Get Updates
Get notified of breaking news, exclusive insights, and must-see stories!

ಭೀಮನ ಅಮಾವಸ್ಯೆ : ಗಂಡನ ಆಯುಷ್ಯ ಹೆಚ್ಚಲೆಂದು ಗೃಹಿಣಿ ತೊಡುವ ವ್ರತ

ಆಷಾಢದ ಕೊನೆಯ ದಿನ ಅಂದರೆ, ಶ್ರಾವಣದ ಸಾಲು ಸಂಭ್ರಮ ಆರಂಭದ ಮುನ್ನಾ ದಿನವೇ ಭೀಮನ ಅಮಾವಸ್ಯೆ. ಆಷಾಢದ ಬೇನೆ ಬೇಸರಗಳಿಗೆ ಕೊನೆಯ ದಿನವದು. ಅಂದು ಹನಿ ನೀರು ಸೇವಿಸದೇ ಗೃಹಿಣಿಯರು ಕಟ್ಟಾ ಉಪವಾಸ ಆಚರಿಸುತ್ತಾರೆ, ಗಂಡನ ಆಯುಷ್ಯ ವೃದ್ಧಿಸಲೆಂದು. ಅಮಾವಸ್ಯೆಯ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಗೃಹಿಣಿಯರು ಉಪವಾಸ ಇರುವ ಈ ಆಚರಣೆ ಉತ್ತರ ಭಾರತದ ಕರ್ವಾ ಚೌಟ್‌ನ್ನೇ ಹೋಲುತ್ತದೆ.

ಭೀಮನ ಅಮವಾಸ್ಯೆಯಂದು ಎಲ್ಲ ಮನೆಗಳಲ್ಲಿಯೂ ಶಿವಾರಾಧನೆ ನಡೆಯುತ್ತದೆ. ಈ ಶ್ವರನನ್ನು ಜ್ಯೋತಿಯ ರೂಪದಲ್ಲಿ ಪೂಜಿಸುವುದರಿಂದ ಈ ದಿನವನ್ನು ಜ್ಯೋತಿರ್‌ ಭೀಮೇಶ್ವರ ವ್ರತ ಎನ್ನುವುದೂ ಉಂಟು. ಬದುಕಿನ ಕಷ್ಟಗಳೆಲ್ಲವನ್ನು ನಿವಾರಿಸಲು ತಾನೇ ವ್ರತ ಪೂಜೆಗಳನ್ನು ಕಷ್ಟ ಪಟ್ಟು ಮಾಡುವುದು ! ಭೀಮೇಶ್ವರ ವ್ರತ ಇದಕ್ಕೆ ಹೊರತಲ್ಲ. ಆಷಾಢದ ಬೇಗೆ ಮನೆಯಾಕೆಯಿಂದ ಅಕ್ಕಿ ಆರಿಸುವ ಭಾಗ್ಯವನ್ನೂ ಕಸಿದುಕೊಳ್ಳುವಂತಹುದು. ಎಂಥಹವರನ್ನೂ ಆಷಾಢದ ಬಡತನ ಒಮ್ಮೆ ಕುಟುಕಿಯೇ ಮುಂದುವರೆಯುವುದು. ಆಷಾಢ ಮಾಸದ ನೋವುಗಳ ಪೂರ್ಣವಿರಾಮವಾಗಿ ಭೀಮೇಶ್ವರ ವ್ರತದ ಸಂಜೆ ಮುಗಿಯುತ್ತದೆ. ಮರುದಿನ ಬೆಳಿಗ್ಗೆ ಶ್ರಾವಣದ ಸಂಭ್ರಮ, ರಾತ್ರಿ ಆಗಸದಲ್ಲಿ ಪಾಡ್ಯ ಚಂದ್ರನ ಹುಡುಕಾಟ....ಪ್ರತಿದಿನ ಹಬ್ಬಗಳ ತಂದು ಮನೆಬಾಗಿಲ ಸಿಂಗರಿಸುವ, ಚಿಗುರ ಸಂಭ್ರಮಗಳ ಶ್ರಾವಣ.

ಆಷಾಢ ಆರಂಭವಾಗುತ್ತಿದ್ದಂತೆ ತವರಿನ ಹಾದಿ ತುಳಿವ ಮನೆಯಾಕೆ ಭೀಮೇಶ್ವರನ ವ್ರತವನ್ನೇ ಕಾಯುತ್ತಿರುತ್ತಾ ಳೆ. ಅಂದು ತನ್ನ ಗಂಡ ಬರುವ ದಿನ. ಗದ್ದೆಗಳ ಕೆಸರು ಬದುಗಳ ಮೇಲೆ ಆತ ನಡೆದು ಬರುವ ದಿನ. ಮರುದಿನ- ಶ್ರಾವಣ, ತಾನು ಗಂಡನ ಮನೆಯಲ್ಲಿ ಮುಂಬರುವ ಹಬ್ಬಗಳ ಸಿದ್ಧತೆಯಲ್ಲಿ ಕಳೆದು ಹೋಗಲಿದ್ದೇನೆ ಎನ್ನುವ ಯೋಚನೆ ಅವಳೆದೆಯಲ್ಲಿ ಖುಷಿಯನ್ನು ಕಟ್ಟಿಹಾಕುತ್ತದೆ. ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಆಕೆಗೆ ಭೀಮನ ಉಪವಾಸದಂದು ಹೊಟ್ಟೆ ಚುರ್‌ ಎನ್ನುವುದೇ ಇಲ್ಲ.

ಅಲ್ಲಿ ಕರಾವಳಿಯಲ್ಲಿ : ಹಬ್ಬಗಳು, ಆಚರಣೆಗಳು ಹವಾಮಾನದ ಹಾದಿಯಲ್ಲಿ ತಾನೇ ನಡೆಯುವುದು. ಕರಾವಳಿಯಲ್ಲಿ ಆಷಾಢ ಅಮಾವಸ್ಯೆಯ ದಿನವನ್ನು ಆಟಿ ಅಮಾವಸ್ಯೆ ಎನ್ನುತ್ತಾರೆ. ಆಟಿ ಎಂದರೆ ಕರ್ಕಟಕ ಮಾಸ. ಬಯಲ ಸೀಮೆಯ ಮಂದಿ ಚಂದ್ರನ ನೋಡಿ ದಿನ ಲೆಕ್ಕ ಹಾಕುವುದಾದರೆ ಕರಾವಳಿಯ ತುಳುವರು ಅಂಗಳದಲ್ಲಿ ಕೋಲೂರಿ ಸೂರ್ಯನನ್ನೇ ನಂಬಿ ದಿನ, ಗಂಟೆಗಳ ಲೆಕ್ಕ ಬರೆದಿಡುವುದು. ಅಲ್ಲಿ ಅವರಿಗೆ ಆಷಾಢದ ಸೂತಕ ಮುಗಿಯುವುದು ಕರ್ಕಟಕ ಮಾಸ ಮುಗಿದಾಗಲೇ. ಬಯಲ ಸೀಮೆಯಲ್ಲಿ ಆಷಾಢಕ್ಕೆ ಅನ್ವಯವಾಗುವ ಎಲ್ಲ ಬೇನೆ ಬೇಸರಗಳು, ಕಟ್ಟು ಕಟ್ಟಳೆಗಳು ಕರಾವಳಿಯವರಿಗೂ ಅನ್ವಯವಾಗುತ್ತವೆ.

ಆಟಿ ತಿಂಗಳು ಸ್ವರ್ಗಸ್ಥರಾದವರಿಗೆ ಅನ್ನವಿಡುವ ತಿಂಗಳು. ಅವತ್ತು ರಾತ್ರಿ ತಿಂಡಿ, ಅನ್ನ ಪದಾರ್ಥಗಳನ್ನು ಮಾಡಿ ಅಗಲಿದ ಹಿರಿಯರಿಗೆ ಇಟ್ಟು , ನಂತರ ತಾವು ಊಟ ಮಾಡುತ್ತಾರೆ. ಆಟಿಯಲ್ಲಿ ಮದರಂಗಿ ಚಿಗುರನ್ನು ಯಾರೂ ಮುರಿಯುವುದಿಲ್ಲ. ಯಾಕೆಂದರೆ ಆಟಿಯಲ್ಲಿ ಮದರಂಗಿ ಹಚ್ಚುವ ಸಂಭ್ರವನ್ನು ಯಾರೂ ಆಚರಿಸುವುದಿಲ್ಲ.

ಆಟಿ ಅಮಾವಸ್ಯೆಯನ್ನು ಕರಾವಳಿಯ ಎಲ್ಲ ಮನೆಗಳಲ್ಲಿಯೂ ಆಚರಿಸುತ್ತಾರೆ. ಅಂದು ಬೆಳಿಗ್ಗೆ ಮುಂಜಾವಕ್ಕೆ ಒಂದು ಜಾಮ ಇರುವಾಗ ಊರಿನಲ್ಲಿರುವ ಪಾಲಾಶ ಮರದ ತೊಗಟೆಯನ್ನು ತಂದು ಅರೆದು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿ ಉಣ್ಣುತ್ತಾರೆ. ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲಾಶದ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನ ಸೋಂಕದಂತೆ ತಡೆಯುತ್ತದಂತೆ. ಹೀಗೆ ಕರಾವಳಿಯ ಹಳ್ಳಿಗಳಲ್ಲಿರುವ ಪಾಲಾಶದ ಮರಗಳೆಲ್ಲಾ ತೊಗಟೆ ಕಳಚಿಕೊಂಡು , ಸಿಂಹ ಮಾಸಕ್ಕೆ ಕಾಯುತ್ತಿರುತ್ತವೆ. ಬಯಲು ಸೀಮೆಯ ಶ್ರಾವಣದ ಸಂಭ್ರಮ ಕರಾವಳಿಯವರಿಗೆ ಹದಿನೈದು ದಿನಗಳ ನಂತರ ಆರಂಭವಾಗುತ್ತದೆ. ಈಗವರು ಬಿರುಮಳೆ ಹರಿಸುವ ಕಾಡ ನೀರಿನ ಸದ್ದಿನ ನಡುವೆ, ಗುದ್ದಾಡುವ ಮೋಡಗಳ ಗುಡು ಗುಡು ಶಬ್ಧದೊಂದಿಗೆ ಕಹಿ ಮದ್ದು ಕುಡಿದು, ಕಾಯಿ ಗಂಜಿ ತಿಂದು, ಬರಲಿರುವ ಸೋಣ(ಸಿಂಹ ಮಾಸ)ವನ್ನು ಎದುರು ನೋಡುತ್ತಿರುತ್ತಾರೆ.

ಹೀಗೆ ಅಮಾವಸ್ಯೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಆದರೂ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಆಯಾ ಪ್ರದೇಶದ ಬದುಕು, ಸಂಸ್ಕೃತಿ, ಪ್ರತೀತಿಗಳಿಗೆ ಅನುಗುಣವಾಗಿ ಅಮಾವಸ್ಯೆಯ ಮೆರುಗು...ಅದರೊಂದಿಗೆ ಬದುಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+