CBSE ವಿವಾದಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಅಧಿಕಾರಿಗಳ ದಿಢೀರ್ ವರ್ಗಾವಣೆ, ಟೆಂಡರ್ ಅಕ್ರಮದ ತನಿಖೆಗೆ ಆದೇಶ
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ 10ನೇ ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬಳಸಲಾದ 'ಆನ್-ಸ್ಕ್ರೀನ್ ಮಾರ್ಕಿಂಗ್' ವ್ಯವಸ್ಥೆಯ ಸುತ್ತಲಿನ ವಿವಾದ ಇದೀಗ ಭಾರೀ ಸ್ವರೂಪ ಪಡೆದುಕೊಂಡಿದೆ. ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ದೋಷಗಳು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ಬೆನ್ನಲ್ಲೇ, ಕೇಂದ್ರ ಸರ್ಕಾರವು ಸಿಬಿಎಸ್ಇ ಅಧ್ಯಕ್ಷ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ವರ್ಗಾವಣೆ ಮಾಡಿದೆ. ಇದರ ಜೊತೆಗೆ, ಬೋರ್ಡ್‌ನ ಒಎಸ್‌ಎಂ ಸೇವೆಗಳ ಖರೀದಿಯ ಬಗ್ಗೆ ಸಮಗ್ರ ತನಿಖೆ ನಡೆಸಲು ಹೊಸ ತನಿಖಾ ಸಮಿತಿಯೊಂದನ್ನು ರಚಿಸಲಾಗಿದೆ.
ವಿವಾದದ ಹಿನ್ನೆಲೆ ಏನು?
ಇತ್ತೀಚೆಗೆ ಪ್ರಕಟವಾದ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳ ಬಳಿಕ, ವಿದ್ಯಾರ್ಥಿಗಳಿಂದ ಮೌಲ್ಯಮಾಪನದ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಲಾದ ಪ್ರತಿಗಳನ್ನು ಪಡೆಯಲು ಮುಂದಾದಾಗ, ಅಸ್ಪಷ್ಟ ಚಿತ್ರಗಳು, ಕಾಣೆಯಾದ ಪುಟಗಳು ಮತ್ತು ತಾಂತ್ರಿಕ ದೋಷಗಳು ಕಂಡುಬಂದಿದ್ದವು. ಆನ್-ಸ್ಕ್ರೀನ್ ಮಾರ್ಕಿಂಗ್ (OSM) ತಂತ್ರಜ್ಞಾನವನ್ನು ಸಮರ್ಪಕವಾಗಿ ನಿರ್ವಹಿಸದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಮತ್ತು ಇದರ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಹಾಗೂ ಸೈಬರ್ ಭದ್ರತೆಯ ಕೊರತೆ ಇದೆ ಎಂಬ ಗಂಭೀರ ಪ್ರಶ್ನೆಗಳು ಎದ್ದಿದ್ದವು.

ಐಎಎಸ್ ಅಧಿಕಾರಿ ರಾಹುಲ್ ಸಿಂಗ್ ಅವರು ಬೋರ್ಡ್‌ನ ಕಾರ್ಯಾಚರಣೆಗಳ ಉಸ್ತುವಾರಿ ಹೊಂದಿದ್ದರು, ಹಾಗೂ ಹಿಮಾಂಶು ಗುಪ್ತಾ ಅವರು ಹಣಕಾಸು ಸೇರಿದಂತೆ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಈ ವಿವಾದ ಭುಗಿಲೇಳುತ್ತಿದ್ದಂತೆ ಇವರಿಬ್ಬರನ್ನೂ ಇದೀಗ ವರ್ಗಾವಣೆ ಮಾಡಲಾಗಿದೆ.
ಸಂಸದೀಯ ಸಮಿತಿ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್
ಒಎಸ್‌ಎಂ ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಮೊದಲು ಧ್ವನಿ ಎತ್ತಿದ್ದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್, ಇಂದು ಶಿಕ್ಷಣದ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿ ಮಹತ್ವದ ಮಾಹಿತಿ ನೀಡಿದ್ದಾರೆ. ದಿಗ್ವಿಜಯ್ ಸಿಂಗ್ ನೇತೃತ್ವದ ಈ ಸಮಿತಿಯ ಮುಂದೆ ಪ್ರಸ್ತುತಿ ನೀಡಿದ ಸಾರ್ಥಕ್, ಟೆಂಡರ್ ನಿಯಮಗಳನ್ನು ಒಂದು ನಿರ್ದಿಷ್ಟ ಕಂಪನಿಗೆ ಅನುಕೂಲವಾಗುವಂತೆ ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿನ ಇಂತಹ ಖರೀದಿಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು ಮತ್ತು ಇಷ್ಟೊಂದು ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನ ಅಳವಡಿಸುವ ಮುನ್ನ ಸೂಕ್ತ ಪೈಲಟ್ ಟೆಸ್ಟಿಂಗ್ ನಡೆಸಬೇಕಿತ್ತು ಎಂದು ಅವರು ಸಲಹೆ ನೀಡಿದ್ದಾರೆ.
ಸಮಿತಿಯ ಅಧ್ಯಕ್ಷರಾದ ದಿಗ್ವಿಜಯ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, "ಸಾರ್ಥಕ್ ಸಿದ್ಧಾಂತ್ ಅವರು ತಮ್ಮ ಪ್ರೆಸೆಂಟೇಶನ್ ನೀಡಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಿತಿಯು ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಿದೆ. ಸಿಬಿಎಸ್ಇ ನೀಡಿರುವ ಉತ್ತರಗಳು ಮತ್ತು ವಿದ್ಯಾರ್ಥಿಗಳು ಎತ್ತಿರುವ ಸಮಸ್ಯೆಗಳನ್ನು ಆಧರಿಸಿ ಸಮಿತಿಯು ಶೀಘ್ರದಲ್ಲೇ ಒಂದು ಕರಡು ವರದಿಯನ್ನು ಸಿದ್ಧಪಡಿಸಲಿದೆ" ಎಂದು ತಿಳಿಸಿದ್ದಾರೆ.
ಹೊಸದಾಗಿ ರಚನೆಯಾಗಿರುವ ತನಿಖಾ ಸಮಿತಿಯು ಈಗ ಸಿಬಿಎಸ್ಇ ಒಎಸ್‌ಎಂ ಸೇವೆಗಳ ಖರೀದಿಯಲ್ಲಿ ನಿಯಮಗಳ ಪಾಲನೆಯಾಗಿದೆಯೇ, ವೆಂಡರ್ ಆಯ್ಕೆ ಹೇಗೆ ನಡೆಯಿತು ಮತ್ತು ಟೆಂಡರ್ ಪ್ರಕ್ರಿಯೆ ಹೇಗಿತ್ತು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ.












Click it and Unblock the Notifications