ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನ : 'ಚಿರದುಃಖಿನಿ' ಬರೆದವರು ಗೌರಮ್ಮ

By * ವಿಶ್ವನಾಥ್ ಹುಲಿಕಲ್, ಕ್ಯಾಲಿಫೋರ್ನಿಯ
|
Google Oneindia Kannada News

Kannada poetess MB Gowramma (1913-2000)
ಕವಯಿತ್ರಿಯವರ ಪರಿಚಯ : ಕನ್ನಡನಾಡು ಕಂಡ ಓರ್ವ ಮನೋಜ್ಞ ಕವಿ ಎಂ. ಬಿ. ಗೌರಮ್ಮ (1913-2000). ಔಪಚಾರಿಕ ಶಿಕ್ಷಣವನ್ನು ಹೊಂದದೇ ಹೋದರೂ, ತಮ್ಮ ಅಮೋಘ ಕಾವ್ಯ ಪ್ರತಿಭೆಯಿಂದ 'ಸತೀ ಬೃಂದಾ' ಎಂಬ ಕಾವ್ಯವನ್ನು ನಡುಗನ್ನಡದಲ್ಲಿ ಭಾಮಿನೀ ಷಟ್ಪದಿಯಲ್ಲಿ ರಚಿಸಿದರು. ಈ ಕೃತಿಗೆ 1944-45ನೇ ಸಾಲಿನ ದೇವರಾಜ ಬಹದ್ದೂರ್ ಪ್ರಶಸ್ತಿ ದೊರಕಿತು. ಇದಲ್ಲದೆ ಇವರು 'ಹೂ ಗೊಂಚಲು' ಎಂಬ ಕವನ ಸಂಕಲನವನ್ನೂ ಮತ್ತು 'ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ವಿವಾಹ ಪದ್ಧತಿ' ಎಂಬ ಕೃತಿಯನ್ನು ಗದ್ಯರೂಪದಲ್ಲಿ ರಚಿಸಿದರು.

ಇವರ ಎಲ್ಲಾ ಕವನಗಳು ಛಂದಸ್ಸಿಗೆ ಒಳಪಟ್ಟಿರುವುದರಿಂದ, ಇವುಗಳೆಲ್ಲವನ್ನೂ ಹಾಡಬಹುದಾಗಿದೆ. ಇವರ ಅನೇಕ ಕವನಗಳು ಪ್ರಬುದ್ಧ ಕರ್ನಾಟಕ ಮತ್ತು ಕನ್ನಡ ನುಡಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಪ್ರಸ್ತುತ ಕವನ ಚಿರದುಃಖಿನಿ 10ನೇ ತರಗತಿ ಪಠ್ಯಪುಸ್ತಕದಲ್ಲಿ (1948) ಸೇರ್ಪಡೆಯಾಗಿತ್ತು; ತದನಂತರ, ಈ ಕವನ 'ಹೂ ಗೊಂಚಲು' ಸಂಕಲನದಲ್ಲಿ ಸೇರಿಕೊಂಡಿತ್ತು*. ಕವನವನ್ನು ಹಾಡಿಕೊಳ್ಳುವಂತೆ ಓದಿ. ನಂತರ ಅದರ ವಿಮರ್ಶೆ ಓದಲು ತೊಡಗಿರಿ. ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಿರಿ. [ಕವನದ ವಿಶ್ಲೇಷಣೆ ಮತ್ತು ವಿಮರ್ಶೆ ಓದಿರಿ]

ಭಾರತದ ಸತ್ಕಥೆಯನಿದುವರೆಗೆ ಅರಿಯದಿಹ |
ಭಾರತೀಯರೊಳಾವ ನೋರ್ವನಿಲ್ಲ ||
ಭಾರತವನೋದಿರ್ಪೊಡಾತನಿಗೆ ನಾರಿಮಣಿ |
ಗಾಂಧಾರಿ ಎಂಬುವಳ ಹೆಸರು ಹೊಸದಲ್ಲ ||1||

ಆದರಾಕೆಯ ಅಂತರಂಗದೊಳು ಸಂತತವು |
ಕುದಿವಳಲ ಪರಿಯ ಗಮನಿಸುವರಿಲ್ಲ ||
ಕುಂತಿದೇವಿಗೆ ಮರುಗುವಂದದಲಿ ಗಾಂಧಾರಿ |
ಗಿನಿತು ಮನಕರಗುವರು ಬಹಳ ಜನರಿಲ್ಲ ||2||

ವಿಶ್ವದೊಳಗಿನ ಅಳಲ ರಾಶಿ ರಾಶಿಯು ಸೇರಿ |
ಮೂರ್ತಿಯೇ ಇವಳೆಂಬವೊಲು ಜಗಕೆ ತೋರಿ ||
ಸಂತೋಷಲೇಶವನು ಕಡೆತನಕ ಕಾಣದೆಯೆ |
ಜೀವನದಿ ತೊಳಲಿದಳು ನಾರಿ ಗಾಂಧಾರಿ ||3||

ಬುದ್ಧಿಯರಿಯುವ ಮುನ್ನ ತಾಯನಗಲಿದ ಅಳಲು |
ಸೋದರನ ಮಾತಿನಲಿ ನಂಬುಗೆಯನಿಟ್ಟು ||
ಭಾವಚಿತ್ರವ ಮೆಚ್ಚಿ ನಿಜವನರಿಯದ ಅಳಲು |
ಅಂಧನನು ಕೈವಿಡಿಯೆ ವಿಧಿಗೈದ ಗುಟ್ಟು ||4||

ಅಂದೆ ಕಡೆಯಾದುದವಳಾಸೆ ಸುಖ ಸಂತೋಷ |
ಅಂದೆ ಹುಡಿಯಾಯ್ತವಳು ಕಲ್ಪಿಸಿದ ಕನಸು ||
ಅಂದಿನಿಂದಾಕೆಗೈಶ್ವರ್ಯ ಸಾಮ್ರಾಜ್ಯ ಸುಖ |
ವೆಂಬುಗಳಾಯ್ತು ಬರಿ ಹಗಲುಗನಸು ||5||

ತುಟಿಯಲ್ಲೆ ಅಡಗಿದುದು ಸಹಜತರದೆಳೆನಗೆಯು |
ಸುಮ್ಮನೇ ಮಿಡುಕುತಿಹುದವಳ ಜೀವ ||
ಏರು ಜೌವನದಾಸೆ ತನುವನೇ ಸುಡುತಿರಲು |
ಹೇಳಳಾರಿಗು ತನ್ನ ಮನದ ನೋವ ||6||

ಲೇಶ ಸುಖವರಿಯದಿಹ ತನ್ನ ಬಾಳನೆ ಜರಿದು |
ಮರಣವನು ನಿಶ್ಚೈಸಿ ಯಮುನೆಗೈತಹಳು ||
ಮರುಗಳಿಗಯಲಿ ಪತಿಗೆ ಮೋಸಮಾಳ್ಪುದೆ ಎನುತ |
ಚಿಂತಿಸುತ ಹಿಂಜರಿದು ಹಿಂತಿರುಗಿ ಬಹಳು ||7||

ಆರೊಡನೆ ನುಡಿಯಳುಲ್ಲಾಸದಲಿ ಸಿಂಗರಿಸಿ |
ಹಬ್ಬ ಉತ್ಸವವೆಂದು ನಲಿಯದಿಹಳು ||
ಆವ ದೈವವ ಬೇಡಳಾವ ಕೋರಿಕೆಗಳನು |
ಆವುದನು ನಿಟ್ಟಿಸದೆ ಕುರುಡಿಯಂತಿಹಳು ||8||

ಕುರುಕುಲದ ವೈಭವಕೆ ಹಿಗ್ಗದಾಕೆಯ ಮನವು |
ತಾಯ್ತನದ ಹೆಚ್ಚಳಕೆ ನಲಿಯದಿಹುದು ||
ಎಳೆಯತನದಲಿ ತನ್ನ ಕೆಳದಿಯರ ಕೂಡೊಂದು |
ದಿನ ನಡೆದ ದೃಶ್ಯವನು ನೆನೆಯುತಿಹುದು ||9||

ಚಿತ್ರಶಾಲೆಯೊಳಂದು ಪಂಥವೊಂದಿಹುದೆಂದು |
ಕೆಳದಿಯರು ಅಧಿಕ ಉತ್ಸಾಹದಲಿ ಕೂಡಿ ||
ಬಾ ನಿನ್ನ ಕೈಚಳಕವನು ತೋರಿಸೆಂದೆನುತ |
ಕರೆಯೆ ತಾನೈತಂದಳವರ ಜೊತೆಗೂಡಿ ||10||

ತನ್ನವೊಲು ಚಿತ್ರವನು ಬರೆವರಾರೆಂದೆನುತ |
ಹೆಮ್ಮೆಯಲಿ ಬೀಗಿ ಪಂಥವನು ಸೇರಿ ||
ಕೆಲ ಬಲವ ದಿಟ್ಟಿಸದೆ ಬರೆಯುತಿರ್ದಳು ಕೈಯ |
ಚಳಕದಲಿ ಚಿತ್ರವನು ಚದುರೆ ಗಾಂಧಾರಿ ||11||

ಚಿತ್ರವನು ಚಿತ್ರಿಸುವ ಪಂಥವನು ಗೆಲಲೆಂಬ |
ಆತುರದಿ ಕಂಗಳನು ಬರೆಯೆ ಮರೆದಿರಲು ||
ಕೆಳದಿಯರು ಕೈಹೊಯ್ದು ನಿನ್ನ ಚಿತ್ರದ ಬೊಂಬೆ |
ಹುಟ್ಟಂಧ ನೋಡೆಂದು ಗಹಗಹಿಸುತಿರಲು ||12||

ಅಂದಿನಾ ಹುಡುಗಾಟ ಇಂದು ಬಾಳುವೆಯೂಟ |
ಸಂದುದೆಷ್ಟೋ ವರ್ಷ ಆ ಕೃತ್ಯ ನಡೆದು ||
ಎಂದೆಂದಿಗದು ಚಿತ್ತದಿಂದ ಮಾಸದೆ ಇಹುದು |
ಬೇರೊಂದ ನೆನೆವುದಕೆ ಅವಕಾಶ ಕೊಡದು ||13||

ನೂರು ಮಕ್ಕಳ ಹಡೆದರೇನಾಯ್ತು ಜಗಕವರು |
ಕ್ರೂರಾತ್ಮರೆಂದೆನಿಸಿ ಕಣ್ಣಿದಿರಿನಲ್ಲಿ ||
ಹರಣವನು ತಾವ್ ತೊರೆಯೆ ಅವರ ಸತಿಯರ ಭಾಗ್ಯ |
ಹರಿಯೆ ಸಹಿಸುವಳೆಂತು ತನ್ನ ಮನದಲ್ಲಿ ||14||

ಅಂಧಪತಿ ಜೋಡಾಗಿ ಅಳಲುಗಳ ನಾಡಾಗಿ |
ಕಣ್ಣಿದ್ದು ಕುರುಡಾಗಿ ಸುಯ್ವದಡಿಗಡಿಗೆ ||
ಕ್ಲೇಶಗಳ ಬೀಡಾಗಿ ಸುತನಷ್ಟಕೀಡಾಗಿ |
ತನುವಿಂದ ಮರೆಯಾದುದವಳಾತ್ಮ ಕಡೆಗೆ ||15||

* ಗ್ರಂಥಋಣ : ಹೂ ಗೊಂಚಲು, ಎಂ.ಬಿ. ಗೌರಮ್ಮ, ಮಾತಾ ಮುದ್ರಣ, ತುಮಕೂರು, 1990.

English summary
Chiradukhini (a women condemned to sorrow for ever) Kannada poem by M B Gowramma (1913-2000).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X