ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯಾಮರಣ (ಭಾಗ 4)

By * ತ್ರಿವೇಣಿ
|
Google Oneindia Kannada News

(ಕಥೆ ಮುಂದುವರಿದಿದೆ...)

ರಾತ್ರಿ ಹನ್ನೊಂದು ಹೊಡೆದಿದ್ದರೂ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಕೂತಿದ್ದರು ಸುದರ್ಶನ್‌. ಈಚೆಗೆ ಅವರಿಗೆ ಇದೊಂದು ಪ್ರೀತಿಯ ಹವ್ಯಾಸವಾಗಿ ಹೋಗಿತ್ತು. ದಿನದಿನವೂ ತಮ್ಮ ವೃತ್ತಿಕ್ಷೇತ್ರದಲ್ಲಿ ಸಾವುನೋವುಗಳನ್ನು ಧಾರಾಳವಾಗಿ ಕಂಡು ಅಶಾಂತಿಯ ಕುಂಡವಾಗಿ ಹೋಗುತ್ತಿದ್ದ ಅವರ ಹೃದಯಕ್ಕೆ ಗೀತೆ ಅಮೃತಸಿಂಚನ ಮಾಡುತ್ತಿತ್ತು. ಹಾಲಿನ ಲೋಟವನ್ನು ಅವರ ಮುಂದಿನ ಟೀಪಾಯಿಯ ಮೇಲಿಟ್ಟ ಸುದರ್ಶರನ ಪತ್ನಿ ವೈಜಯಂತಿ ಗಂಡನ ಚಿಂತಾಕ್ರಾಂತ ಮುಖವನ್ನು ಕಂಡು ಏನೊಂದೂ ಮಾತಾಡದೆ ಅಲ್ಲಿಂದ ಮೆಲ್ಲನೆ ಸರಿದುಹೋದರು. ಪತಿಯ ಈ ಪರಿ ಆಕೆಗೆ ಹೊಸದೇನಲ್ಲವಲ್ಲ?

ಸುದರ್ಶನರ ಕೈಯಲ್ಲಿ ಪುಸ್ತಕವಿದ್ದರೂ ಅವರ ಮನಸ್ಸು ಮಾತ್ರ ಅದರಲ್ಲಿ ತೊಡಗಿರಲಿಲ್ಲ. ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಸ್ಥಿತಪ್ರಜ್ಞನಾಗಿರುವುದು ನನ್ನಂತಹ ಹುಲುಮಾನವನಿಗೆ ಸಾಧ್ಯವಿಲ್ಲವೋ ಪರಮಾತ್ಮ! ಎಂದುಕೊಳ್ಳುತ್ತಾ ಪುಸ್ತಕ ತೆಗೆದಿಟ್ಟರು. ಕಟುವಾದ ನುಡಿಗಳಿಂದ ಚಂದ್ರಮತಿಯ ಕೋರಿಕೆಯನ್ನು ನಿರಾಕರಿಸಿದ್ದರೂ ಅವರ ಮನಸ್ಸು ಅದನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಿತ್ತು. ಅಲ್ಲ, ಅವರು ಕೇಳಿಕೊಂಡಿದ್ದರಲ್ಲಿ ತಪ್ಪಾದರೂ ಏನಿದೆ? ಒಬ್ಬ ವೈದ್ಯನಾಗಿ ರೋಗಿಯನ್ನು ಸಾವಿನ ದವಡೆಯಿಂದ ಪಾರುಮಾಡುವಂತೆ ಅವನ ನೋವು ದೂರ ಮಾಡುವುದು ಕೂಡ ತನ್ನ ಕರ್ತವ್ಯವಾಗಬೇಡವೇ?

ಮಂಜುನಾಥಯ್ಯನವರ ಕಾಯಿಲೆ ವಾಸಿಯಾಗುವಂತಹದಲ್ಲ. ಹಾಗೆಂದು ಮರಣ ಕೂಡ ತನಗೆ ತಿಳಿದಂತೆ ಅವರ ಸನಿಹದಲ್ಲೆಲ್ಲೂ ಸುಳಿದಾಡುತ್ತಿಲ್ಲ. ಹೀಗಿರುವಾಗ ಅವರು ಕೀವು, ಹುಣ್ಣುಗಳ ದುರ್ನಾತದಲ್ಲಿ ಜುಗುಪ್ಸೆ ಅನುಭವಿಸುತ್ತಾ, ದಿನವಿಡೀ ಕಾಡುವ ನೋವಿನೊಡನೆ ಸೆಣೆಸುತ್ತಾ, ತನ್ನನ್ನು ಪ್ರೀತಿಸುವ ಜೀವಗಳೆಲ್ಲವನ್ನೂ ಪ್ರತಿಕ್ಷಣವೂ ವಿಷಾದದಲ್ಲಿ ಮುಳುಗಿಸುತ್ತಾ ಜೀವನವನ್ನು ಹೆಣಭಾರವಾಗಿ ಹೊತ್ತು ತೆವಳುವುದಕ್ಕಿಂತಾ ಮಿಗಿಲಾದ ಹಿಂಸೆ ಬೇರೇನಿದೆ? ಬದುಕಿನ ಕ್ರೌರ್ಯ ಮಡುಗಟ್ಟಿರುವುದೇ ಇಲ್ಲಿ. ನನ್ನ ಒಂದೇ ಒಂದು ಚಿಕ್ಕ ಕ್ರಿಯೆಯಿಂದ ಈ ಎಲ್ಲಾ ನೋವು, ದುಃಖಗಳು ಮಂತ್ರದಂಡ ಸೋಕಿದಂತೆ ಫಕ್ಕನೆ ಮಾಯವಾಗಿ ಹೋಗುವುದೆಂದರೆ? ಅದಕ್ಕಿಂತ ಸಾಧನೆ ಬೇರೇನಿದೆ?

ಚಂದ್ರಮತಿ ತನ್ನ ಶ್ರೀಮಂತಿಕೆಯ ಪ್ರಭಾವದಿಂದ ನನಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಅಲ್ಲದೆ ಎಷ್ಟೋ ದಿನಗಳಿಂದ ಹಾಸಿಗೆ ಹಿಡಿದು ಮಲಗಿರುವ ಮಂಜುನಾಥಯ್ಯನ ಸಾವು ಯಾರಿಗೂ ಅನುಮಾನ ಕೂಡ ಉಂಟುಮಾಡಲಾರದು. ಒಂದು ವೇಳೆ ಈ ವಿಷಯ ಬಹಿರಂಗವಾದರೆ ತಾನೇ ಏನು?

ನನ್ನನ್ನು ಈ ವೃತ್ತಿಯಿಂದಲೇ ಉಚ್ಚಾಟಿಸಬಹುದು, ಕೆಲವಾರು ವರ್ಷಗಳ ಕಾಲ ಸೆರೆವಾಸ ವಿಧಿಸಲೂಬಹುದು. ಆಗಲಿ, ಒಂದು ನೋಯುತ್ತಿರುವ ಜೀವಕ್ಕೆ ನಿರಂತರವಾದ ನೆಮ್ಮದಿ ನೀಡಿದ ಆತ್ಮಸಂತೋಷದ ಮುಂದೆ ಯಾವುದೇ ಕಷ್ಟ ಕೋಟಲೆಗಳು ಒದಗಿದರೂ ಅವೆಲ್ಲವೂ ಕ್ಷಣಿಕ, ಗೌಣ! ಬಹಳ ಹೊತ್ತು ಚಿಂತಿಸುತ್ತಿದ್ದ ಸುದರ್ಶನರ ಮನಸ್ಸು ಸರಿ ತಪ್ಪುಗಳ ನಡುವೆ ಹೊಯ್ದಾಡುತ್ತಿತ್ತು. ಕೊನೆಗೆ ಅವರ ಚಿತ್ತದಲ್ಲಿ ಯಾವುದೊ ಒಂದು ನಿರ್ಧಾರ ಗಟ್ಟಿಯಾಗಿ ರೂಪಗೊಂಡಿತು. ದೀಪವಾರಿಸಿ ಮಲಗಿಕೊಂಡ ಅವರಿಗೆ ಮರುಕ್ಷಣದಲ್ಲಿಯೇ ನಿದ್ರೆ ಆವರಿಸಿಕೊಂಡಿತು.

***

ಬೆಳಗಿನ ಜಾವ ಐದರ ಸಮಯ. ಸುದರ್ಶನರ ಮಂಚದ ಸಮೀಪವಿದ್ದ ದೂರವಾಣಿ ಎಚ್ಚರಗೊಂಡಿತು. ಸುದರ್ಶನ್‌ ಫೋನ್‌ ಕೈಗೆತ್ತಿಕೊಂಡರು. ರಾತ್ರಿ ತುಂಬಾ ತಡವಾಗಿ ಮಲಗಿದ್ದರಿಂದ ನಿದ್ರೆಯ ಮಂಪರು ಇನ್ನೂ ಅವರ ಕಣ್ಣಿನಲ್ಲಿ ತುಳುಕಾಡುತ್ತಿತ್ತು.

'ಹಲೋ, ಡಾ. ಸುದರ್ಶನ್‌ ಹಿಯರ್‌, ಏನಾಗಬೇಕಿತ್ತು?"

'ಡಾಕ್ಟರ್‌, ನಾನು ಹೆಡ್‌ನರ್ಸ್‌ ಪಂಕಜ. ಎಂಟನೆ ನಂಬರ್‌ ವಾರ್ಡಿನಲ್ಲಿದ್ದ ಮಂಜುನಾಥಯ್ಯನವರು ತೀರಿಕೊಂಡಿದ್ದಾರೆ."

ಸುದರ್ಶನ್‌ ಕಣ್ಣಿನಲ್ಲಿದ್ದ ನಿದ್ರೆಯ ತೆರೆ ಸರಿದುಬಿದ್ದಿತ್ತು.

'ಪಂಕಜಾ, ಇದು ಹೇಗಾಯಿತು? ಅವರನ್ನು ನಾನು ನಿನ್ನೆ ಸಂಜೆ ನೋಡಿದಾಗ ಸಾಯುವ ಲಕ್ಷಣವೇ ಅವರಲ್ಲಿ ಇರಲಿಲ್ಲವಲ್ಲಾ? ಚೆನ್ನಾಗಿಯೇ ಮಾತನಾಡಿದರು"

'ಹೌದು ಡಾಕ್ಟರ್‌, ನಾನು ನಿನ್ನೆ ರಾತ್ರಿ ಅವರಿಗೆ ಇಂಜೆಕ್ಷನ್‌, ಮಾತ್ರೆಗಳನ್ನು ಕೊಡಲು ಹೋದಾಗಲೂ ಅಷ್ಟೆ. ನೋವು ಮಾತ್ರ ತುಂಬಾ ಹೆಚ್ಚಾಗಿದ್ದು ನರಳಾಡುತ್ತಿದ್ದರು. ಅವರ ಪತ್ನಿ ಕುಡಿಸಿದ ರವೆಗಂಜಿಯನ್ನು ದಿನಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಕುಡಿದರು. ಬೆಳಗ್ಗೆ ನನಗೆ ಅನುಮಾನವಾಗಿ ಡ್ಯೂಟಿ ಡಾಕ್ಟರನ್ನು ಕರೆದುಕೊಂಡು ಬಂದಾಗ ಅವರ ಜೀವ ಹೋಗಿ ಬಹಳ ಕಾಲವಾಗಿತ್ತು."

ಪಂಕಜ ಒಂದೇ ಉಸಿರಿನಲ್ಲಿ ವಿವರಗಳನ್ನು ನೀಡುತ್ತಿದ್ದರೆ ಸುದರ್ಶನರ ಮನೋವಾರಿಧಿಯಲ್ಲಿ ಅಲ್ಲೋಲ ಕಲ್ಲೋಲ. ಪಂಕಜಳಿಗೆ ಏನು ಹೇಳುವುದೋ ತಿಳಿಯದೆ ಸುಮ್ಮನೆ ಗರಬಡಿದವರಂತೆ ನಿಂತುಬಿಟ್ಟರು.

ಪಂಕಜ ಇತ್ತ ಕಡೆಯಿಂದ ಏನೂ ಪ್ರತಿಕ್ರಿಯೆ ಬಾರದಿರಲು- 'ಹಲೋ, ಹಲೋ ಡಾಕ್ಟರ್‌, ಲೈನಿನಲ್ಲಿ ಇದೀರಾ ತಾನೇ?" ಎಂದಳು. ಇವರು 'ಎಸ್‌ ಹೇಳು" ಎಂದ ಮೇಲೆ ಮುಂದುವರೆಸಿದಳು.

'ಡಾಕ್ಟರ್‌, ನನಗೇನೋ ಅನುಮಾನ.....ಈ ಸಾವು....." ಎಂದೇನೋ ಹೇಳಹೊರಟವಳ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ-

'ಇದರಲ್ಲಿ ಅನುಮಾನ ಪಡೋದೇನಿಲ್ಲ. ಇಂತಹ ಕೇಸ್‌ನಲ್ಲಿ ಸಾವು ಹೇಗೆ ಬೇಕಾದರೂ ಬರಬಹುದು. ನೀನು ಸುಮ್ಮನೆ ಇಲ್ಲದ ಹಗರಣಗಳಿಗೆ ಕಾರಣಳಾಗಬೇಡ.... ನನಗಾಗಿ ಕಾಯದೆ ಮನೆಯವರಿಗೆ ಡೆಡ್‌ಬಾಡೀನ ಒಪ್ಪಿಸಿಬಿಡಿ. ನಾನು ಇವತ್ತು ನರ್ಸಿಂಗ್‌ಹೋಮಿಗೆ ಬರಲು ಸಾಧ್ಯವಾಗುತ್ತದೆಯೋ ಇಲ್ಲವೊ. ಈ ವಿಷಯವನ್ನು ಡಾ. ಸುವ್ರತ್‌ ರಾವ್‌ಗೂ ತಿಳಿಸಿಬಿಡು" ಎಂದು ಫೋನ್‌ ಕೆಳಗಿಟ್ಟುಬಿಟ್ಟರು. ಅವರ ಮನದ ಗೊಂದಲಗಳನ್ನು, ತಲ್ಲಣಗಳನ್ನು ಅರಿತವನಂತೆ ಗೋಡೆಯ ಮೇಲಿದ್ದ ಚಿತ್ರಪಟದಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡುತ್ತಿದ್ದ ಯೋಗೀಶ್ವರ ಕೃಷ್ಣ ಮಂದಹಾಸ ಬೀರುತ್ತಿದ್ದ !

<strong>ಕಥೆಯ ಮೊದಲ ಭಾಗ</strong>ಕಥೆಯ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X