ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪ ತೋರಿದೆಡೆಗೆ... (ಭಾಗ 3)

By * ನವೀನ ಭಟ್ 'ಗಂಗೋತ್ರಿ', ಶೃಂಗೇರಿ
|
Google Oneindia Kannada News

Naveen Bhat - First prize winner
(ಕಥೆ ಮುಂದುವರಿದಿದೆ...)

ಕಳೆದ ಮೂರು ವರ್ಷಗಳಿಂದ ಅಪ್ಪ, ಮಗ, ತಾಯಿ ಮನೆಯಲ್ಲಿ ಒಟ್ಟಾಗಿರುತ್ತಿದ್ದುದೇ ರಾತ್ರಿಯೂಟದ ಸಂದರ್ಭದಲ್ಲಿ ಮಾತ್ರ. ಸೌಟಿನಿಂದ ಅಡುಗೆ ಬಡಿಸುವಾಗ ಪಾತ್ರೆ ತಗುಲಿ ಆಗುತ್ತಿದ್ದ ಶಬ್ದ ಬಿಟ್ಟರೆ ಉಳಿದಂತೆ ಊಟವೂ ಮೌನ; ನಿಶ್ಶಬ್ದ. ಎಷ್ಟೋ ಸಲ ಸುಮ್ಮನೇ ಹುಸಿ ಕೆಮ್ಮು. ಕೆಮ್ಮಿ ಜಾನಕಮ್ಮ ಮೌನವೊಡೆಯುವ ವ್ಯರ್ಥಪ್ರಯತ್ನ ಮಾಡುತ್ತಿದ್ದರು. ಆದರೆ ಮೌನದ ಪರದೆ ಅಷ್ಟೇನೂ ತೆಳುವಾದ್ದಾಗಿರಲಿಲ್ಲ. ಮೊದಲೆಲ್ಲ ಅಡುಗೆಯನ್ನು ಆಡಿಕೊಳ್ಳಲೆಂದಾದರೂ, ಅತಿ ಖಾರದ ಸಾರಿನ ಉರಿಯ ತಡೆಯದೆ ಸಿಟ್ಟಿನಿಂದಾದರೂ ರಾಯರು ಹೆಂಡತಿಯನ್ನು ಲಕ್ಷಿಸುವುದಿತ್ತು. ಆದರೆ ಇವತ್ತಿಗೆ ಅದೂ ಉಳಿದಿಲ್ಲ. ಪ್ರತಿದಿನ ಬಡಿಸುವಾಗಲೂ ಜಾನಕಮ್ಮ ಅಂದುಕೊಳ್ಳುತ್ತಾರೆ, ಇಂದಾದರೂ ರಾಯರಿಗೆ ಸಿಟ್ಟು ಬರಲಿ, ಆ ಕಾರಣದಿಂದಾದರೂ ಎರಡು ಮಾತಾಡಲಿ ಎಂದು. ಆದರೆ, ಊಹೂಂ, ಅದೆಂದಿಗೂ ಸಂಭವಿಸಲಿಲ್ಲ. ಮಗರಾಯನದು ಎಂದಿಗಿದ್ದರೂ ಗುಮ್ಮಕ್ಕಿ ಊಟವೇ ತಮ್ಮೊಳಗೇ ತಾವು ಕುಸಿದು ಕುಳಿತಿದ್ದಾರೆ ಜಾನಕಮ್ಮ. ದೂರದ ಬೆಂಗಳೂರಿನಲ್ಲಿ ನೌಕರಿ ಹಿಡಿದಿರುವ ಗಿರೀಶ ಹದಿನೈದೇ ದಿನದ ಹಿಂದೆ ಊರಿಗೆ ಬಂದಿದ್ದು, ಬಂದು ದಣಿವಾರಿಸಿಕೊಳ್ಳುವಷ್ಟರಲ್ಲೇ ಬಂಗಾರದಂಥ ಹುಡುಗಿಯೊಟ್ಟಿಗೆ ಮದುವೆಯಾದದ್ದು, ಇಂದೋ ನಾಳೆಯೋ ಬೆಂಗಳೂರಿಗೆ ಮರಳಿ ಹೊರಟು ನಿಂತಿದ್ದು ... ಇದ್ಯಾವುದೂ ಜಾನಕಮ್ಮನಿಗೆ ತಿಳಿಯದ ವಿಷಯವೇನಲ್ಲ. ಕೇದಾರನ ಒಟ್ಟೊಟ್ಟಿಗೇ ಬೆಳೆದ ಗಿರಿಯ ವಿಷಯದಲ್ಲಿ ಮೊನ್ನೆಮೊನ್ನೆಯವರೆಗೂ ಇದ್ದುದು ಪುತ್ರವಾತ್ಸಲ್ಯವೇ. ಈಗಷ್ಟೇ - ಹದಿನೈದು ದಿನದಿಂದೀಚೆ ಮಾತ್ರ - ಭಾವಗಳ ಬಣ್ಣವೇ ಬದಲಾಗಿಹೋಗಿದೆ.

ಆ ಪೆದ್ದು ಮುಂಡೇದಕ್ಕೆ ಮದ್ವೆಯಾಗತ್ತೆ, ನನ್ ಮಗಂಗೆ ಮದ್ವೆ ಹೆಣ್ಣೂಂತ ಇಟ್ಟಿಲ್ವಾ ದೇವ್ರೆ ? - ಎಷ್ಟನೆಯ ಸಲವೋ ತಮ್ಮಲ್ಲೇ ಗೊಣಗಿಕೊಂಡದ್ದು ಇದು. ಯಾಕೋ ಗಿರಿಯ ವಿಚಾರದಲ್ಲಿ ರಾಯರದು ಎದೆ ತುಂಬ ಅಭಿಮಾನ; ಊರಿಗೆ ಬಂದಾಗೆಲ್ಲ ಇವರ ಮನೆಗೂ ಬಂದು ಬಾಯ್ತುಂಬ ನಮಸ್ಕಾರ ರಾಯಪ್ಪಣ್ಣ ಅನ್ನುತ್ತಿದ್ದುದಕ್ಕೋ, ಅಥವಾ ಸೆಂಟು ಆರದಿರುವ ಅವನ ನಿಲುವಿಗೋ ಅಥವಾ ಇನ್ನೇನಕ್ಕೋ ಗೊತ್ತಿಲ್ಲ. ಸುಬ್ಬುವಿನ ಮದುವೆ ಸುದ್ದಿ ಕೇಳಿದಾಗಲಿಂದ ರಾಯರ ಮುಖದಲ್ಲಿ ಎಂಥದೋ ಕಳೆ! ಹಾಗಂತ ಹೇಳಿಕೊಳ್ಳಲಾಗದ ತಮ್ಮದೇ ಮನಸಿನ ಬೇಲಿಗಳು. ರಾಯರು ಖುಷಿಖುಷಿಯಾದದ್ದು. ಜಾನಕಮ್ಮನಿಗೂ ಗೊತ್ತು. ಕೇದಾರನಿಗೆ ಮಾತ್ರ , ಅಪ್ಪನ ಈ ಕುಣಿತಗಳು ಮೈ ಉರಿಯನ್ನು ಹೆಚ್ಚಿಸಿದ್ದವು. ಋಣಾನುಬಂಧರೂಪೇಣ... ಎಂದು ರಾಯರು ವೇದಾಂತ ನುಡಿದಾಗಲಂತೂ ಪೂರ್ತಿ ಉರಿದುಹೋಗಿದ್ದ ಕೇದಾರ. ಒಟ್ಟಿನಲ್ಲಿ ಮದುವೆ ಮುಗಿದಾಗ ರಾಯರಲ್ಲಿದ್ದ ನಿರಾಳತೆ, ಒಳಮನೆಯ ಅಂತರಂಗದ ಪ್ರಶ್ನೆಯಾಗಿ ಉಳಿದುಹೋಗಿತ್ತು.

* * *
ಗಿರಿಯ ಜೊತೆ ಕೇದಾರನಿಗೆಂದೂ ವೈರ ಇರಲಿಲ್ಲ. ಹಾಗಂತ ಆ ಹಳೆಯ ಬಾಲ್ಯದ ದಿನಗಳಲ್ಲಿ ಸಮಾ ಜಗಳವಾದ ದಿನಗಳು ಇಲ್ಲವೆಂದೇನಲ್ಲ. ಆದರೆ ಮರುದಿನ ಬೆಳಿಗ್ಗೆ ಇಂಗ್ಲೀಷು ಟೀಚರಿಗೆ ಒಪ್ಪಿಸಬೇಕಿರುತ್ತಿದ್ದ ಹೋಂವರ್ಕ್ ಮಾಡಿಕೊಳ್ಳಲು ಕೇದಾರನಿಗೆ ಗಿರಿಯನ್ನು ಬಿಟ್ಟರೆ ಅನ್ಯ ಗತಿ ಇದ್ದಿರಲಿಲ್ಲ. ಬೆಳಗಿಂದ ಮಧ್ಯಾಹ್ನದವರೆಗೆ ಜಗಳವಾಡಿ, ಒಟ್ಟಿಗೇ ಕೂರುತ್ತಿದ್ದ ಶಾಲೆಯ ಬೆಂಚಿನಲ್ಲಿ ಪರಸ್ಪರರ ಜಾಗದ ಅತಿಕ್ರಮಣದ ಆರೋಪಗಳು ಮೊಳಗಿ, ಕೊನೆಯಲ್ಲಿ ಕಂಪಾಸ್ ಮೊನೆಯಿಂದ ಬೆಂಚಿನ ಮೇಲೆ ಗಡಿರೇಖೆ ಬರೆದುಕೊಂಡು... ಓಹ್, ಎಷ್ಟೆಲ್ಲ ರಂಪವಾಗುತ್ತಿದ್ದವಲ್ಲ! ಅಷ್ಟೇ ಹೊತ್ತಿನ ವೈರಗಳು ಅವೆಲ್ಲ. ಆಮೇಲೆ ಮತ್ತೆ ಸಂಜೆಯ ಹೊತ್ತಿಗೆ ಮನೆಗೆ ನಡಕೊಂಡು ಮರಳುವಾಗ ಹಾದಿಬದಿಯ ಬೆಟ್ಟದ ನೆಲ್ಲಿಕಾಯಿ ಮರ ಹತ್ತುವುದಕ್ಕೆ ಗಿರೀಶನಿಗೂ ಕೇದಾರನೇ ಬೇಕಿತ್ತು. ಮರ ಹತ್ತುವುದರಲ್ಲಿ ಕೇದಾರ ಆ ವಯಸ್ಸಿಗೇ ಆ ಪರಿಯ ಪರಿಣತಿ ಇಟ್ಟುಕೊಂಡವ. ಬೇಸಿಗೆಯ ದಿನಗಳಲ್ಲಿ ಮನೆಯ ಜನಗಳ ಕಣ್ಣು ತಪ್ಪಿಸಿ ನದಿಯಲ್ಲಿ ಈಜಲು ಹೋಗುವುದಕ್ಕೆ, ಮನೆಯಂಗಳದಲ್ಲಿ ಒಣಹಾಕಿದ್ದ ಹಲಸಿನಕಾಯಿ ಹಪ್ಪಳವನ್ನೋ, ಹುಣಸೆಹಣ್ಣನ್ನೋ ತಿನ್ನುವುದಕ್ಕೆ ಇಬ್ಬರಿಗೆ ಇಬ್ಬರೂ ಬೇಕಾಗಿದ್ದ ದಿನಗಳು ಅವು. ಗದ್ದೆಯಲ್ಲಿ ಮೇಯುತ್ತಿದ್ದ ಎಮ್ಮೆಯ ಬಾಲಕ್ಕೆ ಪಟಾಕಿ ಅಂಟಿಸಿ, ಬೆಂಕಿಯಿಟ್ಟ ರಭಸಕ್ಕೆ ಎಮ್ಮೆ ಕಂಗಾಲುಬಿದ್ದು, ಹೆಗಡೇರ ಮನೆಯ ಬಾಳೆತೋಟಕ್ಕೆ ನುಗ್ಗಿ ಅವಾಂತರ ಎಬ್ಬಿಸಿತ್ತು. ಆಗ ಸಣ್ಣಪ್ಪ ಹೆಗಡೇರ ಹತ್ರ ಹಿಗ್ಗಾಮುಗ್ಗಾ ಬೈಸಿಕೊಳ್ಳುವಾಗ ಇಬ್ಬರೂ ಇದ್ದರು. ಇನ್ನೊಂದಿನ ನಡುರಸ್ತೆಯಲ್ಲಿ ಬಿದ್ದಿದ್ದ ಆಕಳ ಸಗಣಿಯ ಮಧ್ಯೆ ಪಟಾಕಿ ಇಟ್ಟು ಸಿಡಿಸಿದ ರಭಸಕ್ಕೆ, ಸಗಣಿಯೆಲ್ಲಾ ಅಕ್ಕಪಕ್ಕಕ್ಕೆ ಸಿಡಿದು, ಹಾದು ಹೊರಟಿದ್ದ ಅಂಗನವಾಡಿ ಶಿಕ್ಷಕಿ ಶಾಂತಾಬಾಯಿಯ ಹೊಸ ಸೀರೆ ಪೂರ್ತಿ ಸಗಣಿಮಯವಾದಾಗ... ಆಗಲೂ ತಾವಿಬ್ಬರೂ ಒಟ್ಟಿಗೇ ಓಡಿ ಕಣ್ಮರೆಯಾಗಿದ್ದೆ ವಲ್ಲ! ನೆಲ್ಲಿಮರಕ್ಕೆ ಜೋತುಬಿದ್ದಿದ್ದ ಕೋಲ್ಜೇನು ತೆಗೆಯುವ ಸಾಹಸಕ್ಕೆ ಹೋಗಿ, ಜೇನುಹುಳುಗಳು ಕಡಿದು ತಾನು ಕೆಳಗೆ ಬಿದ್ದಿದ್ದಾಗ ಗಿರಿ ಎಷ್ಟೊಂದು ಅರ್ತಿಯಿಂದ ಉಪಚರಿಸಿದ್ದನಲ್ಲವಾ? ಮಳೆಗಾಲದಲ್ಲೊಂದು ದಿನ ಛತ್ರಿಯಿರದೆ ಬಂದಿದ್ದ ಕೇದಾರನೊಟ್ಟಿಗೆ ತನ್ನ ಹೊಸ ಕೊಡೆಯ ಅಡಿಯಲ್ಲಿ ಕರಕೊಂಡು ಹೊರಟಿದ್ದ ಗಿರಿ, ಹೋಗ್ಲಿ ಬಿಡು ಎಂದುಕೊಂಡು ಇದ್ದೊಂದೇ ಕೊಡೆಯನ್ನೂ ಮಡಿಸಿಟ್ಟು ಇಬ್ಬರೂ ಮಳೆಯಲ್ಲಿ ತೊಯ್ದಿದ್ದು... ಎಷ್ಟೆಲ್ಲಾ ನೆನಪುಗಳು ಆ ಒಟ್ಟೊಟ್ಟಿನ ದಿನಗಳದ್ದು!!

ಅರಿವಿಗೇ ಬರದಂತೆ ಸೂರ್ಯ ಎಷ್ಟೋ ಸಲ ಭೂಮಿಗೆ ಬಂದು ಹೋದ. ವರ್ಷಗಳೇ ಉರುಳಿದವು. ಒಟ್ಟೊಟ್ಟಿನ ದಿನಗಳು ಎಸ್ಸೆಸ್ಸೆಲ್ಸಿ ಮುಗಿದಲ್ಲಿಯೇ ಮುಗಿದುಹೋದವು. ಬಹುಶಃ ಆ ಬೇಸಗೆಯ ಒಂದು ರಾತ್ರಿ, ಊರ ಜಾತ್ರೆಯಲಿ ಗಿರಿ ಮತ್ತು ಕೇದಾರ ಒಟ್ಟೊಟ್ಟಿಗೇ ನಿಂತು ಕಡ್ಲೆಹಿಟ್ಟಿನ ಮಿರ್ಚಿ ತಿಂದಿದ್ದೇ ಕೊನೆ. ಆ ಮರುದಿವಸ ಗಿರಿ ಅಧ್ಯಯನದ ಹೆಸರಲ್ಲಿ ಊರು ಬಿಟ್ಟು ಪೇಟೆ ಸೇರಿದ. ಹಾಗೆ ಹೊರಟು ನಿಂತವನನ್ನು ಕಣ್ತುಂಬಿಕೊಂಡಂದು ಯಾಕೋ ಎಂದಿಗೂ ಇಲ್ಲದ ಕಣ್ಣೀರನ್ನು ತಂದುಕೊಂಡಿದ್ದರು ರಾಯರು ಎಂಬುದು ಜಾನಕಮ್ಮನವರ ಬಲವಾದ ಅನುಮಾನ. ಹೋಗಿಬರುತ್ತೇನೆಂದು ಹೇಳಲು ಬಂದಿದ್ದ ಗಿರಿಯನ್ನು ಪೂರ್ಣ ಪೂರ್ಣ ಮನಸ್ಸಿನಿಂದ ತಲೆ ನೇವರಿಸಿ ಆಶೀರ್ವದಿಸಿ ಕಳುಹಿಸಿದ್ದರು ರಾಯರು ಎಂಬುದು ಮಾತ್ರ ಕೇದಾರನಿಗೂ ನೆನಪಿದೆ. ಆದರೆ ಹಾಗ್ಯಾಕಾಯಿತೋ ಗೊತ್ತಿಲ್ಲ. ಕೇದಾರನ ವಿಷಯದಲ್ಲಿ ಮಾತ್ರ ಅಂಥ ಮೃದುತನ ರಾಯರಿಗೆ ಎಂದಿಗೂ ಬಂದೇ ಇಲ್ಲ, ಸ್ವಂತ ಮಗನೇ ಆದರೂ!!

ಊರಿನ ಗಾಳಿಯೊಂದಿಗೆ ಮಾತ್ರವೇ ಮಾತಾಡುತ್ತಾ ಕೇದಾರ ಇಲ್ಲಿಯೇ ಉಳಿದುಬಿಟ್ಟ. ಗಿರೀಶ ಹಾಗೆ ಓದಲು ಹೋದ ಬಳಿಕವೂ ಎರಡೆರಡು ವರ್ಷ ಈತ ಮತ್ತೆ ಊರಂಚಿನ ಆಲದ ಮರದ ಬಿಳಲುಗಳನ್ನು ಜೋತ; ನೆಲ್ಲಿ ಮರದ ಕೊಂಬೆಗಳ ಮೇಲೆ ತಾಸುತಾಸು ಕಳೆದ. ಕಾಲ ಅಷ್ಟಷ್ಟೇ ಉರುಳಿಹೋಯ್ತು. ಊರ ದೇವಸ್ಥಾನದ ಅರ್ಚಕರು ಗದ್ದೆಯಂಚಿನಲ್ಲಿ ಹಾವು ಕಚ್ಚಿ ಸತ್ತುಹೋದ ಬಳಿಕ ಕಾಳಕ್ಷರ ಮಂತ್ರ ಕಲಿತ್ತಿದ್ದ ಕೇದಾರ, ಬರೀ ಉಂಡಾಡಿ ಗುಂಡನಾಗಿರುವುದರ ಬದಲಿಗೆ ಹಾಗೇ ನಿತ್ಯಪೂಜೆ ಮಾಡತೊಡಗಿದ. ಅಂತೂ ಆ ದಿವಸ, ಊರಿನ ಎಷ್ಟೋ ಮಂದಿ ನಿರಾಳ ಉಸಿರಾಡಿದರು, ಕಪಿಯೊಂದಕ್ಕೆ ಕಡಿವಾಣ ಬಿತ್ತೆಂಬ ಭಾವದಲ್ಲಿ - ಅಷ್ಟೆ; ಅದಕ್ಕಿಂತ ಮುಂದೆ ಕೇದಾರನ ಬಗ್ಗೆ ಯಾರೆಂದರೆ ಯಾರೂ ವಿಚಾರ ಮಾಡಲಿಲ್ಲ. ಯಾರೇಕೆ, ಸ್ವತಃ ಅವನೂ ಮಾಡಲಿಲ್ಲ. ಈ ಮಧ್ಯೆ ದೂರಕ್ಕಿದ್ದ ಗಿರೀಶ, ಹಬ್ಬಕೊಮ್ಮೆ ಹುಣ್ಣಿಮೆಗೊಮ್ಮೆ ಊರಿಗೆ ಬರುತ್ತಿದ್ದ. ಪ್ರತಿ ಸಲ ಬಂದಾಗಲೂ, ಕೇದಾರನ ನೆನಪುಗಳ ಕಡತದಲ್ಲಿನ ಗಿರೀಶನಿಗೂ, ಈ ನೀಟಾಗಿ ಇಸ್ತ್ರಿಯಾಗಿರುವ, ಮಿರುಗುವ ಕೈಗಡಿಯಾರದ, ಕಟಕಟವೆನ್ನುವ ಬೂಟುಗಾಲುಗಳ ಗಿರಿಗೂ ತಾಳೆಯಾಗದೆ, ಇಬ್ಬರಿಗೂ ತಿಳಿಯದಂತೆ ಆಳಆಳದ ಭಿನ್ನತೆಯ ನದಿ ಹರಿಯಿತು ಅವರ ಮಧ್ಯೆ.

<strong>ದೀಪ ತೋರಿದೆಡೆಗೆ... (ಭಾಗ 4)</strong>ದೀಪ ತೋರಿದೆಡೆಗೆ... (ಭಾಗ 4)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X