ಕವನ :ಒಳಮನೆಗೆ ನೂರೆಂಟು ದಾರಿಗಳು
*ರಾಮಸ್ವಾಮಿ ಡಿ.ಎಸ್. ಅರಸೀಕೆರೆ
ಊರೊಳಗೇ ಹರಿದು ಹೋಗುವ ಹೆದ್ದಾರಿಗೆ
ಅಂಟಿ ನಿಂತಂತಿವೆ ಎಷ್ಟೊಂದು ರಸ್ತೆಗಳು
ಉಬ್ಬು, ತಗ್ಗು, ಇಳಿಜಾರು, ತಿರುವು
ಬೆಟ್ಟವನ್ನೂ ಕಡಿದು ತೆರೆದಿಟ್ಟ ಬಯಲು
ಎಲ್ಲಿಂದ ಎಲ್ಲಿಗೋ ಹೀಗೆ ಸಾಗುವುದು ದಾರಿ
ನದಿ, ಕಾಡು, ನಗರಗಳ ಎಲ್ಲೆಗಳ ಮೀರಿ
ಒಂದರಿಂದಿನ್ನೊಂದನ್ನು ಕೂಡಿಸುವ ಕೆಲಸ
ಬಿದ್ದಲ್ಲೇ ಬಿದ್ದಿರುವ ರಸ್ತೆಗೆ ಬೇಕೆ-ವಾಸ್ತು, ವಿನ್ಯಾಸ
ಅಭಿವೃದ್ದಿಯ ಹೆಸರಲ್ಲಿ ಅಗಲವಾಗುವ ರಸ್ತೆ
ನಯವಾದಷ್ಟೂ ವೇಗ ಉತ್ಕರ್ಷಿಸುವುದು, ಸತ್ಯ
ಪಯಣ ಮುಗಿದರೂ ಚಾಚಿಕೊಂಡೇ ಕೆಣಕುವುದು
ಸುಮ್ಮನೆ ನೋಡುವವರನ್ನೂ ಏಕೋ ಆವರಿಸುವುದು
ಹಕ್ಕಿ ಹಾರಿದ ದಾರಿ
ಬುದ್ಧ ನಡೆದು ಹೋದ ಹಾದಿ
ಅಷ್ಟೇಕೆ ಬಾಹುಬಲಿಯ ಬೆಟ್ಟಕ್ಕಿರುವ ಹೆದ್ದಾರಿ
ಗೊತ್ತಿದ್ದೂ ಮರೆತುಹೋಗುವುದು ಬಾರಿ, ಬಾರಿ
ಹೀಗೇ ಗಡಿಬಿಡಿಯೊಳಗೆ ದಾಖಲಾಗದ ರಸ್ತೆಗಳು
ಸ್ಮರಣೆಗೂ ಬರದ ನಿಖರದೂರುಗಳ ದೂರಗಳು
ನಮ್ಮ ನಡುವಣ ದೂರ, ಹೆಚ್ಚಿಸುವ ದೂರುಗಳು
ದಿನದಿಂದ ದಿನಕ್ಕೆ ಕೆಡುತ್ತಲೇ ಇವೆ ನಮ್ಮೊಳಗಿನ ರಸ್ತೆಗಳು












Click it and Unblock the Notifications