ಝೆನ್ ಕಥೆ: ವಿಮರ್ಶಕ ಶಿಷ್ಯನಿಗೆ ಬೆದರಿದ ಗುರು
ಕ್ಯೋಟೋದಲ್ಲಿರುವ ಒಬಾಕು ದೇವಾಲಯದ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಕೆತ್ತಲಾಗಿದೆ. 200 ವರ್ಷಗಳಷ್ಟು ಹಳೆಯದಾದ, ದೊಡ್ಡ ಅಕ್ಷರಗಳಲ್ಲಿ ಕೆತ್ತಲಾದ ಈ ಬರಹವನ್ನು ಅನೇಕರು ಕೈಬರಹದ ಅತ್ಯುತ್ತಮ ಕಲಾಕೃತಿ ಎಂದು ಹೊಗಳಿದ್ದಾರೆ. ಇದನ್ನು ಬರೆದದ್ದು ಕೊಸೆನ್ ಎಂಬ ಅಸಾಮಾನ್ಯ ಕಲಾವಿದ.
ಕೊಸೆನ್ ಮೊದಲು ಅಕ್ಷರಗಳನ್ನು ಕಾಗದದ ಮೇಲೆ ಬರೆಯುತ್ತಿದ್ದ. ಆಮೇಲೆ ಆತನ ಕೆಲಸಗಾರರು ಆ ಅಕ್ಷರಗಳನ್ನು ಮರದ ಮೇಲೆ ಯಥಾವತ್ತಾಗಿ ಕೊರೆಯುತ್ತಿದ್ದರು.
ಕೊಸೆನ್‌ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ ಪರಿಣತಿ ಪಡೆದಿದ್ದ ಆತ ತನ್ನ ಗುರುವಿಗಾಗಿ ಭಾರಿ ಪ್ರಮಾಣದ ಇಂಕನ್ನು ಸಿದ್ಧಪಡಿಸುತ್ತಿದ್ದ. ತನ್ನ ಗುರುವಿನ ತಾಂತ್ರಿಕತೆಯ ಕಟು ವಿಮರ್ಶಕ ಆತ.

ಪ್ರಥಮ ಸೂತ್ರವನ್ನು ಗುರು ಮೊದಲ ಸಲ ಬರೆದಾಗ, "ಗುರುಗಳೇ, ಇದು ಚೆನ್ನಾಗಿಲ್ಲ" ಎಂದ ಶಿಷ್ಯ.
''ಇದು ಹೇಗಿದೆ?'' ಎಂದು ಗುರು ಮತ್ತೊಮ್ಮೆ ಬರೆದು ಕೇಳಿದ.
"ಮೊದಲನೆಯದ್ದಕ್ಕಿಂತ ಇದು ಇನ್ನೂ ಕೆಟ್ಟದಾಗಿದೆ'' ಎಂದ ಶಿಷ್ಯ.
'ಪ್ರಥಮ ಸೂತ್ರ'ವನ್ನು ಗುರು ತಾಳ್ಮೆಯಿಂದ ಮತ್ತೆ ಮತ್ತೆ ಬರೆಯುತ್ತಲೇ ಹೋದ. ಶಿಷ್ಯನಿಗೆ ಒಂದೂ ಇಷ್ಟವಾಗಲಿಲ್ಲ. ಮತ್ತೆ ಬರೆದದ್ದನ್ನೂ ಚೆನ್ನಾಗಿಲ್ಲ ಎಂದೇ ಹೇಳಿದ. ಹೀಗೇ ಎಂಬತ್ತನಾಲ್ಕು ಪ್ರಥಮ ಸೂತ್ರಗಳ ಹಾಳೆಗಳು ಅಲ್ಲಿ ರಾಶಿಯಾಗಿ ಬಿದ್ದವು. ಶಿಷ್ಯನಿಗೆ ಮಾತ್ರ ಯಾವುದೂ ಒಪ್ಪಿಗೆಯಾಗಲಿಲ್ಲ.
ಶಿಷ್ಯ ಕೆಲವು ನಿಮಿಷ ಆ ಕೋಣೆಯಿಂದ ಹೊರ ಹೋಗಬೇಕಾಗಿ ಬಂತು. 'ಅವನ ತೀಕ್ಷ್ಣ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ' ಎಂದುಕೊಂಡ ಗುರು ನಿರಾಳವಾದ ಮನಸ್ಸಿನಿಂದ ಸರಸರನೆ "ಪ್ರಥಮ ಸೂತ್ರ" ಬರೆದ.
ಸ್ವಲ್ಪ ಸಮಯದ ಬಳಿಕ ಮರಳಿ ಬಂದ ಶಿಷ್ಯ ಅದನ್ನು ಕಂಡು "ಅದ್ಭುತ ಕಲಾಕೃತಿ" ಎಂದು ಉದ್ಗರಿಸಿದ.
(ಸಂಗ್ರಹ)












Click it and Unblock the Notifications