ತಂತಿದೀಪ
ಹೊಕ್ಕು ಹೊರಬೀಳುತ್ತದೆ ಬೆಳಕೊಂದು
ಕತ್ತಲ ಕೋಣೆಯೊಂದನ್ನು ಮಾತ್ರ ಬಿಟ್ಟು
ಗೋಡೆಗಾತುಕೊಂಡ ಕೆಂಪು ದೀಪದ ಬಲ್ಬು
ತುಂಬು ಚಂದ್ರನಂತಾದರೂ ಸಾಲುತ್ತಿಲ್ಲ ಬೆಳಕು
ತಿರುಗುವ ಮೀಟರು ಮಾತ್ರ ತಲೆಕೆಳಗು
ಗದ್ದೆಯೊಳಗೆ ಬೆತ್ತಲೆ ನಿಂತಿದೆ ಕಂಬ
ಎತ್ತುಗಳೆರಡು ದಣಿದು ನಡೆವಾಗ
ನುಕ್ಕೆ ಗಿಡದ ಕೋಲು ಕುಣಿಯುತ್ತದೆ
ಅಡಗಿ ಅಲ್ಲಾಡದೇ ಕುಳಿತಿದೆ ಹೊನ್ನೆಳ
ರಕ್ತ ಹೀರಲು ಸೂಕ್ತ ಜಾಗ ಹುಡುಕಿ
ರೇಟು ಈಗಲೇ ಮಾಡೋಣ. ಇತ್ತಕೊಡಿ
ಮಧ್ಯಾನ್ಹ ಅಂಗಡಿಗೆ ಬನ್ನಿ ಇವ್ರೇ
ಕೊಡೋದೇನಿದ್ರೂ ಅಲ್ಲೆ ಮುಗಿಸೋಣ
ಸ್ವಾಮಿ, ಮೋಸ ಇಲ್ವೇ ಇಲ್ಲ
ಲಾಕರ್ ಅಂಗಡೀಲಿ ಭದ್ರವಾಗಿದೆ
ಕೀಲಿ ಕೈ ಹೆಂಡ್ತಿಕೈಲಿ ಭದ್ರವಾಗಿದೆ
ಸಂತೆಯ ಬಾಳೆಕಾಯಿ ಕೈ ಬದಲಾಗಿದೆ.
ನಿನ್ನೆ ಹೊಸಾ ಸಿನೆಮಾ ಹತ್ತಿದೆ
ದೊಡ್ಡ ರಸ್ತೆಯ ಬದಿಗೆ ಜನರ ಹಾವಳಿ
ಹೀರೋ ಹೊಡೆದರೆ ವಿಲನ್ನು ರಸ್ತೆಗೆ ಬಿದ್ದಾನು
ಹೊಂಡ ಗಿಂಡ ಬಿಡಿ. ರಸ್ತೆಯೊಳಗೆ
ಹೊಡೆದಾಟ ಶುರುವಾದರೆ ಒಮ್ಮೆಗೇ
ಶೂಟ್ ಅಂತೆಲ್ಲಿ ಮಾಡ್ತೀರಿ. ಇಲ್ಲಾ
ಕಟ್ ಅಂತೀರೋ ಚಪ್ಪಾಳೆ ಹೊಡೆದು
ಕಾಳಜಿಯಿರಲಿ ಸ್ವಲ್ಪ. ಪಕ್ಕದಲ್ಲಿ
ಅಂಗನವಾಡಿ ಕೇಂದ್ರವಿದೆ. ಮಕ್ಕಳಿದ್ದಾರೆ ಎಚ್ಚರಿಕೆ
ತಳೆಯಿಲ್ಲದೆ ಮರ ಹತ್ತುವ ಹುಡುಗ
ಪಕ್ಕಡು ಹಿಡಿದೇ ಕಂಬ ಹತ್ತಿದ್ದಾನೆ
ಸುಟ್ಟು ಕರಕಲಾದ ತಂತಿ ಜೋಡಿಸಲು
ದೂರದಿಂದಲೇ ಸರಿಯಾಗಿ ಸಿಕ್ಕಿಸಿ
ನೆಲಕ್ಕೆ ಹಾರುತ್ತಾನೆ ಸರಸರ ಇಳಿದು
ಉದ್ದುದ್ದ ತಂತಿಗೆ ಬೆಳಕು ಹರಿದಾಗ.












Click it and Unblock the Notifications