ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಬೇಡಿಕೆಗಳಲ್ಲಿ ಕಂಬಾಲಪಲ್ಲಿ ಹೊಸ ಸೇರ್ಪಡೆ

By Staff
|
Google Oneindia Kannada News

ನಮ್ಮ ಪ್ರತಿನಿಧಿಯಿಂದ

ಬೆಂಗಳೂರು: ವೀರಪ್ಪನ್‌ ತನ್ನ ಹಿಂದಿನ ಬೇಡಿಕೆಯಲ್ಲಿ ಮಂಡಿಸಿದ್ದ ದಲಿತರ ಮೇಲಿನ ದೌರ್ಜನ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದ್ದಾನೆ. ಕರ್ನಾಟಕದ ಕಂಬಾಲಪಲ್ಲಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡುವಂತೆ ಸಹ ವೀರಪ್ಪನ್‌ ಒತ್ತಾಯಿಸಿದ್ದಾನೆ. ಈ ವಿಷಯವನ್ನು ಶನಿವಾರ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಾವು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಕಂಬಾಲಪಲ್ಲಿ ಘಟನೆಯಲ್ಲಿ ಸಾವನ್ನಪ್ಪಿದವರ ಹತ್ತಿರದ ಬಂಧುಗಳಿಗೆ ತಲಾ ಒಂದೂವರೆ ಲಕ್ಷ ರುಪಾಯಿ ಪರಿಹಾರ ನೀಡಲಾಗಿದೆ. ಈ ಪ್ರಕ್ರಿಯೆ ಮಾರ್ಚ್‌ 16ರಿಂದಲೇ ಆರಂಭಗೊಂಡಿದೆ. ಕಂಬಾಲಪಲ್ಲಿ ಸಂತ್ರಸ್ತರಿಗಾಗಿ 69 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಚಿಂತಾಮಣಿಗೆ ನಾಲ್ಕು ಕಿಲೋ ಮೀಟರ್‌ ದೂರದಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 27 ಮನೆಗಳು ಸಿದ್ಧವಾಗಿದ್ದು, ಉಳಿದವು ಈ ತಿಂಗಳ ಕೊನೆಯ ಹೊತ್ತಿಗೆ ನಿರ್ಮಾಣವಾಗಲಿವೆ ಎಂದರು.

ಕಂಬಾಲಪಲ್ಲಿ ಸಂತ್ರಸ್ತರ ನೆರವಿಗಾಗಿ ಮಿನಿ ಡೈರಿಯನ್ನೂ ಸಹ ಮಾಡಲಾಗಿದೆ, ಇದರಿಂದ ಅವರ ಕುಟುಂಬದವರ ಜೀವನ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಈ ವಿಷಯವನ್ನು ವೀರಪ್ಪನ್‌ಗೆ ತಿಳಿಸಲಾಗುವುದು ಎಂದರು.

ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಇದ್ದಾಗ್ಯೂ ಕೂಡ ಸರಕಾರ ಕೆಲವು ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ. ತಮಿಳುನಾಡು ಸರಕಾರವೂ ಕೆಲವು ಮಾಹಿತಿಗಳನ್ನು ಒಟ್ಟುಗೂಡಿಸುತ್ತಿದೆ. ಈ ಎಲ್ಲ ದಾಖಲೆಗಳೊಂದಿಗೆ ಗೋಪಾಲ್‌ ಮತ್ತೆ ವೀರಪ್ಪನ್‌ ಬಳಿಗೆ ಸೊಮವಾರ ಹೋಗಬಹುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಕರ್ನಾಟಕದ ಪರವಾಗಿ ಬೇರೆ ಸಂಧಾನಕಾರನನ್ನು ಕಳುಹಿಸುತ್ತೀರ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಗೋಪಾಲ್‌ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ, ಬೇರೆ ದೂತನ ಅಗತ್ಯ ಕಾಣುತ್ತಿಲ್ಲ ಎಂದರು.

ರಾಜ್‌ ಬಿಡುಗಡೆ ಬಗ್ಗೆ ಏನು ಭರವಸೆ ನೀಡಲಿ: ರಾಜ್‌ಕುಮಾರ್‌ ಅವರು ಯಾವಾಗ ಬಿಡುಗಡೆಯಾಗುತ್ತಾರೆ ಎಂಬ ಬಗ್ಗೆ ಭರವಸೆ ನೀಡುತ್ತೀರಾ ಎಂಬ ಪ್ರಶ್ನೆಗೆ ನಾನು ಏನು ಭರವಸೆ ನೀಡಲಿ, ಕೃಪಾಕರ, ಸೇನಾನಿ ಹಾಗೂ ಇತರರ ಅಪಹರಣದ ಸಂದರ್ಭದಲ್ಲಿಯೂ ಕೂಡ ತಾಳ್ಮೆಯಿಂದ ಕಾರ್ಯ ಸಾಧಿಸಿದೆವು. ಈಗಲೂ ತಾಳ್ಮೆ ಕಾಯ್ದುಕೊಳ್ಳಬೇಕು, ರಾಜ್‌ ಸುರಕ್ಷಿತವಾಗಿ ಹಿಂತಿರುಗುತ್ತಾರೆ ಎಂದು ಕೃಷ್ಣ ಹೇಳಿದರು.

ವೀರಪ್ಪನ್‌ ಉಗ್ರರ ನಾಯಕನೇ? : ವೀರಪ್ಪನ್‌ ಉಗ್ರಗಾಮಿಯಾಗಿದ್ದಾನೆಯೇ? ಆತನ ಹಿಂದೆ ಉಗ್ರಗಾಮಿಗಳು ಇದ್ದಾರೆಯೇ? ನೀವು ಈ ಉಗ್ರರನ್ನು ಹತ್ತಿಕ್ಕಲು ಕೇಂದ್ರದ ನೆರವು ಕೋರುತ್ತೀರಾ ಎಂದು ಪತ್ರಕರ್ತರು ಕೇಳಿದಾಗ, ನಾನು ಊಹಾಪೋಹಗಳಿಗೆ ಗ್ರಾಸ ಒದಗಿಸುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಚಾರ, ಸೂಕ್ತ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳೊಂದಿಗೆ ಸಮಾಲೋಚಿಸುತ್ತೇನೆ. ಈ ಸ್ಥಿತಿಯಿಂದ ಹೊರಬರಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ನಾನು ಈ ಸಂದರ್ಭದಲ್ಲಿ ಏನು ಮಾಡಬೇಕು ಹೇಳಿ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.

ವೀರಪ್ಪನ್‌ ಉಗ್ರಗಾಮಿಗಳ ಜತೆ ಸೇರಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ತಮಿಳುನಾಡು ಸರಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದರೆ, ಅಂದಾಜು ಮಾಡಿ ಕ್ರಮ ಕೈಗೊಳ್ಳುತ್ತಾರೆ. ಹೊಸ ಬೇಡಿಕೆಗಳ ಪತ್ರಕ್ಕೆ ವೀರಪ್ಪನ್‌ನೇ ಸಹಿ ಹಾಕಿದ್ದಾನೆ ಎಂದಷ್ಟೇ ಅವರು ಹೇಳಿದರು.

ಇತರ ಬೇಡಿಕೆಗಳು: ವೀರಪ್ಪನ್‌ 1992ರಲ್ಲಿ ಧರ್ಮಪುರಿ ಜಿಲ್ಲೆಯ ಹರೂರು ತಾಲೂಕಿನ ವಾಚತ್ತಿ ಮತ್ತು ಚಿನ್ನಂಪತಿ ಗ್ರಾಮಗಳಲ್ಲಿ ಅರಣ್ಯ ಹಾಗೂ ಪೊಲೀಸ್‌ ಸಿಬ್ಬಂದಿಯಿಂದ ಅತ್ಯಾಚಾರಕ್ಕೆ ಒಳಗಾಗಿರುವವರಿಗೆ ತಲಾ 10 ಲಕ್ಷ ಪರಿಹಾರ ನೀಡುವಂತೆ ಕೋರಿದ್ದಾನೆ, ಈ ಬಗ್ಗೆ ಕರುಣಾನಿಧಿ ಅವರೊಂದಿಗೆ ಸಮಾಲೋಚಿಸಲಾಗುವುದು ಎಂದರು.

ಟಾಡಾ ಕಾಯ್ದೆಗಳಿಗೆ ಸಂಬಂಧಿಸಿದಂತೆ 51 ಮಂದಿ ಜೈಲಿನಲ್ಲಿದ್ದಾರೆ. 77 ಮಂದಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ, 3 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. 8-8-2000ದಂದು ಮೈಸೂರು ನ್ಯಾಯಾಲಯಕ್ಕೆ ಟಾಡಾ ಮೊಕದ್ದಮೆ ಕೈಬಿಡಲು ಕೋರಲಾಗಿದೆ. ಶುಕ್ರವಾರ ವಿಚಾರಣೆ ನಡೆದಿದ್ದು ಪ್ರಕರಣವನ್ನು 14-8-2000ಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಪೊಲೀಸ್‌ ಮಹಾ ನಿರ್ದೇಶಕ ದಿನಕರ್‌, ಬೇಹುಗಾರಿಕೆ ದಳದ ಮುಖ್ಯಸ್ಥ ರಾಮಾನುಜಂ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸೋಮವಾರದಿಂದ ಶಾಲೆ ಪುನಾರಂಭ: ಸೋಮವಾರದಿಂದ ಶಾಲಾ - ಕಾಲೇಜುಗಳು ಪುನಾರಂಭವಾಗಲಿವೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X