ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ ನ ನೆನಪಿನಲ್ಲೊಂದು ಗೀತ ಸಾಹಿತ್ಯ

By Staff
|
Google Oneindia Kannada News

Poet KS Narasimha swamy turns 95
ಪ್ರೇಮಕವಿ ಎಂದೇ ಖ್ಯಾತರಾದ ಕೆಎಸ್ ನರಸಿಂಹಸ್ವಾಮಿ ಅವರು ಪ್ರೀತಿ ಪ್ರೇಮದ ವಿಷಯಗಳಲ್ಲದೆ ಉಳಿದ ವಿಷಯಗಳ ಮೇಲೂ ಅದ್ಭುತವಾದ ಕವನಗಳನ್ನು ಕಟ್ಟಿದ್ದರು. ಆದರೆ ಮೈಸೂರು ಮಲ್ಲಿಗೆಯ ಜನಪ್ರಿಯತೆಯ ಮುಂದೆ ಉಳಿದ ಕವನ ಸಂಕಲನಗಳು ಮಂಕಾದವು. ಇಂದು ಕನ್ನಡ ಈ ಮಹಾನ್ ಕವಿಯ 95 ನೇ ಹುಟ್ಟುಹಬ್ಬ. ಜನ ಸಾಮಾನ್ಯರ ಕವಿಯ 'ಸಂಜೆ ಹಾಡು' ಕವನ ಸಂಕಲನದಿಂದ ಆಯ್ದ 'ಬದುಕು ಮತ್ತು ಹಾಡು' ಗೀತ ಸಾಹಿತ್ಯ ಅವರ ಸ್ಮರಣೆಯೊಂದಿಗೆ ನಿಮ್ಮ ಮುಂದೆ. ..

ರಚನೆ :ಕೆ ಎಸ್ ನರಸಿಂಹಸ್ವಾಮಿ
ಕವನ ಸಂಕಲನ: ಸಂಜೆ ಹಾಡು.

ಎಲ್ಲಿ ಕತ್ತಲೆಯಿತ್ತೊ ಅಲ್ಲಿ ತನ್ನಿರಿ ಬೆಳಕ
ಹಸಿದ ಹೊಟ್ಟೆಯ ಮೇಲೆ ಬೆಳ್ದಿಂಗಳನು ಚೆಲ್ಲಿ
ಮುಂಬರಿವ ನಮಗೆ ಶುಭವನ್ನು ತರಲಿ;
ಮಲಗಿದರೆ ಕನಸು, ಎದ್ದರೆ ಪಯಣ : ಹೀಗಿದೆ ಬದುಕು
ಹಾದಿಯುದ್ದಕು ಹೂವ ಚಲ್ಲುತಿರಲಿ.

ತುಟಿ ಒಣದವರ ಹಾಡನ್ನು ಕೇಳುವಿರೇನು ?
ಆದರೂ ಹಾಡು ಬರುವುದು ಸಂಜೆಯೊಳಗಾಗಿ
ಕನಸಿನ ಪರಂಪರೆಯ ನೆಯ್ದು ;
ಹಾದಿಬೀದಿಗಳಲ್ಲಿ ಬತ್ತಲೆ ಮಗು ಅತ್ತು
ಸಂಜೆಯಾಯಿತು ಎಂಬ ಚಿಂತನೆಯಲಿ.

ಕೆರೆ ಬತ್ತಿದಾಗ ಕಣ್ಣಲ್ಲಿ ನೀರು ಬರುವುದು
ರೊಕ್ಕವನು ಕೊಟ್ಟು ಕೊಳ್ಳುವ ಸರಕೆ ಸಂತೋಷ ?
ಸಂಗೀತಕ್ಕೆ ಬೇಕು ಶ್ರುತಿ, ಲಯ, ಆಲಾಪನೆ
ಹಸಿವ ಹಾಡುವುದೆಂತು, ತಾಳವೆಲ್ಲಿವೆ ಅದಕೆ ?

ಬೀದಿ ದೀಪದ ಕೆಳಗೆ ಸತ್ತ ನಾಯಿಯ ಸುತ್ತ
ಹತ್ತಾರು ಮಕ್ಕಳು ಮರಿ ;
ಬೀದಿನಲ್ಲಿಯ ತುಟಿಗೆ ಭೃಂಗ ಮುತ್ತಿಕ್ಕುವುದು.
ಕುಡಿವ ನೀರಿಗೆ ಸಹಿತ ಕಷ್ಟವಾಗಿರುವಾಗ
ಯಾವ ರಾಗದಿ ಹಾಡಿದರೆ ಕೊಡ ತುಂಬುವುದು ?
ಬಾಯಿ ತುಂಬುವ ತನಕ ಹಾಡು ತುಂಬುವುದಿಲ್ಲ.

ದೇಗುಲ ಬಾಗಿಲಲಿ ಮಂತ್ರಾಕ್ಷತೆಯ ಚೆಲ್ಲಿ
ಹೊರಟು ಹೋಗಿದ್ದಾರೆ ನಂಬುವ ಜನ;
ಧಾತು - ಈಶ್ವರಗಳಲಿ ಕ್ಷಾಮ ಬಂದಿತ್ತೆಂದು
ಅಜ್ಜಯ್ಯ ಹಾಡುವನು ಮರಿಮಗನಿಗೆ.
ಈಗ ಎಲ್ಲೆಲ್ಲು ಹಾಹಾಕಾರವೆದ್ದಿಹುದು,
ಈ ಅಶಾಂತಿಯೇ ನಿಮಗೆ ಎಲ್ಲ ಹಾಡು.

ಯಾವ ಹಾಡನು ನೀವು ಕೇಳಬಯಸುತ್ತೀರಿ,
ಹಾಡು ಕೇಳುವುದಷ್ಟೆ ಸಂತೋಷವೆ ?
ಹಾಡು, ಗೋಡೆಗೆ ಒರಗು, ಕಣ್ಣು ಮುಚ್ಚಿಕೊ
ಆಗ ಬರುವುದು ಬುದ್ದಿ!

ಕೆಲವರಿಗೆ ಹಾಡು ಬೇಕಂತೆ, ಕೇಳದ ಒಡನೆ
ನಿದ್ದೆ ಬರಬೇಕಂತೆ! ಅದು ಎಲ್ಲಿ ಸಿಕ್ಕುವುದು ?
ಬಾಂದಳದ ತನಕ ಕ್ಯೂ ಬೆಳೆದಿರುವುದು,
ತಂತಿಗಳ ಕಿತ್ತ ತಂಬೂರಿಯಾಯಿತು ಹಾಡು!

ನೊಂದ ಜೀವಕ್ಕೆ ಬೇಕಾದ್ದು ಸಿರಿಹಾಡು. ಇಂಪಾದ ಹಾಡು
ಚೆಲುವು ಸೂಸುವ ಹಾಡು, ಭಾವಪೂರ್ಣ ಹಾಡು;
ದುರ್ಭಿಕ್ಷದಲಿ ನಾವದನು ಪಡೆಯುವುದು ಹೇಗೆ ?
ಯಾರೊ ಅತ್ತಂತಾಯ್ತು ಹಾಡು ಮುಗಿದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X