• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೆನಾಡ ತವರು ಈ ಚಿಕ್ಕಮಗಳೂರು

By Super
|

ಮಲೆನಾಡ ತವರು ಈ ಚಿಕ್ಕಮಗಳೂರು ಐತಿಹ್ಯ :ಚಿಕ್ಕಮಗಳೂರು ಜಿಲ್ಲೆ ಎಂದೊಡನೆ ಮಲೆನಾಡು ಜ್ಞಾಪಕಕ್ಕೆ ಬರುತ್ತದೆ. ಚಿಕ್ಕಮಗಳೂರು ಮಲೆನಾಡ ತವರು. ಮಿಗಿಲಾಗಿ ಕರ್ನಾಟಕದ ಕಾಫಿಯ ಕಣಜ. ಗಿರಿಕಂದರ, ನದಿ, ಜಲಪಾತಗಳಿಂದ ಸಮೃದ್ಧವಾದ ನೆಲೆವೀಡು. ನಿತ್ಯಹರಿದ್ವರ್ಣದ ಕಾಡು. ಶಾರದೆಯ ಬೀಡು. ಅತಿ ಎತ್ತರದ ಗಿರಿ ಶಿಖರ ಹೊಂದಿರುವ ಸ್ವಾಭಾವಿಕ ಸಂಪನ್ಮೂಲಗಳಿಂದ ತುಂಬಿದ ಸಿರಿನಾಡು.

ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆಗಳ ಸಂಗಮವೇ ಚಿಕ್ಕಮಗಳೂರು ಜಿಲ್ಲೆ. ಭೌಗೋಳಿಕವಾಗಿ ವಿಶಿಷ್ಟ ಹಾಗೂ ವಿವಿಧ್ಯಪೂರ್ಣವಾದ ಸ್ಥಳ. 720 ಚ.ಮೀಗಳ ವಿಸ್ತೀರ್ಣವಿರುವ ಜಿಲ್ಲೆಯ ಪಶ್ಚಿಮದಲ್ಲಿ ಅತ್ಯಂತ ಎತ್ತರವಾದ ಘಟ್ಟಪ್ರದೇಶಗಳಿವೆ. ಸಮುದ್ರ ತಡಿಯಿಂದ ನೋಡಿದಾಗ ಕುದುರೆಯ ಮುಖದಂತೆ ಗೋಚರಿಸುವ ಈ ಘಟ್ಟಪ್ರದೇಶಗಳು 6215 ಅಡಿ ಎತ್ತರದಲ್ಲಿವೆ. ಬಲ್ಲಾಳರಾಯನ ದುರ್ಗದಿಂದ ಪ್ರಾರಂಭವಾಗಿ ಕಳಸ, ಮರ್ತಿಗುಡ್ಡ, ಕೊಪ್ಪ ದುರ್ಗದವರೆಗೆ ಹಬ್ಬಿದ್ದು ತುಂಗ ಮತ್ತು ಭದ್ರಾ ನದಿಗಳ ಜಲಾನಯನ ಪ್ರದೇಶವನ್ನು ಪ್ರತ್ಯೇಕಿಸುತ್ತದೆ.

ಈ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನ ಗಿರಿ (6317 ಅಡಿ), ಬಾಬಾ ಬುಡನ್‌ಗಿರಿ (6214), ಕಲ್ಲತ್ತಗಿರಿ (6155) ಶಿಖರಗಳು ರಾಜ್ಯದಲ್ಲಿಯೇ ಅತ್ಯಂತ ಎತ್ತರವಾದ ಗಿರಿಶಿಖರಗಳಾಗಿವೆ. ಕುದುರೆಮುಖ 6215 ಅಡಿ ಎತ್ತರದ್ದಾಗಿದೆ. ಕುದುರೆಮುಖ ಹಾಗೂ ಕೆಮ್ಮಣ್ಣು ಗುಂಡಿ ಪ್ರದೇಶವು ಖನಿಜ ಸಂಪತ್ತಿನಿಂದ ಶ್ರೀಮಂತವಾದ ಭೂಭಾಗವಾಗಿದೆ. ಇಲ್ಲಿನ ಕಾಡುಗಳಲ್ಲಿ ಉತ್ತಮ ಜಾತಿಯ ತೇಗ, ನಂದಿ, ಬೀಟೆ, ಹೊನ್ನೆ, ಶ್ರೀಗಂಧ, ಬಿದಿರು ಮುಂತಾದ ಮರಗಳು, ಆನೆ, ಹುಲಿ, ಚಿರತೆ, ಕಿರುಬ, ಸೀಳುನಾಯಿ, ಹೈನಾ, ತೋಳ, ನರಿ, ಲಂಗೂರ್‌, ಜಿಂಕೆ, ಮುಸಿಯಾ, ಕಾಡೆಮ್ಮೆ, ಸಾರಂಗ, ಕಾಡುಹಂದಿ ಮುಂತಾದ ವನ್ಯಜೀವಿಗಳಿಂದ ಹಾೂಗ ಹೇರಳವಾದ ಖಗಸಂಕುಲದಿಂದ ಶ್ರೀಮಂತವಾಗಿದೆ. ಗಿಡಮರಗಳಿಂದ ಕೂಡಿರುವ ಜಿಲ್ಲೆ ಸದಾಕಾಲವೂ ಹಿತಕರವಾದ ಹವಾಮಾನ ಹೊಂದಿದೆ.

ತುಂಗಾ, ಭದ್ರಾ, ಹೇಮಾವತಿ, ವೇದಾವತಿ, ಯಗಚಿ ಹಾಗೂ ಇತಿಹಾಸ ಪ್ರಸಿದ್ಧವಾದ ಐಯ್ಯನ ಕೆರೆ, ಮದಗದ ಕೆರೆಗಳು ಈ ಜಿಲ್ಲೆಯ ನೀರಿನ ಅಗತ್ಯಗಳನ್ನು ಪೂರೈಸುತ್ತಿವೆ. ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರಿಕೆರೆಯನ್ನು ಒಳಗೊಂಡ ಈ ಜಿಲ್ಲೆ ಪ್ರಾವಾಸಿ ತಾಣವಷ್ಟೇ ಅಲ್ಲ ಯಾತ್ರಾಸ್ಥಳವೂ ಹೌದು.

ರುಕ್ಮಾಂಗದ ಎಂಬ ಪುರಾಣಕಾಲದ ದೊರೆ ತನ್ನ ಹಿರಿ ಮಗಳು ಹಾಗೂ ಕಿರಿ (ಚಿಕ್ಕ) ಮಗಳಿಗೆ ನೀಡಿದ ಎರಡು ಪ್ರದೇಶಗಳೇ ಇಂದು ಚಿಕ್ಕಮಗಳೂರು ಹಾಗೂ ಹಿರೆಮಗಳೂರು ಆಗಿವೆ ಎಂಬ ಕತೆಗಳಿವೆ.

ಗಂಗರ ಕಾಲದ ಶಾಸನಗಳಲ್ಲೂ ಸಹ ಚಿಕ್ಕ ಮುಗುಳಿ, ಕಿರಿಯ ಮುಗುಳಿ ಎಂಬ ಉಲ್ಲೇಖಗಳಿದ್ದು ಕಾಲಾಂತರದಲ್ಲಿ ಚಿಕ್ಕಮಗಳೂರು ಹಾಗೂ ಹಿರೇ ಮಗಳೂರು ಎಂಬ ಹೆಸರು ಪಡೆದವೆನ್ನಲಾಗಿದೆ.

ಮೌರ್ಯರು ಹಾಗೂ ಶಾತವಾಹನರ ಆಡಳಿತ ಎಲ್ಲೆಯಲ್ಲಿ ಈ ಊರು ಸೇರಿತ್ತು ಎಂಬ ಇತಿಹಾಸವೂ ಇರುವ ಇದು ಹೊಯ್ಸಳರಾಳಿದ ಹೆಮ್ಮೆಯ ನಾಡು. ಈ ನಾಡಿನಲ್ಲಿ ಶೃಂಗೇರಿಯ ಶಾರದಾಂಬಾ ಪೀಠ ವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸುವಲ್ಲಿ ಗಂಗರ ಪಾತ್ರವು ಸಂದಿದ್ದು, ಇಲ್ಲಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಗೆ ಗಂಗರು ಬುನಾದಿ ಹಾಕಿದರೆಂಬ ಪ್ರತೀತಿ ಇದೆ.

ದಕ್ಷಿಣ ಭಾರತದಲ್ಲೇ ರಾಮನ ಪ್ರಥಮ ದೇವಸ್ಥಾನವೆಂಬ ಹೆಗ್ಗಳಿಕೆಗೂ ಪಾತ್ರವಾದ ಹಿರೆಮಗಳೂರಿನ ಶ್ರೀ ಕೋದಂಡ ರಾಮಚಂದ್ರ ದೇವಾಲಯ ಕನ್ನಡದಲ್ಲೇ ಅರ್ಚನೆ ಸ್ವೀಕರಿಸುತ್ತಾ ದೇಶಾದ್ಯಂತ ಹೆಸರು ಮಾಡಿದ್ದಾನೆ. ಈ ತ್ರೇತಾಯುಗ ಪುರುಷನ ಕನ್ನಡದಲ್ಲಿ ಅರ್ಚಿಸುತ್ತಿರುವ ಕೀರ್ತಿ ಹಿರೆಮಗಳೂರು ಕಣ್ಣನ್‌ ಅವರಿಗೆ ಸಲ್ಲುತ್ತದೆ.

ಕರ್ನಾಟಕವಾಳಿದ ಹೆಮ್ಮೆಯ ವಿಜಯನಗರ ಸ್ಥಾಪನೆ ಅವಸಾನ ಎರಡೂ ಈ ಜಿಲ್ಲೆಯಲ್ಲಿಯೇ ಆಯಿತೆಂಬುದು ಇತಿಹಾಸದ ಅಣಕವಾಗಿದೆ.

ವಾಸಂತಿಕಾ ದೇವಾಲಯ, ಚನ್ನಕೇಶವ ದೇವಾಲಯ, ಜೈನ ಬಸದಿಗಳು, ಬಳವಾಡಿಯ ವೀರನಾರಾಯಣ ದೇವಾಲಯ, ಅಮೃತಪುರದ ಅಮೃತೇಶ್ವರ ದೇವಾಲಯ ,ಮರಳೆಯ ಚನ್ನಕೇಶವ ಮತ್ತು ಸಿದ್ಧೇಶ್ವರ ದೇವಾಲಯಗಳು, ಕಳಸಾಪುರದ ಚೆಲುವ ನಾರಾಯಣ, ಬಗ್ಗವಳ್ಳಿಯ ಚೆನ್ನಕೇಶವ, ಬಲ್ಲಾಳರಾಯನ ದುರ್ಗ ಮುಂತಾದ ವಾಸ್ತು ಶಿಲ್ಪಗಳ ಹೊಯ್ಸಳ ಕಲಾಶ್ರೀಮಂತಿಕೆಯಿಂದ ಜಿಲ್ಲೇ ಕಂಗೊಳಿಸಿದೆ.

ಶೃಂಗಗಿರಿ ಅಥವಾ ಶೃಂಗೇರಿಯಲ್ಲಿ ಆದಿ ಶಂಕರರು ಸ್ಥಾಪಿಸಿದ ಶಾರಾದಾ ಪೀಠವಿದ್ದರೆ, ಬಾಳೆಹೊನ್ನೂರಿನ ಶ್ರೀರಂಭಾಪುರಿಯಲ್ಲಿ ಶ್ರೀರೇಣುಕಾಚಾರ್ಯರು ಸ್ಥಾಪಿಸಿದ ಪಂಚಪೀಠಗಳಲ್ಲಿ ಒಂದಿದೆ.

ಅನ್ನಪೂರ್ಣೇಶ್ವರಿಯು ನೆಲೆಸಿಹ ಹೊರನಾಡು ಇಲ್ಲಿಯ ಮತ್ತೊಂದು ಪ್ರಮುಖ ಯಾತ್ರಾಸ್ಥಳ. ಬಾಬಾಬುಡನ್‌ ಗಿರಿಯಲ್ಲಿರುವ ಬಾಬಾ ಬುಡನ್‌ ಸಮಾ- ಹಾಗೂ ದತ್ತಾತ್ರೇಯ ಪೀಠಗಳು ಸದ್ಭಾವನೆಯ ದ್ಯೋತಕಗಳಾಗಿವೆ. ಇತ್ತೀಚೆಗೆ ಇಲ್ಲಿ ಬಿಗುವಿನ ವಾತಾವರಣ ಮೂಡಿತ್ತು ಎಂಬುದು ಬೇರೆ ಮಾತು ಬಿಡಿ. ಈ ಗಿರಿ ವಿವಿಧ ಬಗೆಯ ಗಿಡಮೂಲಿಕೆಗಳ ತಾಣವಾಗಿದೆ.

ಸಾಹಿತ್ಯ: ವಿದ್ಯಾ-ದೇವತೆ ಶಾರದೆಯೇ ನೆಲೆಸಿಹ ಈ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾದ ಸ್ಥಾನವನ್ನು ಹೊಂದಿದೆ. ಕವಿ ಲಕ್ಷ್ಮೀಶನಿಂದ ರಾಷ್ಟ್ರಕವಿ ಕುವೆಂಪು ಅವರವರೆಗೆ ಮಲೆನಾಡು ಸೂ-ರ್ತಿಯ ಸೆಲೆಯಾಗಿದೆ. ಮಲೆನಾಡನ್ನು ವರ್ಣಿಸದ ಕನ್ನಡ ಕವಿಗಳೇ ಅತಿ ವಿರಳವೇನೋ.

ಕೃಷಿ: ಮಲೆನಾಡಿನ ಗಿರಿತಪ್ಪಲುಗಳಲ್ಲಿ ಕಾಫಿ, ಏಲಕ್ಕಿ, ಮೆಣಸು, ಟೀ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಗಳು. ತೆಂಗು, ಅಡಿಕೆ, ಬಾಳೆ ಬೆಳೆವ ಈ ನಾಡು ತರಕಾರಿಯ ತವರೂ ಹೌದು. ಹೀಗಾಗೇ ಈ ಜಿಲ್ಲೆ ಆರ್ಥಿಕವಾಗಿ ಶ್ರೀಮಂತವಾಗಿದೆ.

ಕೈಗಾರಿಕೆ: ಹೇರಳವಾದ ಖನಿಜ ಸಂಪತ್ತನ್ನುಳ್ಳ ಜಿಲ್ಲೆ ಕೈಗಾರಿಕೆಯಲ್ಲಿ ತೀವ್ರ ಪ್ರಗತಿಯನ್ನು ಕಂಡಿದೆ. ಇಲ್ಲಿ ದೊರಕುವ ಕಬ್ಬಿಣ, ತಾಮ್ರ, ಅಬ್ರಕಾ, ಗ್ರಾಫೈಟ್‌, ಸುಣ್ಣಕಲ್ಲು, ವಾರ್ನಿಷ್‌ ಬಣ್ಣ ತಯಾರಿಕಗೆ ಬೇಕಾದ ವರ್ಣಶಿಲೆ ಕೈಗಾರಿಕೆಗೆ ಇಂಬು ನೀಡಿವೆ. ಕುದುರೆಮುಖ ಕಬ್ಬಿಣ ನಿಕ್ಷೇಪವು ಜಿಲ್ಲೆಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದೆ.

ಗಾಂಧೀಜಿ ಭೇಟಿ: ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮುಂಚೂಣಿಯಲ್ಲಿದ್ದ ಜಿಲ್ಲೆಗೆ ಗಾಂಧಿಜೀ ಅವರು ಭೇಟಿ ನೀಡಿದ್ದರು ಎಂಬುದು ಇಲ್ಲಿನ ವಿಶೇಷ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಸರು ಮಾಡಿದಂತೆಯೇ ಈ ಜಿಲ್ಲೆ ರಾಜಕೀಯವಾಗಿಯೂ ಬಹಳಷ್ಟು ಹೆಸರು ಮಾಡಿದೆ. ರಾಷ್ಟ್ರದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರಿಗೆ ರಾಜಕೀಯವಾಗಿ (1978) ಪುನರ್ಜನ್ಮ ನೀಡಿದ ಸ್ಥಳವಾಗಿ ವಿಶ್ವದ ಗಮನವನ್ನೂ ಸೆಳೆದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chikmagalur: Homecity of Malnad

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more