ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪಾ ನಿನಗೆ ನಿಜಕ್ಕೂ ಏನು ಬೇಕು ಎಂಬ ಪ್ರಶ್ನೆಗೆ ಸಿಕ್ಕಿತೆ ಉತ್ತರ?

By Staff
|
Google Oneindia Kannada News

ಬೆಂಗಳೂರು : ವಾಸ್ತವವೇ ಬೇರೆ? ಕಲ್ಪನೆಯೇ ಬೇರೆ. ರಾಜ್‌ ಅಪಹರಣದಲ್ಲಿ ಈ ಎರಡೂ ಸುಪ್ತವಾಗಿವೆ. ರಾಜ್‌ ಅಪಹರಣವಾಗಿದೆ ಎನ್ನುವುದು ವಾಸ್ತವ. ರಾಜ್‌ ಅಪಹರಣದ ನಂತರ ನಡೆದುದೆಲ್ಲ ಊಹಾಪೋಹಗಳ ಕಾದಾಟ, ವದಂತಿಗಳ ಹಾರಾಟ, ಗಾಳಿಸುದ್ದಿಯ ತೂರಾಟ.

ಈಗ ಲಭ್ಯವಿರುವ ಕೆಲವು ಸುಳಿವುಗಳ ಹಿಂದೆ ಹೆಜ್ಜೆ ಹಾಕಿದರೆ ವೀರಪ್ಪನ್‌ನ ಜಾಡು ತಿಳಿದೀತು. ರಾಜ್‌ ಅಪಹರಣವನ್ನು ಈಗ ನಾವು ಕೇವಲ ಒಬ್ಬ ಹವ್ಯಾಸಿ ಅಪಹರಣಕಾರನೊಂದಿಗೆ ವ್ಯವಹರಿಸುವ ರೀತಿಯಲ್ಲಿ ವ್ಯವಹರಿಸಲು ಬರುವುದಿಲ್ಲ. ವೀರಪ್ಪನ್‌ ಈಗ ಕೇವಲ ಒಬ್ಬ ಕಾಡುಗಳ್ಳನಾಗಿ - ದಂತಚೋರನಾಗಿ ಆಗಾಗ್ಗೆ ಹಣಕ್ಕೆ ಅಥವಾ ಹವ್ಯಾಸಕ್ಕಾಗಿ ಅಥವಾ ಸರಕಾರವನ್ನು ಹೆದರಿಸಿ ತನ್ನ ಅಸ್ತಿತ್ವವನ್ನು ನೆನಪಿಸಲಿಕ್ಕಾಗಿ ಕೈಗೆ ಸಿಕ್ಕವರನ್ನು ಅಪಹರಿಸುತ್ತಿದ್ದ ಸಾಮಾನ್ಯ ಅರಣ್ಯವಾಸಿಯಲ್ಲ. ಇದು ಇತ್ತೀಚಿನ ವೀರಪ್ಪನ್‌ ಬೇಡಿಕೆಗಳನ್ನು ಓದಿದ - ಕೇಳಿದ ಎಲ್ಲರಿಗೂ ಗೊತ್ತಾಗಿರಬಹುದು.

ರಾಜಕೀಯ ಆಯಾಮ: ಈಗಿನ ವೀರಪ್ಪನ್‌ ಬೇಡಿಕೆಗಳು ರಾಜಕೀಯ ಆಯಾಮ ಪಡೆದುಕೊಂಡಿವೆ. ರಾಜ್‌ಕುಮಾರರಂತಹ ಮೇರು ನಟನನ್ನೇ ಅಪಹರಿಸಿದ ಮೇಲೆ ಚಿಕ್ಕ ಪುಟ್ಟ ಬೇಡಿಕೆ ಇಡಲು ಸಾಧ್ಯವೇ? ಹಲವು ವರ್ಷಗಳಿಂದ ಹೆಂಡತಿ ಮಕ್ಕಳಿಂದ ದೂರವಾಗಿ, ನೆಲೆಯಿಲ್ಲದ ಕಾಡಿನಲ್ಲಿ ಅಡಗಿಕುಳಿತು ತನ್ನ ಜೀವನದ ಸುಖಭೋಗಗಳೆಲ್ಲವನ್ನೂ ಕಳೆದುಕೊಂಡಿರುವ ವೀರಪ್ಪನ್‌ಗೆ ಈಗ ನಾಡಿನ ಆಸೆ ಚಿಗುರಿದೆ.

ಎಲ್ಲರಂತೆ ತಾನೂ ತನ್ನ ಕೊನೆಗಾಲವನ್ನು ಹೆಂಡತಿ ಮಕ್ಕಳೊಂದಿಗೆ ಆನಂದದಿಂದ ಕಳೆಯಬೇಕು ಎಂದು ಆತನಿಗೆ ಅನ್ನಿಸಿರಲೂ ಬಹುದು. ಆದರೆ ಈ ಕೊನೆಯಾಸೆ ಉತ್ಕಟೇಚ್ಛೆಯಾಗಿ ಅದರ ಸಾಧನೆಗೆ ಗಗನಕುಸುಮಕ್ಕೆ ಕೈಹಾಕಿದ್ದಾನೆ. ಈ ಗಗನಕುಸುಮವನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ತಮಿಳು ಜನಾಂಗದ ಮಿಗಿಲಾಗಿ ತನ್ನ ಜಾತಿಯ ಜನರೇ ಹೆಚ್ಚಿರುವ ಸತ್ಯಮಂಗಲ ಪ್ರದೇಶದಲ್ಲಿ ತಾನು ಜನನಾಯಕನಾಗಿ, ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸುವ ಕನಸನ್ನೇ ಕಂಡಿದ್ದಾನೆ. ಈ ಕನಸನ್ನು ನನಸಾಗಿಸಲು ಕನ್ನಡದ ಗರ್ಭಗುಡಿಗೆ ಕೈಹಾಕಿದ್ದಾನೆ.

ಎಲ್ಲಿಯ ಕಂಬಾಲಪಲ್ಲಿ ? ಎಲ್ಲಿಯ ವೀರಪ್ಪನ್‌: ರಾಜ್‌ ಅವರನ್ನು ಅಪಹರಿಸಿದ ನಂತರ ತಾನು ದಲಿತರ ನಾಯಕ, ತಮಿಳರ ಹಿತರಕ್ಷಕ, ಸಮಾಜಸೇವಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾನೆ. ಕೋಲಾರ ಬಳಿಯ ಕಂಬಾಲಪಲ್ಲಿಗೂ ವೀರಪ್ಪನ್‌ಗೂ ಯಾವುದೇ ಸಂಬಂಧವೇ ಇಲ್ಲ. ಆದರೂ ದಲಿತರ ಮೇಲಿನ ದೌರ್ಜನ್ಯವನ್ನು ವೀರಪ್ಪನ್‌ ಖಂಡಿಸಿದ್ದಾನೆ. ಪರಿಹಾರಕ್ಕೆ ಆಗ್ರಹಿಸಿದ್ದಾನೆ.

ಕನ್ನಡದ ಜೀವನದಿ ಕಾವೇರಿಯನ್ನು ತಲಕಾವೇರಿಯಿಂದ ಕಡಲಾಚೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೇ ಹರಿಸಿ ಬಿಡುವ ಸಾಹಸವನ್ನೂ ಮಾಡಿದ್ದಾನೆ. ರಾಜ್ಯಾಂಗವನ್ನೇ ಧಿಕ್ಕರಿಸಿ, ಕನ್ನಡ ನೆಲದಲ್ಲಿ ತಮಿಳು ಭಾಷೆಯನ್ನೇ ಹತ್ತನೇ ತರಗತಿ ವರೆಗೆ ದ್ವಿತೀಯ ಭಾಷೆಯಾಗಿ ಕಡ್ಡಾಯ ಮಾಡಬೇಕೆಂಬ ಆತನ ಮಹತ್ವಾಕಾಂಕ್ಷೆಯ ಹಿಂದೆ ತಮಿಳು ಜನರ ಅನುರಾಗ ಗಳಿಸುವುದರ ವಿನಾ ಮತ್ತೇನೂ ಇಲ್ಲ .

ತಮಿಳು ವಿಮೋಚನಾ ಪಡೆ : ವೀರಪ್ಪನ್‌ ಹಿಂದೆ ತಮಿಳುನಾಡು ವಿಮೋಚನಾ ಪಡೆ - ಟಿಎನ್‌ಎಲ್‌ಎ ಹಾಗೂ ತಮಿಳುನಾಡು ರಿಟ್ರೆೃವಲ್‌ ಗ್ರೂಪ್‌ ಇದೆ ಎಂಬುದು ಸರಕಾರಕ್ಕೆ ಸ್ಪಷ್ಟೀಕರಣ ಬಯಸಿ ವೀರಪ್ಪನ್‌ ಬರೆದಿರುವ ಪತ್ರದಿಂದ ಬೆಳಕಿಗೆ ಬಂದಿದೆ. ಈ ಪತ್ರದಲ್ಲಿ ವೀರಪ್ಪನ್‌ ತಮಿಳು ಉಗ್ರಗಾಮಿಗಳ ಗುಂಪಿನ ಪರವಾಗಿಯೂ ಸಹಿ ಹಾಕಿದ್ದಾನೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಕೃಷ್ಣ ಈ ಪತ್ರವನ್ನು ಪತ್ರಕರ್ತರೆದುರು ತೆರೆದಿಟ್ಟಾಗ ಯಾರಿಗೂ ಆಶ್ಚರ್ಯ ಆಗಲಿಲ್ಲ. ಕಾರಣ ಈ ಬೆಳವಣಿಗೆಯನ್ನು ಆಷ್ಟು ಹೊತ್ತಿಗಾಗಲೇ ಎಲ್ಲರೂ ಊಹಿಸಿ ಆಗಿತ್ತು.

ಅಂದರೆ ಮೊದಲೇ ಹೇಳಿದಂತೆ ಕಲ್ಪನೆ - ವಾಸ್ತವಗಳು ಬೇರೆಯೇ ಆದರೂ ಇಲ್ಲಿ ಆ ಊಹೆ - ಕಲ್ಪನೆಗಳೇ ವಾಸ್ತವತೆಯನ್ನು ಪಡೆಯುತ್ತಿವೆ. ಈ ವಾಸ್ತವಿಕತೆಗಳು ವೀರಪ್ಪನ್‌ನ ಬೇಡಿಕೆಗಳಿಗೆ ಮೊದಲೇನು? ಕೊನೆಯೇನು? ಎನ್ನುವ ಪ್ರಶ್ನೆ ಹುಟ್ಟಿಹಾಕಿವೆ. ಮೊದಲು ಹತ್ತು ಬೇಡಿಕೆಗಳು. ನಂತರ ಮತ್ತೂ ನಾಲ್ಕು. ಸರಕಾರ ನೀಡುವ ಉತ್ತರ ಹೊತ್ತು ಗೋಪಾಲ್‌ ಇಂದೋ ನಾಳೆಯೋ ಮತ್ತೆ ಕಾಡಿಗೆ ಹೋದ ಮೇಲೆ ಮತ್ತೆ ಕೆಲವು ಬೇಡಿಕೆ ಮಂಡಿಸುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಅಂತೂ , ರಾಜಕಾರಣದ ಮೊದಲ ಮೆಟ್ಟಿಲನ್ನು ಏರುವ ಯತ್ನದಲ್ಲಿ ವೀರಪ್ಪನಿದ್ದಾನೆ. ಇನ್ನಷ್ಟು ಮೆಟ್ಟಿಲು ಏರುವ ಯತ್ನದಲ್ಲಿ ಮತ್ತೇನೆಲ್ಲಾ ಮಾಡಬಹುದು ? ಇವತ್ತು ಎಲ್ಲರ ಮನದಲ್ಲಿ ಸುಳಿದಾಡುತ್ತಿರುವ ಪ್ರಶ್ನೆ ಇದೇ.

ಕ್ಷಮಾದಾನ ಬೇಡ, ದುಡ್ಡು ಬೇಡ....ವೀರಪ್ಪಾ ನಿನಗೆ ನಿಜಕ್ಕೂ ಏನು ಬೇಕು?

Post your views
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X