ಧೂಮಲೀಲೆ
*ವಿಕ್ರಂ ಲಕ್ಷ್ಮಿಪತಿ, Des Moines, IA
ಹೀರುತ್ತಿರುವ ಸಿಗರೇಟಿನ ಹೊಗೆ
ಏರುತ್ತಿದೆ ಬಾನಿಗೆ
ಸುರುಳಿಯಾಗಿ ಸುತ್ತಾಗಿ
ಬಿಳಿಯಾಗಿ ಕೊನೆಗೆ ಕಾಣದಾಗಿ
ಸೇದುತ್ತಿರುವ ಕೆಂಪುತುಟಿ
ಸನಿಹದಲ್ಲೇ ಚೂಪು ಮೂಗು
ಅರಳುತ್ತಿದೆ ಆಗಾಗ
ಶ್ವಾಸಕೋಶದ ನರಳುವಿಕೆ ಕೇಳಿಸದು ಈಗ
ಅರ್ಧ ಮುಚ್ಚಿದ ನೀಲಿ ಕಣ್ಣುಗಳು
ವಕ್ರವಾಗಿ ಬಾಗಿರುವ ಕಂದು ಹುಬ್ಬು
ಬಾಚಿ ಕಟ್ಟಿರುವ ಕೆಂಗೂದಲಿನ ಗಂಟು
ಎಲ್ಲವೂ ಸೇರಿ ಎಂಥದೋ ಒಂದು ಮುಖ
ತೃಪ್ತ ಮುಖ ಸಂತೃಪ್ತ ಭಾವ
ಉರಿಯುತ್ತಿರುವ ಸಿಗರೇಟಿಗೆ ಸಾರ್ಥಕ ಭಾವ
ತೇಲುತ್ತಿರುವ ಹೊಗೆಗೆ ತನ್ನದೇ ಉಲ್ಲಾಸ
ಒಳಗೊಳಗೆ ಕುದಿಯುತ್ತಿರುವ ಹೃದಯಕ್ಕೆ
ಹಾಯ್ ! ಎನಿಸುವ ತಂಬಾಕು












Click it and Unblock the Notifications