ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಬೇಡಿಕೆಗಳ ಬೆಳಕಿನಲ್ಲಿ ಅಪಹರಣ ಪ್ರಕರಣ

By Staff
|
Google Oneindia Kannada News

ಬೆಂಗಳೂರು: ತನ್ನ ಎಲ್ಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಲೇ ಬೇಕೆಂದು ವೀರಪ್ಪನ್‌ ಪಟ್ಟು ಹಿಡಿದರೆ ರಾಜ್‌ಕುಮಾರ್‌ ಬಿಡುಗಡೆ ಮತ್ತಷ್ಟು ವಿಳಂಬವಾಗುವುದರಲ್ಲಿ ಸಂದೇಹವಿಲ್ಲ.

ಎರಡನೇ ಹಂತದ ಬೇಡಿಕೆಗಳಲ್ಲಿ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಕೃಷ್ಣ ಹಾಗೂ ಕರುಣಾನಿಧಿ ಹೇಳಿದ್ದಾರೆ. ಕಾವೇರಿ ನದಿ ನೀರಿನ ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಬೇಕೆಂದು ಹೇಳಿರುವ ಬೇಡಿಕೆ ಹೊರತುಪಡಿಸಿದರೆ ಹೊಸ ಮೂರು ಬೇಡಿಕೆಗಳು ತಮಿಳುನಾಡು ಸರಕಾರಕ್ಕೆ ಸಂಬಂಧಿಸಿವೆ.

ಯಾವುದೇ ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬೇಕೆಂದರೆ ಅದು ಎರಡು ದೇಶಗಳ ನಡುವಿನ ಸಮಸ್ಯೆಯಾಗಿರಬೇಕು. ಕಾವೇರಿ ಕೇವಲ ಆಂತರಿಕ ಸಮಸ್ಯೆ. ಬೇಡಿಕೆ ಮುಂದಿಟ್ಟಿರುವವರ ಪ್ರಾಥಮಿಕ ಜ್ಞಾನದ ಕೊರತೆಯನ್ನು ಇದು ಹೇಳುತ್ತದೆ.

ಇನ್ನು 10ನೇ ತರಗತಿಯವರೆಗೆ ತಮಿಳುನಾಡಿನಲ್ಲಿ ತಮಿಳನ್ನು ಮೊದಲ ಭಾಷೆಯಾಗಿ ಖಡ್ಡಾಯವಾಗಿ ಬೋಧಿಸಬೇಕೆಂಬ ಹಳೆಯ ಬೇಡಿಕೆಯನ್ನು ವೀರಪ್ಪನ್‌ ಮತ್ತೆ ಪುನರುಚ್ಚರಿಸಿದ್ದಾನೆ. ಈ ಹಂತದಲ್ಲಿ ಈ ಬೇಡಿಕೆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ತಮಿಳುನಾಡು ಹೈಕೋರ್ಟ್‌ ಈ ಬೇಡಿಕೆಯನ್ನು ಈಗಾಗಲೇ ತಳ್ಳಿಹಾಕಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸರಕಾರ ಮೇಲ್ಮನವಿ ಸಲ್ಲಿಸಿದೆ. ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಸರಕಾರ ಖಚಿತ ಭರವಸೆ ನೀಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕರ್ನಾಟಕದಲ್ಲಿ ತಮಿಳನ್ನು 10ನೇ ತರಗತಿಯವರೆಗೆ ದ್ವಿತೀಯ ಭಾಷೆಯನ್ನಾಗಿ ಬೋಧಿಸಬೇಕೆಂಬ ಬೇಡಿಕೆ, ತಮಿಳುನಾಡಿನಲ್ಲಿ ಕನ್ನಡವನ್ನು ದ್ವಿತೀಯ ಭಾಷೆ ಮಾಡಿ ಎನ್ನುವಷ್ಟೇ ಹಾಸ್ಯಾಸ್ಪದ.

ಟಾಡಾ ಕಾಯಿದೆ ಅಡಿ ಬಂಧಿತರಾಗಿರುವ ತಮಿಳುನಾಡು ವಿಮೋಚನಾ ಸೇನೆಯ ಸದಸ್ಯರನ್ನು ಬಿಡುಗಡೆ ಮಾಡಬೇಕೆಂದು ಕೇಳಿರುವ 3ನೇ ಬೇಡಿಕೆಯನ್ನು ಈಡೇರಿಸಲು ತಮಿಳುನಾಡು ಸರಕಾರ ಒಪ್ಪಿದೆ.

ಚಿನ್ನಂಪತ್ತಿ ಮತ್ತು ವಾಚತ್ತಿ ಅರಣ್ಯ ಪ್ರದೇಶದಲ್ಲಿ ಪೊಲೀಸರಿಂದ ಹಾಗೂ ಅರಣ್ಯ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾದವರಿಗೆ ಪರಿಹಾರ ನೀಡುವ ಕುರಿತು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ ಆದ್ದರಿಂದ ಈ ಬೇಡಿಕೆ ಈಡೇರಿಸುವ ಭರವಸೆ ನೀಡಲು ಅಡ್ಡಿಯಿಲ್ಲ ಎನ್ನಬಹುದು.

ಕಾವೇರಿ ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡ್ಯೊಯ್ಯಬೇಕೆಂಬ ಬೇಡಿಕೆ ವಿಷಯದಲ್ಲಿ ವೀರಪ್ಪನ್‌ನನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದು ಕರುಣಾನಿಧಿ ಹೇಳಿರುವುದರ ಜೊತೆಗೆ, ಈ ಮೊದಲು ವೀರಪ್ಪನ್‌ ಮುಂದಿಟ್ಟಿದ್ದ ಹೊಸ ಬೇಡಿಕೆಗಳ ಬಗ್ಗೆ ಎರಡು ಸರಕಾರಗಳ ಪ್ರತಿಕ್ರಿಯೆಗೆ ತನ್ನ ಅನಿಸಿಕೆ ವ್ಯಕ್ತಪಡಿಸಿ, ತಮಿಳುನಾಡು ವಿಮೋಚನಾ ಸೇನೆ ಮತ್ತು ತಮಿಳು ರಾಷ್ಟ್ರೀಯ ಪುನರುತ್ಥಾನ ಪಡೆಗಳ ಪರವಾಗಿ ಎಂದು ವೀರಪ್ಪನ್‌ ಸಹಿ ಹಾಕಿದ್ದಾನೆ. ಹಾಗಾಗಿ ಆತನ ಹಿಂದೆ ಇರುವ ಶಕ್ತಿಗಳ ಬಗ್ಗೆ ಈಗ ಅನುಮಾನಗಳು ಉಳಿದಿಲ್ಲ.

ಹೊಸ ಬೇಡಿಕೆಗಳಿಗೆ ಸಂಬಂಧಿಸಿದಂತೆ ಎರಡೂ ಸರಕಾರಗಳ ನಿಲವು ಏನೆಂಬುದನ್ನು ತಿಳಿದು, ಭಾನುವಾರ ರಾತ್ರಿ ಅಥವಾ ಸೋಮವಾರ ಗೋಪಾಲ್‌ ಮತ್ತೆ ಕಾಡಿಗೆ ತೆರಳಬಹುದು ಎಂದು ಹೇಳಲಾಗುತ್ತಿದೆ. ಮುಂದಿನ ಬೆಳವಣಿಗೆ ವೀರಪ್ಪನ್‌ ಹೇಗೆ ಸ್ಪಂಧಿಸುತ್ತಾನೆ ಎಂಬುದರ ಮೇಲೆ ನಿಂತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X