ಸರಿದು ಹೋಗುವ ಮುನ್ನ ಬೆನ್ನಲ್ಲಿ ವಿಳಾಸ ಬರೆದಿಟ್ಟುಬಿಡು!
ಒಮ್ಮೆ ಕಾಡಿಸು ನನ್ನನ್ನು
ಲೂಟಿ ಮಾಡಿಬಿಡು
ಕೂದಲು ಕೆದರಿ
ರೂಪವಳಿಸಿಬಿಡು
ಮತ್ತೆ ಮತ್ತೆ ಮೂಡುವ ಇಬ್ಬನಿಯಂತೆ
ಉಳಿಯದಂತೆ ನೆನಪುಗಳೂ ಕುಡಿದುಬಿಡು
ಬಿಗುವಾದ ನನ್ನೆದೆಯ ನಡುವೆ
ಉಸಿರಿಟ್ಟು ಆಕಾಶಗಾಮಿಯಾಗಿಬಿಡು

ಅವಿತು ಕೆಣಕಿ ಅಳಿಸಿ
ಅನಿರೀಕ್ಷಿತಗಳ ಸ್ಪರ್ಶಿಸಿಬಿಡು
ತುಟಿ ನಾಲಿಗೆ ಎಂಜಲಿನಿಂದ
ಕೊರಳಲಿ ನಕ್ಷತ್ರ ಹೊಳೆಸಿಬಿಡು
ನನ್ನ ಬರಿದಿನೊಳಗೆ
ಅರ್ಧ ಔನ್ಸ್ ಆಯುಷ್ಯವಾಗಿಬಿಡು
ಪ್ರಾಣದ ಕೊನೆಯಂಚಿನಲಿ
ಹೂವಿನ ಸಂಚಾರವಾಗಿಬಿಡು
ಅಸ್ತಿಮಜ್ಜೆಯ ಮಂಡಲದಲ್ಲಿ ಸುಳಿದು
ಕಿಬ್ಬೊಟ್ಟೆಯಲಿ ರೆಕ್ಕೆಯಾಗಿಬಿಡು
ನೀ ಬದುಕುತ್ತಲೇ ನನ್ನ ಪಾಲೂ
ಸಲ್ಲಿಸಲು ಅವಕಾಶ ಕೊಟ್ಟುಬಿಡು
ಸರಿದು ಹೋಗುವ ಮುನ್ನ
ಬೆನ್ನಲ್ಲಿ ವಿಳಾಸ ಬರೆದಿಟ್ಟುಬಿಡು!












Click it and Unblock the Notifications