ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಂಪರೆ ಪಟ್ಟಿಯಿಂದ ಹಂಪಿಗೆ ಕೊಕ್‌?

By Super
|
Google Oneindia Kannada News

ಪರಂಪರೆ ಪಟ್ಟಿಯಿಂದ ಹಂಪಿಗೆ ಕೊಕ್‌? ಹಂಪೆ ಇನ್ನೆಷ್ಟು ದಿನಗಳ ಕಾಲ ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಲ್ಲಿ ಉಳಿಯುತ್ತದೆ?

ಹಂಪೆಯನ್ನು ಐತಿಹಾಸಿಕ ವಿಶ್ವ ಪರಂಪರೆಯ ಪಟ್ಟಿಯಿಂದ ತೆಗೆದುಹಾಕುವ ಬೆದರಿಕೆಯನ್ನು ಯುನೆಸ್ಕೋ ಒಡ್ಡಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮಹತ್ತ್ವ ಪಡೆದಿದೆ. ಐತಿಹಾಸಿಕ ಸ್ಥಳವಾದ ಆನೆಗುಂದಿಯನ್ನು ಹಂಪೆಗೆ ಸೇತುವೆ ಮೂಲಕ ಸಂಪರ್ಕಿಸುವ ಕರ್ನಾಟಕ ಸರ್ಕಾರ ದ ಕ್ರಮವನ್ನು ವಿರೋಧಿಸಿ ಯುನೆಸ್ಕೋ ಈ ತೀರ್ಮಾನಕ್ಕೆ ಬಂದಿದೆ. ಹಂಪೆಯ ಸ್ಮಾರಕಗಳಿಗೆ ಹಾನಿಯಾಗುತ್ತದೆ ಎನ್ನುವುದು ಯುನೆಸ್ಕೋ ವಾದ.

ಅಡಿಕೆ ಕತ್ತರಿಯಲ್ಲಿ ಸಿಕ್ಕಿಕೊಂಡಿರುವ ಸಂಕಟ ಸರ್ಕಾರದ್ದು . ಸ್ಥಳೀಯ ಜನರ ಅವಶ್ಯಕತೆ ಪೂರೈಸಲು ಈಗಾಗಲೇ ಕೈಗೊಂಡಿರುವ ಸೇತುವೆ ಕೆಲಸ ನಿಲ್ಲಿಸುವುದು ಅಷ್ಟು ಸುಲಭವಲ್ಲ. ಹಾಗೆಂದು ಯುನೆಸ್ಕೋ ಮಾತನ್ನು ತಳ್ಳಿಹಾಕಿದರೆ, ಹಂಪೆ ವಿಶ್ವ ಪರಂಪರೆ ಪಟ್ಟಿಯಿಂದ ಹೊರಗುಳಿಯುತ್ತದೆ. ಹಾಗಾದಲ್ಲಿ ಹಂಪೆ ಮೂಲೆಗುಂಪಾಗುತ್ತದೆ.

ಸೇತುವೆಯ ನಿರ್ಮಾಣದಿಂದ ಹಂಪೆಯ ಸ್ಮಾರಕಗಳಿಗೆ ಹಾನಿಯಾಗುತ್ತದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಸಮಿತಿಯಾಂದನ್ನು ರಚಿಸಿದೆ. ಈ ಸಮಿತಿಯ ನೇತೃತ್ವ ವಹಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಚಲಾ ಮೌಲಿಕ ತಮ್ಮ ವರದಿಯನ್ನು ಏಪ್ರಿಲ್‌ ಮೊದಲ ವಾರದಲ್ಲಿ ನೀಡಲಿದ್ದಾರೆ. ಸ್ಥಳೀಯ ಜನರ, ಭಾರತೀಯ ಪ್ರಾಚ್ಯ ವಸ್ತು ಇಲಾಖೆಯ , ಸಾರ್ವಜನಿಕ ಕಾಮಗಾರಿ ಇಲಾಖೆಯ ಮತ್ತು ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳ ವೀಕ್ಷಣೆ, ಪರಿಶೀಲನೆ ಈ ವರದಿಯಲ್ಲಿರುತ್ತದೆ.

ರಾಜಿಯಾಗದ ಯುನೆಸ್ಕೋ: ಕಾಲುದಾರಿ ಮತ್ತು ವಾಹನ ಸಂಚಾರಿ ಸೇತುವೆಗಳೆರಡನ್ನೂ ನಿರ್ಮಿಸುತ್ತಿದ್ದ ಸರ್ಕಾರ ಕಾಲುದಾರಿ ಸೇತುವೆಯ ನಿರ್ಮಾಣವನ್ನು ನಿಲ್ಲಿಸಿದೆ. ಇಷ್ಟಕ್ಕೇ ಸಮಾಧಾನವಾಗದ ಯುನೆಸ್ಕೋ ವಾಹನಗಳ ಸಂಚಾರಕ್ಕೆಂದು ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿಯನ್ನೂ ನಿಲ್ಲಿಸಬೇಕೆಂದು ಹೇಳಿದೆ. ಇದರಿಂದ ಹಂಪೆಯ ವಿಶ್ವ ಪರಂಪರೆಗೆ ಹಾನಿಯಾಗುತ್ತದೆಂಬುದು ಯುನೆಸ್ಕೋ ಪ್ರಬಲವಾಗಿ ಪ್ರತಿಪಾದಿಸುತ್ತದೆ.

ಯುನೆಸ್ಕೋದ ವಿಶೇಷ ಪ್ರತಿನಿಧಿ ಜುಂಕೊ ಟಾನಿಗುಚಿ , ಸೇತುವೆಗಳ ನಿರ್ಮಾಣವನ್ನು ನಿಲ್ಲಿಸಬೇಕೆಂದು ಕರ್ನಾಟಕ ಸರ್ಕಾರಕ್ಕೆ ಹೇಳಿದ್ದರೂ ಕೇವಲ ಕಾಲುನಡಿಗೆಯ ಸೇತುವೆ ನಿರ್ಮಾಣವನ್ನು ಮಾತ್ರ ನಿಲ್ಲಿಸಿದೆ. ದ್ವಿಮುಖ ವಾಹನ ಸಂಚಾರಕ್ಕೆ ನಿರ್ಮಿಸ್ತುತಿರುವ ಸೇತುವೆಯ ನಿರ್ಮಾಣವನ್ನು ಮುಂದುವರೆಸಿದ್ದಾರೆ. ಈ ಸೇತುವೆಯ ನಿರ್ಮಾಣದಿಂದ ಗ್ರಾಮದ ಅಸ್ತಿತ್ವ, ನೈಸರ್ಗಿಕ ಸಂಪನ್ಮೂಲ ಹಾಗೂ ಐತಿಹಾಸಿಕ ಸಂಪತ್ತಿಗೆ ಹಾನಿಯಾಗುತ್ತದೆ. ಸಂಶೋಧಕರಿಗೆ ಹಾಗೂ ಪ್ರವಾಸಿಗರಿಗೆ ಹಂಪೆಯ ಆಕರ್ಷಣೆ ಮಾಸುತ್ತದೆ ಎನ್ನುತ್ತಾರೆ.

ಸೇತುವೆಯಿಂದ ಸ್ಮಾರಕಗಳಿಗೆ ತೊಂದರೆಯಿಲ್ಲ ?: ಸ್ಮಾರಕಗಳು ಭಗ್ನವಾಗುತ್ತಿವೆ ಎಂಬ ಯುನೆಸ್ಕೋ ಆಪಾದನೆಯನ್ನು ಅಚಲಾ ಮೌಲಿಕ ಅಲ್ಲಗಳೆದಿದ್ದಾರೆ. ಒಂದು ಮಂಟಪವನ್ನು ಸ್ಥಳಾಂತರಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಅದು ಅಗತ್ಯ ಎನ್ನುತ್ತಾರೆ. ಹಿಂದೆ ನೈಲ್‌ ನದಿಯ ಮೇಲೆ ಅಶ್ವಾಂಡಮ್‌ ನಿರ್ಮಿಸಿದಾಗ ಯುನೆಸ್ಕೋದವರೇ ಕೆಲವು ಸ್ಮಾರಕಗಳನ್ನು ಸ್ಥಳಾಂತರಿಸಲು ಒಪ್ಪಿದ್ದರು ಎನ್ನುವುದನ್ನು ಅಚಲಾ ನೆನಪಿಸುತ್ತಾರೆ. ಅವರ ಪ್ರಕಾರ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯವರು ಎಚ್ಚರಿಕೆಯಿಂದ ಈ ಕೆಲಸ ಮಾಡಿದ್ದಾರೆ. ಇದರಿಂದ ಪರಂಪರೆಗೆ ಹಾನಿಯೇನೂ ಆಗಿಲ್ಲ. ಆದರೆ ಈಗ ಸ್ಥಗಿತವಾಗಿರುವ ವಿರೂಪಾಕ್ಷ ದೇವಾಲಯದ ಹಿಂಬದಿಯ ಕಾಲುನಡಿಗೆ ಸೇತುವೆ ಕಾಮಗಾರಿ ಮುಂದುವರೆದರೆ, ಬಂಡೆಯಾಂದರ ಮೇಲಿರುವ ನಂದಿಯ ಕೆತ್ತನೆ ಹಾಳಾಗುತ್ತದೆ ಎಂದು ಅಚಲಾ ಎಚ್ಚರಿಕೆ ನೀಡುತ್ತಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯು ಎಎಸ್‌ಐ ಮತ್ತು ಯುನೆಸ್ಕೋದವರ ಜೊತೆ ಸೌಹಾರ್ದತೆಗೆ ಪ್ರಯತ್ನಿಸುತ್ತಿದೆ. ಹೀಗಾಗಿ ಇದು ಈ ಪ್ರದೇಶವನ್ನು ರಕ್ಷಿಸಲು ಸೂಕ್ತ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ವಕ್ತಾರರು ಹೇಳಿದ್ದಾರೆ.

ದುಷ್ಕರ್ಮಿಗಳ ಹಾವಳಿಯಿಂದ ಸ್ಮಾರಕಗಳನ್ನು ರಕ್ಷಿಸಲು ಅವುಗಳ ಸುತ್ತ ಗೋಡೆ ಕಟ್ಟುವ ಸಲಹೆಯನ್ನು ಸಮಿತಿಯ ವರದಿಯಲ್ಲಿ ಸೂಚಿಸಲಾಗಿದೆ. ಹಂಪಿಯಲ್ಲಿ ಹುದುಗಿ ಹೋಗಿರುವ ಸ್ಮಾರಕಗಳು ಸುಮಾರು 25 ಚ.ಕಿ.ಮೀ. ಪ್ರದೇಶದಷ್ಟು ವ್ಯಾಪಿಸಿವೆ. ಇವುಗಳ ರಕ್ಷಣೆಗೆ ಕಾವಲುಗಾರರನ್ನು ನೇಮಿಸಬೇಕು. ಹೊಸಪೇಟೆ ಜಿಲ್ಲೆಯ ಉಪ ನಿರ್ದೇಶಕ ರ ಜೊತೆ ಈ ಕುರಿತು ಮಾತನಾಡಿರುವುದಾಗಿ ಅಚಲಾ ತಿಳಿಸಿದ್ದಾರೆ.

ಸಮಿತಿಯು ಸಲಹೆಗಳೂ ಸೇರಿದಂತೆ ವರದಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಕೊಡುತ್ತದೆ. ಸೂಕ್ತ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಅವರು ಹೇಳಿದರು.

ಸೇತುವೆ ನಿರ್ಮಾಣವಾದರೆ ಎರಡು ಐತಿಹಾಸಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದಂತೆ: ಯುನೆಸ್ಕೋದ ಸದಸ್ಯರು ಅಂದುಕೊಂಡಿರುವಂತೆ ಸೇತುವೆ ಮೇಲೆ ಭಾರೀ ವಾಹನಗಳೇನೂ ಸಂಚರಿಸುವುದಿಲ್ಲ. ಇದರಿಂದ ಹಂಪೆ ಸ್ಮಾರಕಗಳಿಗೂ ತೊಂದರೆಯಾಗುವುದಿಲ್ಲ. ಈ ಸೇತುವೆ ನಿರ್ಮಾಣದಿಂದ ಹೊಸಪೇಟೆ ಮತ್ತು ಗಂಗಾವತಿಯ ನಡುವಿನ ಅಂತರ 20 ಕಿ.ಮೀ.ಗಳಷ್ಟು ಕಡಿಮೆಯಾಗುತ್ತದೆ. ತಾಳವಾರ ಘಟ್ಟದ ಬಳಿ ನಿರ್ಮಿಸಲಾಗುತ್ತಿರುವ ಸೇತುವೆಯು ಚಾರಿತ್ರಿಕ ಸ್ಥಳಗಳಾದ ಹಂಪಿ ಹಾಗೂ ಆನೆಗುಂದಿಯನ್ನು ಜೋಡಿಸುತ್ತದೆ. ಜೊತೆಗೆ ನಾಡದೋಣಿಗಳಲ್ಲಿ ಪ್ರಯಾಣ ಮಾಡುವ ಅಪಾಯವನ್ನೂ ತಪ್ಪಿಸುತ್ತದೆ.

ಸೇತುವೆ ನಿರ್ಮಾಣ ಒಳ್ಳೆಯದಲ್ಲ ಎಂದು ಯುನೆಸ್ಕೋ ಹೇಳಿದರೆ, ಸೇತುವೆ ನಿರ್ಮಾಣದಿಂದ ಏಮೂ ತೊಂದರೆಯಿಲ್ಲ ಎನ್ನುತ್ತದೆ ಸಮಿತಿ. ಯಾರ ಅಭಿಪ್ರಾಯ ಏನೇ ಇದ್ದರೂ ಐತಿಹಾಸಿಕ ಸ್ಮಾರಕಗಳ ಪಟ್ಟಿಯಲ್ಲಿ ಹಂಪೆ ಉಳಿಯಬೇಕಾದುದು ಅಗತ್ಯ. ಏಕೆಂದರೆ ಇದು ಕರ್ನಾಟಕದ ಒಂದು ಪ್ರಮುಖ ಆಕರ್ಷಣೆಯ ಪ್ರಶ್ನೆ, ಕನ್ನಡಿಗರ ಹಮ್ಮುಬಿಮ್ಮಿನ ಪ್ರಶ್ನೆ , ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಿರಿಯರು ಬಿಟ್ಟುಹೋಗಿರುವ ಇಂಥ ಪರಂಪರೆಯನ್ನು ಮಾಸದ ಹಾಗೆ ಕಾಪಿಟ್ಟುಕೊಳ್ಳುವ ಪ್ರಶ್ನೆ

English summary
Hampi, Vijayanagar, ruin, krishnadevaraya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X