• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರು ಇನ್ನಿಲ್ಲ.ಅವನಿಗೆ ವಯಸ್ಸಾಗಿತ್ತು,ಮಕ್ಕಳಿರಲಿಲ್ಲ

By Staff
|

ಸರ್ವಶಕ್ತನಾದ ದೇವರು ಮತ್ತು ಅವನಿಗಿಂತ ಶಕ್ತಿಶಾಲಿಯಾದ ಧರ್ಮ ಅಂತ್ಯವಾದ ನಂತರ ನಾವೆಲ್ಲ ಬದುಕುವುದುಂಟಾ?? ಅಥವಾ ಇನ್ನೂ ಚೆನ್ನಾಗಿ ಬದುಕುವುದು ಸಾಧ್ಯವಾಗುತ್ತದಾ? ದೇವರ ಜೇಬಿಗೆ ಕೈಹಾಕುವ ಕಥಾಕಾಲಕ್ಷೇಪ.

ಪ್ರೇಮಶೇಖರ, ಪಾಂಡಿಚೆರಿ

ದೇವರನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಬಂಧಿಸಲಾಗಿತ್ತು.ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಈ ಸುದ್ದಿ ಪ್ರಕಟವಾಗಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತ್ತು."ಇದೇಕೆ ಹೀಗೆ ಮಾಡಿಬಿಟ್ಟ?"ಎಂದು ಜನ ಇದಿರಿನವರನ್ನು ಕೇಳುತ್ತಿದ್ದರು.ಕೆಲವರು ಮಾತ್ರ ತಮ್ಮನ್ನೇ ಕೇಳಿಕೊಳ್ಳುತ್ತಿದ್ದರು.ಉತ್ತರಕ್ಕಾಗಿ ತಡಕಾಡುತ್ತಿದ್ದರು.

ದೇವರ ಮೇಲೆ ಅವನಿಗೇಕೆ ಅಷ್ಟು ಬೇಸರವಾಯಿತೋ ಗೊತ್ತಿಲ್ಲ.ದೇವರು ಅವನ ಆಸ್ತಿ ಲಪಟಾಯಿಸಿದನೋ,ಅವನಿಗೆ ವ್ಯವಹಾರದಲ್ಲಿ ಮೋಸ ಮಾಡಿದನೋ ಅಥವಾ ಅವನ ಹೆಂಡತಿಯ ಜತೆ ಅನೈತಿಕ ಸಂಬಂಧವನ್ನಿಸಿಕೊಂಡಿದ್ದನೋ ಯಾರಿಗೂ ಗೊತ್ತಿಲ್ಲ.ಅವನಂತೂ ಬಾಯಿ ಬಿಡುತ್ತಲೇ ಇಲ್ಲ.ಕೊಲೆ ನಡೆದ ದಿನದ ಹಿಂದಿನ ಸಂಜೆ ಅವನು ದೇವರ ಜತೆ ಭಯಂಕರವಾಗಿ ಜಗಳಾಡಿದ್ದ ಎಂದು ಅವನ ಅಕ್ಕಪಕ್ಕದವರು ಹೇಳಿದ್ದನ್ನು ಬಿಟ್ಟರೆ ಇಡೀ ಪ್ರಕರಣದ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ.

ಅವನು ದೇವರನ್ನು ಕೊಂದ ಬಗ್ಗೆ ನನಗೆ ಅಂತಹ ಬೇಸರವಿಲ್ಲದಿದ್ದರೂ ಅವನ ಆಯ್ಕೆಯ ಬಗ್ಗೆ ಅಸಮಾಧಾನವಿತ್ತು.ತುಂಬಾ ದೇವರುಗಳಿರುವ ಧರ್ಮದಲ್ಲಿನ ಯಾವುದಾದರೊಂದು ದೇವರನ್ನು ಅವನು ಕೊಂದಿದ್ದರೆ ಜನ ಅದನ್ನು ಇಷ್ಟೋಂದು ತೀವ್ರವಾಗಿ ತೆಗೆದುಕೊಳ್ಳುತ್ತಿರಲಿಲ್ಲ ಅಲ್ಲವೇ?ಸತ್ತ ದೇವರನ್ನು ಹೂತುಬಿಟ್ಟು,ಎರಡು ದಿನ ವಿಚಾರಣೆಯ ನಾಟಕವಾಡಿ,ನಾಕು ದಿನದಲ್ಲಿ ಅವನನ್ನು ಮರೆತು "ನಾವಿದ್ದೀವಲ್ಲ?" ಎಂದು ಹಲ್ಲು ಕಿರಿಯುತ್ತಿದ್ದ ಉಳಿದ ದೇವರುಗಳಲ್ಲೊಬ್ಬರ ಮುಂದೆ ಕಣ್ಣುಮುಚ್ಚಿ ನಿಂತುಬಿಡುತ್ತಿದ್ದರು.

ಆದರೆ ಅವನು ಮಾಡಿದ್ದೇನು? ಅವನು ಕೊಂದದ್ದು ಇಡೀ ಧರ್ಮಕ್ಕೆ ಒಬ್ಬೊಂಟಿಯಾಗಿದ್ದ ದೇವರನ್ನು.ಇದು ತಪ್ಪಲ್ಲವೇ? ಈಗ ನೋಡಿ, ಆ ಧರ್ಮಕ್ಕೆ ದೇವರೇ ಇಲ್ಲದಂತಾಯಿತು.ಹೋಗಲಿ, ಸತ್ತ ದೇವರಿಗೆ ಮಕ್ಕಳಾದರೂ ಇದ್ದವೇ? ಇದ್ದರೆ ಅವರಲ್ಲೊಬ್ಬನನ್ನು ಪಟ್ಟಕ್ಕೇರಿಸಬಹುದಾಗಿತ್ತು.ಅದೂ ಇಲ್ಲ.ದುರಂತವೆಂದರೆ ಆ ದೇವರು ಮದುವೆಯನ್ನೇ ಮಾಡಿಕೊಂಡಿರಲಿಲ್ಲ.ಇನ್ನು ಮಕ್ಕಳೆಲ್ಲಿಂದ ಬಂತು?

ಆ ಧರ್ಮದ ಗುರುಗಳೆಲ್ಲರೂ ಸಭೆ ಸೇರಿ ಚರ್ಚಿಸಿದರು.ಚಿಂತೆಯಲ್ಲಿ ದುಗುಡದಲ್ಲಿ ಬಾಡಿದ್ದ ಅವರ ಮುಖಗಳನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತಿತ್ತು.ಸಭೆಯಲ್ಲಿ ಹಲವಾರು ಆಯ್ಕೆಗಳು ಪ್ರಸ್ತಾಪವಾದವು.ಬೇರೊಂದು ಧರ್ಮದ ದೇವರೊಬ್ಬನನ್ನು ಒಪ್ಪಿಸಿ ಕರೆತಂದು ನಮ್ಮ ಧರ್ಮಕ್ಕೆ ದೇವರಾಗಿ ಕೂರಿಸಿದರೆ ಹೇಗೆ ಎಂದು ಕಿರಿವಯಸ್ಸಿನ ಗುರುವೊಬ್ಬನು ಹೇಳಿದ್ದನ್ನು ಕೇಳಿ ಹಿರಿಯರೆಲ್ಲಾ ಕೆರಳಿದರು.

"ಏನು ಮಾತು ಅಂತ ಆಡ್ತೀಯ ತಲೆಕೆಟ್ಟವನೇ?"ಎಂದು ಬೈದು ಅವನ ಬಾಯಿ ಮುಚ್ಚಿಸಿದರು.ಕಿರಿಗುರುವಿಗಾದ ಗತಿ ಕಂಡು ಉಳಿದ ಅವನ ವಯಸ್ಸಿನವರು ಬಾಯಿ ತೆರೆಯಲೇ ಇಲ್ಲ. "ದೇವರು ಇಲ್ಲದಿದ್ದರೇನಾಯಿತು?ನಾವೊಂದು ಸಮಿತಿ ಮಾಡಿಕೊಂಡು ಧರ್ಮದ ವ್ಯವಹಾರಗಳನ್ನು ನೋಡಿಕೊಳ್ಳುವಾ.ನಮ್ಮ ಧರ್ಮದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದು ಬೇರೆಯವರು ಕಟಕಿಯಾಡುವುದು ತಪ್ಪುತ್ತದೆ"ಎಂದು ಆಕ್ಸ್‌ಫರ್ಡಿನಲ್ಲಿ ಓದಿದ್ದವನೊಬ್ಬ ಸಲಹೆ ನೀಡಿದ.

ಈ ಸಲಹೆ ವಿಚಾರಯೋಗ್ಯವೆಂದು ಹಲವರು ತಲೆದೂಗಿದರು.ಆದರೆ ಸಮಿತಿಯಲ್ಲಿ ಯಾರ್‍ಯಾರಿರಬೇಕು, ಅವರ ಆಯ್ಕೆಯ ಮಾನದಂಡಗಳೇನು, ಅವರ ಅಧಿಕಾರದ ಅವಧಿಯೇನು ಎಂಬ ಪ್ರಶ್ನೆಗಳನ್ನೆತ್ತಿಕೊಂಡು ಭಯಂಕರ ವಿವಾದವೆದ್ದಿತು. ಅದು ಎಷ್ಟು ವಿಪರೀತಕ್ಕಿಟ್ಟುಕೊಂಡಿತೆಂದರೆ ಎಲ್ಲರಿಗೂ ಈ ಸಲಹೆಯ ಬಗ್ಗೇ ಬೇಸರವಾಗಿ ಅದನ್ನು ಮಂಡಿಸಿದ್ದವನನ್ನು "ಶಾಂತಿಯ ಶತ್ರು" ಎಂದು ಕರೆದು ಸಭೆಯಿಂದ ಹೊರಗಟ್ಟಲಾಯಿತು.

ನಂತರ ಮುಂದುವರಿದ ಸಭೆಯಲ್ಲಿ ಉದ್ದನೆಯ ಬಿಳೀ ಗಡ್ಡದ ಹಿರಿಯ ಗುರುವೊಬ್ಬರು ಎದ್ದು ನಿಂತು "ನಮ್ಮ ದೇವರಿಗೆ ಮಕ್ಕಳಿಲ್ಲ ಅಂದವರ್‍ಯಾರು?ನಾವೆಲ್ಲಾ ಅವನ ಮಕ್ಕಳಲ್ಲವೇ? ಅವನನ್ನೇ ನಮ್ಮ ತಂದೆ ಎಂದು ನಂಬಿ ನಾವು ಬದುಕಲಿಲ್ಲವೇ? ಈಗ ದುರದೃಷ್ಟವಶಾತ್ ತಂದೆಯನ್ನು ಕಳೆದುಕೊಂಡಿದ್ದೇವೆ. ತಂದೆ ಹೋದಮೇಲೆ ಹಿರೀಮಗನ ಹೆಗಲಿಗೆ ಜವಾಬ್ದಾರಿ ಬೀಳುತ್ತದೆ ಅಲ್ಲವೇ? ನಾನು ನಿಮಗೆಲ್ಲರಿಗೂ ಹಿರಿಯ. ಇದರರ್ಥ ತೀರಿಹೋದ ದೇವರ ಸ್ಥಾನದಲ್ಲಿ ನಾನು ದೇವರಾಗಬೇಕು" ಅಂದರು.

ಒಂದುಕ್ಷಣ ಸಭೆಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸಿತು.ಆಮೇಲೆ ಒಂದೊಂದಾಗಿ ಅಪಸ್ವರಗಳು ಏಳತೊಡಗಿದವು."ವಯಸ್ಸಿನಲ್ಲಿ ನೀನು ಹಿರಿಯನಾದರೂ ಧರ್ಮವ್ಯವಹಾರದಲ್ಲಿ ನಿನಗಿಂತಲೂ ಹಿರಿಯರು ಇಲ್ಲಿದ್ದಾರೆ.ಹೀಗಾಗಿ ನಿನ್ನ ಮಾತನ್ನು ಒಪ್ಪಲಾಗದು" ಎಂದು ಒಬ್ಬರು ಗಟ್ಟಿದನಿಯಲ್ಲಿ ನುಡಿದರು. ಹಿಂದೆಯೇ ಮತ್ತೊಬ್ಬರು ಎದ್ದುನಿಂತು ಆವೇಶದಿಂದ "ಇವನ್ಯಾವ ಹಿರಿಯ? ಇವರಪ್ಪ ಸುಳ್ಳು ಬರ್ತ್ ಸರ್ಟಿಫಿಕೇಟ್ ಕೊಟ್ಟು ಇವನನ್ನು ಶಾಲೆಗೆ ಸೇರಿಸಿದ್ದಾಗಿ ಅದೇ ಶಾಲೆಯಲ್ಲಿ ಗುಮಾಸ್ತನಾಗಿದ್ದ ನಮ್ಮಪ್ಪ ಹೇಳಿಕೊಂಡು ನಗುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ" ಎಂದು ಕೂಗಿಬಿಟ್ಟರು.

"ನಾನು ಹಿರಿಯ,ನಾನೇ ಹಿರಿಯ" ಎಂದು ಹಲವಾರು ಜನ ಎದ್ದುನಿಂತು ಗಂಟಲು ಹರಿಬಿಟ್ಟು ಕೂಗತೊಡಗಿದರು. ಅದು ವಿಕೋಪಕ್ಕೆ ಹೋಗಿ ಅವರೆಲ್ಲರೂ ತಮ್ಮತಮ್ಮಲ್ಲೇ ಬಡಿದಾಡಿಕೊಳ್ಳತೊಡಗಿದರು. ಈ ಬಡಿದಾಟ ಬೀದಿಬೀದಿಗೆ ಹಬ್ಬಿ ಎಲ್ಲೆಲ್ಲೂ ರಕ್ತಪಾತವಾಯಿತು. ಅಳಿದುಳಿದ ಜನ ಓಡಿಹೋಗಿ ಆಶ್ರಯ ಕೊಟ್ಟ ಇತರ ಧರ್ಮಗಳಿಗೆ ನುಗ್ಗಿ ನಂಬಿಕೆಯುಳಿಸಿಕೊಂಡರು.ಅಥವಾ ಹಾಗೆಂದುಕೊಂಡರು.

ಅಲ್ಲಿಗೆ ಈ ಜಗತ್ತಿನಲ್ಲಿ ಒಂದು ಧರ್ಮ ಕಡಿಮೆಯಾಗಿ ಅಷ್ಟರ ಮಟ್ಟಿಗೆ ಶಾಂತಿ ಹುಟ್ಟಿತು.

ಇದನ್ನು ನೋಡಿದ ಹಲವು ವಿಚಾರವಾದಿಗಳು ಒಂದು ಸಭೆ ಸೇರಿ ಎಲ್ಲಾ ಧರ್ಮಗಳ ದೇವರುಗಳಿಗೆಲ್ಲಾ ಮರಣದಂಡನೆ ವಿಧಿಸಿ ಧರ್ಮಗಳನ್ನು ದೇವರುಗಳಿಂದಲೂ,ತನ್ಮೂಲಕ ಜಗತ್ತನ್ನು ಧರ್ಮಗಳಿಂದಲೂ ರಕ್ಷಿಸಬೇಕೆಂದು ಠರಾವು ಮಂಡಿಸಿದರು. ಅನತಿ ಕಾಲದಲ್ಲೇ ಈ ನಿರ್ಣಯ ಎಲ್ಲರಿಗೂ ಒಪ್ಪಿಗೆಯಾಗಿ ದೇವರುಗಳ ಸಾಮೂಹಿಕ ಅಂತ್ಯವಾಯಿತು. ಅವರ ಜತೆಗೇ ಅವರ ಧರ್ಮಗಳೂ ಅಂತ್ಯಗೊಂಡವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more