• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮನ್ನ ಇಲ್ಲಿಗೆ ಕರೆದುಕೊಂಡು ಬಂದಿರೋರಿಗೂ ಒಳ್ಳೆದಾಗಲಿ- ರಾಜ್‌

By Staff
|

ಚೆನ್ನೈ : ತಮ್ಮ ಮೂವರು ಬಂಧು-ಮಿತ್ರರೊಡನೆ ಚಕ್ಕಳಮುಕ್ಕಳ ಹಾಕಿ ಗೋಪಾಲ್‌ ಹೇಳೋ ಕಥೆ ಕೇಳುವ ಭಂಗಿ, ನಿರರ್ಗಳವಾಗಿ ತಮಿಳು ಮಾತಾಡುವ ಪರಿ, ಮುಖದಲ್ಲಿ ಪೂರ್ತಿ ಮಾಸದ ಕಳೆ ಇದು ವಿಡಿಯೋ ಕ್ಯಾಸೆಟ್‌ ತೋರಿದ ‘ಡಾ. ರಾಜ್‌ಕುಮಾರ್‌’ .

ವೀರಪ್ಪನ್‌ ಬಗಲಲ್ಲೇ ಕೂತು ಬಿಸ್ಕತ್ತು ಸವಿಯುವ ರಾಜ್‌ ಒಬ್ಬ ಒತ್ತೆಯಾಳೇ ಎಂದು ಕ್ಷಣ ಕಾಲ ಅನ್ನಿಸುವುದುಂಟು. ವೀರಪ್ಪನ್‌ ತನ್ನನ್ನು ನಡೆಸಿಕೊಂಡಿರುವ ರೀತಿಯನ್ನು ಗೋಪಾಲ್‌ ಅವರಿಗೆ ರಾಜ್‌ ತಮಿಳು ಭಾಷೆಯಲ್ಲೇ ವಿವರಿಸುತ್ತಿದ್ದರು. ಕ್ಯಾಸೆಟ್‌ನಲ್ಲಿ ರಾಜ್‌, ಗೋಪಾಲ್‌ ಏನು ಮಾತಾಡಿದ್ದಾರೆ? ಅವರ ಮಾತುಗಳಲ್ಲೇ ಕೇಳೋಣ...

ಅದು ವರಮಾನ ತೆರಿಗೆ ಇಲಾಖೆಯವರ ಧಾಳಿ ಇದ್ಹಾಗಿತ್ತು : (ರಾಜ್‌ ಮಾತು)‘ಆಗ್ತಾನೇ ಊಟ ಮುಗಿಸಿದ್ದ ನನಗೆ ಒಂದು ಕ್ಷಣ ಏನಾಗ್ತಿದೆ ಅನ್ನೋದೇ ಗೊತ್ತಾಗಲಿಲ್ಲ. ವೀಳ್ಯದೆಲೆ ಹಾಕಿಕೊಳ್ಳಲು ನಡುಮನೆಯಿಂದ ಹೊರಗೆ ಬಂದು ನೋಡಿದರೆ ಗನ್‌ಗಳನ್ನು ಹೊತ್ತ ಕೆಲವರು ಮನೆಗೆ ಧಾಳಿ ಮಾಡಿರುವುದು ಸ್ಪಷ್ಟವಾಯಿತು. ಅದು ವರಮಾನ ತೆರಿಗೆ ಇಲಾಖೆ ಧಾಳಿ ಇದ್ಹಾಗಿತ್ತು. ಆತನನ್ನು (ವೀರಪ್ಪನ್‌) ಮೊದಲು ನೋಡಿದಾಗ ನಾವ್ಯಾರೂ ಮಾತಾಡ್ಲಿಲ್ಲ. ರಾಜ್‌ಕುಮಾರ್‌ ಯಾರು ? ಆತ ಕೇಳಿದ. ನಾನೇ ಅಂದೆ. ನಡೀರಿ ನನ್ನ ಜೊತೆ ಅಂದರು. ಪಾರ್ವತಿಗೆ ಹೇಳಿದೆ, ನಾನು ಇವರ ಜೊತೆ ಹೋಗಿ ಬೇಗ ಬರ್ತೀನಿ. ನೀ ಏನೂ ಯೋಚ್ನೆ ಮಾಡ್ಬೇಡ ಹಾಗೆ ಅಂತ’.

(ಕಪ್ಪು ಪರದೆಯಾಂದನ್ನು ಬಿಸಿಲು ಬೀಳದಂತೆ ಕಟ್ಟಲಾಗಿದೆ. ಕಾಡಿನ ಅಂಗಳದಲ್ಲಿ ಗೋಪಾಲ್‌ ಹಾಗೂ ಸಹ ಪತ್ರಕರ್ತರು ರಾಜ್‌ ಸೇರಿದಂತೆ ನಾಲ್ವರು ಒತ್ತೆಯಾಳುಗಳ ಜೊತೆ ಕೂತಿರುವ ದೃಶ್ಯ..)

ಆರು ದಿನಗಳ ಕಾಲ ನಡೆಸಿದ ಹುಡುಕಾಟ ಈವತ್ತು ಯಶಸ್ವಿಯಾಗಿದೆ : ರಾಜ್‌ ಮನೆಯವರು ಕಳುಹಿಸಿರುವ ಔಷಧಿಯನ್ನು ಗೋಪಾಲ್‌ ರಾಜ್‌ ಅವರ ಕೈಗೆ ಕೊಟ್ಟು ಮಾತಾಡುತ್ತಾರೆ... ‘ನಿಮ್ಮನ್ನ ಇಲ್ಲಿ ಕಂಡಿದ್ದಕ್ಕೆ ವಿಷಾದವಾಗ್ತಾ ಇದೆ. ಆದರೆ ಆರು ದಿನಗಳ ಕಾಲ ನಡೆಸಿದ ಹುಡುಕಾಟ ಈವತ್ತು ಯಶಸ್ವಿಯಾಗಿದೆ. ನಿಮ್ಮನ್ನು ಪತ್ತೆ ಹಚ್ಚಿದ್ನಲ್ಲಾ ಅನ್ನೋ ಹೆಮ್ಮೆ ಇದೆ. ಸರ್ಕಾರಗಳ ಉತ್ತರಕ್ಕೆ ವೀರಪ್ಪನ್‌ ಕೊಟ್ಟಿರುವ ಪ್ರತಿಕ್ರಿಯೆ ಹೊತ್ತು ನಾನು ಚೆನ್ನೈಗೆ ಮರಳುತ್ತಿದ್ದೇನೆ’.

ಅವರ ಮಾತಿನ ನಡುವೆ ವೀರಪ್ಪನ್‌ ಪ್ರವೇಶಿಸುತ್ತಾನೆ... ಗೋಪಾಲ್‌ಗೆ ಏನೋ ಹೇಳುತ್ತಾನೆ.... ಗೋಪಾಲ್‌ ಅದನ್ನು ರಾಜ್‌ಗೆ ಮತ್ತೆ ವಿವರಿಸುತ್ತಾರೆ... ವೀರಪ್ಪನ್‌ ಮತ್ತೆ ಅಲ್ಲಿಂದ ಮಾಯ. ವೀರಪ್ಪನ್‌ ಮತ್ತೊಂದು ದೃಶ್ಯದಲ್ಲಿ ಒತ್ತೆಯಾಳುಗಳು ಕುಳಿತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಎರಡೂ ಕೈ ಮುಗಿದು ದೇವರನ್ನು ಪ್ರಾರ್ಥಿಸುತ್ತಾನೆ. ನಂತರ ಬಂದು ಇವರೊಡನೆ ಕೂರುತ್ತಾನೆ.

ಅಪ್ಪು ಎಲ್ಲರಿಗಿಂತ ಚಿಕ್ಕವನು : ಎಲ್ಲಾ ದೃಶ್ಯಗಳಲ್ಲೂ ರಾಜ್‌ಕುಮಾರ್‌ ಅವರಲ್ಲಿ ಯಾವುದೇ ಗೊಂದಲ, ಗಡಿಬಿಡಿ ಕಾಣುವುದಿಲ್ಲ. ಗೋಪಾಲ್‌ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತಾರೆ...‘ನಾನು ರೇಡಿಯೋ ಮೂಲಕ ಪಾರ್ವತಿ ಧ್ವನಿ ಕೇಳಿದೆ, ನನ್ನ ತಮ್ಮನ ಧ್ವನಿಯನ್ನೂ ಕೇಳಿದೆ. ಆತನಿಗೆ ಹಾರ್ಟ್‌ ಆಪರೇಷನ್‌ ಆಗಿದೆ. ನನ್ನ ಮಕ್ಕಳು- ಶಿವರಾಜ್‌, ರಾಘು ಮತ್ತೆ ಅಪ್ಪು (ಪುನೀತ್‌) ಮಾತುಗಳನ್ನೂ ಕೇಳಿದೆ. ಅಪ್ಪು ಎಲ್ಲರಿಗಿಂತ ಚಿಕ್ಕವನು. ಪ್ರೀತಿಯಿಂದ ಅವನನ್ನು ಎಲ್ಲರೂ ಹಾಗೆ ಕರೀತೀವಿ’.

‘ರೇಡಿಯೋದಲ್ಲಿ ಪಾರ್ವತಿ ಧ್ವನಿ ಕೇಳಿದಾಗ ಮನಸಿಗೆ ಸ್ವಲ್ಪ ಕಷ್ಟವಾಯಿತು. ಸ್ವಲ್ಪ ಅಷ್ಟೇ. ಆಮೇಲೆ ಸರಿಹೋಯ್ತು . ಯಾವುದನ್ನೂ ನಾನು ಜಾಸ್ತಿ ಹಚ್ಚಿಕೊಳ್ಳಲ್ಲ ನೋಡಿ’ ರಾಜ್‌ ತಣ್ಣಗೆ ಹೇಳುತ್ತಾರೆ.

ಆತ ಮಾತಾಡುವುದು ಗೋಪಾಲ್‌ ಜೊತೆ ಮಾತ್ರ : ವೀರಪ್ಪನ್‌ ರಾಜ್‌ಕುಮಾರ್‌ ಜೊತೆಗೆ ನೇರವಾಗಿ ಮಾತಾಡಿರುವ ಒಂದು ದೃಶ್ಯವೂ ಕ್ಯಾಸೆಟ್‌ನಲ್ಲಿಲ್ಲ. ಆತ ಮಾತಾಡುವುದು ಗೋಪಾಲ್‌ ಜೊತೆ ಮಾತ್ರ. ಒಂದು ದೃಶ್ಯದಲ್ಲಿ ಗೋಪಾಲ್‌- ವೀರಪ್ಪನ್‌ ಇ್ಬಬರೇ ಇದ್ದಾರೆ. ನಾನು ಉಭಯ ಸರ್ಕಾರಗಳ ಸಂಧಾನಕಾರನಾಗಿ ಬಂದಿದ್ದೇನೆ. ಅವರು ನಿಮ್ಮ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ನಿಮ್ಮ ಉತ್ತರ ಕೊಟ್ಟರೆ ಸಂತೋಷ ಎಂದು ಗೋಪಾಲ್‌ ಹೇಳುತ್ತಾರೆ.

ಭಗವಂತ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಿ : ಕಾಡನ್ನು ಬಿಡುವ ಮುನ್ನ ಗೋಪಾಲ್‌, ರಾಜ್‌ ಅವರನ್ನು ಕೇಳುತ್ತಾರೆ, ‘ನಿಮ್ಮ ಕುಟುಂಬ ಹಾಗೂ ಮಿತ್ರರಿಗೆ ಏನಾದರೂ ಸಂದೇಶವಿದ್ದರೆ ತಿಳಿಸಿ, ತಲುಪಿಸುತ್ತೇನೆ. ಅಮ್ಮ (ಪಾರ್ವತಮ್ಮ) ಮತ್ತಿತರರಿಗೆ ನಿಮ್ಮ ಸಂದೇಶ ಕೇಳಿ ಖುಷಿಯಾಗಬಹುದು’. ಅದಕ್ಕೆ ರಾಜ್‌ ತಮ್ಮ ಕುಟುಂಬದ ಸದಸ್ಯರೆಲ್ಲರನ್ನೂ ಉದ್ದೇಶಿಸಿ ಹೀಗೆ ಹೇಳುತ್ತಾರೆ... ‘ನಾನು ಏನು ಹೇಳಲಿ? ನಾವು ಇಲ್ಲಿ ಯಾಕಿದ್ದೇವೆ ಅನ್ನೋದು ಎಲ್ಲರಿಗೂ ಗೊತ್ತು. ನಾವು ಆರಾಮಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ- ವಿಶ್ವಾಸಗಳಿಂದ ನಾವು ಬೇಗ ಬಂದು ತಮ್ಮನ್ನು ಸೇರುತ್ತೇವೆ. ಆ ಭಗವಂತ ನನಗೆ ಶಕ್ತಿಯನ್ನು ಕೊಟ್ಟಿದಾನೆ. ಭಗವಂತ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಿ, ನಮ್ಮನ್ನ ಇಲ್ಲಿಗೆ ಕರೆದುಕೊಂಡು ಬಂದಿರೋರಿಗೂ ಒಳ್ಳೆದಾಗಲಿ ಅಂತ ಪ್ರಾರ್ಥಿಸುತ್ತೇವೆ’.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more