ಶುಭಸಂಕಲ್ಪ 10 : ವರ್ತಮಾನದಲ್ಲಿ ಬದುಕುವ ಸುಖ
ಗತಕಾಲದಲ್ಲಿ ನಡೆದ ಘಟನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆಯೇ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು ನಿಯಂತ್ರಿಸಲೂ ಸಾಧ್ಯವಿಲ್ಲ. ಹಾಗಾಗಿ ವರ್ತಮಾನವೇ ಸತ್ಯ ಮತ್ತು ಸುಂದರ. ವರ್ತಮಾನದಲ್ಲಿ ಬದುಕುವ ಮನುಷ್ಯ ಸದಾ ಸಂತೃಪ್ತ ಮತ್ತು ಸುಖಿ. ನೋಡಿ, ಗತಕಾಲವನ್ನು ವೈಭವೀಕರಿಸಿದ ಕತೆಗಳು, ಚಲನಚಿತ್ರಗಳು ಅಥವಾ ಭವಿಷ್ಯದ ರಮ್ಯ ಕತೆಗಳು ತುಂಬಾ ಬೇಗ ನಮ್ಮನ್ನು ಆಕರ್ಷಿಸುತ್ತವೆ. ಏಕೆಂದರೆ ಅವು ನಮ್ಮ ಗಮನವನ್ನು ವರ್ತಮಾನದಿಂದ ಬೇರೆ ಕಡೆ ಸೆಳೆಯುತ್ತವೆ. ವರ್ತಮಾನದಲ್ಲಿ ಸ್ವಲ್ಪ ಕಷ್ಟ ಅಥವಾ ನಮಗಿಷ್ಟವಿಲ್ಲದ ವಿಷಯಗಳಿದ್ದರೆ, ಗತಕಾಲದಲ್ಲೋ, ಭವಿಷ್ಯದಲ್ಲೋ ಸುಖ ಹುಡುಕುವ ಪ್ರಯತ್ನ ಮಾಡುತ್ತೇವೆ.
ಮೊನ್ನೆ ಒಬ್ಬ ವಿದ್ಯಾರ್ಥಿಯೊಂದಿಗೆ ಮಾತನಾಡುತ್ತಿದ್ದೆ. ಸೊಮಾಲಿಯಾದಲ್ಲಿನ ಬಡತನ, ಯುದ್ಧ, ಮಧ್ಯಪ್ರಾಚ್ಯದ ರಾಜಕೀಯ ಹೀಗೆ ನಿರರ್ಗಳವಾಗಿ ಮಾತು ಸಾಗಿತ್ತು. ಅವನಿಗೆ ಒಂದು ವಾರದ ನಂತರದಲ್ಲಿದ್ದ ಪರೀಕ್ಷೆಯೊಂದನ್ನು ಬಿಟ್ಟು ಎಲ್ಲಾ ವಿಷಯಗಳು ಆಸಕ್ತಿಕರವೇ ಆಗಿತ್ತು. ಏಕೆಂದರೆ ವರ್ತಮಾನದಲ್ಲಿರುವ ಪರೀಕ್ಷೆ ಉಂಟು ಮಾಡಿದ ಒತ್ತಡ ಕೆಲಸ ಮಾಡುತ್ತಿದೆ ಮತ್ತು ಅವನನ್ನು ನಿರ್ದೇಶಿಸುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸಲಾಗದ ಮನಸ್ಸು ಬೇರೆ ವಿಷಯಗಳಲ್ಲಿ ಆಸಕ್ತವಾಗುತ್ತಿತ್ತು. ಒಮ್ಮೆ ಅವನ ಗಮನ ಪರೀಕ್ಷೆ ಮತ್ತು ಅದರ ಸಿದ್ಧತೆಯ ಮೇಲೆ ಕೇಂದ್ರೀಕೃತವಾದ ಮೇಲೆ ಈ ವಿಷಯದ ಚಂಚಲತೆ ತಾನಾಗಿಯೇ ಕಮ್ಮಿಯಾಯಿತು.

ಇನ್ನೊಂದು ವರ್ಗದ ಜನ ಅದಕ್ಕೆ ವಿರುದ್ಧ. ವರ್ತಮಾನದಲ್ಲಿನ ಸುಖಕ್ಕಿಂತ ಭವಿಷ್ಯದ ಬಗ್ಗೆ ಸದಾ ಅನವಶ್ಯಕ ಭಯ, ಗೊಂದಲ ಅಥವಾ ಗತಕಾಲದ ಕಹಿ ನೆನಪು, ಘಟನೆ ನೆನೆದು ಒತ್ತಡ ಅನುಭವಿಸುತ್ತಿರುತ್ತಾರೆ. ನನ್ನ ಸ್ನೇಹಿತನೊಬ್ಬ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಸಂಬಳ, ಹೆಂಡತಿ ಮತ್ತು ಮುದ್ದಾದ ಮಗು. ಹೇಳಿಕೊಳ್ಳುವಂತ ಯಾವುದೇ ಕಷ್ಟಗಳಿಲ್ಲವಾದರೂ, ಅವನಿಗೆ ಭವಿಷ್ಯದ ಬಗ್ಗೆ ಅನವಶ್ಯಕ ಭಯ. ಜಾಗತಿಕ ಆರ್ಥಿಕ ಕಾರಣಗಳಿಂದ ಮಾರುಕಟ್ಟೆ ಕುಸಿತವಾದರೆ? ಕೆಲಸ ಹೋದರೆ? ಎಂಬ ಭಯ. ಇರುವ ಸಣ್ಣಪುಟ್ಟ ಸಾಲದ ಭಯ. ಕಳೆದುಕೊಳ್ಳುವ ಭಯ. ಆ ಭಯದಿಂದಾಗಿ ನಿತ್ಯದ ಸದಾ ಮಾನಸಿಕ ಒತ್ತಡ. ಅದರಿಂದ ಆರೋಗ್ಯ ಸಮಸ್ಯೆ. ಮನೆಯಲ್ಲಿ, ಆಫೀಸಿನಲ್ಲಿ ಯಾವಾಗಲೂ ಆತಂಕದಲ್ಲೇ ವರ್ತಿಸುತ್ತಾನೆ. ವರ್ತಮಾನದಲ್ಲಿ ಸುಖವಿಲ್ಲ.
ಒಟ್ಟಿನಲ್ಲಿ ವರ್ತಮಾನದಿಂದ ವಿಮುಖನಾದ, ಸ್ಪಂದಿಸದ ಮನುಷ್ಯ ಸುಖಿಯಲ್ಲ. ವರ್ತಮಾನದಿಂದ ದೂರವಾದ ಮನುಷ್ಯ ಸಹಜವಾಗಿರಲಾರ, ಸಂತೋಷದಿಂದ ಬದುಕಲಾರ. ಒಂದು ಸುಂದರ ಸಂಜೆ, ಹಕ್ಕಿಯ ಹಾಡು, ಸೂರ್ಯೋದಯ, ಬೆಳದಿಂಗಳು, ಸುಮುದ್ರ ತೀರದ ಒಂದು ಪುಟ್ಟ ವಾಕ್, ಸುಂದರ ಪ್ರಕೃತಿ, ಮಕ್ಕಳೊಡನೆ ಆಟ... ಊಹುಂ ಯಾವುದನ್ನೂ ಸವಿಯಲಾರ, ಸಂತೋಷಿಸಲಾರ. ಗತಕಾಲದಲ್ಲಿ, ಭವಿಷ್ಯದಲ್ಲಿ ಕಳೆದುಹೋದ ಮನಸ್ಸು ವರ್ತಮಾನವನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನೇ ಕಳೆದುಕೊಂಡುಬಿಡುತ್ತದೆ. ಇದೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವಾಗ, 'ವರ್ತಮಾನದಲ್ಲಿ ಬದುಕುವ ಸುಖ'ದ ಬಗ್ಗೆ ನಾನು ಕೇಳಿದ ಕತೆಯೊಂದು ನೆನಪಾಗುತ್ತಿದೆ.
***
ಗುರುಗಳ ಖ್ಯಾತಿ ಹಲವು ದೇಶದಲ್ಲಿ ಹಬ್ಬಿತ್ತು. ಅವರನ್ನು ಹುಡುಕಿಕೊಂಡು ಅನೇಕರು ತಮ್ಮ ಸಮಸ್ಯೆಗಳೊಂದಿಗೆ ಕಾಣುತ್ತಿದ್ದರು ಮತ್ತು ಪರಿಹಾರ ಪಡೆಯುತ್ತಿದ್ದರು. ಹಾಗೆ ಹುಡುಕಿಕೊಂಡು ಬಂದವರಲ್ಲಿ ಈ ವ್ಯಾಪಾರಿಯೂ ಇದ್ದ. ಕೆಲವು ದಿನಗಳ ನಂತರ ಗುರುಗಳ ಏಕಾಂತ ದರ್ಶನ ದೊರಕಿತು. ತನ್ನ ಕಷ್ಟಕಾರ್ಪಣ್ಯಗಳನ್ನೆಲ್ಲಾ ಗುರುಗಳ ಮುಂದೆ ಅರುಹಿದ. ಅವನ ಸಮಸ್ಯೆಗಳೆಲ್ಲ ಭೂತ-ಭವಿಷ್ಯತ್ತಿಗೆ ಸಂಬಂಧಿಸಿತ್ತು. ಹಾಗೆ ನೋಡಿದರೆ ಅವನಿಗೆ ವಾಸ್ತವದಲ್ಲಿ ಅಂತ ಕಷ್ಟವೇನೂ ಇರಲಿಲ್ಲ. ಭವಿಷ್ಯದಲ್ಲಿ ವ್ಯಾಪಾರದಲ್ಲಿ ನಷ್ಟ ಹೊಂದಿದಂತೆ ಕಲ್ಪಿಸಿಕೊಂಡು ಭಯ ಪಡುತಿದ್ದ. ಯಾವಾಗಲು ತನ್ನ ಹಳೆಯ ಕೆಟ್ಟ ದಿನಗಳನ್ನು ನೆನೆದು ಕಂಗಾಲಾಗುತಿದ್ದ. ಅನವಶ್ಯಕ ಭವಿಷ್ಯದ ಭಯ, ಚಿಂತೆ ಮತ್ತು ಗತಕಾಲದ ಕಹಿ ನೆನಪುಗಳಿಂದ ಅವನು ಸುಸ್ತಾಗಿದ್ದ. ಅದರಂತೆಯೇ ಅವನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೂಡ ಕುಸಿದಿತ್ತು.
ವ್ಯಾಪಾರಿಯ ಸಮಸ್ಯೆಗಳನ್ನು ಸಹನೆ, ಪ್ರೀತಿಯಿಂದ ಕೇಳಿಸಿಕೊಂಡ ಗುರುಗಳು, ತಕ್ಷಣ ಏನೂ ಪರಿಹಾರ ಸೂಚಿಸದೆ ಮರುದಿನ ಮುಂಜಾನೆ ಅವರ ಜೊತೆ ನದಿ ತೀರಕ್ಕೆ ಬರಲು ಹೇಳಿದರು. ಸೂರ್ಯ ಹುಟ್ಟುವ ಮುಂಚೆ ಗುರುಗಳ ಜೊತೆ ನದಿ ತೀರಕ್ಕೆ ಹೊರಟ. ಪ್ರಶಾಂತ ವಾತಾವರಣ, ನದಿಯ ಜುಳು ಜುಳು ನಿನಾದ, ಹಕ್ಕಿಗಳ ಇಂಪಾದ ಕಲರವ, ಹಸಿರುಟ್ಟು ನಗುತಿರುವ ವನಮಾಲೆ. ಮುಂಜಾನೆ ಸೂರ್ಯನ ಹೊನ್ನ ಕಿರಣದಲ್ಲಿ ಪ್ರಕೃತಿಗೆ ಒಂದು ದಿವ್ಯವಾದ ಅಲೌಕಿಕ ಸೌಂದರ್ಯ ಪ್ರಾಪ್ತಿಯಾಗಿತ್ತು. ಒಟ್ಟಿನಲ್ಲಿ ಅಲ್ಲಿ ಸ್ವರ್ಗವೇ ಸೃಷ್ಟಿಯಾಗಿತ್ತು.
ಗುರುಗಳ ಜೊತೆ ನಡೆಯುತ್ತಿದ್ದ ವ್ಯಾಪಾರಿ ತನ್ನ ಕಷ್ಟಕಾರ್ಪಣ್ಯಗಳನ್ನೆಲ್ಲಾ ನೆನೆಯುತ್ತಾ ಮಂಕಾಗಿದ್ದ. ಗುರುಗಳು ಯಾವುದೋ ದಿವ್ಯ ಮಂತ್ರ ಬೋಧಿಸಬಹುದು ಅಥವಾ ತಮ್ಮ ದಿವ್ಯ ಶಕ್ತಿಯಿಂದ ಯಾವುದಾದರೂ ವರ ಕೊಡಬಹುದು ಎಂದು ಕಾಯುತ್ತಾ ಅವರ ಜೊತೆ ನದಿತೀರದಲ್ಲಿ ಓಡಾಡಿದ. ಕೊಂಚ ಧ್ಯಾನದ ನಂತರ ತಮ್ಮ ಪೂಜೆಗೆ ಬೇಕಾದ ಹೂವನ್ನು ಆಯ್ದುಕೊಂಡು ಪುನಃ ಆಶ್ರಮಕ್ಕೆ ಮರಳಿದರು. ಯಾವ ಮಾತುಕತೆಯೂ ಸಂಭವಿಸಲಿಲ್ಲ. ಕೊನೆಗೆ ಬೇಸತ್ತ ವ್ಯಾಪಾರಿ ತನ್ನ ನಿರಾಸೆಯನ್ನು ಗುರುಗಳ ಹತ್ತಿರ ತೋಡಿಕೊಂಡ.
ಆಗ ಸಮಯ ಪಕ್ವವಾಗಿದೆ ಎಂದು ಅರಿತ ಗುರುಗಳು, 'ಮಿತ್ರಾ, ಇಂದು ಮುಂಜಾನೆ ನಾವು ನದಿತೀರಕ್ಕೆ ಹೋದಾಗ ಏನು ಗಮನಿಸಿದೆ?' ಎಂದು ಕೇಳಿದರು. 'ಕ್ಷಮಿಸಿ, ನಾನು ನನ್ನ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದೆ, ನನ್ನ ಆಲೋಚನೆಗಳಲ್ಲಿ ಕಳೆದುಹೋಗಿದ್ದೆ. ಏನಾದರೂ ವಿಶೇಷ ಸಂಭವಿಸಿತೆ?' ಎಂದು ಕೇಳಿದ. ಆ ಗುರುಗಳು ಕರುಣೆಯಿಂದ 'ಮಿತ್ರಾ, ನಾವು ಇಂದು ಮುಂಜಾನೆ ಹೋಗಿದ್ದು ಜಗತ್ತಿನ ಅತ್ಯಂತ ರಮಣೀಯ ಸ್ಥಳಗಳಲ್ಲೊಂದು. ದೇಶ ವಿದೇಶದ ಪ್ರವಾಸಿಗಳು ಶಾಂತಿ ಹುಡುಕಿಕೊಂಡು ಈ ಪ್ರಕೃತಿಯ ಸನ್ನಿಧಾನಕ್ಕೆ ಬರುತ್ತಾರೆ. ಕೆಲಹೊತ್ತು ತಮ್ಮ ಚಿಂತೆಗಳನ್ನು ಮರೆಯುತ್ತಾರೆ, ಆದರೆ ನೀನು ಮಾತ್ರ ಎಲ್ಲೇ ಹೋದರೂ ನಿನ್ನ ಚಿಂತೆಯ ಕಂತೆ ಹೊತ್ತು ತಿರುಗುತ್ತಿರುವೆ. ನಿನ್ನ ಮುಂದೆ ಆ ದೇವರೇ ಪ್ರತ್ಯಕ್ಷನಾದರೂ ಗುರುತಿಸದ ಸ್ಥಿತಿ ತಲುಪಿರುವೆ. ಮೈಮರೆಸುವ ಸುಂದರ ಪ್ರಕೃತಿಯ ನಡುವೆಯಿದ್ದೂ ನೀನು ನಿನ್ನ ಕಲ್ಪನೆಯ ಕಷ್ಟಗಳ ಬಗ್ಗೆ ಚಿಂತಿಸುತ್ತಿರುವೆ ಅಂದರೆ ಕಷ್ಟಗಳು ನಿನ್ನ ತಲೆಯಲ್ಲಿದೆ ಹೊರತು ವಾಸ್ತವದಲಿಲ್ಲ. ಇನ್ನಾದರೂ ವರ್ತಮಾನದಲ್ಲಿ ಬದುಕುವ ಸುಖ ಕಂಡುಕೋ!' ಎಂದರು. ಗುರುಗಳ ಮಾತು ಕೇಳಿ ವ್ಯಾಪಾರಿಗೆ ಅಯೋಮಯವಾಯಿತು.
ವ್ಯಾಪಾರಿ ಮರುದಿನ ಮತ್ತೆ ಒಂಟಿಯಾಗಿ ನದಿ ತೀರಕ್ಕೆ ಹೋಗಿ ಬಂದ. ಸುಂದರ ಪ್ರಕೃತಿಯನ್ನು ಸವಿದ, ಸವಿಯುತ್ತಾ ಧ್ಯಾನಸ್ಥ ಸ್ಥಿತಿ ಅನುಭವಿಸಿದ. ನಂತರ ಗುರುಗಳು ಹೇಳಿದ ಮಾತಿನ ಆಂತರ್ಯ ಅರಿತ. ನಂತರದ ದಿನಗಳಲ್ಲಿ ಅವನ ಕಷ್ಟಕಾರ್ಪಣ್ಯಗಳು ಪರಿಹಾರಗೊಂಡವು. ವ್ಯಾಪಾರಿಯ ವಸ್ತುಸ್ಥಿತಿಯಲ್ಲಿ ಅಂತಹ ಬದಲಾವಣೆಯಾಗದಿದ್ದರೂ, ಅವನು ಬದಲಾಗಿದ್ದ. ಹಾಗಾಗಿ ಅವನು ಜೀವನದಲ್ಲಿ ಸಂತೋಷ ಕಂಡುಕೊಂಡ.
***
ಭೂತ, ಭವಿಷ್ಯತ್ತು ಮುಖ್ಯವೆ. ಆದರೆ ಅವು ನಮ್ಮ ವರ್ತಮಾನದ ಸುಖ ಸಂತೋಷವನ್ನು ಕಿತ್ತುಕೊಳ್ಳುವ ಮಟ್ಟಿಗೆ ನಮ್ಮನ್ನು ನಿಯಂತ್ರಿಸಬಾರದು ಮತ್ತು ನಿರ್ದೇಶಿಸಬಾರದು ಅಷ್ಟೆ. ವರ್ತಮಾನದಿಂದ ದೂರವಾದ ಮನುಷ್ಯ ಸಹಜವಾಗಿರಲಾರ, ಸಂತೋಷದಿಂದ ಬದುಕಲಾರ. ಅದಕ್ಕೆ ಇಂಗ್ಲಿಷ್-ನಲ್ಲಿ ಒಂದು ಜಾಣ್ನುಡಿಯಿದೆ 'Tomorrow is a mystery, yesterday is a history but today is a gift. That is why it is called the present'.
ಬನ್ನಿ ನಮ್ಮನ್ನು ವರ್ತಮಾನದಲ್ಲಿ ತೊಡಗಿಸಿಕೊಂಡು, ಭೂತ ಭವಿಷ್ಯತ್ತಿನ ಚಿಂತೆಯಿಂದ ಬಿಡುಗಡೆ ಹೊಂದುವ 'ಶುಭಸಂಕಲ್ಪ' ಮಾಡೋಣ! [ಲೇಖಕರ ಈಮೇಲ್ : [email protected]]
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications