ಚಂದ್ರಕಲಶದಲ್ಲಿ ಅಂಬುತೀರ್ಥ

ಜಲದ ಪತ್ತೆ
ಆಚಂದ್ರಾರ್ಕ ಕೀರ್ತಿಯಲ್ಲವೆ
ನಮಗೆ ಮತ್ತೆ?
***
ಚಂದ್ರನಲ್ಲಿ ನೀರಿರುವುದು
ಆಶ್ಚರ್ಯವೇನಲ್ಲ
ಸೋಮಶೇಖರನ ಜಟೆಯಲ್ಲಿ
ಗಂಗೆಯೂ ಇರಲೇಬೇಕಲ್ಲಾ!
***
ಚಂದ್ರನ ಒಡಲಲ್ಲಿ ನೀರು
ಜೀವಜಲಪುಷ್ಪ!
ವಿಜ್ಞಾನಿ ಕಣ್ಣಲ್ಲಿ ನೀರು
ಆನಂದಬಾಷ್ಪ!
***
ಚಕೋರಂಗೆ ಚಂದ್ರಮನ
ಬೆಳಕಿನಾ ಚಿಂತೆ
ಇಸ್ರೋಗೆ ಚಂದ್ರಮನ
ಜಲನಿಧಿಯ ಚಿಂತೆ!
***
ಚಂದ್ರಮುಖೀ ಪ್ರಾಣಸಖೀ
ಚತುರೇ ನೀ ಕೇಳೇ;
ಇಂದು ಜಲಜಾತೆ ಜಲಜಾಕ್ಷಿಯು ನೀ
ಚಂದವ ತಾ ಹೇಳೇ!
***
ಚೌದವೀನ್ ಕಾ ಚಾಂದ್ ಹೋ
ಯಾ ಜಲ್ ಕೀ ಬೂಂದ್ ಹೋ
ಜೋ ಭೀ ಹೋ ತುಮ್ ಖುದಾ ಕೀ ಕಸಂ
ಲಾಜವಾಬ್ ಹೋ!
***
ಹನಿಮೂನ್
ಅಲ್ಲ,
ಇನ್ನು
ವಾಟರ್‌ಮೂನ್!
***
ಚಂದಕ್ಕಿ ಮಾಮ, ಚಕ್ಕುಲಿ ಮಾಮ
ಚಕ್ಕುಲಿ ತಿಂದು ನೀರ್ ಕುಡಿ ಮಾಮ!
***
ಚಂದಿರನೇತಕೆ ಓಡುವನಮ್ಮ,
ಮೋಡವ ಹಿಡಿಯಲಿಕೇ?
ಮೋಡವ ಹಿಡಿದು ಮಳೆಯನು ಪಡೆದು
ನೀರನು ಕುಡಿಯಲಿಕೇ?
***
"ಚಂದ್ರನಲ್ಲಿ ನೀರು ಪತ್ತೆಯಾಗಿದೆ"
ಅಂದ, ಪತ್ನಿಗೆ ತಿಪ್ಪೇಶಿ.
"ನಲ್ಲೀಲಿನ್ನು ದಿನಾ ನೀರು ಬರುತ್ತಾ?"
ಕೇಳಿದಳು ಪತ್ನಿ ಮೀನಾಕ್ಷಿ!
***
ಚಂದ್ರನಲ್ಲಿ ಸಿಕ್ಕಿದೆ ನೀರು.
ರಿಯಲ್ ಎಸ್ಟೇಟ್ ಮಂದಿ ಲಗ್ಗೆಯಿಟ್ಟಾರು!
"ಟ್ವೆಂಟಿಫೋರ್ ಅವರ‍್ಸ್ ವಾಟರ್" ಅಂತ
ಲೇಔಟ್ ಜಾಹಿರಾತು ಬರುತ್ತೆ,
ನೋಡ್ತಿರಿ ಪೇಪರು!
***
ಚಂದ್ರನಲ್ಲಿ ನೀರು
ನವರಾತ್ರಿಯ ತೇರು!
ಹಬ್ಬ ಈ ಸಲ ಜೋರು
ಇಸ್ರೊ ಸಾಧನೆ ಮೇರು!












Click it and Unblock the Notifications