• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪ ತೋರಿದೆಡೆಗೆ... (ಭಾಗ 2)

By * ನವೀನ ಭಟ್ 'ಗಂಗೋತ್ರಿ', ಶೃಂಗೇರಿ
|

(ಕಥೆ ಮುಂದುವರಿದಿದೆ...)

ತೀರಾ ಹೋಗದೇ ಇರಲಾಗದಷ್ಟು ಹತ್ತಿರದ ಸಂಬಂಧಿಕರ ಮನೆಯ ಮಂಗಲಕಾರ್ಯಗಳಿಗೆ ಹೋದಾಗೆಲ್ಲ, ಅತ್ತಿಂದಿತ್ತ ಹಾಯುವ ಹದಿನೆಂಟರಿಂದಿಪ್ಪತ್ತೆರಡು ವಯಸ್ಸಿನ ತರುಣಿಯರ ಹೆಸರು, ಮನೆ, ಗೋತ್ರ ನಕ್ಷತ್ರಗಳನ್ನೆಲ್ಲ ಹೇಗೆಹೇಗೋ ಸಂಗ್ರಹಿಸುವುದು ಜಾನಕಮ್ಮನಿಗೆ ಅಭ್ಯಾಸವಾಗಿಹೋಗಿತ್ತು. ಊಟಕ್ಕೆ ಕುಳಿತಾಗ ಉಪ್ಪನ್ನೋ, ಉಪ್ಪಿನ ಕಾಯಿಯನ್ನೋ ಬಡಿಸಲು ಬಂದಿರುತ್ತಿದ್ದ ಆ ಹುಡುಗಿಯರಲ್ಲಿಯೇ ಖುದ್ದಾಗಿ ವಿಚಾರಿಸಿದ್ದು ಸಹ ನಡೆದಿತ್ತು. ಒಟ್ಟಾರೆ, ಮಗ ಕೇದಾರನಿಗೆ ಮದುವೆ ಮಾಡುವುದಕ್ಕೆ ಹೆಣ್ಣು ಸಿಗದ ದಾರಿದ್ರ್ಯಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಜಾನಕಮ್ಮನ ಲವಲವಿಕೆಯನ್ನು ತಿಂದುಹಾಕುವ ತಾಕತ್ತಿತ್ತೆಂದು ಕಾಣುತ್ತದೆ. 45ಕ್ಕೆ ಮುಟ್ಟು ನಿಂತ ಬಳಿಕ ಅತ್ತ ಪೂರ್ತಿಯಾಗಿ ಹೆಂಗಸರ ಗುಂಪಿನೊಂದಿಗೆ ಬೆರೆತುಬಿಡುವುದೂ ಒಗ್ಗುತ್ತಿರಲಿಲ್ಲ. ಒಟ್ಟಾರೆಯಾಗಿ ಮಗನಿಗೊಬ್ಬಳು ಮಡದಿ ಬೇಕು, ತನ್ನ ಹೆಣ್ತನಕ್ಕೊಂದು ಹೆಣ್ಮನಸು ಬೇಕೆಂಬುದು ಜಾನಕಮ್ಮನ ಸರ್ವಪ್ರಥಮ ಇಚ್ಛೆಯಾಗಿಹೋಯ್ತು. ಮನೆಯೆದುರಿನ ಸಾಧಾರಣ ಮಣ್ಣುರಸ್ತೆಯಲ್ಲಿ ಸಂಜೆಯ ಹೊತ್ತಿಗೆ ದನಕರುಗಳು ಗುಂಪಾಗಿ ಹಾದುಹೋಗುವ ಕ್ಷಣಗಳಲ್ಲಿ, ಮನೆಯ ಜಗುಲಿಯ ಮೇಲೆ ತಲೆಗೂದಲು ಬಾಚಿಕೊಳ್ಳುತ್ತಿರುವಾಗ, ಬೆಳಿಗ್ಗೆಯ ಹೊತ್ತಿನ ದೋಸೆ ಮಾಡುವಾಗ ಕಾವಲಿಯ ಮೇಲೆ ದೋಸೆ ಬೇಯುವಷ್ಟು ಹೊತ್ತಿನಲ್ಲಿ, ಒಲೆ ಮುಂದೆ ಕುಳಿತಿರುವಾಗ, ಹಿತ್ತಲಿನ ಗಿಡಗಳಿಗೆ ನೀರೆತ್ತಿ ಹಾಕುವಾಗಿನ ವಿಚಾರಗಳಲ್ಲಿ ಅವರ ಕೋರಿಕೆಯೆಲ್ಲ ಒಂದೇ ಕೇದಾರನಿಗೆ ಮದುವೆ ಮಾಡಬೇಕು. ಅದಕ್ಕೆ ಹೆಣ್ಣು ಸಿಗಬೇಕು. ಹೆಣ್ಣು ಸಿಗುತ್ತಿಲ್ಲವೆಂಬ ಖೇದದ ಮಧ್ಯೆ ಯಾರ್‍ಯಾರಿಗೋ, ಎಂಥೆಂಥವರಿಗೋ ಹೆಣ್ಣು ಸಿಕ್ಕು, ಮದುವೆಯಾಗಿ, ಸುಖವಾಗಿದ್ದಾರೆ ಎನ್ನುವಲ್ಲಿ ಸಣ್ಣಗೆ ಹೊಟ್ಟೆಯುರಿಯೂ ಇದ್ದಿರಬಹುದು ಜಾನಕಮ್ಮನಿಗೆ.

ಎಲ್ಲಾ ಬಿಟ್ಟು ಆ ನರಪೇತಲ ಗಿರಿಗೆ, ಕೇದಾರನಿಗಿಂತ ಎರಡು ವರ್ಷಕ್ಕೆ ಸಣ್ಣವನಿಗೆ ಮೊನ್ನೆ ಮದುವೆಯಾಯ್ತಲ್ಲ ... ಕೇದಾರನಲ್ಲಿ ಕಡಿಮೆಯಿರುವುದಾದರೂ ಏನು? ಇಂಥ ಪ್ರಶ್ನೆಯೆದ್ದಾಗೆಲ್ಲ ಕೇದಾರ ತನ್ನ ಮಗುವೆಂಬ ಮುದ್ದು, ಅವನೆಡೆಗಿನ ಕರುಣೆಯಾಗಿ ಬದಲಾಗಿ, ಗಿರಿಯ ವಿಷಯದಲ್ಲಿನ ಈರ್ಷ್ಯೆಯೇ ಅವರ ಕಂಗಳಲ್ಲಿ ಅವನನ್ನು ಸಲ್ಲದ ಅಪರಾಧಗೈದ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತಿರುವುದು ಅರಿವಿಗಿದ್ದೂ ಇಲ್ಲದಂಥ ಸಂಗತಿ. ಈ ತರ್ಕಕ್ಕೆ ತಳಬುಡವಿಲ್ಲ - ಖರೆ. ಆದರೆ ಮನಸೆಂಬುದು ತರ್ಕವನ್ನು ಕೇಳುವುದಿಲ್ಲವಲ್ಲ! ಇಂಥ ಕೆಲವು ಪಕ್ಕಾ ಖಾಸಗಿ ಸಂಗತಿಗಳನ್ನು ಮತ್ತೆಲ್ಲಿಯೂ ಹೇಳಲಾಗದೆ ಜಾನಕಮ್ಮ ಅನುಭವಿಸುವ ವಿಚಿತ್ರ ತಳಮಳಗಳು ಅವರಿಗೆ ಮಾತ್ರ ಗೊತ್ತು.

ಒಮ್ಮೊಮ್ಮೆಯಂತೂ, ತಾನೇ ಪ್ರಾಯದ ಹೆಣ್ಣಿನ ಸ್ಥಾನದಲ್ಲಿ ನಿಂತುಕೊಂಡು, ತಾನು ಮದುವೆಯಾಗುವುದಾದರೆ ಕೇದಾರನಂಥ ಒಬ್ಬ ಗಂಡಸನ್ನು ಮದುವೆಯಾಗಿರುತ್ತಿದ್ದೆನಾ ಇಲ್ಲವಾ ಎಂದೆಲ್ಲ ವಿಚಾರ ಮಾಡಿ, ಪ್ರಾಮಾಣಿಕ, ಅಪ್ರಾಮಾಣಿಕ ಅನಿಸಿಕೆಗಳನ್ನೆಲ್ಲ ಹಾದು ಬಂದು, ಮತ್ತೆ ಕೊನೆಯಲ್ಲಿ ತಾಯ ಸಹಜ ಮಮತೆಯಿಂದಲೋ ಎಂಬಂತೆ ಕೇದಾರನ ವಿಷಯದಲ್ಲಿ ಅಗಾಧ ಮೆಚ್ಚುಗೆಯೇ ಹಿರಿದಾಗಿ ನಿಲ್ಲುತ್ತಿತ್ತು. ಅಂತೂ, ಏನೆಲ್ಲ ಎಂತೆಲ್ಲ ಪರೀಕ್ಷೆಗೆ ಒಡ್ಡಿಕೊಂಡರೂ, ಹೆಣ್ಣುಗಳು ತನ್ನ ಮಗನನ್ನು ಒಪ್ಪದಿರುವ ಯಾವ ಕಾರಣವೂ ಸಿಗದೆ, ಜೊತೆಗೇ ಕೇದಾರನಿಗೆ ಮದುವೆಯಾಗದಿರುವ ವಾಸ್ತವವನ್ನು ಸುಳ್ಳೆನ್ನಲಾಗದೆ, ಜಾನಕಮ್ಮ ಪ್ರಪಂಚದ ಕಂಗಳಿಗೆ ತೋರಿಕೊಳ್ಳಬಾರದು ಎಂಬ ತಮ್ಮದೇ ಸಂಕಲ್ಪದ ಹಿಂದೆ ತಾವೇ ಅಡಗುತ್ತ ಕುಬ್ಜವಾಗುತ್ತಿದ್ದರು. ದಿನದ ಕೊನೆಯಲ್ಲಿ ಮಾತ್ರ, ಹೆಣ್ಣು ಮನಸ್ಸು ಹೇಗೋ, ಎಲ್ಲಿಂದಲೋ ಒಂದಿಷ್ಟು ನೆಮ್ಮದಿಯನ್ನು ತಾನಾಗಿ ಕಂಡುಕೊಳ್ಳುತ್ತಿದ್ದುದಕ್ಕೋ ಏನೋ, ಬದುಕು ಬದುಕಲಾಗದಷ್ಟು ಅಸಹನೀಯವೆನಿಸಲಿಲ್ಲ.

* * *

ಸದಾಶಿವರಾಯರು ತಮ್ಮ ಮದುವೆಯ ವಿಷಯದಲ್ಲಿಯೂ ಇಷ್ಟು ತಲೆ ಕಾಯಿಸಿಕೊಂಡಿರಲಿಲ್ಲ. ಬದುಕಿನಲ್ಲಿ ಅವರದ್ದು ಈವರೆಗೆ ದೊಡ್ಡ ಸಂಗತಿಗಳು ಎರಡು; ಒಂದನೆಯದು ಅವರ ಮದುವೆ ; ಎರಡನೆಯದು ಇದೀಗ ಎದುರಿಗೆ ಪ್ರಶ್ನೆಯಾಗಿ ನಿಂತ ಕೇದಾರನ ಮದುವೆ. ಅವರ ಬದುಕಿನ ಎಲ್ಲ ಸಂಗತಿಗಳ ಹಿಂದೆಯೂ ಅವರೇ ರಚಿಸಿಕೊಂಡ ರೋಚಕ ಕಥೆಗಳಿವೆ. ಮಧ್ಯಾಹ್ನದ ಊಟದ ಬಳಿಕ ಮನೆಯ ಜಗುಲಿಯಂಚಿನ ಪುಟ್ಟ ಮಂಚದ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತು ಅಡಕತ್ತರಿಯಲ್ಲಿ ಅಡಕೆ ಕತ್ತರಿಸುವಾಗ, ಕುಳಿತಲ್ಲೇ ತಮ್ಮ ಬದುಕಿನ ಕಥೆಯನ್ನು ರೋಚಕವಾಗಿಸುವ ಬಗೆಯನ್ನೇ ಚಿಂತಿಸುವವರು ರಾಯರು. ಇತ್ತೀಚೆಗೆ ಆ ಎಲ್ಲಾ ಪುರಾಣಗಳ ಕೊನೆಗೆ ಹೊಸ ಭರತವಾಕ್ಯ ಸೇರಿಕೊಂಡಿದೆ : ನಾನಿಷ್ಟೆಲ್ಲ ಮಾಡಿದ್ದು ಯಾರಿಗಾಗಿ? ಮಗನಿಗಾಗಿ ಮತ್ತು ನಾಳೆ ಬರೋ ಸೊಸೆಗಾಗಿ ... ರಾಯರ ಈ ಪುರಾಣಕಥೆಗಳನ್ನು ಹೊಸದಾಗಿ ಕೇಳಿಸಿಕೊಳ್ಳುವವರಿಗೆ ಅವರೊಬ್ಬ ಮಹಾನುಭವಿಯಂತೆ ತೋರುತ್ತದೇನೋ; ಆದರೆ ಈ ಊರಿನ ಎಲ್ಲರಿಗೂ ಗೊತ್ತಿದೆ, ಆ ಕಥೆಗಳು ಕೇವಲ ತಾಂಬೂಲ ಮೆಲ್ಲುವಾಗಿನ ಖಾಲಿ ಮನಸಿನ ಉತ್ಪನ್ನಗಳೆಂದು. ರಾಯರ ಇತ್ತೀಚಿನ ಬಹು ಪ್ರಚಾರದ ವಸ್ತುವೆಂದರೆ ಹೊಸದಾಗಿ ತಾವು ಕಟ್ಟಿಸಿರುವ ಮನೆ. ಇಟ್ಟಿಗೆ ಗೋಡೆಗಳ ಜಿಂಕ್‌ಶೀಟಿನ ಮನೆ ಅದು; ಸ್ವಂತದ ಮನೆಯೆಂಬುದಿದ್ದರೆ ಕೇದಾರನಿಗೆ ಹೆಣ್ಣು ಸಿಗದೆ ಎಲ್ಲಿ ಹೋದಾಳು ಎಂಬ ವಿವರಣೆ ಅದಕ್ಕೆ. ಗೊತ್ತಿಲ್ಲ, ಲೆಕ್ಕ ಇಟ್ಟವರ್‍ಯಾರು ! ಕೇದಾರನಿಗೆ ಬಂದಿದ್ದ ಜಾತಕಗಳನ್ನೆಲ್ಲ ಪಂಚಾಂಗದ ಕೋಷ್ಟಕಗಳ ಮಧ್ಯೆ ಇಟ್ಟು, ಜಾಲಾಡಿ, ಒಂದೂ ಸರಿಹೋಗದೆನಿಸಿ ನಿರಾಕರಿಸಿದ್ದೆಷ್ಟೋ!

ಎಲ್ಲಾ ಸರಿಹೋಯ್ತೆಂದು ಹೆಣ್ಣು ನೋಡುವ ತವಕದಲ್ಲಿ ಅತಿ ಮಾತಿನಿಂದಾಗಿ ವ್ಯವಹಾರ ಮುರಿದಿದ್ದೂ ಇದೆ. ಹೆಣ್ಣುಮಗುವೊಂದರ ತಂದೆಯಾಗದ ಹೊರತು ಹಲವಷ್ಟು ಸೂಕ್ಷ್ಮಗಳನ್ನು ಮನುಷ್ಯ ಕಲಿಯೋದಿಲ್ಲ ಎಂಬ ಮಾತು ರಾಯರ ಮಟ್ಟಿಗಂತೂ ಸತ್ಯ. ಕೇದಾರ ಆ ಪರಿ ಒಡ್ಡೊಡ್ಡಾಗಿ ಬೆಳೆಯುವುದಕ್ಕೆ ಮನೆಯಲ್ಲಿ ಅಕ್ಕತಂಗಿಯರೆಂಬ ಹೆಣ್ಣು ಜೀವಗಳು ಇಲ್ಲದಿದ್ದುದೂ ಕಾರಣವಿದ್ದೀತು. ರಾಯರ ಅಸೂಕ್ಷ್ಮತೆಯನ್ನೆಲ್ಲ ಪಡಿಯಚ್ಚಾಗಿ ಉಳಿಸಿಕೊಂಡು ಅವ ಹುಟ್ಟಿದ್ದ. ಮನೆ ನಡೆಸಿದ್ದೇನಿದ್ದರೂ ಜಾನಕಮ್ಮ. ರಾಯರದು ಅಂದಿನಿಂದ ಇಂದಿನವರೆಗೂ ಇದೇ ಕಂತೆಪುರಾಣಗಳ ಹಳೆ ಅಕ್ಕಿ ಮೂಟೆ, ಮಗನಿಗಿನ್ನೂ ಮದುವೆಯಾಗಿಲ್ಲವೆಂಬ ಚಿಂತೆಯ ಬಿಸಿ, ಇಷ್ಟಾದರೂ ಅವರನ್ನು ತಟ್ಟಿದ್ದೇ ದೊಡ್ಡದು. ಆದರೂ ಒಮ್ಮೊಮ್ಮೆ ತಮಗಷ್ಟೇ ಕೇಳುವಂತೆ ಸಮಾಧಾನ ಹೇಳಿಕೊಳ್ಳುತ್ತಿದ್ದರು, ಈ ಕಾಲದಲ್ಲಿ, ಮನೆಯಲ್ಲೇ ಇರುವ ಬ್ರಾಹ್ಮಣ ಹುಡುಗರಿಗೆ ಹೆಣ್ಣು ಸಿಗೋದಿಲ್ಲ ಎಂದು. ತೀರ ಎರಡು-ಮೂರು ತಿಂಗಳ ಈಚೆಗಿನ ಮಾತು ಹೇಳುವುದಾದರೆ ಕೇದಾರನಿಗೆಂದೂ ಮದುವೆಯೇ ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದವರಂತೆ ಪದೇಪದೇ ರಾಯರು ಈ ಮಾತನ್ನು ಹೇಳಿಕೊಳ್ಳುತ್ತಿದ್ದರು.

ದೀಪ ತೋರಿದೆಡೆಗೆ... (ಭಾಗ 3)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more