹೇಳುವಂತೆ ಕೈಲಾಸನಾಥನಾದ ಶಿವ ನೆಲೆಸಿಹ ಸ್ಥಳ. ತನ್ನ ತಲೆಯನ್ನೇ ಕತ್ತರಿಸಿ, ಶಿವನಿಗೊಪ್ಪಿಸಿ, ಅವನನ್ನು ಮೆಚ್ಚಿಸಿ, ತಾಯಿಗಾಗಿ ಶಿವನಾತ್ಮಲಿಂಗವನ್ನು ಪಡೆದ ರಾವಣ ವಟುರೂಪಿ ಗಣಪನಿಗೆ ಸೋತು ಶಿವನಾತ್ಮಲಿಂಗ ಧರೆ ಸೇರಿದಾಗ ಆತ್ಮಲಿಂಗದ ತುಣುಕೊಂದು ವೃಡೇಶ್ವನಾಗಿ ರೂಪುಗೊಂಡಿತು. ಈ ವೃಡೇಶ್ವರನೇ ಮುರುಡೇಶ್ವರ ಎಂದು ಖ್ಯಾತನಾದನೆನ್ನುತ್ತದೆ ಇಲ್ಲಿನ ಐತಿಹ್ಯ.

ಈ ಪುಣ್ಯಕ್ಷೇತ್ರದಲ್ಲಿ ಶಿವನೊಂದಿಗೆ ಪಾರ್ವತಿ, ಸುಬ್ರಹ್ಮಣ್ಯ, ಗಣಪ, ಆಂಜನೇಯ, ದತ್ತಾತ್ರೇಯ, ನಾಗದೇವ, ನವಗ್ರಹಗಳ ದೇವಾಲಯಗಳೂ ಇವೆ.

ಮುರುಡೇಶ್ವರಕೆ ಹೋಗೋಣ... ಮುರುಡೇಶ್ವರನನು ನೋಡೋಣ..... ದರುಶನವನ್ನು ಮಾಡೋಣ... ಎಂಬ ಹಾಡು ಮುರುಡೇಶ್ವರ ನೋಡದವರಿಗೂ ಮುರುಡೇಶ್ವರನ ಹಿರಿಮೆಯ ಪರಿಚಯ ಮಾಡಿಸಿರಬಹುದು. ಈ ಸುಂದರ ಪ್ರಕೃತಿಯ ಮಡಿಲಲ್ಲಿ, ಪ್ರವಾಸಿಗರು ಗಂಗಾವತರಣದ ಪ್ರತಿಮೆಗಳನ್ನೂ ನೋಡಬಹುದು. ಮುರ್ಡೇಶ್ವರ ಆಸ್ತಿಕರಿಗೆ ಹೇಗೆ ಅಚ್ಚುಮೆಚ್ಚೂ ಹಾಗೆ ನಿಸರ್ಗಪ್ರಿಯರಿಗೆ ಕಡಲ ಕಿನಾರೆಯ ನೆಚ್ಚಿನ ತಾಣವೂ ಹೌದು.

Post your views
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X