ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಬಿಡುಗಡೆಗೆ ವೀರಪ್ಪನ್‌ನಿಂದ 50 ಕೋಟಿ ರುಪಾಯಿ ಬೇಡಿಕೆ?

By Super
|
Google Oneindia Kannada News

ಬೆಂಗಳೂರು : ರಾಜ್‌ ಅವರ ನಿವಾಸಕ್ಕೇ ನುಗ್ಗಿ ಅವರನ್ನು ಅಪಹರಿಸಿರುವ ದಂತಚೋರ ವೀರಪ್ಪನ್‌ ಕನ್ನಡದ ಕಣ್ಮಣಿ ರಾಜ್‌ ಕುಮಾರ್‌ ಹಾಗೂ ಮತ್ತಿತರರ ಬಿಡುಗಡೆಗೆ ಸರಿಸುಮಾರು 50 ಕೋಟಿ ರುಪಾಯಿಗಳ ಬೇಡಿಕೆಯನ್ನು ಮುಂದಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ ಸರಕಾರಕ್ಕೆ ತಲುಪಿರುವ ಆಡಿಯೋ ಕ್ಯಾಸೆಟ್‌ನಲ್ಲಿ ತಮಿಳಿನಲ್ಲಿ ಬೇಡಿಕೆ ಮಂಡಿಸಲಾಗಿದ್ದು, ಇದು ರಾಜ್‌ ಅವರ ಅಪಹರಣ ಸಂದರ್ಭದಲ್ಲಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್‌ ಅವರೊಂದಿಗೆ ಕಳುಹಿಸಿದ ಮೊದಲ ಕ್ಯಾಸೆಟ್‌ ಧ್ವನಿಯನ್ನೇ ಹೋಲುತ್ತದೆ ಎಂದು ತಿಳಿದುಬಂದಿದೆ.

50 ಕೋಟಿ ರುಪಾಯಿಗಳ ಭಾರಿ ಮೊತ್ತದ ಜತೆಗೆ ವೀರಪ್ಪನ್‌ ಇನ್ನೂ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದರಲ್ಲಿ ಟಾಡಾ ಕಾಯಿದೆ ಅಡಿಯಲ್ಲಿ ಬಂಧಿಗಳಾಗಿರುವ ತನ್ನ ಸಹಚರರ ಬಿಡುಗಡೆಯ ಬೇಡಿಕೆಯೂ ಒಂದಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ತನಗೆ ಹಾಗೂ ತನ್ನ ಸಹಚರರಿಗೆ ಕ್ಷಮಾದಾನ ನೀಡಬೇಕು. ಕ್ಷಮಾದಾನದ ನಂತರ, ಚೆನ್ನೈನಲ್ಲಿ ನಾಗರಿಕರಂತೆ ಬದುಕಲು ತಮಗೆ ಸಕಲ ಅನುಕೂಲತೆಗಳನ್ನು ಮಾಡಿಕೊಡಬೇಕು ಎಂಬ ಬೇಡಿಕೆಗಳೂ ಸೇರಿವೆ ಎಂದು ತಿಳಿದುಬಂದಿದೆ. ಕಾವೇರಿ ವಿವಾದವನ್ನು ಬಗೆಹರಿಸಬೇಕೆಂಬ ಬೇಡಿಕೆಯೂ ಈ ಕ್ಯಾಸೆಟ್‌ನಲ್ಲಿರುವುದಾಗಿ ಗೊತ್ತಾಗಿದೆ.

ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಈಗಾಗಲೇ ಕ್ಯಾಸೆಟ್‌ ಆಲಿಸಿದ್ದು, ರಾಜ್‌ ಕುಮಾರ್‌ ಅವರ ಕುಟುಂಬದವರೊಂದಿಗೆ ಸಹ ಚರ್ಚಿಸಿದ್ದಾರೆ. ಭಾನುವಾರ ಬೆಳಗ್ಗೆ ಈ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಲು ಮುಖ್ಯಮಂತ್ರಿಗಳು ಚೆನ್ನೈಗೆ ತೆರಳಲಿದ್ದಾರೆ.

ಉನ್ನತ ಮಟ್ಟದ ಸಭೆ: ವೀರಪ್ಪನ್‌ ಬೇಡಿಕೆಗಳು ಏನೆಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯ ನಂತರ, ಪ್ರತಿಪಕ್ಷಗಳ ನಾಯಕರ ಸಭೆಯನ್ನು ಸಹ ಕರೆಯಲಾಗಿದೆ. ಈ ಎಲ್ಲ ಮಾತುಕತೆಗಳನ್ನು ನಡೆಸುವ ಮುನ್ನ ಡಾ. ರಾಜ್‌ಕುಮಾರ್‌ ಅವರ ಕುಟುಂಬದವರೊಂದಿಗೆ ಚರ್ಚಿಸಿ, ಅವರ ಅನಿಸಿಕೆಗಳನ್ನು ಪಡೆಯಲಾಗುತ್ತದೆ ಎಂದೂ ತಿಳಿದುಬಂದಿದೆ.

ಚಲನಚಿತ್ರ ರಂಗದ ನಿರ್ಧಾರ: ವೀರಪ್ಪನ್‌ ಡಾ. ರಾಜ್‌ಕುಮಾರ್‌ ಅವರ ಬಿಡುಗಡೆಗೆ 50 ಕೋಟಿ ರುಪಾಯಿಗಳನ್ನು ಕೇಳಿದ್ದಾನೆ ಎಂಬ ವಿಷಯ ಅನಧಿಕೃತವಾಗಿ ಬಹಿರಂಗಗೊಳ್ಳುತ್ತಿರುವಂತೆಯೇ, ಕರ್ನಾಟಕ ಚಲನಚಿತ್ರ ರಂಗ, ರಾಜ್ಯ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ ಚರ್ಚಿಸಿದೆ ಎಂದು ಗೊತ್ತಾಗಿದೆ. ಮಂಡಳಿಯ ಸಭೆಯಲ್ಲಿ ಕನ್ನಡ ಚಿತ್ರ ರಂಗ ಪ್ರತಿವರ್ಷ ಸರಕಾರದಿಂದ ಸಬ್ಸಿಡಿ ಹಾಗೂ ಮನರಂಜನಾ ತೆರಿಗೆ ವಿನಾಯಿತಿಯಡಿಯಲ್ಲಿ ಹಾಗೂ ಇನ್ನಿತರ ವಿಭಾಗಗಳಿಂದ ಪಡೆಯುವ ಸುಮಾರು 40ರಿಂದ 45 ಕೋಟಿ ರುಪಾಯಿಗಳನ್ನು ರಾಜ್‌ಕುಮಾರ್‌ ಅವರ ಬಿಡುಗಡೆಗೆ ಬಿಟ್ಟುಕೊಡಲು ತೀರ್ಮಾನಿಸಿದೆ ಎಂದೂ ವಿಶ್ವಸನೀಯ ಮೂಲಗಳು ತಿಳಿಸಿವೆ.

English summary
Demands of veerappan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X