ಬೆಂಗಳೂರು: ನಾಯಿಗಳು ಬೊಗಳುತ್ತಿವೆ, ನಿದ್ರೆ ಬರುತ್ತಿಲ್ಲವೆಂದು 112ಕ್ಕೆ ಕರೆ ಮಾಡಿದ ಮಹಿಳೆ
ಬೆಂಗಳೂರು, ಮಾರ್ಚ್ 20: ಸಾಮಾನ್ಯವಾಗಿ ಕಳ್ಳತನ, ಗಲಾಟೆ ಅಥವಾ ತುರ್ತು ಅಪಘಾತಗಳ ಸಂದರ್ಭದಲ್ಲಿ ಜನರು ಪೊಲೀಸರ ಸಹಾಯ ಕೋರುತ್ತಾರೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ನಿದ್ರೆಗೆ ಭಂಗ ತರುತ್ತಿರುವ ಬೀದಿ ನಾಯಿಗಳ ಕಾಟದಿಂದ ರಕ್ಷಣೆ ನೀಡುವಂತೆ ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.
ಈ ಕುತೂಹಲಕಾರಿ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿರುವ ಮಹಿಳೆಗೆ ತಡರಾತ್ರಿ ಬೀದಿ ನಾಯಿಗಳ ಸತತ ಬೊಗಳುವಿಕೆಯಿಂದಾಗಿ ತೀವ್ರ ತೊಂದರೆಯಾಗಿತ್ತು. ನಾಯಿಗಳ ಬೊಗಳುತ್ತಿದ್ದರಿಂದ ನಿದ್ರೆ ಮಾಡಲು ಸಾಧ್ಯವಾಗದೆ ಕಂಗಾಲಾದ ಅವರು, ಬೇರೆ ದಾರಿ ಕಾಣದೆ ತಡರಾತ್ರಿಯೇ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಸಹಾಯ ಕೋರಿದದರು ಎಂದು ವರದಿಯಾಗಿದೆ.

ತಕ್ಷಣವೇ ಸ್ಪಂದಿಸಿದ 'ಹೊಯ್ಸಳ' ಸಿಬ್ಬಂದಿ
ನಿಯಂತ್ರಣ ಕೊಠಡಿಯಿಂದ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾದರು. ಹತ್ತಿರದಲ್ಲೇ ಗಸ್ತಿನಲ್ಲಿದ್ದ ಹೊಯ್ಸಳ ವಾಹನದ ಸಿಬ್ಬಂದಿ ತಕ್ಷಣವೇ ಮಹಿಳೆಯ ಅಪಾರ್ಟ್‌ಮೆಂಟ್ ಬಳಿ ಧಾವಿಸಿದರು. ಅಪಾರ್ಟ್‌ಮೆಂಟ್ ಸುತ್ತಮುತ್ತ ಗುಂಪು ಸೇರಿ ಬೊಗಳುತ್ತಿದ್ದ ನಾಯಿಗಳನ್ನು ಪೊಲೀಸರು ಅಲ್ಲಿಂದ ಓಡಿಸುವಲ್ಲಿ ಯಶಸ್ವಿಯಾದರು. ಪೊಲೀಸರ ಈ ತ್ವರಿತ ಸ್ಪಂದನೆಯಿಂದಾಗಿ ಮಹಿಳೆ ನಿಟ್ಟುಸಿರು ಬಿಟ್ಟಿದ್ದು, ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಯಿತು. ಜನರ ಇಂತಹ ಸಣ್ಣಪುಟ್ಟ ಮತ್ತು ವಿಭಿನ್ನ ಸಮಸ್ಯೆಗಳಿಗೂ ತಕ್ಷಣವೇ ಸ್ಪಂದಿಸುವ ಮೂಲಕ ಬೆಂಗಳೂರು ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೀದಿ ನಾಯಿಗಳ ಹಾವಳಿಗೆ ಬೆದರಿದ ನಗರದ ಜನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಈಗ ಜನಸಾಮಾನ್ಯರ ನೆಮ್ಮದಿ ಕೆಡಿಸಿದೆ. ನಗರದ ಪ್ರಮುಖ ರಸ್ತೆಗಳಿಂದ ಹಿಡಿದು ಗಲ್ಲಿಗಳವರೆಗೆ ನಾಯಿಗಳು ಗುಂಪು ಗುಂಪಾಗಿ ಬೀಡುಬಿಟ್ಟಿದ್ದು, ಹಾದಿಹೋಕರ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದರಿಂದಾಗಿ ನಗರದ ಜನತೆ ರಸ್ತೆಗಿಳಿಯಲು ಭಯಪಡುವಂತಾಗಿದೆ.
ವಿಶೇಷವಾಗಿ ಮುಂಜಾನೆ ವಾಯು ವಿಹಾರಕ್ಕೆ ತೆರಳುವ ಹಿರಿಯ ನಾಗರಿಕರು ಮತ್ತು ಶಾಲೆಗೆ ಹೋಗುವ ಮಕ್ಕಳು ನಾಯಿಗಳ ಪ್ರಮುಖ ಗುರಿಯಾಗುತ್ತಿದ್ದಾರೆ. ಇನ್ನು ರಾತ್ರಿ ವೇಳೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಸವಾರರನ್ನು ನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿದ್ದು, ಇದರಿಂದಾಗಿ ಗಾಬರಿಗೊಂಡು ಅನೇಕ ಸವಾರರು ಬಿದ್ದು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ.
ನಗರದ ಹಲವೆಡೆ ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿರುವ ಮಾಂಸದ ತ್ಯಾಜ್ಯ ಮತ್ತು ಹೋಟೆಲ್ ಕಸಗಳು ನಾಯಿಗಳು ಗುಂಪು ಸೇರಲು ಮುಖ್ಯ ಕಾರಣವಾಗಿವೆ. ಈ ನಾಯಿಗಳು ತಮ್ಮ ಪ್ರದೇಶಕ್ಕೆ ಬರುವ ಅಪರಿಚಿತರ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದು, ಜೊತೆಗೆ ಹಲವು ಬಡಾವಣೆಗಳಲ್ಲಿ ರಾತ್ರಿ ಇಡೀ ಬೊಗಳುವುದರಿಂದ ಸ್ಥಳೀಯ ನಿವಾಸಿಗಳಿಗೆ ಸರಿಯಾಗುತ್ತಿವೆ ಎನ್ನುವ ದೂರುಗಳು ಸಹ ಕೇಳಿಬಂದಿವೆ.
ಸಾರ್ವಜನಿಕರು ಈ ಬಗ್ಗೆ ಬಿಬಿಎಂಪಿಗೆ ಅನೇಕ ಬಾರಿ ದೂರು ನೀಡಿದ್ದರೂ, ನಾಯಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೇವಲ ಲಸಿಕೆ ಹಾಕಿ ಬಿಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.












Click it and Unblock the Notifications