• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅದ್ಭುತ ಕಲಾನಗರಿಯ ನೆನಪುಗಳು

By Super
|
ಹದಿನಾರನೆ ಶತಮಾನದ ಭಾರತದ ಅತ್ಯಂತ ಸುಂದರ ಹಾಗೂ ಜನಸಂದಣಿಯುಳ್ಳ ನಗರ ಯಾವುದು ಗೊತ್ತೆ?ಈ ಖ್ಯಾತಿ ಕರ್ನಾಟಕದ ಚರಿತ್ರೆಯಲ್ಲಿ ಸುವರ್ಣಯುಗವೆಂದು ಹೆಸರುಪಡೆದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯದು. ಹಂಪೆಯಲ್ಲದೆ ಮತ್ತ್ಯಾವುದಕ್ಕೆ ಈ ಖ್ಯಾತಿ ಸಲ್ಲಲು ಸಾಧ್ಯ. ಇದು ನಮ್ಮದೆನ್ನುವ ಮುದ್ದಿನ ಕುರುಡುತನದ ಹೊಗಳಿಕೆಯಲ್ಲ. ಭಾರತವನ್ನೆಲ್ಲ ಸುತ್ತಿದ ಚೀನೀ ಯಾತ್ರಿಕರ ಪ್ರಕಾರ ಅಂದಿನ ಹಂಪೆಗೆ ಸಮವೆನಿಸುವ ಯಾವ ನಗರಗಳೂ ಭಾರತದಲ್ಲಿರಲಿಲ್ಲ. ಮತ್ತೂ ಹೇಳುವುದೆಂದರೆ ಅಂದಿನ ಸಮಕಾಲೀನ ನಾಲ್ಕು ಜಾಗತಿಕ ಮಹಾಸಾಮ್ರಾಜ್ಯಗಳಲ್ಲಿ ವಿಜಯನಗರ ಸಾಮ್ರಾಜ್ಯವೂ ಒಂದು.

ವಿಜಯನಗರ, ಪಂಪಾಕ್ಷೇತ್ರ ಏನೆಲ್ಲ ಹೆಸರುಗಳು ಹಂಪೆಗೆ. ಮುತ್ತುರತ್ನಗಳನ್ನು ಸೇರುಗಳಲ್ಲಿ ಅಳೆದು ಮಾರುತ್ತಿದ್ದರಂತೆ ಹಂಪೆಯ ಬಜಾರಿನಲ್ಲಿ. 1565ರಲ್ಲಿ ತಾಳಿಕೋಟೆಯ ಬಳಿಯ ರಕ್ಕಸತಂಗಡಿ ಬಳಿ ನಡೆದ ಘೋರ ಯುದ್ದದ ಪರಾಭವದ ಬಳಿಕ ಹಂಪೆ ಲೂಟಿಗೀಡಾಯಿತು. ನಲವತ್ತು ಹಗಲೂ ಇರುಳೂ ಹಂಪೆಯ ಸಂಪತ್ತು ಹೊತ್ತಿ ಉರಿಯಿತು. ಆ ಉರಿ ದಹಿಸಿದ್ದು ಬರಿಯ ಸಂಪತ್ತನ್ನಲ್ಲ. ಒಂದು ಸಂಸ್ಕೃತಿಯನ್ನು, ಒಂದು ಜನಾಂಗದ ನಾಗರೀಕತೆಯನ್ನು. ಇತಿಹಾಸಕಾರ ಸಿವೆಲ್‌ ಹಂಪೆಯ ದುರಂತದ ಬಗ್ಗೆ ಹೀಗೆನ್ನುತ್ತಾನೆ, ಅದ್ಭುತವಾದ ನಗರವೊಂದರ ಮೇಲೆ ನಡೆದ ತೀವ್ರ ಪ್ರಮಾಣದ ಧಾಳಿ ಪ್ರಾಯಶಃ ಪ್ರಪಂಚದ ಇತಿಹಾಸದಲ್ಲೇ ಎಂದೂ ಆಗಿರಲಾರದು.

ಹಂಪೆಯೆಂದರೆ ಏನು?

ಉತ್ತರಿಸುವುದು ಕಷ್ಟ . ಹಂಪೆಗೆ ಬಹುಮುಖಗಳು. ಸಾಮ್ರಾಜ್ಯವೊಂದರ ರಾಜಧಾನಿ, ಕೊನೆಯುಸಿರು ಎಳೆಯುತ್ತಿದ್ದ ಧರ್ಮವೊಂದಕ್ಕೆ ಉಸಿರು ತುಂಬಿದ ಸಂಜೀವಿನಿ, ಕಲಾನಗರಿ, ಜನಾಂಗವೊಂದರ ಅದ್ಭುತ ಕನಸುಗಳ ಸಾಂಸ್ಕೃತಿಕ ನಗರಿ- ಎಲ್ಲ ವಿಶೇಷಣಗಳೂ ಹಂಪೆಗೆ ಅನ್ವರ್ಥವೇ. ಹಂಪೆಗೆ ಮತ್ತೊಂದು ರೂಪವೂ ಇದೆ.

ದುರವಸ್ಥೆಯಲ್ಲಿರುವ ಊರು, ವಸ್ತುಗಳೊಂದಿಗೆ ಸಮೀಕರಿಸಲಿಕ್ಕೆ ಹಂಪೆಗಿಂತ ಸುಂದರ ಉಪಮೆ ಮತ್ತ್ಯಾವುದಿದ್ದೀತು. ಹಾಳು ಹಂಪೆಯೋ, ಕೊಂಪೆಯೋ ಎಂದು ಅಜ್ಜಂದಿರು ರಾಗ ಎಳೆಯುವುದುಂಟು. ಕಾಲಪ್ರವಾಹದಲ್ಲಿ ಎಲ್ಲ ನಗರಗಳೂ ಏಳುಬೀಳು ಕಾಣುವುದು ಸಹಜವಾದರೂ, ಹಂಪೆಯ ಕತೆ ಬೇರೆ ಊರುಗಳಿಗಿಂತ ಪೂರಾ ಭಿನ್ನ. ಹಂಪೆ ಹಾಳಾದದ್ದು ಸಹಜಗತಿಯಲ್ಲಲ್ಲ. ಹಂಪೆ ಬಲಿಯಾದದ್ದು ಕಲೆ, ಸಂಸ್ಕೃತಿಗಳಿಗಿಂತ ಸಂಪತ್ತೆ ಮುಖ್ಯವೆಂದು ಬಗೆದ ಮಾನವೀಯತೆ ಮರೆತ ಮನುಷ್ಯನ ಹುಂಬತನಕ್ಕೆ.

ತುಂಗಭದ್ರೆ ಎಡದಂಡೆಯ ಮೇಲಿನ, ಪಂಪಾ ಪರಿಸರದಲ್ಲಿನ ಪಟ್ಟಣ ಹಂಪೆ. ಪಂಪಾದ ಕನ್ನಡರೂಪ ಹಂಪೆ. ಪಂಪಮಹಾತ್ಮ್ಯದ ಸ್ಥಳಪುರಾಣದ ಪ್ರಕಾರ, ಆನೆಗೊಂದಿ, ಕಮಲಾನಗರ, ಮುನಿರಾಬಾದ್‌, ಹೊಸಪೇಟೆಗಳನ್ನೊಳಗೊಂಡ ಪಂಚಕ್ರೋಶ ವಿಸ್ತಾರದ ಪಂಪಾಕ್ಷೇತ್ರದಲ್ಲಿ ಹಂಪೆಯೂ ಒಂದು. ಹಂಪೆ ದಕ್ಷಿಣದ ಕಾಶಿಯೆಂದೇ ಪ್ರಸಿದ್ಧ. ರಾಮಾಯಣದ ವಾನರರ ರಾಜಧಾನಿ ಕಿಷ್ಕಿಂದೆಯೇ ಈವತ್ತಿನ ಆನೆಗೊಂದಿ ಎನ್ನಲಾಗಿದೆ. ಪಂಪಾ ಸರೋವರ ಇರುವುದು ಇದರ ಬಳಿಯೇ. ಆನೆಗೊಂದಿಯಲ್ಲಿರುವ ರಾಮಬಾಣವನ್ನು , ರಾಮ ವಾಲಿಯ ಮೇಲೆ ಬಾಣ ಪ್ರಯೋಗಿಸಿದ ಸ್ಥಳವೆಂದು ಹೇಳಲಾಗುತ್ತದೆ. ರಾಮಲಕ್ಷ್ಮಣರು ಚಳಿಗಾಲವನ್ನು ಮಾಲ್ಯವಂತದ ಮೇಲೆ ಕಳೆದರೆನ್ನುವ ಐತಿಹ್ಯವೂ ಪ್ರಚಲಿತ. ಮತಂಗ, ಮಾಲ್ಯವಂತ, ಹೇಮಕೂಟ, ಅಂಜನಾದ್ರಿ, ಋಷ್ಯಮೂಕ ಪರ್ವತಗಳಿಗೂ ಪುರಾಣದ ನಂಟುಂಟು. ಹಂಪೆ ದ್ವಾದಶ ಭಾಸ್ಕರ ಕ್ಷೇತ್ರಗಳಲ್ಲಿ ಒಂದೆಂದು ಗೋಕರ್ಣ ಮಹಾತ್ಮೆ ಬಣ್ಣಿಸುತ್ತದೆ.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು 1336ರಲ್ಲಿ. ವಿದ್ಯಾರಣ್ಯರು ಹಕ್ಕಬುಕ್ಕರ ನೆರವಿನಿಂದ ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದದ್ದು ಕೃಷ್ಣದೇವರಾಯನ ಕಾಲದಲ್ಲಿ, ಮೊಗಲ ಪೂರ್ವ ಸಾಮ್ರಾಜ್ಯದ ಭಾರತದ ಅನೇಕ ದೊಡ್ಡ ರಾಜ್ಯಗಳನ್ನೊಳಗೊಂಡ ವಿಶಾಲ ಸಾಮ್ರಾಜ್ಯ ವಿಜಯನಗರ.

ತುಂಗಭದ್ರೆಯ ಪರಿಸರ ಕಪ್ಪುಕಲ್ಲುಗಳ ಆಗರ. ವಿಜಯನಗರದರಸರ ಕಲಾ ಪೋಷಣೆಯ ಪರಿಣಾಮ ಆ ಕಪ್ಪುಕಲ್ಲುಗಳು ಕಲೆಯಾಗಿ ಅರಳಿದವು. ಹಿಂದೂ , ಮುಸ್ಲಿಂ ಶೈಲಿಗಳ ಸಂಮಿಶ್ರಣದ ವಿಜಯನಗರ ವಾಸ್ತುಶೈಲಿಯಲ್ಲಿ ದೇಗುಲ ಸಮುಚ್ಚಯಗಳು ಮೈವೆತ್ತಿವೆ. ಫರ್ಗ್ಯುಸನ್‌, ಬ್ರೌನ್‌ ಮುಂತಾದ ವಿಮರ್ಶಕರು ಈ ಶೈಲಿಯನ್ನು ಇಂಡೋ ಸಾರ್ಸೆನಿಕ್‌ ಎಂದು ಹೆಸರಿಸಿದ್ದಾರೆ. ವಿಸ್ತಾರ ಆವರಣ, ಭವ್ಯ ಮಂಟಪ, ಸಂಯುಕ್ತ ಕಂಬಗಳು ವಿಜಯನಗರ ಶೈಲಿಯ ಮುಖ್ಯ ಲಕ್ಷಣ. ಹಂಪೆಯ ಸ್ಮಾರಕಗಳನ್ನು ಕುರಿತ ಒಂದು ಸಾಮಾನ್ಯ ಮಾತೆಂದರೆ, ಇಲ್ಲಿಯ ಪ್ರತಿಯಾಂದು ಕಲ್ಲು, ಮೂರ್ತಿ, ಸ್ಮಾರಕ, ಕೊನೆಗೆ ಬೀದಿಗಳು ಕೂಡಾ ಮಾತಾಡುತ್ತವೆ. ಒಂದೇ ಭಾಷೆ ಅವುಗಳದು. ಅದೆಂದರೆ ಸೌಂದರ್ಯ ಮತ್ತು ವೈಭವ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hampi, Vijayanagar, ruin, krishnadevaraya, hakka, bukka, bellary, hospet, ratha, ugranarasimha, ruins, kamal mahal, vijayavithala temple

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more