ಮರೆತ ಗೆಳತಿಯಲ್ಲೊಂದು ಮನವಿ
*ಮಮತ, ಬೆಂಗಳೂರು
1
ಗೆಳತೀ
ತಪ್ಪೆಲ್ಲಾ ನನ್ನದೇ
ನೀ ಒಮ್ಮೆ ಮನಸಾರೆ ಕ್ಷಮಿಸುವುದಾದರೆ
ನಾನು ಹೊಸ ಕವಿಯ ಕವಿತೆಯಂತೆ
ಮತ್ತೊಮ್ಮೆ ಹುಟ್ಟಬಲ್ಲೆ
ಗೆಳತೀ, ಕಡಲಾಳದಲ್ಲಿ ಕಪ್ಪೆಯ ಚಿಪ್ಪೊಂದು
ಸ್ವಾತಿಯ ಹನಿಗಾಗಿ ಕಾಯುವಂತೆ
ಕಾದಿರುವೆ ನಾನು ನಿನ್ನ ಕ್ಷಮೆಗಾಗಿ
ನೀ ಎಂದಾದರೂ ಒಮ್ಮೆ ಬರುವೆ ಎಂದು
ಶ್ರೀ ರಾಮನಿಗಾಗಿ ಕಾಯ್ದ ಶಬರಿಯಂತೆ
ಅಲ್ಲದಿದ್ದರೂ
ಸೂರ್ಯನ ರಶ್ಮಿಗಾಗಿ ಕಾಯ್ದ ಕಮಲದಂತೆ
ಅಲ್ಲದಿದ್ದರೂ
ನಾನು ನಾನಾಗಿ ನಿನ್ನ ಪ್ರೀತಿಗಾಗಿ
ಕಾಯುವೆ ಗೆಳತಿ
ಹೀಗೆ ನಿನ್ನನು ನಿನ್ನಂತೆ ಪ್ರೀತಿಸುತ
ಇಲ್ಲೇ ನನ್ನೆದೆಯ ದೇವಸ್ಥಾನದಲ್ಲೇ
2
ಹಿಡಿಯಷ್ಟು ಪ್ರೀತಿಯನು
ನನ್ನೆದೆಗೆ ಸುರಿದುಬಿಡು ಗೆಳತಿ
ಋಣಿಯಾದೇನು ಈ ಜನುಮದಲ್ಲಿ
ಅಲ್ಲೆಲ್ಲೋ ನೆನಪುಗಳೊಂದಿಗೆ ನಿಂತು
ಹುಡುಕಿ ತರಬಲ್ಲೆ ನಿನ್ನನು
ಅನುಮಾನಿಸದಿರು ಗೆಳತಿ
ನನ್ನೆದೆಯಲ್ಲೊಂದು ಕವಿತೆ ನೀನು
ಪ್ರೀತಿ ಸಾಯುವವರೆಗೂ
ಈ ಕವನವ ಮರೆಯುವುದಿಲ್ಲ
ನೆನೆಯುವೆನು...ನೆನೆಯುವೆನು...
ಮುಪ್ಪು ಮನಸಪ್ಪುವವರೆಗೂ...
3
ಅರ್ಥವಿಲ್ಲದ ಪ್ರಶ್ನೆಗಳ
ಹುಟ್ಟುಹಾಕದಿರು ಗೆಳತಿ
ಉತ್ತರಿಸಲಾಗದು ನನ್ನ ಹೃದಯ
ನನ್ನೆದೆಯ ಪ್ರೀತಿಯನು
ಮರೆಯದಿರು ಗೆಳತಿ
ನೀ ಮರೆಯಾದರೆ ಮರುಗುವುದು
ನನ್ನ ಹೃದಯ
ಕನಸ ಕೊಟ್ಟಿದ್ದು ನೀನು
ನನ್ನ ಕವಿಯ ಮಾಡಿದ್ದು ನೀನು
ಗೆಳತಿ ನೀನಿಲ್ಲದ ಬದುಕ
ಬಯಸಲಾರೆನು ನಾನು
ನಿನ್ನ ಪ್ರೀತಿಯ ಬಿಟ್ಟು
ನಾನೆಂದು ಬಯಸಲಿಲ್ಲ
ಬಯಸಲಾರೆ ಬೇರೇನನ್ನು
4
ನೀನಲ್ಲವೆ ಗೆಳತಿ
ನನ್ನ ಮನಸ ಮುಟ್ಟಿದ್ದು
ಅದರ ಮಾತ ಕೇಳಿದ್ದು
ತಪ್ಪು ಒಪ್ಪುಗಳ ತಿದ್ದದೇ
ಮುನಿಸಿ ದೂರ ಸರಿದದ್ದು
ನೀನಲ್ಲವೆ ಗೆಳತಿ
ನೀ ಒಂಟಿಯಲ್ಲ ನಾನಿದ್ದೇನೆ ಎಂದಿದ್ದು
ಈ ಮಾತಿಗೆ ಮನಸ್ಸನ್ನು ಸಾಕ್ಷಿಯಾಗಿ ಮಾಡಿದ್ದು
ನಾನೇನೆ ಮಾಡಿದರೂ
ನೀನಲ್ಲವೆ ಗೆಳತಿ ನನ್ನೆದೆಗೆ
ಸ್ಪಂದಿಸಬೇಕಾದದ್ದು
5
ತುಂತುರು ಮಳೆಯಲ್ಲಿ
ನಿನ್ನ ನೆನಪೊಂದು ಕುಂತಿತ್ತು
ಒಂದೊಂಬತ್ತು ಪ್ರಶ್ನೆಯ ಕೇಳಿತ್ತು
ಗೆಳತಿ, ಮನಸಾರೆ ಕೊಟ್ಟುಬಿಡು
ಹಿಡಿಯಷ್ಟು ಪ್ರೀತಿಯನು
ಕಡಲಷ್ಟು ಅಕ್ಕರೆಯನು
ಇವೆಲ್ಲ ಜೋಪಾನ ನನ್ನೆದೆಯ
ಮೌನ ಮಂಟಪದಲ್ಲಿ
ಗೆಳತಿ, ಅಕ್ಕರೆಗೆ ದೊರೆ ನೀನು
ಪ್ರೀತಿಗೆ ದೊರೆ ನಾನು
ಮೋಸ ನಿಂತು ಪ್ರೀತಿಯಾಂದಿಗೆ
ಮಾತಿಗಿಳಿಯುವುದೇನು
ಅಂಜಿಕೆಯ ಬಿಡು ಗೆಳತಿ
ನಾ ನಿನಗೆ ಸ್ವಂತ
ನೀ ನನಗೆ?
6
ನಿನ್ನ ಕಾಲ ಕಿರು ಗೆಜ್ಜೆಯಲ್ಲಿ
ನನ್ನ ಪುಟ್ಟ ಜೀವವೊಂದಿತ್ತು
ನಿನ್ನ ಹೆಜ್ಜೆಯ ಪ್ರತಿ ಮಾತನ್ನು
ನನ್ನದೆಗೆ ತಲುಪಿಸಿತ್ತು
ಗೆಳತಿ, ಮೌನ ಮರುಭೂಮಿಯ ಹಾಗೆ
ಸುಟ್ಟುಬಿಡಬಹುದು ನಿನ್ನ ಮೃದು ಮನಸ್ಸನ್ನಾ
ಮಾತ ಗಾಳೀಪಟಕ್ಕೊಂದು ಸೂತ್ರವ ಕಟ್ಟು
ದಾರಿಬಿಡು ನನ್ನೆದೆಯಂಗಳಕೆ
ತುಂಬು ಗೌರವದ ಸ್ವಾಗತ
ನಿನ್ನೆದೆಯ ಪ್ರತೀ ಪಿಸುಮಾತಿಗೆ












Click it and Unblock the Notifications