ಎಲ್ಲರೂ ಬಂದು ಹೋಗುವ ಜಾಗ ಅರಮನೆಯಲ್ಲ, ಪ್ರವಾಸಿಗೃಹ!
ಒಬ್ಬ ಝೆನ್ ಗುರು ತಡರಾತ್ರಿ ಒಬ್ಬ ರಾಜನ ಅರಮನೆಗೆ ಬಂದರು. ರಾಜ ತನ್ನ ಸಿಂಹಾಸನದ ಮೇಲೆ ಕುಳಿತಿದ್ದ. ಆ ಸ್ಥಳಕ್ಕೆ ಹೋಗಲು ಝೆನ್ ಗುರು ಪ್ರಯತ್ನಿಸಿದಾಗ ದ್ವಾರಪಾಲಕರು ಗುರುಗಳನ್ನು ಗೌರವದಿಂದಲೇ ತಡೆದರು. ರಾಜ ಝೆನ್ ಗುರುಗಳನ್ನು ಗುರುತಿಸಿ, ಅವರನ್ನು ತನ್ನ ಬಳಿ ಬಿಡಲು ಸೂಚಿಸಿದ.
'ಸ್ವಾಗತ, ಗುರುಗಳೇ. ನಿಮಗೆ ಏನು ಬೇಕು?' ರಾಜ ಕೇಳಿದ.
'ನಾನು ಇಂದು ರಾತ್ರಿ ನಿಮ್ಮ ಸಿಂಹಾಸನದ ಮೇಲೆ ನಿದ್ರಿಸಲು ಬಯಸುತ್ತೇನೆ' ಎಂದು ವಿಚಿತ್ರ ಬೇಡಿಕೆ ಇಟ್ಟರು ಝೆನ್ ಗುರು. ಈ ಬೇಡಿಕೆಯಿಂದ ರಾಜ ಒಂದು ಕ್ಷಣ ಗಲಿಬಿಲಿಗೊಂಡ. ಬಳಿಕ, 'ಇದು ಯಾವುದೇ ಪ್ರವಾಸಿ ಗೃಹವಲ್ಲ! ಇದು ನನ್ನ ಅರಮನೆ!' ಎಂದು ವ್ಯಂಗ್ಯವಾಗಿ ಹೇಳಿದ.

ಇದಕ್ಕೆ ಗುರುಗಳು ವಿಚಲಿತರಾಗಲಿಲ್ಲ. ಸಾವಧಾನವಾಗಿಯೇ ರಾಜನನ್ನು ಪ್ರಶ್ನಿಸಿದರು, 'ಇದು ನಿನ್ನ ಅರಮನೆಯೇ? ಹಾಗಾದರೆ ನಿನಗಿಂತ ಈ ಅರಮನೆಯನ್ನು ಮುಂಚೆ ಯಾರು ಹೊಂದಿದ್ದರು?'
ರಾಜನಿಗೆ ಮತ್ತೆ ಗಲಿಬಿಲಿ. 'ಏಕೆ ಈ ಪ್ರಶ್ನೆ? ನನಗಿಂತ ಮುಂಚೆ ಇದು ನನ್ನ ತಂದೆಯವರದಾಗಿತ್ತು. ಆದರೆ ಈಗ ಅವರು ಇಲ್ಲ. ಈಗ ಸಂಪೂರ್ಣ ನನ್ನದಾಗಿದೆ' ಎಂದ.
ಝೆನ್ ಗುರುಗಳು ಮತ್ತೊಂದು ಪ್ರಶ್ನೆ ಎಸೆದರು, 'ಹಾಗಾದರೆ ನಿಮ್ಮ ತಂದೆಗಿಂತ ಮೊದಲು ಯಾರು ಇಲ್ಲಿ ವಾಸಿಸುತ್ತಿದ್ದರು?'
ಆ ಪ್ರಶ್ನೆಗೂ ರಾಜ, 'ನನ್ನ ಅಜ್ಜ, ವಾಸ್ತವವಾಗಿ ಈಗ ಅವರು ಇಲ್ಲ' ಎಂದು ಉತ್ತರಿಸಿದ.
ಆಗ ಝೆನ್ ಗುರುಗಳು, 'ಜನರು ಕೆಲವೇ ಕೆಲವು ಸಮಯ ವಾಸಿಸುವ ಮತ್ತು ತಮ್ಮ ಕಾಲ ನಂತರ ಬಿಟ್ಟು ಹೋಗುವ ಈ ಕಟ್ಟಡ, ಪ್ರವಾಸಿಗೃಹವಲ್ಲದೆ ಮತ್ತೇನಾಗಬಲ್ಲದು?' ಎಂದು ಮಾರ್ಮಿಕವಾಗಿ ನುಡಿದು ನಗುತ್ತಾ ಅರಮನೆಯಿಂದ ತಮ್ಮ ದಾರಿ ಹಿಡಿದರು.
(ಸಂಗ್ರಹ)












Click it and Unblock the Notifications