ಶುಭಸಂಕಲ್ಪ : ಸತತ ಪ್ರಯತ್ನವೇ ಗೆಲುವಿಗೆ ಸೋಪಾನ
ನಮ್ಮ ಜೀವನದಲ್ಲಿ ಪ್ರತಿಯೊಂದು ಸೋಲು ಒಂದು ಅನುಮಾನ, ಕೆಲವೊಮ್ಮೆ ಅವಮಾನ ಹುಟ್ಟುಹಾಕುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅನುಮಾನ ಬಂದರೆ ಅಲ್ಲಿಗೆ ಮುಗಿಯಿತು. ಬದುಕನ್ನು ತಪ್ಪಿಸಿಕೊಂಡು ಓಡಲು ಶುರುಮಾಡುತ್ತೇವೆ. ಸಣ್ಣಗೆ ನೆಪಗಳು ಹುಟ್ಟಿಕೊಳ್ಳುತ್ತವೆ. ಸ್ವಾನುಕಂಪನದಲ್ಲಿ ಮುಳಗಿಹೋಗುತ್ತೇವೆ. ಆಟದಲ್ಲಾಗಲಿ, ವೃತ್ತಿಯಲ್ಲಾಗಲಿ, ಖಾಸಗಿ ಜೀವನದಲ್ಲೇ ಆಗಲಿ, ಆಗುವ ಒಂದು ಸೋಲು ನೇರವಾಗಿ ನಮ್ಮ ಆತ್ಮಸ್ಥೈರ್ಯವನ್ನೇ ಹಣಿಯುತ್ತದೆ. ಒಂದು ಚಿಕ್ಕ ಸೋಲನ್ನೂ ಅರಗಿಸಿಕೊಳ್ಳದೆ, ಧೈರ್ಯವಾಗಿ ಎದುರಿಸದೆ ಹಾಗೇ ಕೃಶಿಸಿ ಹೋದವರನ್ನೂ ನೋಡಿದ್ದೇನೆ. ನೀವು ಸೋತಾಗ ನಿಜವಾಗಿ ಸೋತಂತೆ ಅಲ್ಲ. ಪ್ರಯತ್ನವನ್ನು ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ನಿಜವಾಗಿ ನೀವು ಸೋತಂತೆ. ಈ ಸಾಲುಗಳನ್ನು ಬರೆಯುತ್ತಿರುವಾಗ ನನಗೆ ಸ್ಕಾಟ್‌ಲ್ಯಾಂಡಿನ ದೊರೆ ಬ್ರೂಸ್ ನೆನಪಾಗುತ್ತಾನೆ.

ಮೂರು ತಿಂಗಳು ಕಳೆದುಹೋಯಿತು. ಏನೇ ಮಾಡಿದರೂ ಮುರುಟಿಹೋಗಿದ್ದ ಆತ್ಮಸ್ಥೈರ್ಯ ಚಿಗುರವಲ್ಲದು! ಹೊಸ ಹುಮ್ಮಸ್ಸು ಮೂಡವಲ್ಲದು. ಯಾವುದೇ ಹೊಸ ದಾರಿ ತೋಚುತ್ತಿಲ್ಲ. ಹೀಗೆ ತನ್ನ ಜೀವನವೆಲ್ಲಾ ಗುಹೆಯಲ್ಲೇ ಅಡಗಿ ಹೇಡಿಯಂತೆ ಕಳೆಯಬೇಕೇನೋ? ಎಂದು ಚಿಂತಿಸುತ್ತಿದ್ದ. ಬೇರೆ ದಾರಿ ತೋಚಲಿಲ್ಲ. ಹೀಗೆ ಯೋಚಿಸುತ್ತ ಜಡನಾಗಿ ಒಂದು ಮೂಲೆಯಲ್ಲಿ ಕೂತಿದ್ದ. ಕಳೆದ ಮೂರು ತಿಂಗಳಲ್ಲಿ ಗುಹೆಯ ಅಂಗುಲಂಗುಲವೂ ಚಿರಪರಿಚಿತವಾಗಿತ್ತು. ಸಣ್ಣ ಕದಲಿಕೆಯೂ ಅವನ ಗಮನಕ್ಕೆ ಬರುತ್ತಿತ್ತು. ಹಾಗೆ ನಿಸ್ತೇಜನನಾಗಿ ಶೂನ್ಯದಲ್ಲಿ ದೃಷ್ಟಿ ನೆಟ್ಟು ಕೂತಿದ್ದವನಿಗೆ ಮೂಲೆಯಲ್ಲಿ ಜೇಡವೊಂದು ಕಣ್ಣಿಗೆ ಬಿತ್ತು. ಜೇಡವೊಂದು ಬಲೆ ಹೆಣೆಯಲು ಮೆಲ್ಲಗೆ ಮೇಲೆ ಹತ್ತುತ್ತಿತ್ತು. ದಬಕ್ಕನೆ ಕೆಳಗೆ ಬಿತ್ತು. ದೊರೆ ಕುತೂಹಲದಿಂದ ಜೇಡ ಮುಂದೇನು ಮಾಡುವುದು ಎಂದು ನೋಡತೊಡಗಿದ. ಬಿದ್ದಿದ್ದು ನೆನಪೇ ಇಲ್ಲವೇನೋ ಎಂಬಂತೆ ಮತ್ತೆ ಹತ್ತತೊಡಗಿತು. ಆಗ ದೊರೆ ನಕ್ಕ. ವಿಷಾದದಲ್ಲಿ, ಕೊಂಚ ವಿನೋದದಲ್ಲಿ ನಕ್ಕ, 'ಮೂರ್ಖ ಕೀಟವೇ... ಗುಹೆಯ ಬಂಡೆ ಜಾರುತಿದೆ... ಸುತ್ತಲಿನ ವಾತಾವರಣ ಕೂಡ ಪ್ರತಿಕೂಲವಿದೆ. ಆದರೂ ಮತ್ತೆ ಮೇಲೆ ಹತ್ತುವ ನಿನ್ನ ಹಠ ನೋಡು... ಹ್ಹಹ್ಹ...' ದೊರೆ ಬ್ರೂಸ್ ರಾಜಗಾಂಭೀರ್ಯ ಮರೆತು ಸ್ವಲ್ಪ ಗಟ್ಟಿಯಾಗಿಯೇ ನಕ್ಕ.
ಅವನು ನಿರೀಕ್ಷಿಸಿದಂತೆ ಜೇಡ ಮತ್ತೆ ಕೆಳಗೆ ಬಿತ್ತು. ಮತ್ತೆ ಸೋಲನ್ನು ಮರೆತು ಮೇಲೆ ಹತ್ತಲು ಶುರುಮಾಡಿತು. ಮತ್ತೆ ಬಿತ್ತು... ಮತ್ತೆ ಪ್ರಯತ್ನ ಶುರು. ಹೀಗೆ ಅನೇಕ ಸಾರಿ ಅದು ಬೀಳುತ್ತಿದ್ದರೆ, ದೊರೆ ಬ್ರೂಸ್ ವ್ಯಂಗ್ಯದಲ್ಲಿ ನಗುತ್ತಲೇ ನೋಡುತಿದ್ದ. ಆದರೆ ಜೇಡ ಮಾತ್ರ ತನ್ನ ಪಾಡಿಗೆ ತನ್ನ ಪ್ರಯತ್ನ ಮುಂದುವರೆಸಿತ್ತು. ಕೆಲಸಮಯದ ನಂತರ ದೊರೆ ಗಂಭೀರನಾದ. ಅದರ ಅವಿರತ ಪ್ರಯತ್ನ, ಛಲ ಕಂಡು ದೊರೆ ಬ್ರೂಸ್ ದಂಗಾದ. ಜೇಡ ಒಂದೊಂದು ಸಾರಿ ಕೆಳಗೆ ಬಿದ್ದಿದ್ದು ಅವನ ರಣರಂಗದ ಸೋಲನ್ನು ನೆನಪಿಸುತ್ತಿತ್ತು. ಕೊನೆಗೆ ಅನೇಕ ಪ್ರಯತ್ನಗಳ ನಂತರ ಜೇಡ ಮೇಲೆ ಹತ್ತಿ ಯಶಸ್ವಿಯಾಯಿತು.
ದೊರೆ ಕದಲಿ ಹೋದ! : ಮೂರು ತಿಂಗಳ ಜಡತ್ವವನ್ನು ಕೊಡವಿ ಎದ್ದು ನಿಂತ ದೊರೆ. 'ಏನಿದು... ಆ ಕೀಟಕ್ಕಿರುವ ಛಲ, ಪ್ರಯತ್ನಶೀಲತೆ ನನ್ನಲ್ಲಿ ಇಲ್ಲವಾಯಿತೆ?' ಸತ್ತರೆ ವೀರ ಸ್ವರ್ಗ. ಆದರೆ ನನ್ನ ಪ್ರಯತ್ನವನ್ನು ನಿಲ್ಲಿಸುವುದಿಲ್ಲ ಎಂದು ನಿರ್ಧರಿಸಿದ. ಹಳ್ಳಿ ಹಳ್ಳಿ ತಿರುಗಿದ. ಮತ್ತೆ ಸೈನಿಕರನ್ನು ಜೋಡಿಸಿದ. ಅವರ ಹತ್ತಕ್ಕೆ-ಒಬ್ಬ ಸೈನಿಕನಾಗಲಿ, ಜಯ ನಮ್ಮದೇ ಎಂದು ಹುರಿದುಂಬಿಸಿದ. ಅವನಲ್ಲಿ ಹೊಸ ಆವೇಶ, ಅವನ ಆಲೋಚನೆಯಲ್ಲಿ ಹೊಸ ಆವೇಗ... 'ಒಂದು ಚಿಕ್ಕ ಕೀಟಕ್ಕೆ ಇರುವ ಛಲ ನಮಗೇಕಿಲ್ಲ?' ಎಂಬ ಹುಮ್ಮಸ್ಸಿನ ನಿರಂತರ ಸೆಲೆ. ಆ ಪುಟ್ಟ ಜೇಡದಲ್ಲಿ ಅವನಿಗೆ ಹೊಸ ಗುರು ಕಾಣಿಸಿಕೊಂಡಿದ್ದ. 'ಅವಿರತ ಪ್ರಯತ್ನ' ಅವನ ಹೊಸ ಮಂತ್ರವಾಯಿತು. ಗೆಲುವು ಸಿಗುವವರೆಗೆ ನಿರಂತರ ಪ್ರಯತ್ನ ಅವನ ಸಂಕಲ್ಪವಾಯಿತು.
ನಂತರದ ದಿನಗಳಲ್ಲಿ ದೊರೆ ಬ್ರೂಸ್ ಇಂಗ್ಲಿಷರನ್ನು ಯಶಸ್ವಿಯಾಗಿ ಹೊಡೆದೋಡಿಸಿ ಮತ್ತೆ ತನ್ನ ರಾಜ್ಯ ಮರಳಿ ಪಡೆದ. ಆದರೆ ಜೇಡದಿಂದ ಕಲಿತ ಪಾಠ ಅವನು ಕೊನೆವರೆಗೂ ಮರೆಯಲಿಲ್ಲ. ಇಂದಿಗೂ ಸ್ಕಾಟ್‌ಲ್ಯಾಂಡಿನ ಅನೇಕ ಜಾನಪದಗಳಲ್ಲಿ, ಕವಿತೆ, ಕಾವ್ಯದಲ್ಲಿ ಈ ಸ್ಪೂರ್ತಿದಾಯಕ ಪ್ರಕರಣದ ನಿರೂಪಣೆಯಿದೆ.
***
ಈಗ ಹೇಳಿ ನಾವು ಸೋಲುವುದು ಯಾವಾಗ? ಬದುಕು ನಮ್ಮನ್ನು ಸೋಲಿಸಿದಾಗಲೇ? ಅಥವಾ ನಮ್ಮ ಪ್ರಯತ್ನ ನಿಂತಾಗಲೇ? ಬನ್ನಿ! ನಮಗೆ ಗೆಲುವು ಸಿಗುವವರೆಗೆ ನಿರಂತರವಾಗಿ ಪ್ರಯತ್ನಿಸುವ 'ಶುಭಸಂಕಲ್ಪ' ಮಾಡೋಣ! [ಲೇಖಕರ ಈಮೇಲ್ : [email protected]]
ಶುಭಸಂಕಲ್ಪ - ನೋವ್ವೇ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!











Click it and Unblock the Notifications