• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುರುಡೆ

By Staff
|

(...ಕಥೆಯ ಹಿಂದಿನ ಭಾಗ)

ಹಣತೆಯನ್ನಿರಿಸಿದ್ದು ಒಂದು ಮಾನವತಲೆಯ ಮೇಲೆ!

ಅಗಲ ಕಪ್ಪು ಕಣ್ಣಗೂಡುಗಳು, ಮೂಗಿನ ಹಳ್ಳ, ವಿಕಾರ ಹಲ್ಲುಗಳು! ನಸುಗಾಳಿಯಲ್ಲಿ ಓಲಾಡುತ್ತಿದ್ದ ಹಣತೆಯ ಬೆಳಕು ಆ ವಿಕಾರ ತಲೆಯನ್ನು ಒಮ್ಮೆ ಅನಾವರಣಗೊಳಿಸಿದರೆ ಮತ್ತೊಮ್ಮೆ ಕತ್ತಲೆಗೆ ನೂಕಿ ಅಕರಾಳ ವಿಕರಾಳ ದೃಶ್ಯಗಳನ್ನು ಸೃಷ್ಟಿಸುತ್ತಿತ್ತು. ಯ ಮೇಲೆ ಆಡುತ್ತಿದ್ದ ನೆರಳುಬೆಳಕಿನ ಓಲಾಟ ಇಡೀ ದೃಶ್ಯವನ್ನು ಮತ್ತಷ್ಟು ಭೀಬತ್ಸವಾಗಿಸಿತು. ಅದೊಂದು ಭಯಾನಕ ನೋಟ.

ಇದನ್ನು ಇಲ್ಲಿ ಇಟ್ಟವರು ಯಾರು?

ಕತ್ತಲಲ್ಲಿ ಇದ್ದಕ್ಕಿದ್ದಂತೇ ಅವತರಿಸಿ, ಬಂದಂತೇ ಮಾಯವಾಗಿಹೋದ ಕರೀ ಆಕೃತಿ! ಈ ಸುಡುಗಾಡಿನಲ್ಲಿ ತೇಲಿಬಂದ ಮಲ್ಲಿಗೆಯ ಸುವಾಸನೆ! ಹೆಣ್ಣಿನ ಕಿಲಿಕಿಲಿ ನಗು! ತಲೆಯ ಮೇಲೆ ಉರಿಯುತ್ತಿರುವ ಹಣತೆ!

ಇದ್ಯಾವುದೂ ಸಹಜವಾಗಿರಲು ಸಾಧ್ಯವಿಲ್ಲ. ಇದೆಲ್ಲದರ ಹಿಂದೆ ಇರುವುದು...!

ದೆವ್ವದ ಕೈವಾಡವೇ?

ಅಂದರೆ ಭೂತಪ್ರೇತಗಳಿರುವುದು ನಿಜವೇ? ದೆವ್ವದ ಕಥೆ ಹೇಳಿ ಮಾಧವಿಯನ್ನು ಫೂಲ್‌ ಮಾಡಹೊರಟ ನಾನು ಈಗ ನಿಜವಾಗಿಯೂ ದೆವ್ವಗಳ ಕೈಗೆ ಸಿಕ್ಕಿಬಿದ್ದಿದ್ದೇನೆಯೇ? ಭೂತದ ಕತೆ ಪ್ರಕಟಿಸಿದ ಪತ್ರಿಕೆಗೆ ''"" ಎಂದು ಹೆಸರಿಡಿ ಎಂದ ನನ್ನ ಉದ್ಧಟತನಕ್ಕೆ ಬುದ್ಧಿ ಕಲಿಸಲೆಂದೇ ಈ ಸುಡುಗಾಡಿನ ದೆವ್ವಗಳು ಹಂಚಿಕೆ ಹಾಕಿವೆಯೇ? '' ಎಂದೆಯಲ್ಲಾ, ಈಗ ನೋಡು ತಲೆಯನ್ನು"" ಎಂದು ಅಣಕಿಸುತ್ತಿವೆಯೇ?

ಹಾಗೆಯೇ ಇರಬೇಕು.

ದೇವರೇ ಈಗೇನು ಮಾಡುವುದು?

ಆಕಾಶಕ್ಕೆ ತಲೆಯೆತ್ತಿದೆ. ''ಹ್ಞೂಮ್‌"" ಎಂಬ ಹೂಂಕಾರ ಹತ್ತಿರದಲ್ಲೇ ಕೇಳಿಬಂತು. ಬೆಚ್ಚಿ ಮೇಲೆತ್ತಿದ ತಲೆಯನ್ನು ಕೆಳಗಿಳಿಸುವಷ್ಟರಲ್ಲಿ ಹಣತೆ ಫಕ್ಕನೆ ಆರಿಹೋಯಿತು. ಸುತ್ತಲೂ ಕವಿದ ಗಾಧಾಂಧಕಾರ... ಮರುಕ್ಷಣ ''ಹಹಹಹಾ"" ಎಂಬ ವಿಕಟ ಅಟ್ಟಹಾಸ ಬೆನ್ನಹಿಂದಿನಿಂದ ಕಿವಿಗಪ್ಪಳಿಸಿತು!

ನಾನು ಬೆಚ್ಚಿದೆ. ಅರೆಕ್ಷಣದಲ್ಲಿ ಜಳಜಳನೆ ಬೆವತುಹೋದೆ. ನರನಾಡಿಗಳಲ್ಲಿ ಅತೀವ ಭಯ ಹಿಮಜಲದಂತೆ ಪ್ರವಹಿಸಿತು. ಒಮ್ಮೆ ''ಅಮ್ಮಾ"" ಎಂದು ಚೀರಿ ಹೆಗಲಲ್ಲಿದ್ದ ಬ್ಯಾಗನ್ನು ಕೆಳಗೆ ಹಾಕಿ ಕತ್ತಲಲ್ಲಿ ಹುಚ್ಚನಂತೆ ಓಡಿದೆ. ಪೊದೆಗಳಿಗೆ ಕಾಲು ಹಾಕಿ ಬೀಳುವುದನ್ನೂ ಲೆಕ್ಕಿಸದೇ ಜಿಗಿಜಿಗಿದು ಓಡಿದೆ. ಒಂದು ಕ್ಷಣದಲ್ಲಿ ಕೆರೆಯ ಏರಿಯ ಮೇಲೆ ನಿಂತಿದ್ದೆ, ಏದುಸಿರುಬಿಡುತ್ತಾ.

ನನ್ನ ಬೆನ್ನ ಹಿಂದೆ ಕಪ್ಪನೆಯ ಮರಗಿಡಗಳು, ಅದರಾಚೆ ಸ್ಮಶಾನ. ಮುಂದೆ ದಾರಿಗಡ್ಡವಾಗಿ ವಿಶಾಲ ಕೆರೆ. ಮುಂದೆ ಹೋಗಲು ಸಾಧ್ಯವಿಲ್ಲ. ಕೋಟಿ ಕೊಟ್ಟರೂ ನಾನು ಮತ್ತೆ ಹಿಂದೆ ತಿರುಗಿ ಆ ಮರಗಳ ಗುಂಪಿನೊಳಗೆ ಹೋಗಲಾರೆ.

ಅಂದರೆ ಈಗೇನು ಮಾಡುವುದು? ಹಿಂದೆ ತಿರುಗಿ ನೋಡಲು ಭಯವಾಗಿ ನಡುಗುತ್ತಾ ಕೆರೆಯನ್ನೇ ದಿಟ್ಟಿಸಿದೆ.

ವಿಶಾಲ ಕೆರೆಯ ಮೇಲ್ಮೈ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿತ್ತು. ದಡದತ್ತ ತೇಲಿಬರುತ್ತಿದ್ದ ಪುಟ್ಟಪುಟ್ಟ ಅಲೆಗಳು, ಬಲಕ್ಕೆ ಪುಟ್ಟ ಕಾಲುವೆಯೊಂದರಲ್ಲಿ ಹರಿದುಹೋಗುತ್ತಿದ್ದ ನೀರಿನ ಜುಳುಜುಳು ನಿನಾದ, ನಿದ್ರಿಸುತ್ತಿರುವಂತೆ ನಿಶ್ಚಲವಾಗಿ ನಿಂತ ಗಿಡಮರಗಳು... ಮುಂದೆ ಕೆರೆಯಾಚೆ ಮೂಡಲಲ್ಲಿ ಮೂಡುತ್ತಿದ್ದ ಕೆಂಪು...

ಆಗೊಮ್ಮೆ ಲಘುವಾಗಿ ಗಾಳಿ ಬೀಸಿತು. ಅದರೊಡನೆ ತೇಲಿಬಂದ ಮಲ್ಲಿಗೆಯ ಸುವಾಸನೆ!

ನನ್ನೆದೆ ಮತ್ತೆ ಢವಢವ ಹೊಡೆದುಕೊಂಡಿತು. ಮರುಕ್ಷಣ ಬೆನ್ನ ಹಿಂದೆ ಗೆಜ್ಜೆಯ ''ರಿkುಲ್‌ ರಿkುಲ್‌"" ಸಪ್ಪಳ ಕೇಳಿಬಂತು!

ಗಕ್ಕನೆ ಹಿಂದೆ ತಿರುಗಿದೆ. ಮರಗಟ್ಟಿ ನಿಂತುಬಿಟ್ಟೆ.

ನನ್ನಿಂದ ಹತ್ತು ಗಜಗಳ ದೂರದಲ್ಲಿ ನಿಂತ ಬಿಳಿ ಸೀರೆಯ ಸ್ತ್ರೀ!

ಬಿಳುಪು ದುಂಡುಮುಖ, ಅಗಲ ಕಣ್ಣುಗಳು, ನಗು ಸೂಸುತ್ತಿದ್ದ ಬಾಯಿ, ಗಾಳಿಯಲ್ಲಿ ಅಲೆಯಂತೆ ತೇಲುತ್ತಿದ್ದ ನೀಳಕೇಶರಾಶಿ, ಅಚ್ಚಬಿಳಿಯ ಸೀರೆ ರವಿಕೆ...

ಮೈಗಾಡ್‌! ಇದು ಮೋಹಿನಿಯೇ?

ಅವಳತ್ತ ಭೀತ ನೋಟ ಹೂಡಿದೆ. ಅವಳು ಒಮ್ಮೆ ಕಿಲಕಿಲ ನಕ್ಕಳು. ನಗುತ್ತಾ ಎರಡು ಕೈಗಳನ್ನೂ ಅತ್ತಿತ್ತ ಆಡಿಸುತ್ತಾ ಮುಂದೆ ಅಡಿಯಿಟ್ಟಳು... ಒಂದೊಂದೇ ಹೆಜ್ಜೆಯಿಟ್ಟು ನನ್ನತ್ತ ಬರತೊಡಗಿದಳು!

ಇನ್ನು ನನ್ನ ಕಥೆ ಮುಗಿಯಿತು!

''ಓಹ್‌ ಬೇಡ ಬೇಡಾ"" ಚೀರಿದೆ. ಗಕ್ಕನೆ ಕೇಳಗೆ ಕೂತುಬಿಟ್ಟೆ. ಮರುಕ್ಷಣ ಎದ್ದುನಿಂತೆ. ಕಾಲುಗಳನ್ನು ನೆಲಕ್ಕೆ ''ಧಪಧಪ"" ಬಡಿದೆ. ""ನನ್ನನ್ನ ಮುಟ್ಬೇಡಾ"" ಹತಾಷೆಯಲ್ಲಿ ಅರಚಿದೆ. ಅವಳ ನಗೆ ದೊಡ್ಡದಾಯಿತು. ವೇಗವಾಗಿ ನನ್ನನ್ನು ಸಮೀಪಿಸಿದಳು...

ನಾನು ಹಿಂದೆ ಒಂದು ಹೆಜ್ಜೆ ಇಟ್ಟೆ. ಇನ್ನೊಂದು... ಮತ್ತೊಂದು... ನಾಲ್ಕನೆಯ ಹೆಜ್ಜೆಗೆ ನೆಲ ಸಿಗಲಿಲ್ಲ. ''ಅಯ್ಯೋ"" ಎಂದು ಚೀರುತ್ತಾ ಕೆರೆಯೊಳಗೆ ಬಿದ್ದೆ.

ಒಂದುಕ್ಷಣ ಕಣ್ಣಮುಂದೆ ಗಾಢಾಂಧಕಾರ. ಕಿವಿಯಲ್ಲಿ ಅಲೆಗಳ ಮೊರೆತ... ಗಾಬರಿಯಿಂದ ಹೊರಬಂದಂತೇ ಕೇವಲ ಮಂಡಿಯೆತ್ತರದ ನೀರಿನಲ್ಲಿ ನಾನು ಅರೆಮುಳುಗಿ ಬಿದ್ದಿರುವುದು ಅರಿವಿಗೆ ಬಂತು. ಕೈಕಾಲುಗಳಿಂದ ನೆಲವನ್ನು ತಡವುತ್ತಾ ಎದ್ದುನಿಂತೆ. ವೃದ್ಧಿಸುತ್ತಿದ್ದ ಪೂರ್ವದ ಕೆಂಪಿನಲ್ಲಿ ನನ್ನ ಮುಂದಿನ ದೃಶ್ಯ ಸ್ಪಷ್ಟವಾಗಿ ಕಂಡಿತು.

ನನ್ನಿಂದ ನಾಲ್ಕು ಅಡಿ ದೂರದಲ್ಲಿ ಮೋಹಿನಿ ಅದೇ ನಗುಮೊಗದಲ್ಲಿ ನಿಂತಿದ್ದಳು. ಅವಳ ಎಡಬಲದಲ್ಲಿ ನಿಂತಿರುವವರು...

ಅದು... ಅದು... ಮಧು ಮತ್ತು ಮಾಧವಿ!

ಇದೇನು ಕನಸೇ? ಕಣ್ಣಮುಂದಿನ ದೃಶ್ಯವನ್ನೇ ಬೆಪ್ಪನಂತೆ ನೋಡಿದೆ. ಹಾಗೇ ನೋಡುತ್ತಿದ್ದಂತೇ ಮೂವರ ಬಾಯಿಂದಲೂ ಏಕಕಾಲದಲ್ಲಿ ಉದ್ಗಾರ ಹೊರಟಿತು.

''ಏಪ್ರಿಲ್‌ ಫೂಲ್‌! ಏಪ್ರಿಲ್‌ ಫೂಲ್‌!!""

ನಾನು ದಂಗಾಗಿಹೋಗಿದ್ದೆ. ಇದೆಲ್ಲಾ ಇವರು ಹೂಡಿದ ನಾಟಕ! ದೆವ್ವ, ಮೋಹಿನಿ ಏನೂ ಇಲ್ಲ! ಎಲ್ಲವನ್ನೂ ನಿಜ ಎಂದು ನಂಬಿದ ನಾನು ಭರ್ಜರಿಯಾಗಿ ಫೂಲ್‌ ಆಗಿಹೋಗಿದ್ದೆ!

ಮಧು ಕೆರೆಗಿಳಿದು ನನ್ನ ಕೈ ಹಿಡಿದ. ಮತ್ತೊಂದು ಕೈಯನ್ನು ಮಾಧವಿ ಹಿಡಿದಳು. ಇಬ್ಬರೂ ನನ್ನನ್ನು ದಡ ಹತ್ತಿಸಿದರು. ನನ್ನ ಕಿವಿಗೆ ಹತ್ತಿರದಲ್ಲೇ ''ಏಪ್ರಿಲ್‌ ಫೂಲ್‌"" ಎಂದು ಒಟ್ಟಾಗಿ ಕೂಗಿದರು. ''ಏನ್ರೀ ನನ್ನನ್ನ ಪೂಲ್‌ ಮಾಡೋದಿಕ್ಕೆ ಪ್ಲಾನ್‌ ಹಾಕಿದ್ರಿ. ಈಗ ಯಾರಪ್ಪಾ ಫೂಲ್‌ ಆದೋರು?"" ಮಾಧವಿ ಅಣಕಿಸಿದಳು. ಮೋಹಿನಿ ಕಿಲಕಿಲ ನಕ್ಕಳು.

ಕೆರೆಯ ನೀರಿಗೆ ಬಿದ್ದು ಎದ್ದು ಛಳಿಯಲ್ಲಿ ನಡುಗುತ್ತಿದ್ದ ನನ್ನ ಬಾಯಿಂದ ಮಾತುಗಳು ಹೊರಡಲಿಲ್ಲ. ಬದಲಾಗಿ ಹಲ್ಲುಗಳು ಕಟಕಟ ಸದ್ದು ಮಾಡಿದವು.

'' ಹೇಗಿತ್ತು ಭಾವಾಜೀ?"" ಮಧು ಕೀಟಲೆಯ ದನಿ ತೆಗೆದ. ನನ್ನ ಪೆಚ್ಚುಮುಖವನ್ನು ನೋಡಿ ಮಾತು ಮುಂದುವರೆಸಿದ- ''ಅದನ್ನ ನೋಡಿ ಹೆದರಿಬಿಟ್ರಾ? ಅದು ನಿಜವಾದ ತಲೆ ಅಲ್ಲ ಭಾವಾಜೀ. ನಮ್ಮ ಕಾಲೇಜಿನ ನಾಟಕಕ್ಕೆ ಅಂತ ನಾನು ಥರ್ಮೋಕೋಲ್‌ನಲ್ಲಿ ಮಾಡಿದ್ದು ಅದು.""

ನಾನು ಕಣ್ಣು ಕಣ್ಣು ಬಿಟ್ಟೆ. ಅವನ ಮಾತು ಮುಂದುವರೆಯಿತು.

''ಊರಿನ ದಾರಿ ಬಿಟ್ಟು ನಿಮ್ಮನ್ನ ಈ ದಾರಿಗೆ ಹತ್ತಿಸಿದ ಕರೀ ಕಂಬಳಿಯ ಮನುಷ್ಯ ನಾನೇ. 'ಹಹಹಹಾ" ಅಂತ ನಕ್ಕು ನಿಮ್ಮನ್ನ ಹೆದರಿಸಿದೋನೂ ನಾನೇ. ತಲೆ ಯ ಮೇಲೆ ದೀಪ ಹಚ್ಚಿದೋಳು ಅಕ್ಕ. ನೀವು ಆಕಾಶಕ್ಕೆ ತಲೆ ಎತ್ತಿದಾಗ ದೀಪಾನ್ನ ಆರಿಸಿಬಿಟ್ಟೋಳೂ ಅವಳೇ.""

ಮಾಧವಿ ಕಿಸಕ್ಕನೆ ನಕ್ಕಳು.

''ನಂಗೇ ಗೊತ್ತೇ ಆಗ್ಲಿಲ್ಲ."" ಕಷ್ಟಪಟ್ಟು ಈ ಮೂರು ಪದಗಳನ್ನು ಹೊರಡಿಸಿದೆ.

ಮಾಧವಿ ಮತ್ತೊಮ್ಮೆ ಬಾಯಿ ತೆರೆದು ನಕ್ಕಳು. ನಗುತ್ತಲೇ ಹೇಳಿದಳು- ''ನಿಮಗೆ ಗೊತ್ತಿಲ್ಲದ್ದು ಇನ್ನೂ ಒಂದಿದೆ."" ನನ್ನ ಮಂಕುಮುಖವನ್ನು ನೋಡುತ್ತಾ ನಗೆಯೊಡನೆ ಸೇರಿಸಿದಳು- ''ಮಧೂ ಜತೆ ಸೇರ್ಕೊಂಡು ನನ್ನನ್ನ ಫೂಲ್‌ ಮಾಡೋದಿಕ್ಕೆ ನೋಡಿದ್ರಿ. ಆದ್ರೆ ನಿಮಗೆ ತಿಳಿಯದೇ ಇರೋ ವಿಷಯ ಏನು ಅಂದ್ರೆ ಒಬ್ಬ ತಮ್ಮ ತನ್ನ ಅಕ್ಕನ ಜತೆ ಸೇರ್ಕೊಂಡು ಭಾವನ್ನ ಗೋಳಾಡಿಸ್ತಾನೆಯೇ ವಿನಃ ಭಾವನ ಜತೆ ಸೇರ್ಕೊಂಡು ತನ್ನ ಅಕ್ಕನ್ನ ಯಾವತ್ತೂ ಗೋಳಾಡಿಸೋದಿಲ್ಲ."" ಅವಳ ನಗೆ ದೊಡ್ಡದಾಯಿತು. ನಾನು ಕಣ್ಣುಕಣ್ಣು ಬಿಟ್ಟೆ.

''ಅಂದಹಾಗೆ ಈ ಮೋಹಿನಿ ಯಾರು ಗೊತ್ತಾ ಭಾವಾಜೀ?"" ಮಧು ಪ್ರಶ್ನಿಸಿದ. ನನ್ನ ಬೆಪ್ಪುನೋಟವನ್ನು ನೋಡಿ ಒಮ್ಮೆ ನಕ್ಕು ಮುಂದುವರೆಸಿದ- ''ಇವಳು ನಮ್ಮ ಸೋದರಮಾವನ ಮಗಳು ನಾಗಶ್ರೀ. ಮೊನ್ನೆ ತಾನೇ ಭೋಪಾಲ್‌ನಿಂದ ಬಂದ್ಲು. ಬಿಳೀಸೀರೆ ಉಟ್ಕೊಂಡು, ಕಾಲಿಗೆ ಗೆಜ್ಜೆ ಕಟ್ಕೊಂಡು, ಕೂದಲಿಗೆ ಸಾಕಷ್ಟು ಪ್ಯಾರಾಶ್ಯೂಟ್‌ ಜಾಸ್ಮಿನ್‌ ಹೇರ್‌ ಆಯಿಲ್‌ ಹಚ್ಕೊಂಡು ಮಲ್ಲಿಗೆ ಪರಿಮಳ ಸೂಸ್ತಾ ನಿಮ್ಮನ್ನ ಬೆಪ್ಪು ಮಾಡಿ ಹಳ್ಳಕ್ಕೆ... ಅಲ್ಲಲ್ಲಾ ಕೆರೆಗೆ ಬೀಳಿಸಿದ್ಲು.""

''ಈ ಪ್ರಕರಣಾನ ನಾನು ಯಾವತ್ತೂ ಮರೆಯೋಕೆ ಆಗಲ್ಲಪ್ಪಾ. ಒಳ್ಳೇ ತಮಾಷೆ."" ನಾಗಶ್ರೀ ಮೈಕುಲುಕಿಸುತ್ತಾ ನಗತೊಡಗಿದಳು. ಅವಳ ನಗೆಗೆ ಮಧು ಹಾಗೂ ಮಾಧವಿಯ ನಗೆಯೂ ಸೇರಿಕೊಂಡಿತು.

ನಾನು ತಲೆ ತಗ್ಗಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more