ಕವನ: ಕಸೂತಿ ಹುಡುಗಿ ಮೇ 1 X 365
ವೈಜ್ಞಾನಿಕ ಸಮಾಜವಾದದ ಪ್ರವರ್ತಕರಾದ ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡ್ರಿಕ್ ಎಂಗೆಲ್ಸ್ ಇವರು ಎಂಟು ಗಂಟೆಗಳ ಕೆಲಸದ ದಿನ ಜಾರಿಗೆ ಬರಬೇಕು ಎಂದು ತಮ್ಮ ಅನೇಕ ಬರವಣಿಗೆಗಳಲ್ಲಿ ಪ್ರತಿಪಾದಿಸಿದ್ದರು. 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಆ ದಿನ ಅಮೆರಿಕೆಯಲ್ಲಿ ಸುಮಾರು ಐದು ಲಕ್ಷ ಜನ, ಎಂಟು ಗಂಟೆಯ ಕೆಲಸದ ದಿನಕ್ಕಾಗಿ ಪ್ರದರ್ಶನವನ್ನು ಹೂಡಿದ್ದರು. ಇವರಲ್ಲಿ ಸುಮಾರು ಎರಡು ಲಕ್ಷ ಜನ ಮುಷ್ಕರವನ್ನು ಹೂಡಿದ್ದರು.
ಮೇ, 1 ನೆಯ ತಾರೀಖನ್ನು 'ವಿಶ್ವಕಾರ್ಮಿಕರದಿನ' ವೆಂದೂ 'ದೀಕ್ಷಾದಿನ' ವಾಗಿಯೂ ಆಚರಿಸುವಂತೆ ರೂಪಿಸಲಾಯಿತು. ಎಲ್ಲಾ ದೇಶಗಳ ಕಾರ್ಮಿಕರೇ ಒಂದಾಗಿರಿ, ಒಂದಾಗಿರಿ', 'ವಿಶ್ವದ ಕಾರ್ಮಿಕರೇ ಒಂದಾಗಿರಿ', ಇದು 'ಮೇ ದಿನಾಚರಣೆ' ಯ ಘೋಷಣೆ. ಮೇ ಡೇ ಅಂಗವಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರ ನಿರಂತರ ದುಡಿಮೆ ಕುರಿತಂತೆ ಒಂದು ಕವನ ಇಲ್ಲಿದೆ ತಪ್ಪದೇ ಓದಿ...

ದುಂಡು ತ್ರಿಕೋನ ಕತ್ತರಿ ಚೌಕದ ಹೊಲಿಗೆ
ನವಿಲ ಕಣ್ಣು ಪೋಲ್ಕಾ ಡಿಜೈನ್ ಪಕಳೆಗಳೊಳಗೆ ತೂರಿ ನಕ್ಷತ್ರ
ಸೆರಗಿಗೆ ನೆಟ್ ಹಿಮ್ಮಡಿಯಂಚಿಗೆಂದೇ ಫಾಲ್ಸ್
ಬಾಟಿಕ್ ಪ್ರಿಂಟ್ ಓರೆಕೋರೆಯಾಗದ ಜಿಗ್ ಜಾಗ್ ತುದಿಗೆ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಇಲ್ಲೊಬ್ಬ ಕಸೂತಿ ಹುಡುಗಿಯಿದ್ದಾಳೆ
ಸಣ್ಣ ಕಣ್ಣಿನ ಸೂಜಿಯೊಳಕ್ಕೆ ದಾರ ಪೋಣಿಸಿ
ಹೈ ನೆಕ್ ವೀ ನೆಕ್ ಡೀಪ್ ನೆಕ್
ಎಡಕ್ಕೆ ನಕ್ಕಿಯಿಟ್ಟು ಬಲದಲ್ಲಿ ಚಮಕಿ ಬಿಟ್ಟು
ನೆರಿಗೆಗಳ ಮೇಲೆ ಮೇಲೊಂದರಂತೆ ಒತ್ತರಿಸಿ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಹೀಗೊಬ್ಬ ಕಸೂತಿ ಹುಡುಗಿಯಿದ್ದಾಳೆ
ಕಾಲುಗಳನ್ನು ಒತ್ತುತ್ತಾ ಕೈ ಬಂಡಿ ತಿರುವುತ್ತಾ
ಜಿಪ್ ಎತ್ತರಿಸಿ ನಡು ಬಿಗಿಯಾಗಿಸಿ
ಸ್ಲೀವ್ ಲೆಸ್ ಪುಶ್ ಬ್ಯಾಕ್ ಉದ್ದನೆಯ ಲಂಗ
ಕೆಂಪು ಗೌನುಗಳಿಗೆ ಫ್ರಿಲ್ಸ್ ಸೇರಿಸುತ್ತಾ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಇಲ್ಲಿ ಕಸೂತಿ ಹುಡುಗಿಯೊಬ್ಬಳಿದ್ದಾಳೆ
ಹಿಡಿದು ಎಳೆದರೆ ಹರಿದು ಹೋಗುವ ಭಯ
ಬಿಳಿ ಜಾಲಕ್ಕೆ ಕ್ರೋಶದ ಕಡ್ಡಿ ಚುಚ್ಚಿ
ಉಬ್ಬು ತಗ್ಗಿಗೆ ಡಾಟ್ಸ್ ಕಠೋರಿ ಕಟ್ ಕೊಟ್ಟು
ಡಬಲ್ ಹೊಲಿಗೆ ಬಿದ್ದರೆ ಪೋಷಾಕಿನ ಅಭಯ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಆಹಾ ! ಎನಿಸುವಂಥ ಕಸೂತಿ ಹುಡುಗಿಯಿದ್ದಾಳೆ
ಕಾರ್ಖಾನೆಯ ಸೈರನ್ ಕೂಗುತ್ತಲೇ
ಗಾರ್ಮೆಂಟ್ ಗೆ ದಪ್ಪ ಟಾಕ ಸಣ್ಣ ಹೆಮ್ಮಿಂಗ್
ಅನಾರ್ಕಲಿ ಅಂಬ್ರೆಲ್ಲಾ ಮಾದರಿಗಳು
ಹೊಲಿಗೆಗಳ ನಡುನಡುವೆ ಮೌನವನು ಇರಿಸುತ್ತಲೇ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ನಗು ನಗುತ್ತಾ ಈ ಹುಡುಗಿ ಕಸೂತಿಯಾಗಿಬಿಡುತ್ತಾಳೆ !












Click it and Unblock the Notifications