Get Updates
Get notified of breaking news, exclusive insights, and must-see stories!

ಗೌರಮ್ಮನವರ ಛಂದಸ್ಸುಬದ್ಧ ಕವಿತೆ ಚಿರದುಃಖಿನಿ

Kannada poetess MB Gowramma (1933-2000)
ಎಂ.ಬಿ. ಗೌರಮ್ಮನವರು ರಚಿಸಿದ ಕವನ ಚಿರದುಃಖಿನಿಯನ್ನು ವಿವೇಚಿಸುವುದು ಈ ಲೇಖನದ ಉದ್ದೇಶ. ಮಹಾಭಾರತದಲ್ಲಿ ಬರುವ ಗಾಂಧಾರಿಯ ಪಾತ್ರ ವಿಶಿಷ್ಟವಾದುದು. ಆಕೆ ಕುರುವಂಶದ ಧೃತರಾಷ್ಟ್ರನ ಹೆಂಡತಿ ಹಾಗೂ 100 ಜನ ಕೌರವರ (ಮತ್ತು ದುಃಶಲೆಯ) ತಾಯಿ. ಮೇಲ್ನೋಟಕ್ಕೆ ಅವಳ ಜೀವನ ಉಜ್ವಲವಾಗಿರುತ್ತದೆ: ಆಕೆ ಕುರುವಂಶದ ಪಟ್ಟಮಹಿಷಿ. ವಿಶಾಲವಾದ, ಸಂಪದ್ಭರಿತವಾದ, ಭರತಖಂಡದ ಚಕ್ರವರ್ತಿಯಾದ ಧೃತರಾಷ್ಟ್ರನ ಹೆಂಡತಿಯಾಗಿ ಮಹಾರಾಣಿಯಾಗಿ ಮೆರೆಯುವಂತಹವಳು. ರಾಜ್ಯ, ಕೋಶ, ಸಂಪತ್ತು, ಅಧಿಕಾರ ಎಲ್ಲವನ್ನೂ ಹೊಂದಿರುವವಳು. ನೂರು ಜನ ಪುತ್ರರನ್ನು ಹಡೆದ ಮಹಾಮಾತೆ. ಐಹಿಕ ಉಪಭೋಗಗಳ ಸಮೃದ್ಧಿಯಲ್ಲಿಯೇ ಬೆಳೆದು, ಜೀವಿಸುತ್ತಿರುವವಳು. ಜನ್ಮದಿಂದ ಗಾಂಧಾರ ದೇಶದ ರಾಜಕುಮಾರಿ, ನಂತರ ಕುರುವಂಶದ ಮಹಾರಾಣಿ. ಅವಳಿಗೇನು ಕೊರತೆ? ಯಾರು ಕೂಡಾ ಅಸೂಯೆ ಪಡುವಂತಹ, ಆಯಕಟ್ಟಿನ ಸ್ಥಳದಲ್ಲಿ ಪ್ರತಿಷ್ಠಾಪನೆಯಾದ ನಾರಿಮಣಿ.

ಗಾಂಧಾರಿಗೆ ಅಭಿಮುಖವಾಗಿ ಬರುವ ಪಾತ್ರ ಕುಂತಿ. ಈಕೆ ಪಾಂಡುವಿನ ಹೆಂಡತಿ, ಪಂಚಪಾಂಡವರ ತಾಯಿ. ತಮ್ಮ ಜೀವಿತಾವಧಿಯ ಕೊಂಚಕಾಲವನ್ನು ಹೊರತುಪಡಿಸಿದರೆ, ಪಾಂಡವರ ಮತ್ತು ದ್ರೌಪದಿಯ ಜೀವನ ಕಷ್ಟ ಮತ್ತು ದುಃಖದಿಂದ ಭೂಯಿಷ್ಟವಾಗಿದೆ. ಧರ್ಮಾತ್ಮರಾದ ಅವರ ಬದುಕಿನ ಜೊತೆಗೆ ಕುಂತಿಯ ಜೀವನ ತಳುಕು ಹಾಕಿಕೊಂಡಿರುವುದರಿಂದ, ಮಹಾಭಾರತದ ಓದುಗರ ಸಹಾನುಭೂತಿಯೆಲ್ಲಾ ಕುಂತಿ ಮತ್ತು ಪಾಂಡವರ ಕಡೆಗೆ. ಕೌರವರು ದುರಾತ್ಮರು ಎಂಬ ಒಂದೇ ಕಾರಣಕ್ಕಾಗಿ ಗಾಂಧಾರಿಗೆ ಮರುಗುವವರು ಬಹಳ ಜನರಿಲ್ಲ!

ಹಾಗೆ ನೋಡಿದರೆ, ಗಾಂಧಾರಿಯು ಪುಣ್ಯಾತಗಿತ್ತಿಯೆ ಸರಿ. ಆಕೆಯೂ ಸಹ ಮಹಾ ಪತಿವ್ರತೆ. ತನ್ನ ಪತಿ ದೃಷ್ಟಿಹೀನನಾದ್ದರಿಂದ, ಆತನಿಗಿಲ್ಲದ ದೃಷ್ಟಿಭಾಗ್ಯ ತನಗೇಕೆ ಬೇಕೆಂದು ಭಾವಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ತನ್ನ ಚಕ್ಷುವನ್ನು ತ್ಯಾಗ ಮಾಡಿದ ಸತಿಶಿರೋಮಣಿ! ಅನುಗಾಲವೂ ತನ್ನ ಪತಿಯ ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಚಿಂತಿಸುತ್ತಿರುವ ನಾರೀಮಣಿ. ಧೃತರಾಷ್ಟ್ರನ ಆತ್ಮಸಾಕ್ಷಿಯಾಗಿ ನಿಂತುಕೊಂಡು, ಸದಾ ಕಾಲ ಅವನ ಒಳಿತಿಗಾಗಿ ಅವನಿಗೆ ಅಪ್ರಿಯವಾಗುತ್ತಿದ್ದರೂ ಸಹ ಒಳ್ಳೆಯ ಬುದ್ಧಿಯನ್ನು ಬೋಧಿಸುತ್ತಿರುವ ಪತಿವ್ರತೆ. ಕುಂತಿಯ ಜೊತೆಗಿನ ಅವಳ ಸಖ್ಯ ಬಹಳ ನಿರ್ಮಲವಾದುದು ಹಾಗೂ ನಿಷ್ಕಲ್ಮಷವಾದುದು. ಕೌರವರ ಮತ್ತು ಪಾಂಡವರ ಹಿತಾಸಕ್ತಿಗಳು ಸಂಘರ್ಷವಾಗುತ್ತಿದ್ದಾಗಲೂ ಸಹ, ಗಾಂಧಾರಿ ಧರ್ಮಾತ್ಮರಾದ ಪಾಂಡವರಿಗೆಂದೂ ಕೇಡನ್ನು ಬಯಸುವುದಿಲ್ಲ. ಇದು ಆಕೆಯ ಉನ್ನತ ನ್ಯಾಯನಿಲುವಿಗೆ ಮತ್ತು ಧರ್ಮಬುದ್ಧಿಗೆ ಹಿಡಿದ ಕನ್ನಡಿ.

ಹೀಗೆ ಧರ್ಮಮಾರ್ಗದಲ್ಲಿ ನಡೆಯುತ್ತಲೇ, ತನ್ನ ಮಾನಸಿಕ ದುಃಖಗಳನ್ನು ನುಂಗಿಕೊಂಡು ಜೀವನ ನಡೆಸಿದ ಧೀರೋದಾತ್ತ ನಾರೀಮಣಿ ಗಾಂಧಾರಿ. ಬಾಹ್ಯಪ್ರಪಂಚದ ಶ್ರೀಮಂತಿಕೆ ಆಕೆಯ ಅಂತರಂಗದ ನೆಮ್ಮದಿ ಮತ್ತು ಶಾಂತಿಯನ್ನು ಕಿತ್ತುಕೊಂಡಿರುವುದು ವಿಧಿಯ ವಿಪರ್ಯಾಸ! ವಿಶ್ವದ ಸಕಲ ದುಃಖಗಳನ್ನು ಸಂಚಯನ ಮಾಡಿಕೊಂಡು, ಅದರಿಂದಲೇ ಆವಿರ್ಭವಿಸಿದ ಮೂರ್ತಿಯಂತೆ ಗಾಂಧಾರಿ ತೋರುತ್ತಿರುವಳು. ಭರತಖಂಡದ ಪಟ್ಟಮಹಿಷಿಯಾಗಿದ್ದ ಆಕೆಯ ಪದತಲದಲ್ಲಿ ಅಮೋಘ ಐಶ್ವರ್ಯವಿದ್ದರೂ, ತನ್ನ ಜೀವನದಲ್ಲಿ ಒಂದಿನಿತೂ ಸುಖ ಮತ್ತು ಸಂತೋಷಗಳನ್ನು ಅನುಭವಿಸದೆ, ಕಡೆಯ ತನಕ ದುಃಖಸಾಗರದಲ್ಲಿ ಮುಳುಗಿಹೋಗುತ್ತಾಳೆ ಗಾಂಧಾರಿ.

ಅರಮನೆಯಲ್ಲಿದ್ದರೂ ಅನಾಥೆ : ಹುಟ್ಟಿದಾರಭ್ಯ ಸಾಯುವ ತನಕ ಮಡುಗಟ್ಟಿದ ದುಃಖದಲ್ಲೇ ಜೀವನ ಸವೆಸಿದ ಗಾಂಧಾರಿಯ ಬದುಕನ್ನು ಅವಲೋಕಿಸುವುದು ಇಲ್ಲಿ ಪ್ರಸ್ತುತವೆನಿಸುತ್ತದೆ: ಗಾಂಧಾರ ದೇಶದ ರಾಜಕುಮಾರಿಯಾಗಿ ಜನಿಸಿದ ಅವಳು, ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡು, ಮಾತೃವಾತ್ಸಲ್ಯದಿಂದ ವಂಚಿತಳಾಗುತ್ತಾಳೆ. ಬುದ್ಧಿತಿಳಿಯುವ ಮೊದಲೇ ತಾಯಿ ಮರಣವನ್ನಪ್ಪಿದಾಗ, ಆ ಎಳೆಯ ವಯಸ್ಸಿನಲ್ಲಿ ಆಕೆಯ ಮೃದುಮನಸ್ಸಿನ ಮೇಲೆ ಎಂತಹ ಆಘಾತವಾಗಿರಬೇಡ? ದಾಸಿಯರ ಆರೈಕೆಯಲ್ಲಿ ಬೆಳೆದ ಆಕೆ, ಅರಮನೆಯಲ್ಲಿದ್ದರೂ ಅನಾಥೆ! ನಂತರ ಪ್ರಾಪ್ತವಯಸ್ಸಿಗೆ ಬಂದ ಆಕೆಗೆ, ಸಹಜವಾಗಿಯೇ ವಿವಾಹದ ಪ್ರಸ್ತಾಪಗಳು ಬರುತ್ತವೆ.

ಕುರುವಂಶದ ರಾಜಕುಮಾರನಾದ ಧೃತರಾಷ್ಟ್ರನ ಮದುವೆಯನ್ನು ಗಾಂಧಾರಿಯ ಜೊತೆ ಮಾಡಿಕೊಡಬೇಕೆಂಬ ಪ್ರಸ್ತಾಪವನ್ನು ಭೀಷ್ಮ ಮಂಡಿಸುತ್ತಾನೆ. ಮುಂದೆ ಅಖಂಡ ಕುರುರಾಜ್ಯದ ಉತ್ತರಾಧಿಕಾರಿಯಾಗಿ ಆಳುವವನ ಪಟ್ಟದರಾಣಿಯಾಗಿ ಹೋಗುವ ಸಾಧ್ಯತೆಯನ್ನು ಗಮನಿಸಿ, ಗಾಂಧಾರಿಯ ತಂದೆ ಸುಬಲ ಆ ಪ್ರಸ್ತಾಪಕ್ಕೆ ಒಪ್ಪುತ್ತಾನೆ. ತಾರುಣ್ಯದ ಪ್ರವರ್ಧಮಾನದಲ್ಲಿರುವ ಧೃತರಾಷ್ಟ್ರನ ಸುಂದರ ಮುಖಾರವಿಂದವನ್ನು ಭಾವಚಿತ್ರವನ್ನು ನೋಡಿ, ಗಾಂಧಾರಿ ಅವನಲ್ಲಿ ಮೋಹಿತಳಾಗುತ್ತಾಳೆ. ಅಮಾಯಕಳಾದ ಗಾಂಧಾರಿ, ಅಣ್ಣನಾದ ಶಕುನಿಯನ್ನು ನಂಬಿ, ಧೃತರಾಷ್ಟ್ರನನ್ನು ವರಿಸುತ್ತಾಳೆ. ಆದರೆ, ಧೃತರಾಷ್ಟ್ರ ಹುಟ್ಟುಕುರುಡ ಎಂಬ ಸತ್ಯಾಂಶ ತಿಳಿಯುವ ಹೊತ್ತಿಗೆ ಕಾಲಮಿಂಚಿರುತ್ತದೆ! ವಿಧಿ ಅವಳ ಜೀವನದಲ್ಲಿ ಆಡಿದ ಗುಟ್ಟಿನ ಆಟಕ್ಕೆ ಗಾಂಧಾರಿ ಬಲಿಯಾಗುತ್ತಾಳೆ.

ಕುರುವಂಶಾಧೀಶನನ್ನು ಮದುವೆಯಾಗಿ, ಮಹಾರಾಣಿಯಾಗಿ ಸಾಮ್ರಾಜ್ಯಸುಖವನ್ನು ಅನುಭವಿಸುತ್ತೇನೆ ಎಂಬಂತಹ ಕನಸುಗಳನ್ನು ಕಟ್ಟಿಕೊಂಡ ಆಶಾಸೌಧ, ಅವಳ ಕಣ್ಣೆದುರಿನಲ್ಲೇ ಕುಸಿದುಬೀಳುತ್ತದೆ. ಅಂದಿಗೇ ಅವಳ ಸಕಲ ಆಸೆ, ಸುಖ ಮತ್ತು ಸಂತೋಷಗಳು ಕೊನೆಕಾಣುತ್ತವೆ. ತೀವ್ರ ನಿರಾಶಾಭಾವ ಅವಳನ್ನು ಆಕ್ರಮಿಸುತ್ತದೆ. ಭಗ್ನಹೃದಯಿಯಾದ ಆಕೆ ಜೀವನದಲ್ಲಿ ತನಗಿನ್ನಾವ ಸುಖಸಂತೋಷಗಳಿವೆ ಎಂದು ಬಗೆದು, ತನ್ನ ಪತಿಗೆ ಇಲ್ಲದ ದೃಷ್ಟಿಭಾಗ್ಯ ತನಗೂ ಬೇಡ ಎಂದು ನಿರ್ಧರಿಸಿ, ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೀವಿಸಲು ಆರಂಭಿಸುತ್ತಾಳೆ.

ಯೌವನದಲ್ಲಿ ಮನಸ್ಸು ಕಾಮನೆಗಳ ಬೀಡಾಗಿರುತ್ತದೆ. ತನ್ನ ಭವಿಷ್ಯದ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತದೆ. ಆದರೆ ಅಂತಹ ಕಾಮನೆಗಳು ಸಾಕಾರವಾಗುವ ಸಮಯದಲ್ಲೇ ಭ್ರಮನಿರಸನವಾದರೆ, ತುಟಿಯ ಮೇಲೆ ಅರಳಬೇಕಾದ ಮಂದಹಾಸ ಅಲ್ಲೇ ಕಮರಿಹೋಗುತ್ತದೆ. ಆಸೆಗಳು ಬತ್ತಿಹೋಗಿ, ಮನಸ್ಸು ಕನವರಿಕೆಯಿಂದ ಮಿಡುಕಲು ಆರಂಭಿಸುತ್ತದೆ. ಗಾಂಧಾರಿ ಏರು ಜವನಿಕೆಯಿಂದ ಕಂಗೊಳಿಸುತ್ತಿರುವಾಗ, ಅತೃಪ್ತ ಕಾಮನೆಗಳು ಅವಳ ತನುವನ್ನೇ ಸುಡಲು ಶುರುಮಾಡಿಬಿಡುತ್ತವೆ. ಯಾರಿಗೂ ಹೇಳಲಾರದಂತಹ ಸ್ಥಿತಿಯಲ್ಲಿ ಆಕೆ ಸಿಲುಕಿ, ತನ್ನ ದುಃಖವನ್ನು ಮೌನವಾಗಿ ಸಹಿಸಲು ಉದ್ಯುಕ್ತಳಾಗುತ್ತಾಳೆ.

ತನ್ನ ಬದುಕಿಗೆ ಗಾಢಾಂಧಕಾರ ಆವರಿಸಿಕೊಂಡಿದ್ದಕ್ಕೆ ಹಳಿಹಳಿಪಟ್ಟುಕೊಳ್ಳುತ್ತಾಳೆ. ಇನ್ನು ತಾನು ಯಾವ ಸುಖ-ಸಂತೋಷಕ್ಕಾಗಿ ಬಾಳಬೇಕು? ಕಾತುರದಿಂದ ಎದುರುನೋಡಲು ತನ್ನ ಜೀವನದಲ್ಲಿ ಉಳಿದಿರುವುದಾದರೂ ಏನು? ಸಾಮ್ರಾಜ್ಯದ ರಾಣಿಪಟ್ಟ, ಐಶ್ವರ್ಯ, ಅಧಿಕಾರ, ಯೌವನ ಇವುಗಳಾವುವೂ ಅವಳ ನೊಂದ ಬೆಂದ ಮನಸ್ಸಿಗೆ ಸಾಂತ್ವನ ನೀಡಲು ಅಸಮರ್ಥವಾಗುತ್ತದೆ. ಸಾವೇ ತನ್ನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದುಕೊಂಡು, ಆತ್ಮಹತ್ಯೆ ಮಾಡಿಕೊಳ್ಳಲು ಯಮುನಾ ನದಿಯ ಬಳಿಗೆ ಹೋಗುತ್ತಾಳೆ. ಇನ್ನೇನು ನದಿಯೊಳಗೆ ಹಾರಬೇಕು, ಅಷ್ಟರಲ್ಲಿ ಅವಳ ಕಣ್ಣು ಮುಂದೆ, ತನ್ನನ್ನೇ ನಂಬಿ ಮದುವೆಯಾದ ಧೃತರಾಷ್ಟ್ರನ ಚಿತ್ರ ಮೂಡುತ್ತದೆ! ಅರೆರೆ, ತನ್ನಿಂದ ಎಂತಹ ಪ್ರಮಾದವಾಗಿಬಿಡುತ್ತಿತ್ತಲ್ಲ! ತಾನು ಸತ್ತಿದ್ದರೆ, ಅವನನ್ನು ನೋಡಿಕೊಳ್ಳುವವರು ಯಾರು? ಆ ಕ್ಷಣ ಅವಳ ಕರ್ತವ್ಯಪ್ರಜ್ಞೆ ಜಾಗೃತವಾಗುತ್ತದೆ. ಕೊನೇ ಘಳಿಗೆಯಲ್ಲಿ ತನ್ನನ್ನು ಎಚ್ಚರಿಸಿದ ಮಹಾದೇವನಿಗೆ ಮನಸ್ಸಿನಲ್ಲೇ ವಂದಿಸಿ, ಗಾಂಧಾರಿ ಅರಮನೆಗೆ ಹಿಂದಿರುಗುತ್ತಾಳೆ.

ದೇವರನ್ನು ಕೈಬಿಟ್ಟ ಗಾಂಧಾರಿ : ಅರಮನೆಗೆ ಹಿಂದಿರುಗಿದಳೇನೋ ಸರಿ, ಆದರೆ ಅವಳಿಗೆ ಬೇಸರ, ದುಃಖ ಮತ್ತು ವಿಷಣ್ಣತೆಗಳಿಂದ ಮುಕ್ತಿ ಸಿಗುವುದಿಲ್ಲ. ಹಾಗಾಗಲು ಬದಲಾಗಿರುವುದಾದರೂ ಏನು? ಅದೇ ಕುರುಡ ಗಂಡ ಮತ್ತು ತನ್ನ ಬಾಳಿಗೆ ಗಾಢಾಂಧಕಾರ ಒದಗಿಸಿದ ಕಣ್ಣಿನ ಪಟ್ಟಿ! ಯೌವನದ ಪ್ರವರ್ಧಮಾನದಲ್ಲಿ ಹೆಣ್ಣು ತನ್ನನ್ನು ಸಿಂಗರಿಸಿಕೊಳ್ಳಲು ಹೆಚ್ಚು ಸಮಯ ಕಳೆಯುವುದು ಸರ್ವೇಸಾಮಾನ್ಯ. ತನ್ನ ಸೌಂದರ್ಯವನ್ನು ನೋಡಿ ಸಂತೋಷಪಡಲು ತನಗೆ ಮತ್ತು ತನ್ನ ಪತಿಗೆ ಸಾಧ್ಯವಿಲ್ಲದ ಮೇಲೆ, ಅಂತಹ ಸಿಂಗಾರ ತನಗೇಕೆ ಬೇಕು? ಆ ಒಂದು ಘಳಿಗೆಯ ಧಿಡೀರ್ ನಿರ್ಧಾರದಿಂದಾಗಿ ತನ್ನ ಬಾಳೆಲ್ಲಾ ಕತ್ತಲುಮಯವಾದ್ದರಿಂದ, ಇನ್ನು ಜೀವನದ ಸ್ವಾರಸ್ಯದ ಕ್ಷಣಗಳನ್ನು ಕಟ್ಟಿಕೊಡುವ ಹಬ್ಬ ಹರಿದಿನಗಳಿಗೇನು ಬೆಲೆ? ಯಾವ ದೇವರೂ ಸಹ ತನ್ನ ಬಾಳಿನ ದುಃಖಗಳನ್ನು ಪರಿಹರಿಸಲಾರ ಎಂದು ಗಾಂಧಾರಿಗೆ ಮನವರಿಕೆಯಾದ ಕ್ಷಣ, ಆಕೆ ಭಗವಂತನಲ್ಲಿ ತನ್ನ ಬೇಡಿಕೆಗಳನ್ನು ಮಂಡಿಸುವುದನ್ನು ಸಹ ಬಿಟ್ಟುಬಿಡುತ್ತಾಳೆ!

ಬಾಳಿನಿಂದ ಕ್ರಮೇಣ ವಿಮುಖವಾಗುತ್ತಾ ಗಾಂಧಾರಿ ಮುಂದುವರೆಯುತ್ತಾಳೆ. ಕುರುವಂಶದ ಯಾವ ವೈಭವ ಮತ್ತು ಐಶ್ವರ್ಯಗಳೂ ಸಹ ಅವಳ ಬಾಳಿನಲ್ಲಿ ಉತ್ಸಾಹದ ಚಿಲುಮೆಯನ್ನು ಸೃಷ್ಟಿಸಲು ವಿಫಲವಾಗುತ್ತವೆ. ಅಷ್ಟೇ ಏಕೆ, ತನಗೆ ಒದಗಿದ 100 ಪುತ್ರರ ಸಂತಾನಭಾಗ್ಯ ಕೂಡಾ ಅವಳಲ್ಲಿ ಬತ್ತಿಹೋದ ಸಂತೋಷವನ್ನು ಮತ್ತೆ ಸ್ಫುರಿಸುವುದಿಲ್ಲ. (ಮಕ್ಕಳ ಬಾಲ್ಯದ ಆಟಪಾಠಗಳನ್ನು ನೋಡಿ ಆನಂದಿಸಲು ಕಣ್ಣೇ ಇಲ್ಲವಲ್ಲ!) ಹೀಗೆಯೇ ಒಮ್ಮೆ ಮ್ಲಾನವದನಳಾಗಿ ಕುಳಿತಿದ್ದಾಗ, ಅವಳ ಬಾಲ್ಯದಲ್ಲಿ ಜರುಗಿದ ಘಟನೆಯ ದೃಶ್ಯಾವಳಿಯೊಂದು, ಮನಃಪಟಲದ ಮೇಲೆ ಧುತ್ತೆಂದು ಮೂಡಿಬರುತ್ತದೆ.

ಗಾಂಧಾರಿ ಯೋಚಿಸುತ್ತಿರುತ್ತಾಳೆ : ನಾನಿನ್ನೂ ಆಗ ಚಿಕ್ಕ ಹುಡುಗಿ; ಹದಿಹರೆಯವನ್ನು ಇನ್ನೂ ಪ್ರವೇಶಿಸಿರಲಿಕ್ಕಿಲ್ಲ. ಬಾಲ್ಯಕ್ಕೆ ಸಹಜವಾದ ಉತ್ಸಾಹದ ಚಿಲುಮೆಯಂತೆ ನಾನಿದ್ದೆ. ಹೀಗೊಮ್ಮೆ ಒಂದು ದಿನ, ನನ್ನ ಗೆಳತಿಯರೆಲ್ಲಾ ಅರಮನೆಗೆ ನನ್ನನ್ನು ನೋಡಲು ಬಂದರು. ಗಾಂಧಾರಿ, ಇವತ್ತು ಚಿತ್ರಶಾಲೆಯಲ್ಲಿ ಒಂದು ಚಿತ್ರಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ನಾವೆಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ. ನೀನೂ ಕೂಡಾ ನಮ್ಮೊಂದಿಗೆ ಬಾ! ನಿನ್ನ ಕೈಚಳಕವನ್ನು ತೋರಿಸುವೆಯಂತೆ, ಬಾ ಹೋಗೋಣ! ಎಂದು ನನ್ನನ್ನು ಒತ್ತಾಯಿಸಿದರು. ಚಿತ್ರಕಲೆಯಲ್ಲಿ ಸಹಜವಾಗಿಯೇ ಆಸಕ್ತಳಾದ ನಾನು, ನನ್ನ ಆಪ್ತ ಗೆಳತಿಯರೊಡನೆ ಚಿತ್ರಶಾಲೆಗೆ ಹೊರಟೆ.

ನನಗೆ ಅರಮನೆಯಲ್ಲಿ ಚಿತ್ರಕಲೆಯಲ್ಲಿ ವಿಶೇಷ ಶಿಕ್ಷಣ ಲಭ್ಯವಾಗಿತ್ತು. ಹೀಗಾಗಿ ಆ ಕಲೆಯಲ್ಲಿ ನನಗೆ ಪರಿಣತಿ ಮತ್ತು ಆತ್ಮವಿಶ್ವಾಸ ಎರಡೂ ಸ್ವಾಭಾವಿಕವಾಗಿ ಒದಗಿಬಂದಿತ್ತು. ಆ ಸ್ಪರ್ಧೆಯಲ್ಲಿ ನನ್ನನ್ನು ಸರಿಗಟ್ಟುವವರು ಯಾರೂ ಇಲ್ಲ ಎಂದು ನಾನಾಗ ಸಾಧಿಸಬೇಕಿತ್ತು! ಹೀಗಾಗಿ, ನಾನು ಉತ್ಸಾಹದಿಂದ ಮತ್ತು ಆತ್ಮವಿಶ್ವಾಸದಿಂದ ಚಿತ್ರವನ್ನು ರಚಿಸಲು ಆರಂಭಿಸಿದೆ. ಎಡ-ಬಲಕ್ಕೆ ತಿರುಗದೆ, ಏಕಾಗ್ರತೆಯಿಂದ ಚಿತ್ರವನ್ನು ಬಿಡಿಸತೊಡಗಿದೆ. ನನ್ನ ಚಿತ್ರ ಅತ್ಯುತ್ತಮವಾಗಿ ಮೂಡಿಬರುತ್ತಿದ್ದುದರಿಂದ, ಸಹಜವಾಗಿಯೇ ನಾನು ಪುಳಕಿತಳಾಗಿದ್ದೆ.

ಸಾಮಾನ್ಯವಾಗಿ ಎಲ್ಲ ಕಲಾವಿದರೂ ತಮ್ಮ ಚಿತ್ರದಲ್ಲಿ ವ್ಯಕ್ತಿಯ ಕಣ್ಣನ್ನು ಕಟ್ಟಕಡೆಗೆ ಚಿತ್ರಿಸುತ್ತಾರೆ. ನನಗೂ ಸಹ ಅದೇ ರೀತಿಯಲ್ಲಿ ಶಿಕ್ಷಣವನ್ನು ನೀಡಲಾಗಿತ್ತು. ನಾನು ರಚಿಸಿದ ಚಿತ್ರ ಮುಗಿಯುವ ಹಂತಕ್ಕೆ ಬಂದಿತ್ತು. ಕಾಲಾವಕಾಶ ಕಡಿಮೆಯಾಗುತ್ತಿತ್ತು. ಎಲ್ಲರಿಗಿಂತ ಅದ್ವಿತೀಯವಾಗಿ ಚಿತ್ರವನ್ನು ರಚಿಸಿ, ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬ ಉಮೇದಿನಲ್ಲಿ, ನನ್ನ ಚಿತ್ರದ ವ್ಯಕ್ತಿಯ ಕಣ್ಣನ್ನು ಚಿತ್ರಿಸಲು ನನಗೆ ಮರತೇಹೋಯಿತು. ಅಷ್ಟರಲ್ಲಿ ಸ್ಪರ್ಧೆಯ ಕಾಲಾವಕಾಶ ಕೂಡಾ ಮುಗಿದುಹೋಯಿತು. (ಆ ದಿನ ನನಗೇಕೆ ಅಷ್ಟೊಂದು ಮರೆವು ಬಂದಿತೋ, ಅದು ಇಂದಿಗೂ ನನಗೆ ಒಗಟಾಗಿಯೇ ಉಳಿದಿದೆ.) ಸ್ಪರ್ಧೆಯ ನಂತರ, ಪ್ರತಿಯೊಬ್ಬರೂ ರಚಿಸಿದ ಕಲಾಕೃತಿಗಳನ್ನು ಚಿತ್ರಶಾಲೆಯಲ್ಲಿ ಪ್ರದರ್ಶಿಸಿದರು. ನಾನು ಬರೆದ ಚಿತ್ರವನ್ನು ಓರಗೆಯ ಗೆಳತಿಯರು, ನೀನು ರಚಿಸಿದ ಚಿತ್ರದವನು ಹುಟ್ಟುಕುರುಡ! ಎಂದು ಹೇಳಿ, ಕೈ ತೋರಿಸಿ ಕೇಕೆ ಹಾಕಿ ನಗತೊಡಗಿದರು.

ಇಂದಿಗೂ ನನಗೆ ಆ ದಿನದ ಘಟನೆಯನ್ನು ಮರೆಯಲು ಸಾಧ್ಯವಾಗಿಲ್ಲ. ಅಂದು ನಾನು ಹುಡುಗಾಟಿಕೆಯಿಂದ ಏನನ್ನು ಮಾಡಿದೆನೋ, ಅದೇ ಇಂದು ನನ್ನ ಬಾಳಬುತ್ತಿಯಾಗಿ ಪರಿಣಮಿಸಿತಲ್ಲ! ಆ ಘಟನೆ ನಡೆದು ಹಲವಾರು ವರ್ಷಗಳಾದರೂ, ತನ್ನ ಚಿತ್ತಪಟಲದಲ್ಲಿ ಮಾತ್ರ ಅಳಿಸಲಾರದಷ್ಟು ಸ್ಪಷ್ಟವಾದ ಛಾಪ ಹಾಕಿದೆ. ವಿಧಿಯ ಆಟವನ್ನು ಬಲ್ಲವರಾರು? ನಾನು ಚಿತ್ರ ಬರೆದು ಮುಗಿಸುವ ಹೊತ್ತಿಗೇ, ವಿಧಿ ತನ್ನ ಬಾಳಭವಿಷ್ಯವನ್ನು ಬರೆದು ಮುಗಿಸಿಬಿಟ್ಟಿತಲ್ಲ. ಮುಂದೆ ದೊರೆಯಲಿರುವ ಪತಿಯ ಬಗ್ಗೆ, ವಿಧಿ ಮುನ್ಸೂಚನೆಯನ್ನು ಹೇಗೆ ಒದಗಿಸಿತು? ಆ ದುರ್ಘಟನೆಯನ್ನು ಮನಸ್ಸಿನಿಂದ ಕಿತ್ತೊಗೆಯಲು ಸಾಧ್ಯವಾಗಿಲ್ಲವಲ್ಲ. ಎಂದು ಗಾಂಧಾರಿ ಹಳಿಹಳಿ ಪಟ್ಟುಕೊಳ್ಳತೊಡಗುತ್ತಾಳೆ.

ಹಡೆದದ್ದೇ ತಪ್ಪಾಯಿತೆ? : ತಾನು ನೂರು ಮಕ್ಕಳನ್ನು ಹಡೆದರೇನು ಬಂತು ಭಾಗ್ಯ? ದುರಾತ್ಮರಾದ ಅವರಿಂದ ಜಗಕ್ಕೇನು ಒಳ್ಳೆಯದಾಗಿದೆ? ಹುಟ್ಟಿದಾರಭ್ಯ ಕೊನೆಯ ತನಕ ಅವರು ಅಧರ್ಮಮಾರ್ಗದಲ್ಲೇ ನಡೆಯುತ್ತ ಬರುತ್ತಿದ್ದಾರೆ. ಹೆಜ್ಜೆಹೆಜ್ಜೆಗೆ ತಾನು ಅವರ ಒಳಿತಿಗಾಗಿ ಹೇಳಿದ ಉಪದೇಶ ಅವರ ಮನಸ್ಸಿಗೆ ಕೊಂಚವೂ ನಾಟಲಿಲ್ಲವಲ್ಲ? (ಹಾಗೆಯೇ ಪತಿಯನ್ನು ಸದಾ ಎಚ್ಚರಿಸುತ್ತಾ ನಡೆದರೂ, ಪುತ್ರಮೋಹದ ಪರಾಕಾಷ್ಠತೆಯಿಂದ ಅವನೂ ಧರ್ಮಮಾರ್ಗದಲ್ಲಿ ನಡೆಯಲಿಲ್ಲವಲ್ಲ.) ಅಂತಹ ತನ್ನ ಮಕ್ಕಳು ಜಗದ ಕಣ್ಣಿಗೆ ಕ್ರೂರಾತ್ಮರಾಗಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಹಡೆದ ತಪ್ಪಿಗೆ, ತನಗೂ ಸಹ ಸಾರ್ವಜನಿಕರ ಸಹಾನುಭೂತಿ ದೊರೆಯದೆ ಹೋಗುತ್ತಿದೆಯಲ್ಲ!

ಕೊನೆಗೆ ನೂರು ಜನ ದುರುಳ ಕೌರವರು ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಾರೆ! ಅವರ ದುರ್ಮರಣದಿಂದ ಅವರ ಪತ್ನಿಯರೆಲ್ಲಾ ವಿಧವೆಯರು ಆಗುತ್ತಾರೆ. ಪುತ್ರಶೋಕಂ ನಿರಂತರಂ ಎನ್ನುವಂತೆ ಗಾಂಧಾರಿಯ ದುಃಖ ಅಪಾರವಾದುದು. ಹೆಣ್ಣಾದ ಆಕೆ ಸೊಸೆಯಂದಿರ ದುಃಖವೆಲ್ಲವನ್ನೂ ತನ್ನದೆಂದೇ ಭಾವಿಸಿ, ತನ್ನ ಮೈಮೇಲೆ ಎಳೆದುಕೊಂಡಿದ್ದಾಳೆ ಇದುವರೆವಿಗೆ ತಾನು ಅನುಭವಿಸಿದ ದುಃಖ ಸಾಲದೆಂಬಂತೆ!

ಸಂಗ್ರಾಹ್ಯವಾಗಿ ಆದರೆ ಸಮಗ್ರವಾಗಿ ಗಾಂಧಾರಿಯ ಬಾಳಿನ ದುಃಖದ ಬಗ್ಗೆ ಹೇಳುವುದಾದರೆ, ಆಕೆ ಕುರುಡನನ್ನು ಮದುವೆಯಾಗಿದ್ದೇ ಅಲ್ಲದೆ, ಸ್ವಇಚ್ಛೆಯಿಂದ ಕಣ್ಣಿದ್ದೂ ಕುರುಡಿಯಾಗುತ್ತಾಳೆ. ಅರಮನೆಯ ವೈಭೋಗ, ಸುಖ, ಸಮೃದ್ಧಿ ಮತ್ತು ಮಹಾರಾಣಿಯ ಪಟ್ಟ ಕೂಡಾ ಅವಳಿಗೆ ಕಿಂಚಿತ್ತೂ ಸುಖವನ್ನು ನೀಡುವುದಿಲ್ಲ! ಅವಳ ಉಸಿರು ಅನುಗಾಲವೂ ದುಃಖದಿಂದ ಬಿಸುಸುಯ್ಯುತ್ತಿರುತ್ತದೆ. ಮನೋಕ್ಲೇಶ ಅನಂತವಾಗಿ ಅವಳನ್ನು ಆವರಿಸಿಕೊಂಡಿರುತ್ತದೆ. ದುರಾತ್ಮರಾದ ನೂರು ಮಕ್ಕಳನ್ನು ಹಡೆದು, ಅವರ ಪಾಪಕಾರ್ಯಗಳಿಂದಾಗಿ ಜೀವನದಲ್ಲಿ ನೊಂದು ಬೇಯುತ್ತಾಳೆ. ಅವರ ಮರಣದ ನಂತರವೂ, ಅವಳ ಶೋಕ ನಿರಂತರವಾಗಿ ಮುಂದುವರೆಯುತ್ತದೆ. ಕೊನೆಗೊಂದು ದಿನ ಅವಳ ಆತ್ಮ ತನುವಿನಿಂದ ಬಿಡುಗಡೆಯನ್ನು ಪಡೆಯುತ್ತದೆ.

ವಿಮರ್ಶೆ:

ಈ ಕವಿತೆ ಛಂದಸ್ಸಿಗೆ ಒಳಪಟ್ಟಿರಿವುದರಿಂದ, ಇದಕ್ಕೆ ಗೇಯತೆ ಸಹಜವಾಗಿಯೇ ಲಭ್ಯವಾಗಿದೆ. ಈ ಕವಿತೆಯ ಭಾಷೆ ಲಲಿತ ಮತ್ತು ಮನೋಹರವಾಗಿದೆ; ಒತ್ತಕ್ಷರಗಳ ಹೆಚ್ಚು ಬಳಕೆಯಿಲ್ಲ. ಗಾಂಧಾರಿಯ ದುಃಖವನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ಕವಿತೆಯ ಶೀರ್ಷಿಕೆ ಸಮಂಜಸವಾಗಿದೆ. ಒಂದು ಹೆಣ್ಣು ಮಾತ್ರ ಇನ್ನೊಬ್ಬಳ ದುಃಖವನ್ನು ಅರ್ಥಮಾಡಿಕೊಳ್ಳಬಲ್ಲಳು ಎಂಬ ಮಾತು ಎಷ್ಟು ಅರ್ಥವತ್ತಾಗಿದೆ! ಗಾಂಧಾರಿಯ ಮನದಾಳದ ನೋವನ್ನು ಇಷ್ಟು ಪರಿಣಾಮಕಾರಿಯಾಗಿ ಇದುವರೆಗೆ ಯಾರೂ ಪ್ರಕಟಿಸಿರಲಿಕ್ಕಿಲ್ಲ. ಈ ಕವಿತೆಯಿಂದಾಗಿ ಗಾಂಧಾರಿ ಜನಗಳ ಮೆಚ್ಚುಗೆ ಮತ್ತು ಸಹಾನುಭೂತಿಗೆ ಒಳಗಾಗುತ್ತಾಳೆ. ಗೌರಮ್ಮನವರು ಕಲ್ಪಿಸಿಕೊಂಡು ರಚಿಸಿದ ಬಾಲ್ಯದ ಚಿತ್ರಶಾಲೆಯ ಸ್ಪರ್ಧೆಯ ಸನ್ನಿವೇಶ, ಕವಿತೆಗೊಂದು ಮೆರುಗು ಮತ್ತು ವಿಶೇಷ ಪ್ರಭಾವವನ್ನು ನೀಡಿದೆ.

ಕವನದ ಮಿತಿಯ ವ್ಯಾಪ್ತಿಯಲ್ಲೇ, ಕವಯಿತ್ರಿಯವರು ಮಹಾಭಾರತದ ಮೂಲ ಕಥೆಯಲ್ಲಿ ಮೂರು ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು, ಗಾಂಧಾರಿಯ ಪಾತ್ರಕ್ಕೆ ವಿಶೇಷವಾದ ಮೆರುಗನ್ನು ನೀಡಿರುವುದಷ್ಟೇ ಅಲ್ಲದೆ, ಅವಳ ಪಾತ್ರಕ್ಕೆ ಹೆಚ್ಚಿನ ಸಹಜತೆಯನ್ನು ಒದಗಿಸುವ ಮೂಲಕ, ಸಹೃದಯ ಓದುಗರ ಸಹಾನುಭೂತಿಗೆ ಆಕೆ ಪಾತ್ರಳಾಗುವ ಹಾಗೆ ಮಾಡಿದ್ದಾರೆ: ಮದುವೆಯಾಗುವ ತನಕ ಧೃತರಾಷ್ಟ್ರ ಅಂಧ ಎಂಬ ಸಂಗತಿ ಗಾಂಧಾರಿಗೆ ತಿಳಿಯದೆ ಹೋಗಿದ್ದು, ವಿವಾಹದ ನಂತರ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದುದು ಮತ್ತು ಚಿತ್ರಶಾಲೆಯ ಚಿತ್ರಸ್ಪರ್ಧೆಯಲ್ಲಿ ಆಕೆ ತನ್ನ ಚಿತ್ರದಲ್ಲಿನ ವ್ಯಕ್ತಿಗೆ ಕಣ್ಣನ್ನು ರಚಿಸಲು ಮರೆಯುವ ಸನ್ನಿವೇಶವನ್ನು ನಿರ್ಮಿಸಿದುದು. ಈ ಸನ್ನಿವೇಶ ಕವಯಿತ್ರಿಯವರ ಸ್ವಕಲ್ಪನೆಯಾಗಿದ್ದು, ಅವರ ಸೃಜನಶೀಲತೆಗೆ ಹಿಡಿದ ಕನ್ನಡಿಯಂತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+