ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ನಲ್ಲಿ ಕ್ರಿಯಾಶೀಲವಾಗಲಿದೆ ಕೈಗಾ ಅಣು ಸ್ಥಾವರದ ಮೊದಲ ಘಟಕ

By Super
|
Google Oneindia Kannada News

ಕಾರವಾರ : ಕೈಗಾ ಅಣು ವಿದ್ಯುತ್‌ ಸ್ಥಾವರದ ಮೊದಲನೇ ಘಟಕ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. 220 ಮೆಗಾವ್ಯಾಟ್‌ ಸಾಮರ್ಥ್ಯದ ಈ ಘಟಕದ ಕಾರ್ಯಾರಂಭಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೂ ನಡೆದಿವೆ. ಆ ನಿಟ್ಟಿನಲ್ಲಿ ಅಣು ಸ್ಥಾವರವನ್ನು ಕ್ರಿಯಾಶೀಲಗೊಳಿಸುವುದು ಅತ್ಯಂತ ಮಹತ್ವದ ಪ್ರಕ್ರಿಯೆ ಎನ್ನಲಾಗಿದೆ.

ಮೊದಲ ಗುಮ್ಮಟದ ಹೃದ್ಭಾಗದಲ್ಲಿ ಸೇರಿಸಲಾಗುವ ಅಣು ಇಂಧನಕ್ಕೆ ನಿರ್ದಿಷ್ಟ ಸಂಖ್ಯೆಯ ನ್ಯೂಟ್ರಾನ್‌ಗಳನ್ನು ಸೇರಿಸುವ ಮೂಲಕ ಅಣು ವಿದಳನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವಿಕೆ ಎಂದು ಹೇಳಲಾಗುತ್ತದೆ. ಒಮ್ಮೆ ವಿದಳನ ಕ್ರಿಯೆ ಆರಂಭವಾಯಿತೆಂದರೆ , ಅದನ್ನು ನಿಯಂತ್ರಿಸಬಹುದಷ್ಟೇ, ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ, ಆರಂಭಕ್ಕೆ ಮುನ್ನ ಅದಕ್ಕೆ ಎಲ್ಲ ಉಪಕರಣಗಳು, ನಿಯಂತ್ರಣ ವ್ಯವಸ್ಥೆಗಳನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವಿಕಿರಣ ಪ್ರಕ್ರಿಯೆ ನಡೆಯುವ ಗುಮ್ಮಟದ ಹೃದ್ಭಾಗದ ಉಷ್ಣತೆಯನ್ನು 274 ಡಿಗ್ರಿ ಸೆ.ಗೇರಿಸಲಾಗುವುದು. ಆಗ ಯಂತ್ರಗಳ ಪ್ರಾಯೋಗಿಕ ಚಾಲನೆ ನಡೆಸಿ, ಅವುಗಳ ವರ್ತನೆಯನ್ನು ಅಧ್ಯಯನ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಹಾಟ್‌ ಕಂಡಿಷನಿಂಗ್‌ ಎಂದು ಕರೆಯಲಾಗುತ್ತಿದ್ದು, ಈ ಪ್ರಕ್ರಿಯೆ ಜುಲೈ 31ರಂದು ಮುಕ್ತಾಯವಾಗಿದೆ. ಈ ಪ್ರಕ್ರಿಯೆ 86 ತಾಸುಗಳಲ್ಲಿ ಪೂರ್ಣಗೊಂಡಿದ್ದು , ಇದು ಒಂದು ವಿಶ್ವದಾಖಲೆ ಆಗಲಿದೆ ಎಂದು ಕೈಗಾ ವಿಜ್ಞಾನಿಗಳು ಹೇಳುತ್ತಾರೆ.

ಮುಂದಿನ ದಿನಗಳಲ್ಲಿ ಮೊದಲ ಗುಮ್ಮಟದ ಇಂಧನ ಕೋಠಿಯಲ್ಲಿ ಅಣು ಇಂಧನ ಹಾಗೂ ಭಾರ ಜಲವನ್ನು ಸೇರಿಸುವ ಕಾರ್ಯ ಜರುಗಲಿದ್ದು, ಈ ಕೆಲಸಗಳಿಗೆ ಕನಿಷ್ಠ ಮೂರು ವಾರಗಳು ಬೇಕಾದೀತು ಎಂದು ಅಂದಾಜು ಮಾಡಲಾಗಿದೆ.

ಒಮ್ಮೆ ಕ್ರಿಯಾ ಶೀಲವಾದ ಬಳಿಕ, ಸ್ಥಾವರದಲ್ಲಿ ಹಲವಾರು ಅಣು ವಿಕಿರಣ ಶಾಸ್ತ್ರ ಹಾಗೂ ಭೌತ ಶಾಸ್ತ್ರದ ಪ್ರಯೋಗಗಳು ನಡೆಯಲಿವೆ. ಈ ಪ್ರಯೋಗಗಳು ಪೂರ್ಣಗೊಳ್ಳಲು ಕೊನೇ ಪಕ್ಷ 3ರಿಂದ 6 ತಿಂಗಳು ಬೇಕಾದಾವು ಎಂದು ಹೇಳಲಾಗಿದೆ. ಅವು ಪೂರ್ತಿಗೊಂಡ ಬಳಿಕ, ವಿದ್ಯುತ್‌ ಉತ್ಪಾದನೆ ಆರಂಭ. ಮೊದಲಿಗೆ ಕಿಲೋ ವ್ಯಾಟ್‌ಗಳಲ್ಲಿ ಆರಂಭವಾಗುವ ವಿದ್ಯುತ್‌ ಉತ್ಪಾದನೆ, ಕ್ರಮೇಣ ಘಟಕದ ಪೂರ್ಣ ಸಾಮರ್ಥ್ಯವಾದ 220 ಮೆಗಾವ್ಯಾಟ್‌ಗಳಿಗೇರುವುದು.

ಈ ವರ್ಷಾರಂಭದಲ್ಲಿ ಕೈಗಾ ಸ್ಥಾವರದ ಎರಡನೇ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿತ್ತು. ಮೊದಲ ಸ್ಥಾವರ ಮೊದಲಿನಿಂದಲೂ ಬಾಲಾರಿಷ್ಟಕ್ಕೆ ತುತ್ತಾಗಿತ್ತು. ಸಾಕಷ್ಟು ವಿಪರೀತ ಪ್ರತಿರೋಧದ ನಡುವೆ ಕಾರ್ಯ ಆರಂಭಿಸಿದಾಗ , 1994ರಲ್ಲಿ ನಿರ್ಮಾಣದ ಮಹತ್ವ ಮಜಲಿನಲ್ಲಿದ್ದ ಗುಮ್ಮಟದ ಒಳಪದರ ಸಾರಾ ಸಗಟಾಗಿ ಕಳಚಿ ಬಿದ್ದಿತ್ತು. ಇದು ಸಾರ್ವಜನಿಕರಲ್ಲಿ ಇನ್ನಷ್ಟು ಅಭದ್ರತೆ ಮೂಡಿಸಿತ್ತು. ಈ ಅವಘಡದ ಕುರಿತ ಸಾಕಷ್ಟು ವಿಚಾರಣೆ, ತನಿಖೆಗಳು ನಡೆಯುವವರೆಗೂ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು . ನಂತರ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅತ್ಯಾಧುನಿಕ ವಿನ್ಯಾಸದೊಂದಿಗೆ, ಈ ಗುಮ್ಮಟವನ್ನು ನಿರ್ಮಿಸಲಾಯಿತು. ಇದರಿಂದಾಗಿ ಅಪಾರವಾದ ಹಣ ನಷ್ಟವಾಗುವುದರೊಂದಿಗೆ , ಯೋಜನೆ ವೆಚ್ಚವೂ ತನ್ಮೂಲಕ ವಿದ್ಯುತ್‌ ಉತ್ಪಾದನಾ ವೆಚ್ಚವೂ ಉಲ್ಬಣವಾಗಿವೆ.

ಏತನ್ಮಧ್ಯೆ, ಎರಡನೇ ಘಟಕದ ನಿರ್ಮಾಣ ಕಾರ್ಯ ಆರಂಭಿಸಿದ್ದರಿಂದ, ಅದು ಮೊದಲು ಕಾರ್ಯಾರಂಭ ಮಾಡಿತ್ತು. ಈ ವರ್ಷಾರಂಭದಲ್ಲಿ ಎರಡನೇ ಘಟಕವನ್ನು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
kaiga first unit to genarate power from september
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X