ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡ ಮಡಿಲ ಸೌಂದಯ ರ್ ಲಹರಿ

By Super
|
Google Oneindia Kannada News

sringeri
ತುಂಗೆಯ ಬಯಲಲ್ಲಿ, ಮಲೆನಾಡ ತಡಿಯಲ್ಲಿ, ಸಹ್ಯಾದ್ರಿಯ ಮಡಿಲಲ್ಲಿ ಪ್ರಕೃತಿ ದೇವಿಯ ರಮಣೀಯ ಸೌಂದರ್ಯದ ಗನಿಯಲ್ಲಿ ಮೈತಳೆದು ನಿಂತರುವ ಪವಿತ್ರ ಕ್ಷೇತ್ರವೇ ಶೃಂಗೇರಿ. ದಿವ್ಯ ಮಂಗಳ ಮೂರ್ತಿಯಾದ ಶಾರದಾಂಬೆ ನೆಲೆಸಿಹ ಈ ನಾಡು ಶ್ರೀಶಂಕರಾಚಾರ್ಯರ ಅದೈ ್ವತ ಸಿದ್ಧಾಂತದ ದರ್ಶನ ವನ್ನೂ ಮಾಡಿಸುತ್ತದೆ. ಶೃಂಗಗಿರಿಯ ಮೇಲಿಂದ ಬೀಸಿಬರುವ ತಂಗಾಳಿ ಅಮಿತ ಆನಂದವನ್ನು ನೀಡುತ್ತದೆ.

ಐತಿಹ್ಯ : ಪುರಾಣ ಪ್ರಸಿದ್ಧವಾದ ಶೃಂಗ ಗಿರಿಯೇ ಇಂದಿನ ಶೃಂಗೇರಿ. ಮೃಗ ಲಾಂಛನವಾದ ಶೃಂಗ ಅರ್ಥಾತ್‌ ಕೋಡನ್ನು ಹೊಂದಿದ್ದ ಮಹಾಮುನಿ ಋಷ್ಯಶೃಂಗರು ತಪವನ್ನಾಚರಿಸಿದ ಈ ಭೂ ಪ್ರದೇಶಕ್ಕೆ ಶೃಂಗ ಗಿರಿ ಎಂಬ ಹೆಸರಿತ್ತಂತೆ. ಉತ್ತರೋತ್ತರದಲ್ಲಿ ಇದು ಆಡು ಮಾತಿನಲ್ಲಿ ಶೃಂಗೇರಿ ಆಯಿತು.

ವಿಭಾಂಡಕ ಮಹಾಮುನಿಯ ಪುತ್ರರಾದ ಋಷ್ಯಶೃಂಗರು ಶೃಂಗೇರಿಗೆ 6 ಕಿ.ಮೀ. ದೂರದ ಕಿಗ್ಗ (ಕೀಳ್ಗ) ಎಂಬಲ್ಲಿ ಆಶ್ರಮವನ್ನು ಕಟ್ಟಿ ಅಲ್ಲಿ ತಪವನ್ನಾಚರಿಸಿದರೆಂದು ಪುರಾಣಗಳು ಹೇಳುತ್ತವೆ.

ಆಗಸದೆತ್ತರಕ್ಕೆ ನಿಂತಿರುವ ಗಿರಿಗಳು ಕೋಡಿನಂತಿದ್ದು ಈ ಸ್ಥಳ ಶೃಂಗೇರಿ ಎಂಬ ಹೆಸರಿಗೆ ಅನ್ವರ್ಥವಾಗಿವೆ.

ಈ ಗಿರಿ ಪ್ರದೇಶ ರಾಮಾಯಣ ಕಾಲದಿಂದಲೂ ಋಷಿ ಮುನಿಗಳ ತಪೋ ಭೂಮಿಯಾಗಿತ್ತು ಎಂಬುದಕ್ಕೆ ನೂರಾರು ಪುಷ್ಟಿದಾಯಕ ಕತೆಗಳಿವೆ.

1200 ವರ್ಷಗಳ ಹಿಂದೆ ಶುದ್ಧ ಸಾತ್ವಿಕ ಧರ್ಮ ಬದಲಾಗುತ್ತಾ ವಾಮಾಚಾರ ಮೆರೆದಿದ್ದ ಸಂದರ್ಭದಲ್ಲಿ ಕ್ರಿ.ಶ. 788ರಲ್ಲಿ ಜನಿಸಿದ ಆದಿ ಶಂಕರ ಭಗವತ್ಪಾದರು ಅದ್ವೆ ೖತ ಧರ್ಮ ಪ್ರತಿಪಾದನಾರ್ಥವಾಗಿ ಆಸೇತು ಹಿಮಾಚಲ ಪರ್ಯಂತ ಸಂಚರಿಸಿದಾಗ, ವೈದಿಕ ಧರ್ಮ ವನ್ನು ಪುನರ್ನೆಲೆಗೊಳಿಸಲು ಸ್ಥಾಪಿಸಿದ ನಾಲ್ಕು ಆಮ್ನಾಯ ಧರ್ಮಪೀಠಗಳಲ್ಲಿ ಮೊದಲನೆಯದೇ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ. ಕಾಶ್ಮೀರ ಪುರವಾಸಿನಿಯೂ ವಿದ್ಯಾಧಿದೇವತೆಯೂ ಆದ ಶಾರದೆಯನ್ನು ಆದಿ ಶಂಕರರು ಈ ಪೀಠದಲ್ಲಿ ಪ್ರತಿಷ್ಠಾಪಿಸಿದರು.

ಶಂಕರಾಚಾರ್ಯರು ಸ್ಥಾಪಿಸಿದ ಈ ದಕ್ಷಿಣಾಮ್ನೇಯ ಮಠ ಧರ್ಮಪೀಠದಲ್ಲಿ ಹತ್ತನೇ ಆಚಾರ್ಯರಾಗಿದ್ದ ವಿದ್ಯಾತೀರ್ಥರಿಂದ ಸಂನ್ಯಾಸದೀಕ್ಷೆ ಪಡೆದ ವಿದ್ಯಾರಣ್ಯರೇ ಹಕ್ಕ ಬುಕ್ಕರೆಂಬ ತರುಣ ಯೋಧರಿಂದ ಕರ್ನಾಟಕದ ಹೆಮ್ಮೆಯ ವಿಜಯನಗರ ಸಂಸ್ಥಾನ ಸ್ಥಾಪನೆಯ ಕಾರಣೀಭೂತರು.

ಈಗ ಶಾರದಾಂಬೆಯ ನೆಲೆವೀಡಿನಲ್ಲಿರುವ ಧರ್ಮಪೀಠವು ವಿದ್ಯಾಕ್ಷೇತ್ರದಲ್ಲಿ ಅದರಲ್ಲೂ ಸಂಸ್ಕೃತ, ವೇದಾದ್ಯಯನಕ್ಕೆ ಸಾಕಷ್ಟು ನೆರವು ನೀಡಿದೆ. ಹಲವು ಶಾಲೆ, ಕಾಲೇಜುಗಳನ್ನೂ ನಡೆಸುತ್ತಿದೆ. ಮಠ ಸ್ಥಾಪಿಸಿದ ಶಾರದಾ ಧನ್ವಂತರಿ ಆಸ್ಪತ್ರೆ ಅತ್ಯಾಧುನಿಕ ಸಲಕರಣೆಗಳಿಂದ ಸಾರ್ವಜನಿಕರ ನೆರವಿಗೆ ನಿಂತಿದೆ.

ದೊಡ್ಡ ಮೀನುಗಳಿಂದ ತುಂಬಿದ ಶುಭ್ರ ತಿಳಿನೀರಿನಿಂದ ಝುಳುಝುಳನೆ ಹರಿವ ತುಂಗಭದ್ರಾನದಿಯ ಎಡದಂಡೆಯ ಮೇಲೆ ಎತ್ತರದ ಪ್ರದೇಶದಲ್ಲಿ ದೊಡ್ಡ ರಥದಂತೆ ನಿಂತಿರುವ ಶಿಲ್ಪಶಿಲಾಮಯ ಶ್ರೀವಿದ್ಯಾಶಂಕರ ದೇಗುಲ ಶೃಂಗೇರಿಯ ಮತ್ತೊಂದು ಪ್ರಮುಖ ಆಕರ್ಷಣೆ.

ಹೊಯ್ಸಳ, ಚಾಲುಕ್ಯ, ದ್ರಾವಿಡ, ವಿಜಯನಗರ ಶಿಲ್ಪಕಲಾ ಚಾತುರ್ಯದ ಸಂಗಮವೇ ಈ ದೇಗುಲ. ದೇವಾಲಯದ ಒಳಭಾಗ, ಹೊರಭಾಗಗಳು ವಿಶಿಷ್ಟ ಕೆತ್ತನೆಗಳಿಂದ ಕಂಗೊಳಿಸುತ್ತಿವೆ.

ದೇವಸ್ಥಾನದ ಒಳಗಡೆಯ ನವರಂಗದಲ್ಲಿ ಖಗೋಳ ಶಾಸ್ತ್ರಕ್ಕನುಗುಣವಾಗಿ ಮೀನ - ಮೇಷಾದಿಯಾದ ಹನ್ನೆರಡು ರಾಶಿಗಳ ಸಂಕೇತವುಳ್ಳ ಹನ್ನೆರಡು ಕಂಬಗಳಿವೆ. ಆಯಾಯಾ ಮಾಸದಲ್ಲಿ ಉದಯ ರವಿಯ ಪ್ರಥಮ ಕಿರಣ ಆಯಾಯ ರಾಶಿಯ ಸಂಕೇತದ ಕಂಬಗಳ ಮೇಲೆ ಬಿಳುವಂತೆ ಈ ಚೌಕಾಕಾರದ ಕಂಬಗಳನ್ನು ನಿರ್ಮಿಸಲಾಗಿದೆ. ಇದು ನಮ್ಮ ಜನರ ವಾಸ್ತುಶಿಲ್ಪ ಕಲೆಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಅದ್ಭುತ ಶಿಲ್ಪಕಲಾ ಚಾತುರ್ಯ. ಈ ದೇಗುಲದಲ್ಲಿರುವ ಒಂದೊಂದು ಮೂರ್ತಿಯೂ ಮನೋಹರವಾಗಿದೆ.

ಪಕ್ಕದಲ್ಲೇ ಇರುವ ಅಂದರೆ ತುಂಗಾನದಿಯ ಬಲದಂಡೆಯ ಮೇಲಿರುವ ನರಸಿಂಹ ವನದಲ್ಲಿ ಆಶ್ರಮವಿದೆ. ಇಲ್ಲಿಗೆ ಹೋಗಲು ತುಂಗಾನದಿಯ ಮೇಲೆ ಸೇತುವೆಯನ್ನೂ ನಿರ್ಮಿಸಲಾಗಿದೆ.

ಶೃಂಗೇರಿ ಶಾರದೆ, ಶಕ್ತಿ ಗಣಪ, ಆಚಾರ್ಯ ಶಂಕರ ಆಲಯ, ವಿದ್ಯಾಶಂಕರ ದೇವಾಲಯ, ಕಪ್ಪೆಶಂಕರ, ನರಸಿಂಹವನ, ಚತುರ್ವಿದ್ಯೇಶ್ವರ ಮೂರ್ತಿ, ಹರಿಹರೇಶ್ವರ ದೇವಾಲಯ, ಮಲಹಾನಿಕರೇಶ್ವರ ದೇವಸ್ಥಾನ, ರಕ್ಷಕ ದೇವತಾ ಆಲಯ, ಕಾಲಭೈರವೇಶ್ವರ, ಆಂಜನೇಯ, ದುರ್ಗಾಂಬಾ, ಕಾಳಿಕಾಂಬಾ ಮತ್ತು ರತ್ನಗರ್ಭ ಗಣಪನನ್ನೂ ನಾವಿಲ್ಲಿ ಕಾಣಬಹುದಾಗಿದೆ.

ನರಸಿಂಹ ಪರ್ವತ, ಆದಿ ಶಂಕರಾಚಾರ್ಯ, ಕಿಗ್ಗದ ಶ್ರೀ ಋಷ್ಯಶೃಂಗೇಶ್ವರ ದೇವಾಲಯಗಳೂ ಇಲ್ಲಿವೆ.

ರಾಜ್ಯದ ಎಲ್ಲ ಪ್ರಮುಖ ಸ್ಥಳಗಳಿಂದಲೂ ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ಬರಲು ನೇರವಾದ ಬಸ್‌ ಸೌಕರ್ಯವಿದೆ.

ಯಾತ್ರಿಕರಿಗಾಗಿಯೇ ಶ್ರೀಮಠದ ಮುಖ್ಯದ್ವಾರದ ಎಡಗಡೆ ಶ್ರೀಮಠಕ್ಕೆ ಹೊಂದಿಕೊಂಡಂತೆ ಶ್ರೀಶಂಕರ ನಿಕೇತನ, ಅದರ ಎದುರು ಅತಿಥಿಗೃಹ ಮತ್ತು ತಿರುಪತಿ ದೇವಸ್ಥಾನದವರು ನಿರ್ಮಿಸಿರುವ ವಸತಿಗೃಹಗಳೂ ಇವೆ. ಶಂಕರಕೃಪಾ, ಭಾರತೀ ವಿಹಾರವೇ ಮುಂತಾದ ವಸತಿ ಗೃಹಗಳೂ ಇವೆ. ಶೃಂಗೇರಿಗೆ ಬರುವ ಎಲ್ಲ ಯಾತ್ರಿಕರಿಗೂ ಶ್ರೀಮಠದಲ್ಲಿ ಭೋಜನದ ವ್ಯವಸ್ಥೆಯೂ ಇದೆ. ಮಠದ ದೇವಾಲಯಗಳು ಬೆಳಗ್ಗೆ 6ರಿಂದ 1ರವರೆಗೆ ಹಾಗೂ ಸಾಯಂಕಾಲ 5ರಿಂದ 9ರವರೆಗೆ ತೆರೆದಿರುತ್ತವೆ.

ಒಟ್ಟಾರೆ ಧಾರ್ಮಿಕ ಸ್ಥಳವಾಗಿ, ಯಾತ್ರಾಸ್ಥಳವಾಗಿ, ಶಿಲ್ಪಕಲೆಯ ತವರಾಗಿ, ನಿಸರ್ಗಪ್ರಿಯಯ ಕಣ್ಮನತಣಿಸುವ ತಾಣವಾಗಿ, ಇತಿಹಾಸ, ಪುರಾತತ್ವ ಸಂಶೋಧಕರಿಗೆ ಆಕರವಾಗಿ, ಕಲಾವಿದರಿಗೆ ಸ್ಫೂರ್ತಿಯಾಗಿರುವ ಈ ಸ್ಥಳ ನಾಸ್ತಿಕ - ಆಸ್ತಿಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

English summary
Malenada madila soundarya lahari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X