ನಮ್ಮದೂ ಒಂದು ಊರುಅಲ್ಲವೇ ಮತ್ತೆ?

ವರುಷ ಐವತ್ತಾಯ್ತು ಬಸ್ಸುಗಳಾಗಮಿಸಿ
ಇಂದಿಗೂ ಇಲ್ಲ ಬಸ್ ಸ್ಟಾಂಡು
ಅಡ್ಡಿಯಿಲ್ಲ ಬಿಡಿ ಇದ್ದಾವೆ ಅಂಗಡಿಗಳು
ಜಗಲಿಯಲಿ ಜನರ ತುಂಬಿಕೊಂಡು
ಬಂದಾಗ ಸಿಟಿಬಸ್ಸು, ಕಾದು ನೋಡುವರಿಲ್ಲಿ
ಬಸ್‌ನ ಟಾಪಿಗೆ ಹಂಚು ತಗುಲದಂತೆ
ಒದ್ದಾಡುವರಾರಿದಕೆ, ಇದ್ದರೂ
ಊರೊಳಗೆ, ನಾಯಕರ ಸಂತೆ
ಇವೆ ನೋಡಿ, ನಮ್ಮಲ್ಲೂ ನಲ್ಲಿ ನೀರು,
ಅಲ್ಲಲ್ಲಿ ಪಬ್ಲಿಕ್ ಟ್ಯಾಪುಗಳು ಕೂಡ
ನೀರು ಪೋಲಾಗುತಿದೆ ಎಂದು ಮುಚ್ಚಿದ ಬಾಯಿ
ಇಂದಿಗೂ ತೆರೆದಿಲ್ಲವೆಂಬುದೆ ಗೂಢ
ಭೂಮಿ ಗಂಡೊ ಹೆಣ್ಣೊ ಎಂದೆನ್ನ ಕೇಳಿದರೆ
ಸಿದ್ಧ ಉತ್ತರವಿದೆ 'ಹೆಣ್ಣು" ಎಂದು.
ನಮ್ಮೂರ ರಸ್ತೆಗಳ ಉಬ್ಬು ತಗ್ಗುಗಳೆಲ್ಲ
ಹೆಣ್ತನವ ಸಾರುತಿವೆ ಇಂದು.
ಕಣ್ಣು ಹೊಡೆಯುತ್ತಿದ್ದ ಬೀದಿ ದೀಪಗಳೆಲ್ಲ
ಸಭ್ಯರಾಗಿವೆ ನೋಡಿ ಮೊನ್ನೆಯಿಂದ
ಬೀದಿ ದೀಪಗಳ ಬೆಳಕಿನಲಿ ಓದಲಿಕೆ
ಎಂವಿಯಂತವರು ಇಲ್ಲದ್ದರಿಂದ
ಹೊಲೆಗೇರಿಗಳ ಕಾಲ ಕಳೆದರೂ ಕೂಡ
ಹೊಲಸುಗೇರಿಗಳೇನು ಕಮ್ಮಿಯಿಲ್ಲ
ನೀರು ಹರಿಯಲಿಕಿರುವ ನಾಲೆಯಾಳಗೆಲ್ಲ
ಕೆಸರು ತುಂಬಿರಿಸದ ಹೋಟೆಲೇ ಇಲ್ಲ
ಬಸ್ ಸ್ಟಾಂಡು ಇಲ್ಲದೆಯೂ ಬಸ್ ನಿಲ್ಲುವಾಗ
ಅಕೆಂದು ಸುಮ್ಮನೇಕೆ ಖರ್ಚು ?
ಇಂದಲ್ಲ ನಾಳೆ ಬರದಿರುವುದೆ ಮಳೆ ?
ಈ ಪಬ್ಲಿಕ್ ಟ್ಯಾಪುಗಳಿಗೇನು ತುರ್ತು ?
ಹೆಣ್ಣು ರಸ್ತೆಯ ಮೇಲೆ ಹಾಕಿದರೆ ಪಿಕ್ಕಾಸಿ
ಕೇಸು ಖಟ್ಲೆಗಳಾಗದೇ ಕೊನೆಗೆ ?
ದೀಪವಿಲ್ಲ ನಿಜ ಕಂಬವಾದರೂ ಇದೆಯಲ್ಲ
ಎಂಬ ತೃಪ್ತಿಯು ಸಾಲದೇ ನಮಗೆ ?
ಮಾರಿಗೊಂದಿದೆ ಹೊಲಸು, ಕೆಸರಿನ ಗೋರಿ
ಊರೆನ್ನಲಡ್ಡಿಯಿದೆಯೆ ನಿಮಗೆ ?
ಅಂತೆಯೇ
ನಮ್ಮದೂ ಒಂದು ಊರು.












Click it and Unblock the Notifications