ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಧಾನಿಯಲ್ಲಿ ಗುಡುಗು-ಸಿಡಿಲಿನ ಆರ್ಭಟ

By Staff
|
Google Oneindia Kannada News

ಬೆಂಗಳೂರು : ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಮೋಡಗಳ ಸಂಘರ್ಷ. ಗುಡುಗು - ಸಿಡಿಲಿನ ಆರ್ಭಟ. ರಾತ್ರಿ ಸುಮಾರು 10-45ರಿಂದ ಪ್ರಾರಂಭವಾದ ಮಳೆ ಮುಗಿಲಿಗೆ ತೂತು ಬಿದ್ದಂತೆ ಬೆಳಗಿನ 5 ಗಂಟೆಯ ತನಕ ಎಡೆಬಿಡದೆ ಸುರಿಯಿತು.

ಹದಗೆಟ್ಟ ಒಳಚರಂಡಿ ವ್ಯವಸ್ಥೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿದಿದೆ. ಕೆಲವು ಬಡಾವಣೆಗಳಲ್ಲಿ ನಾಗರಿಕರು ಇಡೀ ರಾತ್ರಿ ನಿದ್ದೆಗೆಟ್ಟು, ಮನೆಗೆ ನುಗ್ಗಿದ ನೀರನ್ನು ಹೊರಹಾಕುವ ಕೆಲಸದಲ್ಲಿ ನಿರತರಾಗಿದ್ದರು.

ಕೆಲವು ಬಡಾವಣೆಗಳಲ್ಲಂತೂ ಪ್ಲಾಸ್ಟಿಕ್‌ ಚೀಲ ಮುಂತಾದ ತ್ಯಾಜ್ಯಗಳಿಂದ ಒಳಚರಂಡಿ ಕಟ್ಟಿನಿಂತ ಕಾರಣ, ಬಚ್ಚಲು ಹಾಗೂ ಪಾಯಖಾನೆಯ ಕೊಳವೆಗಳಿಂದ ನೀರಿನ ಬುಗ್ಗೆ .

ಕೇವಲ ವಾರದ ಹಿಂದೆ 9 ಸೆಂಟಿ ಮೀಟರ್‌ ಮಳೆ ಬಿದ್ದಾಗಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ನಗರ ಪಾಲಿಕೆ ತೆರೆದ ಚರಂಡಿಗಳಲ್ಲಿ ತುಂಬಿದ ಮಣ್ಣನ್ನು ತೆಗೆಸುವ ಕಾರ್ಯಕ್ಕೆ ಕೈ ಹಾಕಿತು. ಚರಂಡಿಯಲ್ಲಿದ್ದ ಮಣ್ಣು ರಸ್ತೆಯ ಇಕ್ಕೆಲಗಳಲ್ಲೂ ರಾಶಿಯಾಗಿ ಬಿದ್ದಿತ್ತು. ಈ ಮಣ್ಣನ್ನು ದೂರದ ಪ್ರದೇಶಕ್ಕೆ ಸಾಗಿಸುವ ಮುನ್ನವೇ ಬಿದ್ದ ಭಾರಿ ಮಳೆಯಿಂದಾಗಿ ಮತ್ತೆ ಮಣ್ಣು ಸ್ವಸ್ಥಾನ ಸೇರಿ ಎಂದಿನಂತೆ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಭಾನುವಾರ ರಾತ್ರಿಯಿಂದ ಬೆಳಗಿನವರೆಗೆ 5-6 ಸೆಂಟಿ ಮೀಟರ್‌ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಬಿದ್ದಿದೆ. ಟಿ.ಜಿ. ಹಳ್ಳಿ, ರಾಮನಗರಗಳಲ್ಲಿ 6 ಸೆಂಟಿ ಮೀಟರ್‌ ಮಳೆ ಆಗಿದೆ. ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ 5, ಯಲಹಂಕದಲ್ಲಿ 4 ಸೆಂಟಿ ಮೀಟರ್‌ ಮಳೆ ಬಿದ್ದಿದೆ.

ಉಳಿದಂತೆ, ಮಾಗಡಿ, ಹೊಸಕೋಟೆಗಳಲ್ಲಿ 3 ಸೆಂಟಿ ಮೀಟರ್‌ ಮಳೆ ಆಗಿದೆ. ದಕ್ಷಿಣ ಒಳನಾಡಿನ ಕೆಲವೆಡೆಯೂ ಮಳೆಯಾದ ವರದಿಗಳು ಬಂದಿವೆ. ಮುಂದಿನ 48 ಗಂಟೆಗಳ ಮುನ್ಸೂಚನೆಯಂತೆ ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಮಳೆ ಆಗುವ ನಿರೀಕ್ಷೆ ಇದೆ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ್ಗೆ ಬಿಸಿಲು ಇಣುಕುತ್ತದಾದರೂ, ರಾತ್ರಿಯ ವೇಳೆ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X