ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ (ಭಾಗ 2)

By Staff
|
Google Oneindia Kannada News

* ಪ್ರೇಮಶೇಖರ, ಪಾಂಡಿಚೆರಿ

(ಕಥೆಯ ಮುಂದುವರಿದಿದೆ...)

"ತಲೆಗೆ ಒಂದ್ ನೂರೈವತ್ತು ಕೊಟ್ಬಿಡಿ." ಮೆಲ್ಲಗೆ ಅಂದವನು "ಇನ್ನೊಂದಿಬ್ಬರು ಆಗಿದ್ರೆ ಚೆನ್ನಾಗಿತ್ತು" ಅಂದ ದನಿಯೆತ್ತರಿಸಿ. ಕುಳ್ಳನೆಯ ಕಟ್ಟುಮಸ್ತಾದ ದೇಹದ ಮನುಷ್ಯನೊಬ್ಬ ಕೈಯಾಡಿಸುತ್ತಾ ಓಡಿಬಂದ.
"ಇನ್ನೊಂದಿಬ್ಬರಿಗೆ ಜಾಗ ಆಗುತ್ತೇನಪ್ಪ?" ಅಂದ. "ಆಗುತ್ತೆ ಬನ್ನಿ ಸಾರ್" ಎಂಬ ಉತ್ತರ ಬಂದದ್ದೇ ಹಿಂದೆ ತಿರುಗಿ "ಸೀಟಿದೆ. ಸೂಟ್‌ಕೇಸ್ ಎತ್ಕೊಂಡು ಬಾ" ಎಂದು ಕೂಗಿ ಹೇಳಿದ. ನಾವು ಐದು ಜನರಾದೆವು. ಇನ್ನೂ ಒಂದಿಬ್ಬರು ಹತ್ತಿರ ಬಂದರೂ ಮಾತಾಡದೇ ಹಿಂದೆ ಸರಿದರು. ಒಬ್ಬರಿಗೆ ನೂರಾ ಇಪ್ಪತ್ತೈದರಂತೆ ಮಾತಾಯಿತು. ಡ್ರೈವರ್ ನನಗೆ "ಅಮ್ಮಾವ್ರೂ ನೀವೂ ಮುಂದೆ ಬಂದ್ಬಿಡಿ ಸಾರ್" ಅಂದ. ನಾನು ಸಂಕೋಚದಲ್ಲಿ ಸಣ್ಣಗೆ ನಗುತ್ತಾ "ಇಲ್ಲಪ್ಪ, ಮೇಡಂ ಜತೆ ಮುಂದುಗಡೆ ಈ ಹುಡುಗ ಕೂರಲಿ" ಅಂದೆ. ಮುಖ ಪೆಚ್ಚಾಗಿಸಿಕೊಂಡ ಅವನು "ಗೊತ್ತಾಗ್ಲಿಲ್ಲ, ತಪ್ ತಿಳಕೋಬೇಡಿ" ಅಂದ ಆ ಹೆಂಗಸಿಗೆ. ಆಕೆ ಉತ್ತರಿಸದೇ ಮುಂದೆ ಹತ್ತಿಕೊಂಡಳು. ಅನುಮಾನಿಸುತ್ತಾ ನಿಂತ ಆ ಹುಡುಗನಿಗೆ "ಬಾಪ್ಪಾ ಬಾ ಕೂತ್ಕೋ. ನಂಗೆ ನಿನ್ನ ವಯಸ್ಸಿನ ಮಗ ಇದ್ದಾನೆ" ಅಂದಳು.

ಕುಳ್ಳನೆಯ ಮನುಷ್ಯ ಮೊದಲು ಹತ್ತಿದ. ಆಕಡೆಯಿಂದ ಅವನ ಗೆಳೆಯ, ಈಕಡೆಯಿಂದ ನಾನು ಒಳಸೇರಿಕೊಂಡೆವು. "ಇನ್ನೊಂದು ಹತ್ತು ಕಿಲೋಮೀಟರಿಗೆ ಕೃಷ್ಣಗಿರಿ ಬರುತ್ತೆ. ಅಲ್ಲಿಂದಾಚೆಗೆ ಭರ್ಜರಿ ರೋಡು. ಐದಕ್ಕೆಲ್ಲಾ ಊರು ತಲುಪಿಸಿಬಿಡ್ತೀನಿ" ಎನ್ನುತ್ತಾ ಎಂಜಿನ್ ಗೊರಗುಟ್ಟಿಸಿದ ಡ್ರೈವರ್. "ಎಲ್ಲಿಂದ ಬರ್ತಿದೀಯಪ್ಪಾ?" ಎಂದು ನನ್ನ ಪಕ್ಕದಲ್ಲಿದ್ದ ಕುಳ್ಳಮನುಷ್ಯನ ಪ್ರಶ್ನೆಗೆ "ತಿರುವಣ್ಣಾಮಲೈಲಿ ಒಂದ್ ಫ್ಯಾಮಿಲೀನ ಬಿಟ್ಟು ಬರ್ತಾ ಇದೀನಿ ಸಾರ್" ಎಂದು ಉತ್ತರಿಸಿದ. "ನೀವು ಸಿಕ್ಕಿದ್ದು ಒಳ್ಳೇದಾಯ್ತು. ಕಾಫಿಗೆ ಕಾಸಾಯ್ತು" ಎಂದೂ ಸೇರಿಸಿದ. "ಅಂದರೆ ನೀನು ಕಾಫಿ ಕುಡಿಯೋದು ಬರೀ ತಾಜ್ ಕಾಂಟಿನೆಂಟಲ್, ಲೀಲಾ ಪೆಂಟಾ, ಒಬೆರಾಯ್ ಶೆರೆಟಾನ್‌ಗಳಲ್ಲೇ ಅನ್ನು" ಅಂದ ಕುಳ್ಳ. ಅವನ ಮಾತಿನ ಅರ್ಥ ಹೊಳೆದು ನಾನು ನಕ್ಕರೆ ಡ್ರೈವರ್ ನಾಚಿದಂತೆ ದನಿ ಮಾಡಿ "ಅಯ್ ಬಿಡಿ ಸಾರ್, ನೀವೊಬ್ರು" ಅನ್ನುತ್ತಾ ಎಂಜಿನ್ ಅನ್ನು ಕಿವಿ ಕಿತ್ತುಹೋಗುವಂತೆ ರೊಂಯ್ಯೋ ಅನ್ನಿಸಿದ. ಮುಂದೆ ಕುಳಿತಿದ್ದ ಹೆಂಗಸಿಗೂ ಹುಡುಗನಿಗೂ ಇದಾವುದರ ಕಡೆಗೂ ಗಮನವಿರಲಿಲ್ಲ. ಹೆಂಗಸು ಪ್ರಶ್ನೆ ಕೇಳುವುದು, ಹುಡುಗ ಉತ್ತರಿಸುವುದು ನಡೆದಿತ್ತು. ಅವರ ಸಂಭಾಷಣೆಯತ್ತ ಗಮನ ಹರಿಸಿದ ನನಗೆ ತಿಳಿದದ್ದು ಆ ಹುಡುಗ ಪಾಂಡಿಚೆರಿಯವನೇ. ಇಪ್ಪತ್ತೆರಡರ ಅವನು ಐದಾರು ತಿಂಗಳಿಂದ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದರ ಉದ್ಯೋಗಿ. ಅಪ್ಪ ಅಮ್ಮ ಇರುವುದು ಪಾಂಡಿಚೆರಿಯಲ್ಲೇ. ಇಬ್ಬರು ಅಕ್ಕಂದಿರಿಗೂ ಮದುವೆಯಾಗಿದೆ, ತಮ್ಮ ಪ್ಲಸ್ ಟೂನಲ್ಲಿದ್ದಾನೆ.

ಹಾಗೇ ಪಕ್ಕದವರ ಪರಿಚಯವೂ ಆಯಿತು. ಅವರಿಬ್ಬರೂ ಸಣ್ಣಪುಟ್ಟ ಯಂತ್ರಗಳ ಬಿಡಿಭಾಗಗಳ ಮಾರಾಟಗಾರರು. ಕಡಲೂರಿನಲ್ಲಿ ಅಂಗಡಿಯಿದೆ. ವಹಿವಾಟು ಚೆನ್ನಾಗಿಯೇ ನಡೆಯುತ್ತಿದೆ. ಈಗ ಬೆಂಗಳೂರಿಗೆ ಹೋಗುತ್ತಿರುವುದೂ ವ್ಯವಹಾರದ ಮೇಲೇ. ನನ್ನ ಬಗ್ಗೆ ಕೇಳಿದಾಗ "ನಾನೊಬ್ಬ ಮೇಷ್ಟ್ರು" ಅಂದೆ. "ಎಲ್ಲಿ? ಪಾಂಡೀನಲ್ಲೇನಾ? ಪೆಟಿಟ್ ಸೆಮಿನಾರ್‌ನಲ್ಲೋ, ಪ್ಯಾಟ್ರಿಕ್ಸ್‌ನಲ್ಲೋ" ಅಂದ. "ಪಾಂಡಿಚೆರಿ ಯೂನಿವರ್ಸಿಟೀನಲ್ಲಿ" ಎಂದುತ್ತರಿಸಿದೆ. ನಿಮಿಷದವರೆಗೆ ಮೌನವಾದ ಅವನು ಒಮ್ಮೆ ಕೆಮ್ಮಿ ಕೇಕರಿಸಿ ದನಿ ತೆಗೆದ: "ನನ್ನ ಮೊದಲ ಮಗಳೂ ಅಲ್ಲೇ ಓದ್ತಾ ಇದಾಳೆ. ಗಾಂದಿಮದಿ ಅಂತ. ಎಮ್ಮೆಸ್ಸೀ ಬಯೋಕೆಮಿಸ್ಟ್ರಿ. ನೀವು ನೋಡಿರಬೇಕು. ಬೆಳ್ಳಗಿದ್ದಾಳೆ, ಅವರಮ್ಮನ ಹಾಗೇ. ಆದ್ರೆ ಸ್ವಲ್ಪ ಕುಳ್ಳಿ. ಇನ್ನೂ ಹೈಸ್ಕೂರ್ ಹುಡುಗಿ ಥರಾ ಕಾಣಿಸ್ತಾಳೆ. ನೋಡಿದ್ದೀರಾ?"

"ಇಲ್ಲ ನೋಡಿಲ್ಲ. ಅದು ಬೇರೇ ಡಿಪಾರ್ಟ್‌ಮೆಂಟು. ನಾನು ಆ ಕಡೆ ಹೋಗೋದಿಲ್ಲ" ಅಂದೆ.
"ನಿಮ್ಮದು ಯಾವ ಡಿಪಾರ್ಟ್‌ಮೆಂಟೂ?"
"ಇಂಟರ್‌ನ್ಯಾಷನಲ್ ಸ್ಟಡೀಸ್."
"ಹಂಗಂದ್ರೆ?"
ವಿವರಿಸುವುದಕ್ಕೆ ನನಗೆ ಮನಸ್ಸಿರಲಿಲ್ಲ. "ಅದೇ... ಬೇರೆ ಬೇರೆ ದೇಶಗಳ ಬಗ್ಗೆ." ಚುಟುಕಾಗಿ ಹೇಳಿದೆ.
ಅವನು ಅರ್ಥವಾದಂತೆ ತಲೆದೂಗಿದ. "ಅಂದ್ರೆ ಈ ಅಮೆರಿಕಾ, ಬುಶ್ಶೂ, ಇರಾಕೂ, ಸತ್ತೋದ್ಲಲ್ಲ ಆಯಮ್ಮ... ಬೆನಜಿರ್! ಅಂಥಾದ್ದು ತಾನೆ?"
"ಹ್ಞೂ."

"ಅಲ್ಲಾ ಸಾರ್, ಆಯಮ್ಮನ್ನ ಆ ಥರಾ ಹೊಡೆದು ಹಾಕಿಬಿಟ್ರಲ್ಲಾ... ಹೆಣ್ ಹೆಂಗ್ಸನ್ನ... ಚುಚುಚು. ತಪ್ಪು ಸಾರ್. ಅವಳ ಗಂಡ ಬಲೇ ಕೊರಮ ಅಂತೆ ಸಾರ್. ಅವಳನ್ನ ಹಿಡಕಂಡು ಹೊಡೀತಿದ್ನಂತೆ. ಅವನೇ ಮಾಡಿಸಿರಬೋದಲ್ವಾ ಸಾರ್ ಈ ಕೊಲೇನ?" ಅಂದವನು ನಾನು ಬಾಯಿ ತೆರೆಯುವ ಮೊದಲೇ "ಹ್ಞೂ ಇರ್‍ಲಿ ಬಿಡಿ, ನಮಗ್ಯಾಕೆ ಅವರ ರಗಳೆ. ಅಂದಹಾಗೆ ನಿಮಗೆ ತಿಂಗಳಿಗೆ ಎಷ್ಟು ಸಾರ್ ಸಂಬಳ?" ಅಂದ. ಸಂಬಳ ಹೇಳಿ ಅವನತ್ತ ಕಳ್ಳನೋಟ ಬೀರಿದೆ. ಅವನ ಮುಖದಲ್ಲಿ ತೆಳುವಾಗಿ ನಗೆ ಹರಡಿಕೊಂಡಂತೆ ಕಂಡಿತು. "ಯೂನಿವರ್ಸಿಟೀಲಿ ಪ್ರೊಫೆಸರ್ ಆಗಬೇಕು ಅಂದ್ರೆ ತುಂಬಾ ಓದಿರಬೇಕು ಅಲ್ವಾ ಸಾರ್? ಅದೇನೋ ಎಂಫಿಲ್ಲು, ಪಿಹೆಚ್‌ಡಿ ಅಂತೆಲ್ಲಾ ಭಾಳಾ ವರ್ಷ ಓದಬೇಕು ಅಲ್ವಾ? ಅದನ್ನೆಲ್ಲಾ ಓದಿ ಕೆಲಸಕ್ಕೆ ಸೇರಬೇಕು ಅಂದ್ರೆ ತುಂಬಾನೇ ವಯಸ್ಸಾಗಿಹೋಗಿರ್ತದೆ ಅನ್ನೀ. ಅಂದಹಾಗೆ ಕೆಲಸಕ್ಕೆ ಸೇರಿದಾಗ ಎಷ್ಟಾಗಿತ್ತು ಸಾರ್ ನಿಮಗೆ ವಯಸ್ಸು?"

"ಮೂವತ್ತು." ಹಿಂದಕ್ಕೆ ಒರಗಿದೆ. ನಿಮಿಷಗಳ ಲೆಕ್ಕಾಚಾರ ನಡೆಸಿ ಅವನು ಬಾಯಿ ತೆರೆದ: "ನಾ ಓದಿದ್ದು ಎಸೆಸೆಲ್ಸಿ ಅಷ್ಟೇ. ಅದೂ ಫೇಲು. ಮತ್ತೆ ಕಟ್ಲೇ ಇಲ್ಲ. ಬಿಸಿನೆಸ್ ಶುರು ಮಾಡ್ದೆ. ನೀವು ಈಗ ತಗೋತಾ ಇರೋವಷ್ಟು ಸಂಬಳವನ್ನ ನಾನು ಇಪ್ಪತ್ತೈದನೇ ವಯಸ್ನಲ್ಲೇ ಅಂದ್ರೆ ನಿಮಗೆ ಕೆಲಸ ಸಿಗೋದಕ್ಕೂ ಐದ್ ವರ್ಷ ಮೊದ್ಲೇ ಸಂಪಾದಿಸ್ತಿದ್ದೆ." ಇದೇ ಅರ್ಥದ ಮಾತನ್ನು ನನ್ನ ಹೆಂಡತಿಯ ಸೋದರಮಾವ ಮದುವೆಯೊಂದರಲ್ಲಿ ಹತ್ತಾರು ಜನರೆದುರಿಗೇ ಹೇಳಿದ್ದ.

ಉತ್ತರಿಸದೇ ಕಣ್ಣುಮುಚ್ಚಿದೆ. ಅವನು ನನ್ನ ಪಾಡಿಗೆ ನನ್ನನ್ನು ಬಿಟ್ಟ. ಅವನ ಗೆಳೆಯನಂತೂ ಬಾಯಿ ತೆರೆದಿರಲೇ ಇಲ್ಲ. ಐದಾರು ನಿಮಿಷಗಳಲ್ಲಿ ಕೃಷ್ಣಗಿರಿ ಬಂತು. ರಸ್ತೆ ಬದಿಯ ಟೀ ಅಂಗಡಿಯೊಂದರ ಮುಂದೆ ಕಾರ್ ನಿಲ್ಲಿಸಲು ಡ್ರೈವರ್‌ಗೆ ಹೇಳಿದ ಕುಳ್ಳ ವಾಹನ ನಿಲುಗಡೆಗೆ ಬರುವ ಮೊದಲೇ ಅಂಗಡಿಯನಿಗೆ "ಆರು ಟೀ" ಎಂದು ಕೂಗಿ ಹೇಳಿದ. ಸಾಫ್ಟ್‌ವೇರ್ ಹುಡುಗ ತನಗೆ ಬೇಡ ಅಂದ. ಹೆಂಗಸು ಹೆಗಲಚೀಲದಿಂದ ನೀರಿನ ಬಾಟಲ್ ಹೊರತೆಗೆದು ಬಾಯಿ ಮುಕ್ಕಳಿಸಿ ರಸ್ತೆಬದಿಯ ಮೋರಿಯಂಚಿಗೆ ಉಗಿದು ಟೀ ಲೋಟಕ್ಕೆ ಕೈಯೊಡ್ಡಿದಳು. ಟೀ ಅಂಗಡಿಯವನಿಂದ ನೀರಿನ ಲೋಟ ತೆಗೆದುಕೊಳ್ಳುತ್ತಿದ್ದ ಕುಳ್ಳ ಥಟಕ್ಕನೆ ಕೈ ಹಿಂತೆಗೆದು ಹೆಂಗಸಿನ ವಾಟರ್ ಬಾಟಲಿನತ್ತ ಚಾಚಿದ. ಒಂದೇ ಗುಟುಕಿಗೆ ನೀರನ್ನು ತಳ ಕಾಣಿಸಿದ. "ಆಕ್ವಾಫಿನಾ ನೀರು! ಟೇಸ್ಟ್ ಒಂಥರಾ ಚಂದ. ನೀನೂ ಕುಡಿತೀಯ ರಾಜಪ್ಪಾ?" ಎಂದು ಗೆಳೆಯನನ್ನು ಕೇಳಿದ. ಆ ಮಹರಾಯ ಬಾಟಲನ್ನು ಸೆಳೆದುಕೊಂಡು ಇದ್ದ ನಾಕು ಗುಟುಕನ್ನೂ ಬಾಯಿಗೆ ಸುರಿದುಕೊಂಡ. ಖಾಲಿ ಬಾಟಲನ್ನು ಬೆರಳಿನಿಂದ ಬಡಿಯುತ್ತಾ "ನಿಮ್ ನೀರನ್ನೆಲ್ಲಾ ಖಾಲಿ ಮಾಡಿಬಿಟ್ವಿ ಕಣಮ್ಮ! ಬೇಕು ಅಂದ್ರೆ ಹೇಳಿ. ತುಂಬಿದ ಬಾಟಲ್ ತೆಗೆದುಕೊಡ್ತೀನಿ" ಅಂದ. ಅವನ ಬಾಯಿಂದ ಹೊರಟ ಮೊತ್ತಮೊದಲ ಮಾತು ಅದು. ಹೆಂಗಸು ನಗಾಡುತ್ತಾ "ಹೋಗ್ಲಿ ಬಿಡಿ ಇವರೇ. ಎರಡುಮೂರು ಗಂಟೇನಲ್ಲಿ ತಂಗೀ ಮನೇಲಿರ್ತೀನಿ. ಅಲ್ಲೇ ಕುಡಿದರಾಯ್ತು" ಅಂದಳು.

ಟೀ ಚೆನ್ನಾಗಿತ್ತು. "ಟೀ ಜೊತೆ ನೆಂಜ್ಕೊಳ್ಳಿ, ಚೆನ್ನಾಗಿರುತ್ತೆ" ಎನ್ನುತ್ತಾ ಕುಳ್ಳನ ಗೆಳೆಯ ಅಲ್ಲೇ ಪಾತ್ರೆಯಿಂದ ಒಂದೊಂದು ತಣ್ಣಗಿನ ವಡೆ ತೆಗೆದು ಎಲ್ಲರಿಗೂ ಕೊಟ್ಟ. ನನ್ನನ್ನು ತಡೆದು ಅವನೇ ಅಂಗಡಿಯವನಿಗೆ ಹಣ ತೆತ್ತ. ಈಗ ಬೆಳಕಿನಲ್ಲಿ ಅವನನ್ನು ಸರಿಯಾಗಿ ನೋಡಿದೆ. ಅವನ ಹೆಸರು ಅದೇನೇ ಇರಲಿ, ಕರಿಯ ಎಂದು ಧಾರಾಳವಾಗಿ ಕರೆಯಬಹುದಾದಷ್ಟು ಕಡುಗಪ್ಪನೆಯ ದೇಹ, ಕೋಲುಮುಖ, ಕಡುಗಪ್ಪು ತುಂಡುಗೂದಲು. ಕೈಕಾಲುಗಳು ಕರೀಗೊಬ್ಬಳಿಮರದಲ್ಲಿ ಅಳತೆ ನೋಡಿಕೊಂಡು ಅಚ್ಚುಕಟ್ಟಾಗಿ ಕೆತ್ತಿದಂತಿದ್ದವು.

ಟೀ ಕುಡಿದು ಮತ್ತೆ ಹೊರಟೆವು. ಎರಡುನಿಮಿಷದಲ್ಲಿ ರಸ್ತೆ ಎರಡೂ ಬದಿಗೆ ವಿಶಾಲವಾಗಿ ಹರಡಿಕೊಂಡು ಬೆಳಕಿನಲ್ಲಿ ಮೀಯುತ್ತಿದ್ದ ಚೆಕ್‌ಪೋಸ್ಟ್ ಎದುರಾಯಿತು. ಸಂಜೆ ಇತ್ತ ಬರುವಾಗಲೇ ಪಾವತಿಸಿದ್ದ ರಶೀದಿಯನ್ನು ಕಿಟಕಿಯಲ್ಲಿ ಕೂತು ಕೈಚಾಚಿದ ಹದ್ದುಗಣ್ಣಿನವನ ಮುಖಕ್ಕೆ ಹಿಡಿದು ಡ್ರೈವರ್ ಸುಂಯ್ಯನೆ ವಾಹನ ಚಲಾಯಿಸಿದ. ಬೆಟ್ಟದ ಸೀಮೆಯಲ್ಲಿ ಮೇಲೇರಿ ಕೆಳಗಿಳಿದು ಸಾಗುವ ಸುವಿಶಾಲ ಹೆದ್ದಾರಿ. ಗಾಡಿ ತೂಗಿದಂತಾಗಿ ಮಂಪರುಗಟ್ಟಿತು. ಹೆಂಗಸೂ ಹುಡುಗನೂ ಮಾತಾಡುತ್ತಲೇ ಇದ್ದರು.

ಬಡಿದು ಎಬ್ಬಿಸಿದಂತೆ ಗಕ್ಕನೆ ಎಚ್ಚರವಾಯಿತು. ಕಣ್ಣುಬಿಟ್ಟರೆ ಏನೊಂದೂ ತಿಳಿಯಲಿಲ್ಲ. ಗಾಡಿ ನಿಂತಿತ್ತು. ಒಳಗೆ ಹೊರಗೆ ಪೂರ್ತಿ ಕತ್ತಲೆ. ಏನಾಯಿತೆಂದು ಪಕ್ಕದ ಕುಳ್ಳನನ್ನು ಕೇಳಲು ಬಾಯಿ ತೆರೆಯುವಷ್ಟರಲ್ಲಿ ಕತ್ತಲೇ ನರಳಿದಂತೆ ಡ್ರೈವರನ ಗೋಗರೆಯುವ ದನಿ ಕಿವಿಗೆ ಬಿತ್ತು: "ಸಾರ್, ಗಾಡಿ ನಂದಲ್ಲಾ ಸಾರ್. ನಮ್ ಸಾವ್ಕಾರಿ ಶ್ಯಾನೇ ಖಡಕ್ಕು. ನನ್ ಹೊಟ್ಟೆ ಮೇಲೆ ಹೊಡೀಬೇಡಿ ಸಾರ್. ನಾನು ಮಕ್ಕಳೊಂದಿಗ." ಹಿಂದೆಯೇ ಕರಿಯನ ದನಿ ಕತ್ತಲನ್ನು ಸೀಳಿಕೊಂಡು ಬಂತು: "ಹಾಗೇ ಮುಂದೆ ಹೋಗಿ ಎಡಕ್ಕೆ ತಗೋ. ಹೆಚ್ಚು ಮಾತಾಡಬೇಡ."

ಸರಕ್ಕನೆ ಅತ್ತ ತಿರುಗಿದೆ. ಅವನು ಸೀಟಿನಂಚಿನಲ್ಲಿ ಅರ್ಧ ಎದ್ದವನಂತೆ ಮುಂದಕ್ಕೆ ನಿಗುರಿಕೊಂಡಿದ್ದ. ಅವನ ಕೈ ಡ್ರೈವರ್ ಸೀಟಿನ ಮೇಲಿತ್ತು. ಅಲ್ಲೇನೋ ಬೆಳ್ಳಗೆ ಮಿಂಚಿದಂತಾಯಿತು. ಕಣ್ಣರಳಿಸಿ ನೋಡಿದರೆ ಕಂಡದ್ದು ಕತ್ತಲಿನಲ್ಲೂ ಹೊಳೆಯುತ್ತಿದ್ದ ಚಾಕು.

ಕಥೆಯ ಮುಂದಿನ ಭಾಗ...»

«...ಕಥೆಯ ಹಿಂದಿನ ಭಾಗ«...ಕಥೆಯ ಹಿಂದಿನ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X